Bindiga Deviramma temple History : ಕಾಫಿನಾಡಿನ ಪ್ರಕೃತಿ ಸೌಂದರ್ಯದ ನಡುವೆ ಪ್ರತಿವರ್ಷ ಅತ್ಯಂತ ವಿಜೃಂಭಣೆಯಿಂದ ನಡೆಯುವ ಶಕ್ತಿದೇವತೆ ಬಿಂಡಿಗ ದೇವೀರಮ್ಮನ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಚಂದ್ರದ್ರೋಣ ಪರ್ವತ ಸಾಲಿನಲ್ಲಿ ನೆಲೆಸಿರುವ ದೇವೀರಮ್ಮನ ದರ್ಶನ ಪಡೆಯಲು ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಬಾರಿಯ ಜಾತ್ರಾ ಮಹೋತ್ಸವಕ್ಕಾಗಿ ಜಿಲ್ಲಾಡಳಿತ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಭಕ್ತರ ಸುರಕ್ಷತೆಗಾಗಿ ಹಲವು ಕಟ್ಟುನಿಟ್ಟಿನ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
ಹೌದು.. ಚಿಕ್ಕಮಗಳೂರು ತಾಲೂಕಿನ ಬಿಂಡಿಗ ಮಲ್ಲೇನಹಳ್ಳಿ ಗ್ರಾಮದ ಬಳಿ ಇರುವ ದೇವಿರಮ್ಮ ಬೆಟ್ಟವು ಭಕ್ತರ ಪಾಲಿಗೆ ಅತ್ಯಂತ ಪವಿತ್ರವಾದ ಐತಿಹಾಸಿಕ ಕ್ಷೇತ್ರವಾಗಿದೆ. ಸಮುದ್ರ ಮಟ್ಟದಿಂದ ಸುಮಾರು 3800 ಅಡಿ ಎತ್ತರದಲ್ಲಿರುವ ಈ ಬೆಟ್ಟದ ತುದಿಯಲ್ಲಿರುವ ದೇವಾಲಯ ವರ್ಷದಲ್ಲಿ ಕೇವಲ ಒಂದೆರಡು ದಿನಗಳು ಮಾತ್ರ ಭಕ್ತರ ದರ್ಶನಕ್ಕೆ ತೆರೆದಿರುತ್ತದೆ. ಅಷ್ಟೇ ಅಲ್ಲದೆ, ಬೆಟ್ಟದ ಕೆಳಗಿರುವ ಬಿಂಡಿಗ ಗ್ರಾಮದಲ್ಲೂ ದೇವಿರಮ್ಮನ ಮತ್ತೊಂದು ದೇವಾಲಯವಿದ್ದು, ಇದು ವರ್ಷಪೂರ್ತಿ ತೆರೆದಿರುತ್ತದೆ. ಆದರೆ, ವರ್ಷಕ್ಕೊಮ್ಮೆ ಬರುವ ವಿಶೇಷ ದಿನದಂದು ಕಿರಿದಾದ ಹಾಗೂ ದುರ್ಗಮವಾದ ಹಾದಿಯಲ್ಲಿ ಬರಿಗಾಲಿನಲ್ಲಿ ಬೆಟ್ಟ ಹತ್ತಿ ದೇವಿಯ ದರ್ಶನ ಪಡೆಯುವುದು ಭಕ್ತರ ಅಚಲ ನಂಬಿಕೆಯಾಗಿದೆ.
ದೇಗುಲದ ಇತಿಹಾಸ ಮತ್ತು ಪುರಾಣ
ಸ್ಥಳೀಯರ ನಂಬಿಕೆಯಂತೆ, ಮಹಿಷಾಸುರನ ಸಂಹಾರದ ನಂತರ ದೇವಿ ಇಲ್ಲಿ ಬಂದು ನೆಲೆಸಿದಳು ಎಂಬ ಪ್ರತೀತಿಯಿದೆ. ತಾಯಿ ಚಾಮುಂಡೇಶ್ವರಿಯ ರೂಪವೇ ದೇವೀರಮ್ಮ ಎಂಬುದು ಜನರ ಭಾವನೆ. ಇತಿಹಾಸದ ಪುಟಗಳನ್ನು ಕೆದಕಿದರೆ, ಈ ದೇವಾಲಯವು ಸುಮಾರು 12 ಅಥವಾ 15 ನೇ ಶತಮಾನದಷ್ಟು ಹಳೆಯದು ಎನ್ನಲಾಗುತ್ತದೆ. ಕ್ರಿ.ಶ 1514ರಲ್ಲಿ ರಾಯಬಾಗ್‌ನ ಬೊಮ್ಮಪ್ಪ ನಾಯಕ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದಾನೆ ಎಂಬ ಐತಿಹಾಸಿಕ ಉಲ್ಲೇಖಗಳೂ ಇವೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ ಮತ್ತು ದೈವಿಕ ವಾತಾವರಣವು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿ ಮಾಡುತ್ತದೆ.
ಜಿಲ್ಲಾಡಳಿತದಿಂದ ಹೊಸ ರೂಲ್ಸ್
ವಯೋಮಿತಿ ನಿಗದಿ: ಬೆಟ್ಟದ ಹಾದಿ ಬಹಳ ಕಿರಿದಾಗಿದ್ದು ಅಪಾಯಕಾರಿಯಾಗಿರುವುದರಿಂದ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಬೆಟ್ಟ ಹತ್ತುವುದನ್ನು ನಿಷೇಧಿಸಲಾಗಿದೆ. 15 ರಿಂದ 60 ವರ್ಷದೊಳಗಿನ ಆರೋಗ್ಯವಂತರು ಮಾತ್ರ ಬೆಟ್ಟ ಹತ್ತಲು ಅವಕಾಶ ನೀಡಲಾಗಿದೆ. ಭಕ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾತ್ರಿ ವೇಳೆ ಬೆಟ್ಟ ಹತ್ತುವುದಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ಸಮಯದ ಮಿತಿ: ಈ ಬಾರಿ ಭಕ್ತರಿಗೆ ಎರಡು ದಿನಗಳ ಕಾಲ ಬೆಟ್ಟ ಹತ್ತಲು ಅವಕಾಶ ಕಲ್ಪಿಸಲಾಗಿದೆ. ನವೆಂಬರ್ 7 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ರವರೆಗೆ ಮತ್ತು ನವೆಂಬರ್ 8 ರಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ಮಾತ್ರ ಬೆಟ್ಟ ಹತ್ತಲು ಅವಕಾಶ ನೀಡಲಾಗಿದೆ.
ಪೊಲೀಸ್ ಹಾಗೂ ತುರ್ತು ಸೇವೆಗಳ ನಿಯೋಜನೆ
ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಎಸ್ಪಿ ಜಿತೇಂದ್ರ ದಯ್ಮಾ ಹಾಗೂ ಹಿರಿಯ ಅಧಿಕಾರಿಗಳು ಸ್ವತಃ ಬೆಟ್ಟಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಭಕ್ತರ ಸುರಕ್ಷತೆ ಮತ್ತು ನೂಕುನುಗ್ಗಲು ನಿಯಂತ್ರಿಸಲು ಸಾವಿರಾರು ಪೊಲೀಸರು, ಹೋಂಗಾರ್ಡ್‌ಗಳು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.