350cc Bikes in India: ಭಾರತದಲ್ಲಿ 350 ಸಿಸಿ ಬೈಕ್‌ಗಳಿಗೆ ಯುವ ಸಮೂಹದಿಂದ ಹೆಚ್ಚಿನ ಆಸಕ್ತಿ ವ್ಯಕ್ತವಾಗುತ್ತಿದೆ. ಕೇವಲ ಸ್ಟೈಲಿಶ್ ಲುಕ್ ಮಾತ್ರವಲ್ಲದೆ, ಪ್ರತಿದಿನ ಕಚೇರಿಗೆ ತೆರಳಲು, ನಗರ ಪ್ರದೇಶಗಳಲ್ಲಿ ಸಂಚರಿಸಲು ಹಾಗೂ ವಾರಾಂತ್ಯದಲ್ಲಿ ದೂರದ ಪ್ರಯಾಣ ಕೈಗೊಳ್ಳಲು ಒಂದೇ ಬೈಕ್ ಬಳಸುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಬೈಕ್‌ಗಳಲ್ಲಿ ಆರಾಮದಾಯಕ ಪ್ರಯಾಣದ ಜೊತೆಗೆ ಆಕರ್ಷಕ ವಿನ್ಯಾಸಕ್ಕೂ ಆದ್ಯತೆ ನೀಡಲಾಗುತ್ತಿದೆ. ಮೈಲೇಜ್ ಮತ್ತು ನಿರ್ವಹಣೆಯ ವಿಚಾರದಲ್ಲಿಯೂ ಗಮನಹರಿಸುವ ಗ್ರಾಹಕರಿಗೆ 350 ಸಿಸಿ ವಿಭಾಗದಲ್ಲಿ ಹಲವು ಆಯ್ಕೆಗಳಿವೆ.
ಈ ವಿಭಾಗದಲ್ಲಿ ರಾಯಲ್ ಎನ್‌ಫೀಲ್ಡ್ ಮತ್ತು ಹೋಂಡಾ ಕಂಪನಿಗಳ ಬೈಕ್‌ಗಳು ಗಮನ ಸೆಳೆಯುತ್ತಿವೆ. ಅದರಲ್ಲೂ ₹1.38 ಲಕ್ಷದ ಆರಂಭಿಕ ಬೆಲೆಯ ಹಂಟರ್ 350 ಬೈಕ್‌ನಿಂದ ಹಿಡಿದು ಕ್ಲಾಸಿಕ್ 350, ಹೈನೆಸ್ ಸಿಬಿ 350 ಹಾಗೂ ಮೆಟಿಯೋರ್ 350 ವರೆಗೆ ಹಲವು ಮಾದರಿಗಳು ಲಭ್ಯವಿವೆ. ಈ ನಾಲ್ಕು ಬೈಕ್‌ಗಳ ಬೆಲೆ ಮತ್ತು ಪ್ರಮುಖ ವಿವರಗಳು ಇಲ್ಲಿವೆ ನೊಡಿ...
ರಾಯಲ್ ಎನ್‌ಫೀಲ್ಡ್ ಹಂಟರ್ 350
350 ಸಿಸಿ ವಿಭಾಗದಲ್ಲಿ ಕಡಿಮೆ ಆರಂಭಿಕ ಬೆಲೆಯ ಆಯ್ಕೆಗಳಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಕೂಡ ಒಂದಾಗಿದೆ. ಈ ಬೈಕ್ ನಗರ ಪ್ರದೇಶಗಳಲ್ಲಿ ಪ್ರತಿದಿನ ಸಂಚರಿಸುವುದರ ಜೊತೆಗೆ ಲಾಂಗ್ ರೈಡ್‌ಗಳಿಗೂ ಅನುಕೂಲವಾಗುವ ರೀತಿಯಲ್ಲಿ ವಿನ್ಯಾಸಗೊಂಡಿದೆ. ಕ್ಲಾಸಿಕ್ 350ಗೆ ಹೋಲಿಸಿದರೆ ಹಂಟರ್ ಹೆಚ್ಚು ಹಗುರವಾದ ಮತ್ತು ಸಣ್ಣ ಗಾತ್ರದ ವಿನ್ಯಾಸ ಹೊಂದಿದೆ. ಇದರ ವಿನ್ಯಾಸ ಮತ್ತು ಗಾತ್ರದಿಂದ ಮಹಿಳೆಯರೂ ಸುಲಭವಾಗಿ ರೈಡ್ ಮಾಡಬಹುದಾದ ಬೈಕ್ ಎಂಬ ವಿಶೇಷತೆ ಹೊಂದಿದೆ. ಹಂಟರ್ 350 ಬೈಕ್‌ನ ಎಕ್ಸ್‌ಶೋರೂಂ ಆರಂಭಿಕ ಬೆಲೆ ₹1.38 ಲಕ್ಷವಾಗಿದೆ. ಇನ್ನು ಮೈಲೇಜ್ ವಿಚಾರಕ್ಕೆ ಬಂದರೆ ಪ್ರತಿ ಲೀಟರ್‌ಗೆ ಸುಮಾರು 36 ಕಿಲೋಮೀಟರ್ ನೀಡುತ್ತದೆ ಎಂದು ಹೇಳಲಾಗಿದೆ. ಕಡಿಮೆ ಆರಂಭಿಕ ಬೆಲೆಯಲ್ಲಿ 350 ಸಿಸಿ ಬೈಕ್ ಹುಡುಕುತ್ತಿರುವವರಿಗೆ ಇದು ಗಮನ ಸೆಳೆಯುವ ಆಯ್ಕೆಯಾಗಿದೆ.
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350
ರಾಯಲ್ ಎನ್‌ಫೀಲ್ಡ್ ಕಂಪನಿಯ ಜನಪ್ರಿಯ ಬೈಕ್‌ಗಳಲ್ಲಿ ಕ್ಲಾಸಿಕ್ 350 ಪ್ರಮುಖ ಸ್ಥಾನ ಪಡೆದಿದೆ. ಈ ಬೈಕ್ ಹೆಚ್ಚಿನ ಮಾರಾಟ ದಾಖಲೆಯನ್ನ ಹೊಂದಿದ್ದು, ಸಾಕಷ್ಟು ಗ್ರಾಹಕರ ಮೆಚ್ಚುಗೆಗೂ ಪಾತ್ರವಾಗಿದೆ. ತನ್ನ ವಿಶಿಷ್ಟ ವಿನ್ಯಾಸ ಮತ್ತು ಲುಕ್‌ನಿಂದ ಕ್ಲಾಸಿಕ್ 350 ಪ್ರತ್ಯೇಕ ಗುರುತನ್ನ ಪಡೆದುಕೊಂಡಿದೆ. ಪ್ರತಿದಿನದ ಬಳಕೆ, ನಗರ ಸಂಚಾರ ಹಾಗೂ ದೂರದ ಪ್ರಯಾಣ ಸೇರಿದಂತೆ ವಿವಿಧ ಉದ್ದೇಶಗಳಿಗೆ ಈ ಬೈಕ್ ಬಳಸಬಹುದು. ಕ್ಲಾಸಿಕ್ 350ರ ಎಕ್ಸ್‌ಶೋರೂಂ ಆರಂಭಿಕ ಬೆಲೆ ₹1.81 ಲಕ್ಷವಾಗಿದ್ದು, ಟಾಪ್ ಮಾಡೆಲ್ ಬೆಲೆ ₹2.16 ಲಕ್ಷದವರೆಗೆ ಇದೆ. ಮೈಲೇಜ್ ವಿಚಾರದಲ್ಲಿ ಪ್ರತಿ ಲೀಟರ್‌ಗೆ ಸುಮಾರು 35ರಿಂದ 40 ಕಿಲೋಮೀಟರ್ ನೀಡುತ್ತದೆ ಎಂದು ತಿಳಿಸಲಾಗಿದೆ. ಹೆಚ್ಚು ಜನಪ್ರಿಯತೆ ಹೊಂದಿರುವ 350 ಸಿಸಿ ಬೈಕ್‌ಗಳಲ್ಲಿ ಕ್ಲಾಸಿಕ್ 350 ಕೂಡ ಒಂದಾಗಿದೆ.
ಹೋಂಡಾ ಹೈನೆಸ್ ಸಿಬಿ 350
ಹೋಂಡಾ ಕಂಪನಿಯ ಹೈನೆಸ್ ಸಿಬಿ 350 ಬೈಕ್ ರಾಯಲ್ ಎನ್‌ಫೀಲ್ಡ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಯಲ್ಲಿದೆ. ಆಧುನಿಕ ತಂತ್ರಜ್ಞಾನ ಮತ್ತು ಹಲವು ವೈಶಿಷ್ಟ್ಯಗಳನ್ನ ಒಳಗೊಂಡಿರುವ ಈ ಬೈಕ್ ಗ್ರಾಹಕರ ಗಮನ ಸೆಳೆಯುತ್ತಿದೆ. ಹೈನೆಸ್ ಸಿಬಿ 350ರ ಎಕ್ಸ್‌ಶೋರೂಂ ಆರಂಭಿಕ ಬೆಲೆ ₹1.93 ಲಕ್ಷವಾಗಿದ್ದು, ಟಾಪ್ ಮಾಡೆಲ್ ಬೆಲೆ ₹1.98 ಲಕ್ಷವಾಗಿದೆ. ಈ ಬೈಕ್‌ನಲ್ಲಿ ಸ್ಲಿಪ್ಪರ್ ಕ್ಲಚ್, ಬ್ಲೂಟೂತ್ ಸಂಪರ್ಕ ಸೇರಿದಂತೆ ಹಲವು ವೈಶಿಷ್ಟ್ಯಗಳಿವೆ. ವೈಬ್ರೇಷನ್ ಕಡಿಮೆ ಮಾಡುವ ಎಂಜಿನ್ ವ್ಯವಸ್ಥೆಯೂ ಇದರ ಪ್ರಮುಖ ವಿಶೇಷತೆಗಳಲ್ಲಿ ಒಂದಾಗಿದೆ. ಆಧುನಿಕ ತಂತ್ರಜ್ಞಾನ ಹೊಂದಿರುವ 350 ಸಿಸಿ ಬೈಕ್‌ಗಳ ಪಟ್ಟಿಯಲ್ಲಿ ಹೈನೆಸ್ ಸಿಬಿ 350 ಸ್ಥಾನ ಪಡೆದಿದೆ.
ರಾಯಲ್ ಎನ್‌ಫೀಲ್ಡ್ ಮೆಟಿಯೋರ್ 350
ರಾಯಲ್ ಎನ್‌ಫೀಲ್ಡ್ ಕಂಪನಿಯ ಮತ್ತೊಂದು ಪ್ರಮುಖ ಮಾದರಿ ಮೆಟಿಯೋರ್ 350. ಕ್ರೂಸರ್ ಮಾದರಿಯ ವಿನ್ಯಾಸ ಹೊಂದಿರುವ ಈ ಬೈಕ್ ಹಲವು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ವಿಭಿನ್ನ ಶೈಲಿಯ ವಿನ್ಯಾಸವನ್ನ ಇಷ್ಟಪಡುವ ಗ್ರಾಹಕರಿಗೆ ಮೆಟಿಯೋರ್ 350 ಒಂದು ಆಯ್ಕೆಯಾಗಿದೆ. ಮೆಟಿಯೋರ್ 350 ಬೈಕ್‌ನ ಎಕ್ಸ್‌ಶೋರೂಂ ಆರಂಭಿಕ ಬೆಲೆ ₹1.96 ಲಕ್ಷವಾಗಿದ್ದು, ಗರಿಷ್ಠ ಬೆಲೆ ₹2.16 ಲಕ್ಷದವರೆಗೆ ಇದೆ. ಮೈಲೇಜ್ ವಿಚಾರದಲ್ಲಿ ಪ್ರತಿ ಲೀಟರ್‌ಗೆ ಸುಮಾರು 40 ಕಿಲೋಮೀಟರ್ ನೀಡುತ್ತದೆ ಎಂದು ತಿಳಿಸಲಾಗಿದೆ. ಕ್ರೂಸರ್ ವಿನ್ಯಾಸ, ವಿವಿಧ ಬಣ್ಣಗಳ ಆಯ್ಕೆ ಹಾಗೂ 350 ಸಿಸಿ ಎಂಜಿನ್ ಇದರ ಪ್ರಮುಖ ಆಕರ್ಷಣೆಗಳಾಗಿವೆ.
350 ಸಿಸಿ ವಿಭಾಗದಲ್ಲಿ ಹಲವು ಆಯ್ಕೆಗಳು
ಒಟ್ನಲ್ಲಿ 350 ಸಿಸಿ ಬೈಕ್ ಖರೀದಿಸಲು ಬಯಸುವ ಗ್ರಾಹಕರಿಗೆ ರಾಯಲ್ ಎನ್‌ಫೀಲ್ಡ್ ಹಂಟರ್ 350, ಕ್ಲಾಸಿಕ್ 350, ಹೋಂಡಾ ಹೈನೆಸ್ ಸಿಬಿ 350 ಮತ್ತು ರಾಯಲ್ ಎನ್‌ಫೀಲ್ಡ್ ಮೆಟಿಯೋರ್ 350 ಸೇರಿದಂತೆ ನಾಲ್ಕು ಪ್ರಮುಖ ಆಯ್ಕೆಗಳಿವೆ. ಇವುಗಳ ಎಕ್ಸ್‌ಶೋರೂಂ ಆರಂಭಿಕ ಬೆಲೆ ₹1.38 ಲಕ್ಷದಿಂದ ₹1.96 ಲಕ್ಷದವರೆಗೆ ಇದೆ. ವಿನ್ಯಾಸ, ಬೆಲೆ, ಮೈಲೇಜ್ ಮತ್ತು ವೈಶಿಷ್ಟ್ಯಗಳಲ್ಲಿ ಪ್ರತಿಯೊಂದು ಬೈಕ್ ತನ್ನದೇ ಆದ ವಿಶೇಷತೆ ಹೊಂದಿದೆ.