ಮಂಡ್ಯ: ಐತಿಹಾಸಿಕ ಮೈಶುಗರ್ ಕಾರ್ಖಾನೆಯ ಬಳಿ ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ತೀವ್ರ ಪ್ರತಿಭಟನೆ ನಡೆಯಿತು. ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ನೇತೃತ್ವದಲ್ಲಿ ಜಮಾಯಿಸಿದ ನೂರಾರು ರೈತರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು. ಪ್ರತಿ ಟನ್ ಕಬ್ಬಿಗೆ 5,500 ರೂ. ಬೆಲೆ ನಿಗದಿ ಮಾಡಬೇಕು ಎಂಬುದು ರೈತರ ಮುಖ್ಯ ಬೇಡಿಕೆಯಾಗಿದೆ.
ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಖಾನೆಯ ಅಧಿಕಾರಿಗಳು ಗೇಟ್ ಮುಚ್ಚಿ ಒಳ ಪ್ರವೇಶಿಸದಂತೆ ತಡೆಯಲು ಯತ್ನಿಸಿದರು. ಇದರಿಂದ ಆಕ್ರೋಶಗೊಂಡ ರೈತರು ಗೇಟ್ ಏರಿ ಒಳ ನುಗ್ಗಲು ಯತ್ನಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಮತ್ತು ಆಡಳಿತ ಮಂಡಳಿಯವರು ಗೇಟ್ ತೆರೆಯಲು ಬಿಟ್ಟರು. ತಕ್ಷಣ ಕಾರ್ಖಾನೆ ಆವರಣದೊಳಗೆ ನುಗ್ಗಿದ ರೈತರು, ಮೈಶುಗರ್ ಕಾರ್ಖಾನೆಯ ಸಕ್ಕರೆ ಗೋದಾಮಿಗೆ ಮುತ್ತಿಗೆ ಹಾಕಿದರು. ಗೋದಾಮಿನ ಒಳಗಿದ್ದ ಟ್ರ್ಯಾಲಿಗಳನ್ನು ಹೊರಗೆ ಎಳೆದುಹಾಕಿ, ಸಕ್ಕರೆ ಗೋದಾಮಿಗೆ ಬೀಗ ಜಡಿದು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದರು.
ಕಬ್ಬಿನ ದರ ನಿಗದಿಯಾಗುವವರೆಗೆ ಯಾವುದೇ ಕಾರಣಕ್ಕೂ ಸಕ್ಕರೆ ಮಾರಾಟ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಮಾತು ಕೊಟ್ಟಿದ್ದರು. ಆದರೆ, ಇದಕ್ಕೆ ವಿರುದ್ಧವಾಗಿ ಸಕ್ಕರೆ ಮಾರಾಟ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದರು. ಗೋದಾಮಿನ ಬಳಿಗೆ ಬಿಡಲು ನಿರಾಕರಿಸಿದ ಆಡಳಿತ ಮಂಡಳಿಯ ಧೋರಣೆಯನ್ನು ಖಂಡಿಸಿದ ಮುಖಂಡರು, ಇದು ಕೇವಲ ಸಾಂಕೇತಿಕ ಹೋರಾಟವಷ್ಟೇ ಎಂದು ಎಚ್ಚರಿಸಿದರು.
ಕೂಡಲೇ ಸರ್ಕಾರ ಎಚ್ಚೆತ್ತು ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರವಾದ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಚುಕ್ಕಿ ನಂಜುಂಡಸ್ವಾಮಿ ಸೇರಿದಂತೆ ವಿವಿಧ ರೈತ ಮುಖಂಡರು ಸರ್ಕಾರಕ್ಕೆ ಕರಾರುಬಾಕು ಎಚ್ಚರಿಕೆ ನೀಡಿದ್ದಾರೆ.