ಹುಬ್ಬಳ್ಳಿ: ರೈತರಿಗೆ ನ್ಯಾಯ ಸಿಗುವವರೆಗೆ ಸಕ್ಕರೆ ಸೇವಿಸುವುದಿಲ್ಲ ಎಂದು ಶಿರಹಟ್ಟಿ ಮಠದ ದಿಂಗಾಲೇಶ್ವರ ಶ್ರೀಗಳು ಘೋಷಿಸಿದ್ದಾರೆ. ಹುಬ್ಬಳ್ಳಿ ನಗರದ ಖಾಸಗಿ ಹೋಟೆಲ್ನಲ್ಲಿ ಬುಧವಾರ (ಅಕ್ಟೋಬರ್ 14) ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಬೀದಿಗಿಳಿದು ಹೋರಾಟ ನಡೆಸುತ್ತಿರುವುದು ಅತ್ಯಂತ ನೋವಿನ ಸಂಗತಿ. ಉರಿಬಿಸಿಲಿನಲ್ಲಿ ರಸ್ತೆಯ ಮೇಲೆ ಕುಳಿತು, ರಾತ್ರಿ ಅಲ್ಲಿಯೇ ಮಲಗಿ ನ್ಯಾಯಕ್ಕಾಗಿ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ರೈತ ದೇಶದ ಬೆನ್ನೆಲುಬು ಎಂದು ಪ್ರತಿಯೊಂದು ಪಕ್ಷದ ನಾಯಕರು ಹೇಳುತ್ತಾರೆ. ಆದರೆ, ಅದೇ ರೈತ ಸಂಕಷ್ಟಕ್ಕೆ ಸಿಲುಕಿದಾಗ ಆತನ ನೆರವಿಗೆ ಬರಬೇಕಾದ ಸರ್ಕಾರಗಳು ವಿಫಲವಾಗುತ್ತಿರುವುದು ದುರಂತ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವರಿಗೆ ನ್ಯಾಯ ಒದಗಿಸಬೇಕು. ರೈತರಿಗೆ ವರವಾಗಬೇಕಾದ ಸರ್ಕಾರಗಳು ಶಾಪವಾಗಬಾರದು ಎಂದು ಶ್ರೀಗಳು ಆಗ್ರಹಿಸಿದರು.
ಪೆಟ್ರೋಲ್ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಏರಿಕೆ ಮಾಡುವಾಗ ಸರ್ಕಾರಗಳು ತ್ವರಿತವಾಗಿ ನಿರ್ಧಾರ ಕೈಗೊಳ್ಳುತ್ತವೆ. ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂಬ ಕಾರಣ ನೀಡುತ್ತವೆ. ಆದರೆ, ರೈತರಿಗೆ ಗೊಬ್ಬರ, ಕೂಲಿ, ವಿದ್ಯುತ್ ಮತ್ತು ನೀರಿನ ವೆಚ್ಚ ಹೆಚ್ಚಾದಾಗ ಅವರು ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡಲು ಏಕೆ ಸಾಧ್ಯವಾಗುತ್ತಿಲ್ಲ? ಇತರ ಕಂಪನಿಗಳು ತಾವು ತಯಾರಿಸುವ ವಸ್ತುಗಳ ಬೆಲೆಯನ್ನು ನಿರ್ಧರಿಸುವ ಅಧಿಕಾರ ಹೊಂದಿವೆ. ಆದರೆ, ರೈತ ತಾನು ಬೆಳೆದ ಬೆಳೆಗೆ ಬೆಲೆ ನಿಗದಿಪಡಿಸುವ ಅಧಿಕಾರವನ್ನೂ ಹೊಂದಿಲ್ಲದಿರುವುದು ಅನ್ಯಾಯದ ಪರಮಾವಧಿ ಎಂದು ಕಿಡಿಕಾರಿದರು.
ನಾನು ಕೂಡ ಮಠದ ಜಮೀನಿನಲ್ಲಿ ಸುಮಾರು 15 ವರ್ಷಗಳ ಕಾಲ ಕಬ್ಬು ಬೆಳೆದಿದ್ದು, ಕಬ್ಬು ಬೆಳೆಗಾರರ ಸಂಕಷ್ಟವನ್ನು ಅನುಭವಿಸಿದ್ದೇನೆ. ಕಬ್ಬು ಕಟಾವಿಗೆ ವಿಳಂಬವಾದಂತೆ ಅದರ ತೂಕದಲ್ಲಿ ವ್ಯತ್ಯಾಸವಾಗುತ್ತದೆ. ಕಬ್ಬಿನಲ್ಲಿನ ನೀರಿನ ಅಂಶ ಕಡಿಮೆಯಾಗಿ ರೈತರಿಗೆ ನಷ್ಟ ಉಂಟಾಗುತ್ತದೆ. ರೈತರ ಕಷ್ಟವನ್ನು ಅನುಭವಿಸಿದವರಿಗೆ ಮಾತ್ರ ಅದರ ನೋವು ಅರ್ಥವಾಗುತ್ತದೆ. ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಆಡಳಿತ ನಡೆಸುವವರಿಗೆ ರೈತರ ನೈಜ ಸಂಕಷ್ಟ ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ವಾಮಿನಾಥನ್ ವರದಿ ಜಾರಿಗೆ ತರಲು ಆಗ್ರಹ:
ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತೊಂದು ಸಮಿತಿ ರಚಿಸುವ ಬದಲು, ಈಗಾಗಲೇ ಸಿದ್ಧವಾಗಿರುವ ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಬೇಕು ಎಂದು ದಿಂಗಾಲೇಶ್ವರ ಶ್ರೀಗಳು ಒತ್ತಾಯಿಸಿದರು.
2004ರಿಂದ 2006ರವರೆಗೆ ಅಧ್ಯಯನ ನಡೆಸಿ ಸಲ್ಲಿಸಲಾದ ಸ್ವಾಮಿನಾಥನ್ ವರದಿಯನ್ನು ಪರಿಗಣಿಸಿ, ರೈತರಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ರೈತರ ಬೇಡಿಕೆಗಳನ್ನು ಈಡೇರಿಸುವ ಬದಲು ಮತ್ತೆ ಸಮಿತಿ ರಚನೆ ಮತ್ತು ತನಿಖೆಯ ಹೆಸರಿನಲ್ಲಿ ವಿಳಂಬ ಮಾಡುವುದು ಸರಿಯಲ್ಲ ಎಂದರು.

ರೈತರ ಸಮಸ್ಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ:
ರೈತರ ಸಮಸ್ಯೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶ್ರೀಗಳು, ಪ್ರಧಾನಮಂತ್ರಿಗಳು ಧೃತರಾಷ್ಟ್ರನ ನೀತಿ ಅನುಸರಿಸದೆ ಧರ್ಮರಾಜನ ನೀತಿ ಅನುಸರಿಸಬೇಕು. ದೇಶದ ರೈತರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವುಗಳ ಈಡೇರಿಕೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ರೈತರ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಬೇಕಾದ ಜನಪ್ರತಿನಿಧಿಗಳೇ ರೈತರನ್ನು ದೆಹಲಿಗೆ ಕರೆಸಿಕೊಂಡು, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡದೆ ವಾಪಸ್ ಕಳುಹಿಸಿರುವುದು ಖಂಡನೀಯ. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದವರು ರೈತರನ್ನೇ ಮತ್ತೆ ದೆಹಲಿಗೆ ಕರೆಸಿಕೊಳ್ಳುವುದರಲ್ಲಿ ಅರ್ಥವೇನು ಎಂದು ಪ್ರಶ್ನಿಸಿದರು.
ರೈತರ ಪರವಾಗಿ ಮಠಾಧೀಶರು ಬೀದಿಗಿಳಿಯಲಿ:
ರಾಜ್ಯದ ಹಾಗೂ ದೇಶದ ಎಲ್ಲ ಮಠಾಧೀಶರು, ಕಾವಿಧಾರಿಗಳು, ಸಾಧು-ಸಂತರು, ಶರಣರು, ದಾಸರು ರೈತರ ಬೆಂಬಲಕ್ಕೆ ನಿಲ್ಲಬೇಕು. ಮಠಗಳನ್ನು ಉಳಿಸಿ ಬೆಳೆಸುವಲ್ಲಿ ರೈತರ ಕೊಡುಗೆ ಅಪಾರವಾಗಿದೆ. ರೈತರ ಪರಿಶ್ರಮದಿಂದಲೇ ಮಠಗಳು ನಡೆಯುತ್ತಿವೆ. ಹೀಗಿರುವಾಗ ರೈತರಿಗೆ ಸಂಕಷ್ಟ ಎದುರಾದಾಗ ಮಠಾಧೀಶರು ಮಠಗಳಿಂದ ಹೊರಬಂದು ಅವರೊಂದಿಗೆ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಸಾಹಿತಿಗಳು ರೈತರ ಪರವಾಗಿ ಬರೆಯಬೇಕು. ಚಲನಚಿತ್ರ ನಟ-ನಟಿಯರು ರೈತರ ಹೋರಾಟಕ್ಕೆ ಬೆಂಬಲ ನೀಡಬೇಕು. ಮಾಧ್ಯಮಗಳು ರೈತರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಸಮಾಜದ ಮುಂದಿಡಬೇಕು. ರೈತ ಬೆಳೆದ ಅನ್ನವನ್ನು ಸೇವಿಸುವ ಪ್ರತಿಯೊಬ್ಬರೂ ರೈತರ ಕಷ್ಟವನ್ನು ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ರೈತರ ಸಮಸ್ಯೆಗಳಿಗೆ ನ್ಯಾಯ ದೊರೆಯುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದ ಶ್ರೀಗಳು, ಈ ಹಿಂದೆ ರೈತರ ಹೋರಾಟದ ಸಂದರ್ಭದಲ್ಲಿ ಮಾಲೆ ಧರಿಸುವುದಿಲ್ಲ ಎಂದು ಸಂಕಲ್ಪ ಮಾಡಿದ್ದೆ. ಇದೀಗ ರೈತರಿಗೆ ನ್ಯಾಯ ಸಿಗುವವರೆಗೆ ಸಕ್ಕರೆ ಸೇವಿಸುವುದಿಲ್ಲ ಎಂದು ಮತ್ತೊಂದು ಸಂಕಲ್ಪ ಮಾಡುತ್ತಿದ್ದೇನೆ ಎಂದು ಘೋಷಿಸಿದರು.
ಸುಮಾರು 20 ವರ್ಷಗಳ ಹಿಂದೆ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಕಬ್ಬು ಬೆಳೆಗಾರರ ಪರವಾಗಿ ಹೋರಾಟ ನಡೆಸಿದ್ದನ್ನು ಸ್ಮರಿಸಿದ ಅವರು, ರೈತರಿಗೆ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿ ದೆಹಲಿಗೆ ಕರೆಸಿಕೊಂಡು, ನಿರೀಕ್ಷಿತ ಪರಿಹಾರ ನೀಡದೆ ಅವಮಾನಕರ ರೀತಿಯಲ್ಲಿ ವಾಪಸ್ ಕಳುಹಿಸಿರುವುದು ಬೇಸರ ತಂದಿದೆ. ಈ ಹಿನ್ನೆಲೆಯಲ್ಲಿ ರೈತರ ಹೋರಾಟಕ್ಕೆ ನೇರವಾಗಿ ಬೆಂಬಲ ನೀಡಲು ನಿರ್ಧರಿಸಿದ್ದೇನೆ ಎಂದರು.
ರೈತರು ಆತ್ಮಹತ್ಯೆಯಂತಹ ತೀವ್ರ ನಿರ್ಧಾರಗಳಿಗೆ ಮುಂದಾಗಬಾರದು. ಅವರ ಬೇಡಿಕೆಗಳು ನ್ಯಾಯಯುತವಾಗಿದ್ದು, ಧೈರ್ಯದಿಂದ ಹೋರಾಟ ಮುಂದುವರಿಸಬೇಕು. ರೈತರ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ರೈತರ ಪರವಾಗಿ ಮಾತನಾಡುವವರ ವಿರುದ್ಧ ಅಪಪ್ರಚಾರ ನಡೆಸುವುದೂ ಸರಿಯಲ್ಲ ಎಂದು ಎಚ್ಚರಿಸಿದರು.
ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ವಿಫಲರಾದ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ರೈತರಿಗೆ ನ್ಯಾಯ ಕೊಡಿಸಲು ಸಾಧ್ಯವಾಗದಿದ್ದರೆ ತಮ್ಮ ಅಸಹಾಯಕತೆಯನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು.