ಕರೆಂಟ್ ಬಿಲ್ ಹೆಸರಲ್ಲೂ ಸೈಬರ್ ವಂಚನೆ.. ವಾಟ್ಸ್‌ಆಪ್ ಮೆಸೇಜ್ ನಂಬಿ ಮೋಸ ಹೋಗಬೇಡಿ
ವಿದ್ಯುತ್, ಗ್ಯಾಸ್ ಅಥವಾ ನೀರಿನ ಬಿಲ್ ಬಾಕಿ ಹಾಗೂ ನಕಲಿ ಕೆವೈಸಿ ಅಪ್‌ಡೇಟ್ ಹೆಸರಿನಲ್ಲಿ ನಡೆಯುತ್ತಿರುವ ಹೊಸ ಸೈಬರ್ ವಂಚನೆಯ ಬಗ್ಗೆ ಭಾರತೀಯ ಸ್ಟೇಟ್ ಬ್ಯಾಂಕ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ವಂಚಕರು ಕರೆ, ಎಸ್‌ಎಂಎಸ್ ಅಥವಾ ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ಬಿಲ್ ಕಟ್ಟದಿದ್ದರೆ ಇಂದೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ಬೆದರಿಕೆ ಹಾಕಿ ಜನರಲ್ಲಿ ಆತಂಕ ಸೃಷ್ಟಿಸುತ್ತಾರೆ.
ಬೆಂಗಳೂರು: ತಂತ್ರಜ್ಞಾನ ಬೆಳೆದಂತೆ ಸೈಬರ್ ವಂಚಕರ ಅಟ್ಟಹಾಸವೂ ಮಿತಿಮೀರುತ್ತಿದ್ದು, ಅಮಾಯಕ ಜನರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲು ಖದೀಮರು ದಿನಕ್ಕೊಂದು ಹೊಸ ತಂತ್ರಗಳನ್ನು ಹೂಡುತ್ತಿದ್ದಾರೆ. ಇದೀಗ ವಿದ್ಯುತ್ ಬಿಲ್ ಪಾವತಿ ಹಾಗೂ ನಕಲಿ ಕೆವೈಸಿ ಅಪ್‌ಡೇಟ್ ಹೆಸರಿನಲ್ಲಿ ನಡೆಯುತ್ತಿರುವ ಹೊಸ ವಂಚನೆಯ ಜಾಲದ ಬಗ್ಗೆ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಭಾರತೀಯ ಸ್ಟೇಟ್ ಬ್ಯಾಂಕ್ (SBI) ತನ್ನ ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ಗಂಭೀರ ಎಚ್ಚರಿಕೆಯನ್ನು ನೀಡಿದೆ.
ಜನರನ್ನು ಬಲೆಗೆ ಬೀಳಿಸುತ್ತಿರುವುದು ಹೇಗೆ?
ಸೈಬರ್ ವಂಚಕರು ಅತ್ಯಂತ ವ್ಯವಸ್ಥಿತವಾಗಿ ಈ ಜಾಲವನ್ನು ಹೆಣೆದಿದ್ದಾರೆ. ಮೊದಲಿಗೆ ಗ್ರಾಹಕರ ಮೊಬೈಲ್‌ಗೆ ಕರೆ, ಎಸ್‌ಎಂಎಸ್ ಅಥವಾ ವಾಟ್ಸ್‌ಆ್ಯಪ್ ಮೂಲಕ ಸಂದೇಶಗಳನ್ನು ಕಳುಹಿಸುತ್ತಾರೆ. ನಿಮ್ಮ ಕಳೆದ ತಿಂಗಳ ವಿದ್ಯುತ್, ಗ್ಯಾಸ್ ಅಥವಾ ನೀರಿನ ಬಿಲ್ ಪಾವತಿ ಬಾಕಿ ಉಳಿದಿದೆ. ತಕ್ಷಣವೇ ನಿಮ್ಮ ಕೆವೈಸಿ ವಿವರಗಳನ್ನು ಅಪ್‌ಡೇಟ್ ಮಾಡದಿದ್ದರೆ, ಇಂದು ರಾತ್ರಿಯೇ ನಿಮ್ಮ ಮನೆಯ ವಿದ್ಯುತ್ ಅಥವಾ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಬೆದರಿಕೆಯೊಡ್ಡುತ್ತಾರೆ. ಏಕಾಏಕಿ ಕರೆಂಟ್ ಕಟ್ ಆಗುತ್ತದೆ ಎಂಬ ಆತಂಕಕ್ಕೆ ಒಳಗಾಗುವ ಜನರು, ವಂಚಕರು ಹೇಳಿದಂತೆ ಕೇಳಲು ಮುಂದಾಗುತ್ತಾರೆ.
ಗ್ರಾಹಕರಲ್ಲಿ ತುರ್ತು ಪರಿಸ್ಥಿತಿಯ ಭೀತಿ ಹುಟ್ಟಿಸಿದ ಬಳಿಕ, ವಂಚಕರು ಸಮಸ್ಯೆ ಬಗೆಹರಿಸುವ ನೆಪದಲ್ಲಿ ತಮ್ಮ ಅಸಲಿ ಆಟ ಶುರು ಮಾಡುತ್ತಾರೆ. ಬಿಲ್ ಪಾವತಿಸಲು ಅಥವಾ ಕೆವೈಸಿ ಅಪ್‌ಡೇಟ್ ಮಾಡಲು ಮೊಬೈಲ್‌ಗೆ ಒಂದು ಅಪರಿಚಿತ ಲಿಂಕ್ ಕಳುಹಿಸಿ ಅದರ ಮೇಲೆ ಕ್ಲಿಕ್ ಮಾಡುವಂತೆ ಸೂಚಿಸುತ್ತಾರೆ. ಅಥವಾ ನಕಲಿ ಕಸ್ಟಮರ್ ಕೇರ್ ಅಧಿಕಾರಿಗಳಂತೆ ನಟಿಸಿ ಗ್ರಾಹಕರ ಮೊಬೈಲ್‌ಗೆ ಬರುವ ಒಟಿಪಿ, ಎಟಿಎಂ ಪಿನ್, ಸಿವಿವಿ ಸಂಖ್ಯೆ ಅಥವಾ ಇತರ ಬ್ಯಾಂಕಿಂಗ್ ರಹಸ್ಯ ಮಾಹಿತಿಗಳನ್ನು ಕೇಳಿ ಪಡೆಯುತ್ತಾರೆ. ಗ್ರಾಹಕರು ಲಿಂಕ್ ಕ್ಲಿಕ್ ಮಾಡಿದ ಅಥವಾ ಒಟಿಪಿ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಅವರ ಬ್ಯಾಂಕ್ ಖಾತೆಯಲ್ಲಿರುವ ಲಕ್ಷಾಂತರ ರೂಪಾಯಿ ಹಣವನ್ನು ವಂಚಕರು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಪರಾರಿಯಾಗುತ್ತಿದ್ದಾರೆ.
ಎಸ್‌ಬಿಐ ನೀಡಿರುವ ಪ್ರಮುಖ ಸುರಕ್ಷತಾ ಸಲಹೆಗಳು:
ಈ ವಂಚನೆಯಿಂದ ಸಾರ್ವಜನಿಕರನ್ನು ರಕ್ಷಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ಮಹತ್ವದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ:
• ವಾಟ್ಸ್‌ಆ್ಯಪ್, ಎಸ್‌ಎಂಎಸ್ ಅಥವಾ ಇಮೇಲ್ ಮೂಲಕ ಅಪರಿಚಿತ ವ್ಯಕ್ತಿಗಳು ಕಳುಹಿಸುವ ಯಾವುದೇ ಪಾವತಿ ಲಿಂಕ್‌ಗಳು ಅಥವಾ ಎಪಿಕೆ ಫೈಲ್‌ಗಳ ಮೇಲೆ ಅಪ್ಪಿತಪ್ಪಿಯೂ ಕ್ಲಿಕ್ ಮಾಡಬೇಡಿ.
• ಸಂಪರ್ಕ ಕಡಿತಗೊಳಿಸಲಾಗುವುದು ಎಂಬ ತುರ್ತು ಎಚ್ಚರಿಕೆಯ ಸಂದೇಶಗಳು ಬಂದ ತಕ್ಷಣ ಆತಂಕಕ್ಕೊಳಗಾಗಬೇಡಿ. ಯಾವುದೇ ಸರ್ಕಾರಿ ಸಂಸ್ಥೆಗಳು ಅಥವಾ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) ವೈಯಕ್ತಿಕ ವಾಟ್ಸ್‌ಆ್ಯಪ್ ನಂಬರ್‌ಗಳಿಂದ ಕರೆ ಮಾಡಿ ಬೆದರಿಕೆ ಹಾಕುವುದಿಲ್ಲ. ಸಂದೇಶದ ಸತ್ಯಾಸತ್ಯತೆಯನ್ನು ಸಂಬಂಧಪಟ್ಟ ಕಚೇರಿ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಖಚಿತಪಡಿಸಿಕೊಳ್ಳಿ.
• ಬ್ಯಾಂಕ್ ಸಿಬ್ಬಂದಿ ಅಥವಾ ಯಾವುದೇ ಅಧಿಕಾರಿಗಳು ಫೋನ್ ಕರೆ ಮಾಡಿ ನಿಮ್ಮ ಒಟಿಪಿ, ಪಾಸ್‌ವರ್ಡ್, ಸಿವಿವಿ ಅಥವಾ ಪಿನ್ ಸಂಖ್ಯೆಯನ್ನು ಕೇಳುವುದಿಲ್ಲ. ಇಂತಹ ಖಾಸಗಿ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಒಟ್ಟಾರೆಯಾಗಿ, ಸಾರ್ವಜನಿಕರು ಇಂತಹ ಬೆದರಿಕೆ ಕರೆಗಳ ಬಗ್ಗೆ ಸದಾ ಜಾಗರೂಕರಾಗಿರಬೇಕು. ಸ್ವಲ್ಪ ಎಚ್ಚರಿಕೆ ವಹಿಸುವುದರಿಂದ ಸೈಬರ್ ಖದೀಮರ ಜಾಲಕ್ಕೆ ಬೀಳುವುದನ್ನು ತಪ್ಪಿಸಿಕೊಂಡು, ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದು.