SOCIAL MEDIA

Newsletter

PARTNER SITES
Select Language Select State

ಅಗ್ರಿಗೋಲ್ಡ್ ವಂಚನೆ: ಹಣ ಪಡೆಯಲು ಆನೇಕಲ್ ಠಾಣೆ ಮುಂದೆ ಮುಗಿಬಿದ್ದ ಹೂಡಕೆದಾರರು!

ಅಗ್ರಿಗೋಲ್ಡ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂಡಿಕೆ ಹಣ ಮರಳಿ ಪಡೆಯುವ ನಿರೀಕ್ಷೆಯಲ್ಲಿ ನೂರಾರು ಹೂಡಿಕೆದಾರರು ಆನೇಕಲ್ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದಾರೆ. ಹತ್ತು ವರ್ಷಗಳ ಹಿಂದೆ ನಡೆದ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಹೂಡಿಕೆದಾರರ ಬಾಂಡ್‌ಗಳು, ಬ್ಯಾಂಕ್ ಖಾತೆ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

Written By Puttaraj K Alur
Published: Nov 02, 2026, 01:56 PM IST | Updated: Nov 02, 2026, 02:03 PM IST
Image Credit: AgriGold Scam
Join

AgriGold Scam: ಅಗ್ರಿಗೋಲ್ಡ್ ಕಂಪನಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂಡಿಕೆ ಮಾಡಿದ ಹಣವನ್ನ ಮರಳಿ ಪಡೆಯುವ ನಿರೀಕ್ಷೆಯಲ್ಲಿ ನೂರಾರು ಹೂಡಿಕೆದಾರರು ಆನೇಕಲ್ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದಾರೆ. ತಮ್ಮ ಹೂಡಿಕೆಗೆ ಸಂಬಂಧಿಸಿದ ದಾಖಲೆಗಳನ್ನ ಕೈಯಲ್ಲಿ ಹಿಡಿದುಕೊಂಡು ದೂರದ ಊರುಗಳಿಂದಲೂ ಜನರು ಆಗಮಿಸಿದ್ದು, ಪೊಲೀಸ್ ಠಾಣೆಯ ಆವರಣದಲ್ಲಿ ಜನಸಂದಣಿ ಹೆಚ್ಚಾಗಿದೆ.

ಸುಮಾರು ಹತ್ತು ವರ್ಷಗಳ ಹಿಂದೆ ಆಂಧ್ರಪ್ರದೇಶ ಮೂಲದ ಅಗ್ರಿಗೋಲ್ಡ್ ಕಂಪನಿಯು ಹೂಡಿಕೆದಾರರಿಗೆ ವಂಚನೆ ಮಾಡಿತ್ತು. ಕಂಪನಿಯ ಕರ್ನಾಟಕ ಶಾಖೆಯಲ್ಲಿಯೂ ಹಣಕಾಸಿನ ವಂಚನೆ ನಡೆದಿದ್ದು, ಕೋಟ್ಯಂತರ ರೂಪಾಯಿ ಹೂಡಿಕೆ ಹಣವನ್ನ ಕಂಪನಿ ವಂಚಿಸಿರುವ ಆರೋಪವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೂಡಿಕೆದಾರರಿಂದ ದಾಖಲೆಗಳನ್ನ ಸಂಗ್ರಹಿಸಿ ಪರಿಶೀಲಿಸುವ ಪ್ರಕ್ರಿಯೆ ನಡೆಯುತ್ತಿದೆ.

ಹಣವನ್ನ ಹೂಡಿಕೆ ಮಾಡಿದ್ದವರು ತಮ್ಮ ಹೂಡಿಕೆಗೆ ಸಂಬಂಧಿಸಿದ ಬಾಂಡ್‌ಗಳು, ಖಾತೆಯ ವಿವರಗಳು ಹಾಗೂ ಇತರೆ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನ ತೆಗೆದುಕೊಂಡು ಪೊಲೀಸ್ ಠಾಣೆಗೆ ಆಗಮಿಸುತ್ತಿದ್ದಾರೆ. ಸ್ಥಳದಲ್ಲಿ ಸಿಐಡಿ ಅಧಿಕಾರಿಗಳು ಹೂಡಿಕೆದಾರರು ತಂದಿರುವ ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ. ಅಲ್ಲದೆ ಅವರ ಬ್ಯಾಂಕ್ ಖಾತೆ ವಿವರಗಳು ಮತ್ತು ಹೂಡಿಕೆಗೆ ಸಂಬಂಧಿಸಿದ ಮಾಹಿತಿಯನ್ನ ಪಡೆದುಕೊಳ್ಳುತ್ತಿದ್ದಾರೆ.

ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಹೂಡಿಕೆದಾರರು ಮಾಡಿರುವ ಹೂಡಿಕೆಯ ವಿವರಗಳನ್ನ ಆಧರಿಸಿ ಹಣವನ್ನ ಅವರ ಬ್ಯಾಂಕ್ ಖಾತೆಗಳಿಗೆ ಮರಳಿ ಪಾವತಿಸುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಹೀಗಾಗಿ ಹಲವು ವರ್ಷಗಳಿಂದ ತಮ್ಮ ಹಣ ವಾಪಸ್ ಪಡೆಯಲು ಕಾಯುತ್ತಿದ್ದ ಜನರು ಇದೀಗ ದಾಖಲೆಗಳನ್ನ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಆದರೆ ಪೊಲೀಸ್ ಠಾಣೆಯ ಮುಂದೆ ಹೂಡಿಕೆದಾರರ ಸಂಖ್ಯೆ ಹೆಚ್ಚಾಗಿರುವುದರಿಂದ ದಾಖಲೆ ಪರಿಶೀಲನೆ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದೇ ಒಂದು ವ್ಯವಸ್ಥೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸ ಮಾಡುತ್ತಿರುವುದರಿಂದ ಎಲ್ಲರ ದಾಖಲೆಗಳನ್ನ ಪರಿಶೀಲಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ಹೂಡಿಕೆದಾರರು ತಿಳಿಸಿದ್ದಾರೆ.

ದೂರದ ಊರುಗಳಿಂದ ಬಂದಿರುವ ಕಾರಣ ಬೆಳಗ್ಗೆಯಿಂದಲೇ ಪೊಲೀಸ್ ಠಾಣೆಯ ಮುಂದೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಊಟ ಮತ್ತು ನೀರನ್ನೂ ಬಿಟ್ಟು ದಿನವಿಡೀ ಸರದಿಗಾಗಿ ಕಾಯುತ್ತಿದ್ದಾರೆ. ದಾಖಲೆಗಳನ್ನ ಸಲ್ಲಿಸಲು ಹಾಗೂ ಪರಿಶೀಲನೆ ಮುಗಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತಿದೆ ಎಂದು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

ದಾಖಲೆ ಪರಿಶೀಲನೆಗೆ ಹೆಚ್ಚಿನ ಸಿಬ್ಬಂದಿಯನ್ನ ನಿಯೋಜಿಸುವಂತೆ ಹೂಡಿಕೆದಾರರು ಮನವಿ ಮಾಡಿದ್ದಾರೆ. ಒಂದಕ್ಕಿಂತ ಹೆಚ್ಚು ವ್ಯವಸ್ಥೆಗಳನ್ನ ಕಲ್ಪಿಸಿ ಪ್ರಕ್ರಿಯೆಯನ್ನ ವೇಗಗೊಳಿಸಬೇಕು ಎಂಬುದು ಅವರ ಬೇಡಿಕೆಯಾಗಿದೆ. ದೂರದ ಪ್ರದೇಶಗಳಿಂದ ಬಂದಿರುವ ಹಿರಿಯರು ಸೇರಿದಂತೆ ಹಲವು ಹೂಡಿಕೆದಾರರು ಗಂಟೆಗಟ್ಟಲೆ ಕಾಯುವಂತಾಗಿದೆ ಎಂದು ಹೇಳಿದ್ದಾರೆ.

ಒಟ್ನಲ್ಲಿ ಅಗ್ರಿಗೋಲ್ಡ್ ವಂಚನೆ ಪ್ರಕರಣದಲ್ಲಿ ಹೂಡಿಕೆ ಮಾಡಿದ ಹಣವನ್ನ ಮರಳಿ ಪಡೆಯುವ ನಿರೀಕ್ಷೆಯಿಂದ ನೂರಾರು ಜನರು ಆನೇಕಲ್ ಪೊಲೀಸ್ ಠಾಣೆಯತ್ತ ಆಗಮಿಸುತ್ತಿದ್ದಾರೆ. ಸಿಐಡಿ ಅಧಿಕಾರಿಗಳು ಹೂಡಿಕೆ ದಾಖಲೆಗಳು, ಬಾಂಡ್‌ಗಳ ಜೆರಾಕ್ಸ್ ಪ್ರತಿಗಳು ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನ ಸಂಗ್ರಹಿಸಿ ಪರಿಶೀಲಿಸುತ್ತಿದ್ದಾರೆ. ದಾಖಲೆಗಳ ಪರಿಶೀಲನೆಯ ನಂತರ ಹಣ ಮರುಪಾವತಿಯಾಗುವ ನಿರೀಕ್ಷೆಯಲ್ಲಿರುವ ಹೂಡಿಕೆದಾರರು, ಈ ಪ್ರಕ್ರಿಯೆಯನ್ನ ಶೀಘ್ರವಾಗಿ ಪೂರ್ಣಗೊಳಿಸಲು ಹೆಚ್ಚುವರಿ ಸಿಬ್ಬಂದಿ ಮತ್ತು ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES