ತೂಕ ಹೆಚ್ಚಳ ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರನ್ನು ಬಾಧಿಸುತ್ತಿರುವ ಸರ್ವೇ ಸಾಮಾನ್ಯವಾದ ಸಮಸ್ಯೆ ಆಗಿದೆ. ತೂಕ ಇಳಿಕೆಗಾಗಿ ಜನರು ಕಠಿಣ ಡಯಟ್, ಜಿಮ್, ವ್ಯಾಯಾಮ ಹೀಗಿ ನಾನಾ ರೀತಿ ಕಸರತ್ತುಗಳನ್ನು ಮಾಡುತ್ತಾರೆ. ಕೆಲವರು ತಿಂಗಳಲ್ಲಿ ಎಂಟರಿಂದ ಹತ್ತು ಕೆ.ಜಿ. ತೂಕ ಇಳಿಸಲು ಗುರಿ ಹೊಂದಿರುತ್ತಾರೆ. ಆದರೆ, ತಿಂಗಳಲ್ಲಿ 8-10 ಕೆ.ಜಿ. ತೂಕ ಇಳಿಕೆ ಆರೋಗ್ಯಕವಲ್ಲ.
ಹೌದು, ಕೆಲವರು ಕಡಿಮೆ ಸಮಯದಲ್ಲಿ ಹೆಚ್ಚು ತೂಕ ಇಳಿಸಿಕೊಳ್ಳಬೇಕೆಂದು ಊಟವನ್ನೇ ಬಿಡುತ್ತಾರೆ. ಆದರೆ ಇಂತಹ ಪ್ರಯತ್ನಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾದರೆ ಆರೋಗ್ಯಕ್ಕೆ ತೊಂದರೆಯಾಗದಂತೆ ತೂಕ ಇಳಿಸಿಕೊಳ್ಳುವುದು ಹೇಗೆ? ಎಂದು ಚಿಂತಿಸುವ ಅಗತ್ಯವಿಲ್ಲ. ಬದಲಿಗೆ ಸಣ್ಣ ಲೈಫ್‌ಸ್ಟೈಲ್ ರೂಢಿಸಿಕೊಂಡರೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.
ನೀವು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ಇದಕ್ಕಾಗಿ ಒಂದೇ ದಿನದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿಕೊಳ್ಳುವುದನ್ನು ಬಿಟ್ಟು, ಇದರ ಬದಲಿಗೆ ನಿಮ್ಮ ದೈನಂದಿನ ಜೀವನದಲ್ಲಿ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಂಡರೆ ʼತೂಕ ಇಳಿಕೆಯ ನಿಮ್ಮ ಪ್ರಯತ್ನಕ್ಕೆʼ ಕ್ರಮೇಣ ಉತ್ತಮ ಫಲಿತಾಂಶ ಸಿಗುವುದರಲ್ಲಿ ಅನುಮಾನವೇ ಇಲ್ಲ.
ಹೌದು, ಊಟ ಬಿಟ್ಟು ಕಠಿಣ ಡಯಟ್ ಮಾಡಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸಿದರೆ, ನೀವು ಮತ್ತೆ ಸಹಜವಾಗಿ ಆಹಾರ ಸೇವಿಸಲು ಆರಂಭಿಸುತ್ತಿದ್ದಂತೆ ತೂಕ ಬಲು ಬೇಗ ಹೆಚ್ಚಾಗುತ್ತದೆ. ಇದರ ಬದಲಿಗೆ ಆರೋಗ್ಯಕರ ಜೀವನ ರೂಢಿಸಿಕೊಳ್ಳುವ ಮೂಲಕ ಕೆಲವು ಅಭ್ಯಾಸಗಳನ್ನು ಜೀವನಶೈಲಿಯ ಭಾಗವಾಗಿಸಿಕೊಂಡರೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.
ಮೊದಲಿಗೆ, ವಾರಕ್ಕೆ 4 ಕೆಜಿ ಅಥವಾ ತಿಂಗಳಿಗೆ 10 ಕೆಜಿ ತೂಕ ಕಡಿಮೆ ಮಾಡಬೇಕು ಎಂದು ಗುರಿ ಇಡಬೇಡಿ. ಇಷ್ಟು ಬೇಗ ತೂಕ ಇಳಿಸಿದರೆ ಆರೋಗ್ಯಕ್ಕೆ ಹಾನಿ ಆಗಬಹುದು. ಆರೋಗ್ಯ ತಜ್ಞರ ಪ್ರಕಾರ, ವಾರಕ್ಕೆ 4 ಕೆಜಿ ತೂಕ ಇಳಿಸಿಕೊಳ್ಳುವ ಬದಲಿಗೆ ತಿಂಗಳಿಗೆ 4 ರಿಂದ 5 ಕೆ.ಜಿ.ವರೆಗೆ ತೂಕ ಕಡಿಮೆ ಮಾಡಲು ಪ್ರಯತ್ನಿಸುವುದು ಆರೋಗ್ಯಕರ ಎನ್ನಲಾಗುತ್ತದೆ. ಹಾಗಾಗಿ, ವೇಗವಾಗಿ ತೂಕ ಇಳಿಸುವ ಪ್ರಯತ್ನ ಮಾಡದೆ, ನಿಮ್ಮ ದೇಹ, ವಯಸ್ಸಿಗೆ ಅನುಗುಣವಾಗಿ ತೂಕ ಇಳಿಕೆ ಜರ್ನಿಯನ್ನು ಆರಂಭಿಸಿ.
ಪ್ರತಿದಿನದ ಅಭ್ಯಾಸಗಳ ಮೇಲೆ ಇರಲಿ ಗಮನ:
ತೂಕ ಇಳಿಕೆಗಾಗಿ ನೀವು ಮೊದಲಿಗೆ ಮಾಡಬೇಕಿರುವ ಕೆಲಸ ನೀವು ದಿನವಿಡೀ ಏನು ತಿನ್ನುತ್ತೀರಿ, ಎಷ್ಟು ನೀರು ಕುಡಿಯುತ್ತೀರಿ, ಎಷ್ಟು ಸಮಯ ವ್ಯಾಯಾಮ ಮಾಡುತ್ತೀರಿ ಮತ್ತು ಎಷ್ಟು ಗಂಟೆ ನಿದ್ರೆ ಮಾಡುತ್ತೀರಿ ಎಂಬುದನ್ನು ಗಮನಿಸಿ. ಇದನ್ನು ಸರಿಯಾಗಿ ಫಾಲೋ ಮಾಡುವ ದೃಷ್ಟಿಯಿಂದ ಬೇಕಿದ್ದರೆ ಇವೆಲ್ಲವನ್ನೂ ಪ್ರತಿದಿನ ಮಾನಿಟರ್ ಮಾಡಿ ಒಂದು ದಾಖಲೆಯ ರೂಪದಲ್ಲಿ ಬರೆದಿಡುವುದು ಒಳ್ಳೆಯದು. ಇದರಿಂದ ಯಾವ ಅಭ್ಯಾಸಗಳು ನಿಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗುತ್ತಿವೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಡಯಟ್ ಬದಲಾವಣೆ:
ತೂಕ ಇಳಿಸಿಕೊಳ್ಳಬೇಕೆಂದು ಕೆಲವರು ಆಹಾರ ಸೇವನೆಯನ್ನೇ ಬಿಡುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ವೇಟ್ ಲಾಸ್ ಮಾಡಲು ಊಟವನ್ನೇ ಬಿಡಬೇಕಿಲ್ಲ. ಊಟ ಬಿಡುವುದು ಅಥವಾ ದಿನಕ್ಕೆ ಒಂದು ಬಾರಿ ಮಾತ್ರ ಆಹಾರ ಸೇವಿಸುವಂತಹ ಕಠಿಣ ಕ್ರಮಗಳನ್ನು ಅನುಸರಿಸಬೇಡಿ. ಬದಲಿಗೆ ನೀವು ತೂಕ ಇಳಿಸಿಕೊಳ್ಳಲು ಯಾವ ಆಹಾರಗಳನ್ನು ಸೇವಿಸಬೇಕು? ಯಾವ ಆಹಾರಗಳಿಂದ ನಿಮ್ಮ ತೂಕ ವೇಗವಾಗಿ ಹೆಚ್ಚಾಗುತ್ತದೆ ಎಂಬುದನ್ನು ಅರಿತು ನಿಮ್ಮ ಡಯಟ್‌ನಲ್ಲಿ ಅಗತ್ಯವಾದ ಬದಲಾವಣೆ ಮಾಡಿಕೊಳ್ಳುವುದು ಹೆಚ್ಚು ಸೂಕ್ತ.
ಆರೋಗ್ಯಕರ ತೂಕ ಇಳಿಕೆಗೆ ಸಮತೋಲಿತ ಆಹಾರ ಸೇವಿಸುವುದು ಮುಖ್ಯ. ಸಕ್ಕರೆ ಹೆಚ್ಚಿರುವ ಪಾನೀಯಗಳ ಬದಲಿಗೆ ನೀರು ಕುಡಿಯಿರಿ. ಪ್ರತಿದಿನದ ಊಟದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಸೇರಿಸಿಕೊಳ್ಳಿ. ಪ್ರೋಟೀನ್ ಇರುವ ಆಹಾರ ಸೇವಿಸಿ. ಅತಿಯಾಗಿ ಎಣ್ಣೆಯಲ್ಲಿ ಕರಿದ ಆಹಾರ ಸೇವಿಸುವುದನ್ನು ಕಡಿಮೆ ಮಾಡಿ. ಊಟದ ಸಮಯವನ್ನು ಸಾಧ್ಯವಾದಷ್ಟು ನಿಯಮಿತವಾಗಿಟ್ಟುಕೊಳ್ಳಿ.
ದಿನನಿತ್ಯ ವ್ಯಾಯಾಮ ಮಾಡಿ:
ತೂಕ ಇಳಿಸಿಕೊಳ್ಳಲು ದೈಹಿಕ ಚಟುವಟಿಕೆ ಬಹಳ ಮುಖ್ಯ. ಪ್ರತಿದಿನ ಸ್ವಲ್ಪ ಸಮಯವಾದರೂ ವಾಕಿಂಗ್, ಸೈಕ್ಲಿಂಗ್, ಯೋಗ ಅಥವಾ ಇಷ್ಟವಾದ ವ್ಯಾಯಾಮವನ್ನು ಮಾಡಿ.
ತೂಕ ಇಳಿಕೆ ಪರಿಶೀಲನೆ:
ನೀವು ತೂಕ ಇಳಿಕೆಗಾಗಿ ಡಯಟ್, ವ್ಯಾಯಾಮ ಮಾಡುವುದನ್ನು ರೂಢಿಸಿಕೊಂಡರೆ ಸಾಲದು. ಅದನ್ನು ನಿಯಮಿತವಾಗಿ ಪರಿಶೀಲಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಉದಾಹರಣೆಗೆ ನೀವು ನಾಲ್ಕು ವಾರ ಎಲ್ಲವನ್ನೂ ಅನುಸರಿಸಿ ನಾಲ್ಕು ಕೆಜಿ ತೂಕ ಇಳಿಸಿಕೊಂಡಿದ್ದೀರಿ ಎಂದುಕೊಳ್ಳಿ. ಬಳಿಕ ನೀವು ಸಡನ್ ಆಗಿ ಮೊದಲಿನಂತೆ ಇಷ್ಟವಾದ ಭಕ್ಷ್ಯಗಳನ್ನು ತಿನ್ನಲು ಆರಂಭಿಸಿದರೆ ನಿಮ್ಮ ತೂಕ ಬಲು ಬೇಗ ಹೆಚ್ಚಾಗಬಹುದು.
ಆದರೆ, ನಿಮ್ಮ ದೇಹದ ತೂಕ ಹೆಚ್ಚಾಗಲು ಯಾವ ಅಂಶಗಳು ಕಾರಣವಾಗುತ್ತಿವೆ ಎಂಬುದರ ಬಗ್ಗೆ ಸೂಕ್ಷ್ಮ ನಿಗಾ ಇರಿಸುವುದರಿಂದ ತೂಕ ಇಳಿಕೆಗೆ ನಿಮಗೆ ಯಾವ ಅಂಶಗಳು ಸಹಾಯ ಮಾಡುತ್ತಿವೆ, ನಿಮ್ಮ ಜೀವನಶೈಲಿಯಲ್ಲಿ ಏನೆಲ್ಲಾ ಬದಲಾವಣೆ ಮಾಡಿಕೊಳ್ಳಬೇಕು ಎಂಬುದನ್ನು ಅರಿಯಲು ಸಹಾಯಕವಾಗುತ್ತದೆ. ಇದು ನೀವು ಕಷ್ಟಪಟ್ಟು ಕಳೆದುಕೊಂಡ ತೂಕ ಒಂದೆರಡು ದಿನದಲ್ಲಿ ವೇಗವಾಗಿ ಹೆಚ್ಚಾಗುವುದನ್ನು ತಡೆಯುವಲ್ಲಿಯೂ ಪರಿಣಾಮಕಾರಿ ಎಂದು ಸಾಬೀತುಪಡಿಸಲಿದೆ.
ಈ ರೀತಿಯಾಗಿ ನಿಮ್ಮ ಪ್ರತಿ ದಿನದ ಲೈಫ್‌ಸ್ಟೈಲ್‌ನಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನೀವು ತೂಕ ಇಳಿಕೆ ಮಾಡಿಕೊಳ್ಳುವುದು ಮಾತ್ರವಲ್ಲ, ಡೊಳ್ಳು ಹೊಟ್ಟೆ ಚಪ್ಪಟೆ ಆಗುವುದರಲ್ಲಿ ಅನುಮಾನವೇ ಇಲ್ಲ. ಜೊತೆಗೆ ದೀರ್ಘ ಸಮಯದವರೆಗೆ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲೂ ಕೂಡ ಇದು ಸಹಾಯಕವಾಗಲಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.