ದೀಪಗಳ ಹಬ್ಬ ದೀಪಾವಳಿಯನ್ನು ಭಾರತೀಯರ ಪ್ರಮುಖ ಹಬ್ಬವೆಂದು ಪರಿಗಣಿಸಲಾಗಿದೆ. ಈ ಹಬ್ಬವನ್ನು ಯುಗಯುಗಗಳಿಂದಲೂ ಆಚರಿಸಲಾಗುತ್ತಿದೆ, ದೀಪಾವಳಿಯ ಕಥೆಗಳಲ್ಲಿ ದೀಪಾವಳಿ ಹಬ್ಬದ ಬಗ್ಗೆ ಪೌರಾಣಿಕ ಮಹತ್ವವನ್ನು ನಾವು ಕಾಣುತ್ತೇವೆ. ದೀಪಾವಳಿಗೆ ಸಂಬಂಧಿಸಿದ ಪೌರಾಣಿಕ ಕಥೆ ಮತ್ತು ಪ್ರಾಮುಖ್ಯತೆಯ ಮಾಹಿತಿಯನ್ನು ತಿಳಿಯಿರಿ
ದೀಪಾವಳಿ ಅಂದ್ರೆ ಸಾಕು, ಎಲ್ಲರ ಮುಖದಲ್ಲೂ ಖುಷಿ ಕಾಣಿಸುತ್ತೆ. ಮನೆ ಮುಂದೆ ಹಣತೆಗಳ ಸಾಲು, ಬಣ್ಣಬಣ್ಣದ ರಂಗೋಲಿ, ಹೊಸ ಬಟ್ಟೆ, ಸಿಹಿತಿಂಡಿ, ಪಟಾಕಿಗಳ ಸದ್ದು ಹೀಗೆ ಎಲ್ಲೆಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಕಾತುರದಿಂದ ಕಾಯುವ ಹಬ್ಬವೇ ದೀಪಾವಳಿ. ಆದ್ರೆ ಈ ಹಬ್ಬವನ್ನು ಏಕೆ ಆಚರಿಸುತ್ತೇವೆ? ಇದರ ಹಿಂದಿನ ಕಥೆಯೇನು? ದೀಪಾವಳಿಯ ವಿಶೇಷತೆ ಏನು? ಬನ್ನಿ ತಿಳಿಯೋಣ.
ಶ್ರೀರಾಮ ಅಯೋಧ್ಯೆಗೆ ಬಂದ ಖುಷಿಗೆ ದೀಪಾವಳಿ!
ದೀಪಾವಳಿ ಆಚರಣೆಯ ಹಿಂದೆ ಇರೋ ಅತ್ಯಂತ ಪ್ರಸಿದ್ಧ ಕಥೆ ಅಂದ್ರೆ ಶ್ರೀರಾಮನದ್ದು... ರಾಮಾಯಣದ ಪ್ರಕಾರ, ಶ್ರೀರಾಮ ತನ್ನ ತಂದೆಯ ಮಾತಿನಂತೆ 14 ವರ್ಷ ವನವಾಸಕ್ಕೆ ಹೋಗುತ್ತಾನೆ. ಈ ಸಂದರ್ಭದಲ್ಲಿ ರಾವಣ ಸೀತೆಯನ್ನು ಅಪಹರಿಸುತ್ತಾನೆ. ಆಗ ಶ್ರೀರಾಮ ವಾನರ ಸೇನೆಯ ಸಹಾಯದಿಂದ ಲಂಕೆಗೆ ಹೋಗಿ ರಾವಣನನ್ನು ಸಂಹರಿಸಿ ಸೀತೆಯನ್ನು ಕರೆದುಕೊಂಡು ಬರುತ್ತಾನೆ.
14 ವರ್ಷಗಳ ವನವಾಸ ಮುಗಿಸಿ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ಅಯೋಧ್ಯೆಗೆ ವಾಪಸ್ ಬಂದಾಗ ಅಲ್ಲಿನ ಜನರಿಗೆ ಎಲ್ಲಿಲ್ಲದ ಸಂತೋಷವಾಗುತ್ತದೆ. ತಮ್ಮ ನೆಚ್ಚಿನ ರಾಮನನ್ನು ಸ್ವಾಗತಿಸಲು ಇಡೀ ಅಯೋಧ್ಯೆಯನ್ನೇ ದೀಪಗಳಿಂದ ಅಲಂಕರಿಸಿರುತ್ತಾರೆ. ಮನೆಮನೆಯಲ್ಲೂ ಹಣತೆ ಹಚ್ಚಿ ಸಂಭ್ರಮಿಸುತ್ತಾರೆ. ಹೀಗೆ ಶ್ರೀರಾಮನ ಆಗಮನದ ಸಂಭ್ರಮದ ನೆನಪಿಗಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎನ್ನುವ ನಂಬಿಕೆಯಿದೆ.
ಶ್ರೀ ಕೃಷ್ಣ ನರಕಾಸುರನನ್ನು ಕೊಂದಿದ್ಯಾಕೆ?
ದೀಪಾವಳಿಗೂ ನರಕಾಸುರನ ಕಥೆಗೂ ವಿಶೇಷ ಸಂಬಂಧವಿದೆ. ಪುರಾಣಗಳ ಪ್ರಕಾರ, ನರಕಾಸುರ ಅನ್ನೋ ರಾಕ್ಷಸ ತನ್ನ ಶಕ್ತಿಯ ಅಹಂಕಾರದಿಂದ ಜನರಿಗೆ ತುಂಬಾ ತೊಂದರೆ ಕೊಡುತ್ತಿದ್ದ. ದೇವತೆಗಳಿಗೂ ಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲ, ಅನೇಕ ಸ್ತ್ರೀಯರನ್ನು ಬಂಧಿಸಿಟ್ಟಿದ್ದ. ಈತನ ಕಾಟದಿಂದ ಬೇಸತ್ತ ದೇವತೆಗಳು ಶ್ರೀಕೃಷ್ಣನ ಮೊರೆ ಹೋಗುತ್ತಾರೆ. ಆಗ ಕೃಷ್ಣ ತನ್ನ ಪತ್ನಿ ಸತ್ಯಭಾಮೆಯ ಜೊತೆ ಸೇರಿ ನರಕಾಸುರನ ವಿರುದ್ಧ ಯುದ್ಧ ಮಾಡಿ ಅವನನ್ನು ಸಂಹರಿಸುತ್ತಾನೆ. ನರಕಾಸುರನ ಸಾವಿನಿಂದ ಜನರು ಸಂತೋಷದಿಂದ ಸಂಭ್ರಮಿಸುತ್ತಾರೆ. ಈ ವಿಜಯದ ನೆನಪಿಗಾಗಿ ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಅಂದರೆ ಕೆಟ್ಟವರ ಮೇಲೆ ಒಳ್ಳೆಯವರ ಗೆಲುವು ಅನ್ನೋ ಸಂದೇಶವನ್ನು ಈ ಕಥೆ ನೀಡುತ್ತದೆ.
ಲಕ್ಷ್ಮಿ ಪೂಜೆ ಮಾಡುವುದೇಕೆ?
ದೀಪಾವಳಿ ಅಂದ್ರೆ ಲಕ್ಷ್ಮಿ ಪೂಜೆ ಕೂಡ ನೆನಪಿಗೆ ಬರುತ್ತದೆ. ತಾಯಿ ಲಕ್ಷ್ಮಿದೇವಿಯನ್ನು ಸಂಪತ್ತು, ಐಶ್ವರ್ಯ ಮತ್ತು ಸಮೃದ್ಧಿಯ ದೇವತೆ ಎಂದು ಪೂಜಿಸಲಾಗುತ್ತದೆ. ದೀಪಾವಳಿಯ ಅಮಾವಾಸ್ಯೆಯಂದು ಮನೆಗಳನ್ನು ಸ್ವಚ್ಛಗೊಳಿಸಿ, ಹೂವುಗಳಿಂದ ಅಲಂಕರಿಸಿ, ಹಣತೆಗಳನ್ನು ಹಚ್ಚಿ ಲಕ್ಷ್ಮಿ ಪೂಜೆ ಮಾಡುತ್ತಾರೆ. ಮನೆಯಲ್ಲೂ ವ್ಯಾಪಾರದಲ್ಲೂ ಒಳ್ಳೆಯದಾಗಲಿ, ಹಣಕಾಸಿನ ಸಮಸ್ಯೆಗಳು ದೂರವಾಗಲಿ, ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸುತ್ತಾರೆ. ವ್ಯಾಪಾರಿಗಳು ಕೂಡ ತಮ್ಮ ಅಂಗಡಿಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಬಲಿ ಪಾಡ್ಯಮಿಯ ವಿಶೇಷತೆ ಏನು?
ದೀಪಾವಳಿಯ ಸಂದರ್ಭದಲ್ಲಿ ಬರುವ ಬಲಿ ಪಾಡ್ಯಮಿಗೂ ತನ್ನದೇ ಆದ ಮಹತ್ವವಿದೆ. ಪುರಾಣದ ಪ್ರಕಾರ, ಬಲಿ ಚಕ್ರವರ್ತಿ ತುಂಬಾ ಧಾನ ಶೂರನಾಗಿದ್ದ. ಆತನಿಗೆ ಪಾಠ ಕಲಿಸಲು ವಿಷ್ಣು ವಾಮನ ಅವತಾರದಲ್ಲಿ ಬಂದು ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳುತ್ತಾನೆ. ಬಲಿ ಒಪ್ಪಿಕೊಂಡಾಗ ವಾಮನನು ವಿಶ್ವರೂಪ ತಾಳಿ ಎರಡು ಹೆಜ್ಜೆಗಳಲ್ಲಿ ಭೂಮಿ ಮತ್ತು ಆಕಾಶವನ್ನು ಅಳೆಯುತ್ತಾನೆ. ಮೂರನೇ ಹೆಜ್ಜೆಗೆ ಬಲಿ ತನ್ನ ತಲೆಯನ್ನೇ ಅರ್ಪಿಸುತ್ತಾನೆ. ಹೀಗೆ ಬಲಿಯ ದಾನಶೀಲತೆಯನ್ನು ನೆನಪಿಸುವ ದಿನವೇ ಬಲಿ ಪಾಡ್ಯಮಿ.
ಈ ದೀಪಾವಳಿಯಲ್ಲಿ ಬೆಳಕಿನ ಜೊತೆಗೆ ಪ್ರೀತಿಯನ್ನೂ ಹಂಚೋಣ!
ದೀಪಾವಳಿ ಅಂದ್ರೆ ಕತ್ತಲೆಯಿಂದ ಬೆಳಕಿನ ಕಡೆಗೆ ಹೋಗುವ ಹಬ್ಬ. ಮನೆಯ ಮುಂದೆ ಒಂದು ಹಣತೆ ಹಚ್ಚಿದ್ರೆ ಆ ಜಾಗ ಬೆಳಗುತ್ತೆ. ಅದೇ ರೀತಿ ನಮ್ಮ ಮನಸ್ಸಿನಲ್ಲಿ ಪ್ರೀತಿ, ಕರುಣೆ ಮತ್ತು ಒಳ್ಳೆಯತನ ತುಂಬಿಕೊಂಡರೆ ನಮ್ಮ ಬದುಕೂ ಸುಂದರವಾಗುತ್ತೆ. ಹಾಗಾಗಿ ಈ ದೀಪಾವಳಿಗೆ ಬರೀ ಮನೆ ಮುಂದೆ ದೀಪ ಹಚ್ಚಿದ್ರೆ ಸಾಲದು, ನಮ್ಮ ಮನಸ್ಸಿನಲ್ಲೂ ಒಳ್ಳೆಯತನದ ದೀಪ ಬೆಳಗಿಸೋಣ. ಎಲ್ಲರ ಜೊತೆ ಸಂತೋಷ ಹಂಚಿಕೊಂಡು, ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸೋಣ. ಇದೇ ದೀಪಾವಳಿಯ ನಿಜವಾದ ವಿಶೇಷತೆ!