ಬೆಂಗಳೂರು: ಹತ್ತು ವರ್ಷಗಳ ಹಿಂದೆ ಹಣ ಡಬಲ್ ಆಗುತ್ತೆ, ಭವಿಷ್ಯ ಭದ್ರವಾಗುತ್ತೆ ಅನ್ನೋ ಆಸೆ ತೋರಿಸಿ ಜನರಿಂದ ಕೋಟಿ ಕೋಟಿ ರೂಪಾಯಿ ಹೂಡಿಕೆ ಮಾಡಿಸಿಕೊಂಡಿದ್ದ ಅಗ್ರಿಗೋಲ್ಡ್ ಕಂಪನಿ, ಬಳಿಕ ಹೂಡಿಕೆದಾರರಿಗೆ ವಂಚನೆ ಮಾಡಿತ್ತು. ಜೀವನಪೂರ್ತಿ ದುಡಿದು ಕೂಡಿಟ್ಟ ಹಣವನ್ನ ಕಂಪನಿಯಲ್ಲಿ ಹೂಡಿಕೆ ಮಾಡಿದ್ದ ಜನರು ಇಂದಿಗೂ ತಮ್ಮ ಹಣಕ್ಕಾಗಿ ಕಾಯುವಂತಾಗಿದೆ. ಇದೀಗ ದಶಕದ ಬಳಿಕ ಹೂಡಿಕೆ ಹಣ ವಾಪಸ್ ಸಿಗುವ ನಿರೀಕ್ಷೆ ಮತ್ತೆ ಚಿಗುರಿದೆ. ಸಿಐಡಿ ಅಧಿಕಾರಿಗಳು ಬಾಂಡ್ ಹಾಗೂ ದಾಖಲೆಗಳ ಪರಿಶೀಲನೆಗೆ ಮುಂದಾಗಿದ್ದು, ಆನೇಕಲ್ ಪೊಲೀಸ್ ಠಾಣೆ ಮುಂದೆ ನೂರಾರು ಹೂಡಿಕೆದಾರರು ಜಮಾಯಿಸಿದ್ದಾರೆ. ಆದ್ರೆ ಒಂದೇ ಕೌಂಟರ್‌ನಲ್ಲಿ ನಡೆಯುತ್ತಿರುವ ಪರಿಶೀಲನೆಯಿಂದ ಜನರು ಪರದಾಡುವಂತಾಗಿದೆ. ಹತ್ತು ವರ್ಷಗಳ ನೋವು, ಇಂದಿನ ನಿರೀಕ್ಷೆ ಹಾಗೂ ಹೂಡಿಕೆದಾರರ ಆಕ್ರೋಶದ ಸಂಪೂರ್ಣ ವರದಿ ಇಲ್ಲಿದೆ ನೋಡಿ.
ಕೈಯಲ್ಲಿ ಬಾಂಡ್‌ಗಳ ಕಂತೆ,ಮತ್ತೊಂದೆಡೆ ಬ್ಯಾಂಕ್ ಖಾತೆಯ ವಿವರಗಳಿರುವ ದಾಖಲೆಗಳು,ಬೆಳಗ್ಗೆಯಿಂದಲೇ ಪೊಲೀಸ್ ಠಾಣೆ ಮುಂದೆ ಕಾದು ಕುಳಿತಿರುವ ವಯಸ್ಸಾದವರು, ಮಹಿಳೆಯರು ಸೇರಿದಂತೆ ನೂರಾರು ಮಂದಿ. ಹತ್ತು ವರ್ಷಗಳ ಹಿಂದೆ ಕಳೆದುಕೊಂಡ ಹಣ ಮತ್ತೆ ಕೈ ಸೇರಬಹುದೆಂಬ ನಿರೀಕ್ಷೆಯಲ್ಲಿ ಇವರೆಲ್ಲರೂ ಗಂಟೆಗಟ್ಟಲೆ ಕಾಯುತ್ತಿದ್ದಾರೆ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಬೆಂಗಳೂರು ಹೊರವಲಯದ ಆನೇಕಲ್ ಪೊಲೀಸ್ ಠಾಣೆ. ಹೌದು ಹತ್ತು ವರ್ಷಗಳ ಹಿಂದೆ ಅಗ್ರಿಗೋಲ್ಡ್ ಕಂಪನಿಯ ಆಮಿಷಕ್ಕೆ ಒಳಗಾಗಿ ಹಣ ಹೂಡಿಕೆ ಮಾಡಿದ್ದ ಜನರು, ಇದೀಗ ತಮ್ಮದೇ ಹಣ ವಾಪಸ್ ಪಡೆಯಲು ದಾಖಲೆಗಳ ಸಮೇತ ಅಲೆದಾಡುತ್ತಿದ್ದಾರೆ. ಆಂಧ್ರಪ್ರದೇಶ ಮೂಲದ ಅಗ್ರಿಗೋಲ್ಡ್ ಕಂಪನಿ ಹೆಚ್ಚಿನ ಲಾಭದ ಆಸೆ ತೋರಿಸಿ ಜನರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿತ್ತು. ಕರ್ನಾಟಕದಲ್ಲಿಯೂ ತನ್ನ ಶಾಖೆಗಳ ಮೂಲಕ ನೂರಾರು ಹೂಡಿಕೆದಾರರಿಂದ ಹಣ ಪಡೆದು ಬಳಿಕ ವಂಚನೆ ಮಾಡಿತ್ತು ಎಂಬ ಆರೋಪ ಕೇಳಿಬಂದಿತ್ತು. ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲೇ ದುಪ್ಪಟ್ಟು ಲಾಭ ಸಿಗುತ್ತೆ ಎಂದು ನಂಬಿದ್ದ ಜನರಿಗೆ ಕೊನೆಗೆ ಎದುರಾಗಿದ್ದು ವಂಚನೆಯ ಆಘಾತ. ಕಷ್ಟಪಟ್ಟು ದುಡಿದ ಹಣ, ಮಕ್ಕಳ ಭವಿಷ್ಯಕ್ಕಾಗಿ ಕೂಡಿಟ್ಟ ಹಣವನ್ನೆಲ್ಲಾ ಹೂಡಿಕೆ ಮಾಡಿದ್ದವರು, ಹಣ ವಾಪಸ್ ಸಿಗದೆ ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದೀಗ ಸಿಐಡಿ ಅಧಿಕಾರಿಗಳು ಹೂಡಿಕೆದಾರರ ಬಾಂಡ್ ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸುವ ಪ್ರಕ್ರಿಯೆ ಆರಂಭಿಸಿರುವ ಹಿನ್ನೆಲೆಯಲ್ಲಿ ಮತ್ತೆ ಹಣ ಸಿಗಬಹುದೆಂಬ ಆಸೆ ಜನರಲ್ಲಿ ಮೂಡಿದೆ.
ಇನ್ನು ಆನೇಕಲ್ ಪೊಲೀಸ್ ಠಾಣೆಯಲ್ಲಿಯೂ ದಾಖಲೆಗಳ ಪರಿಶೀಲನೆ ನಡೆಯುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಪ್ರದೇಶಗಳಷ್ಟೇ ಅಲ್ಲದೆ ದೂರದ ಊರುಗಳಿಂದಲೂ ಹೂಡಿಕೆದಾರರು ಬಾಂಡ್‌ಗಳನ್ನು ಹಿಡಿದು ಠಾಣೆಯತ್ತ ಧಾವಿಸಿದ್ದಾರೆ. ರಾಜ್ಯದ ವಿವಿಧೆಡೆ ಅಗ್ರಿಗೋಲ್ಡ್ ಹೂಡಿಕೆದಾರರ ಬಾಂಡ್ ಹಾಗೂ ದಾಖಲೆಗಳ ಪರಿಶೀಲನಾ ಕೇಂದ್ರಗಳನ್ನು ತೆರೆಯಲಾಗಿದೆ. ಹೂಡಿಕೆದಾರರು ತಮ್ಮ ಬಾಂಡ್‌ಗಳ ಜೆರಾಕ್ಸ್ ಪ್ರತಿ, ಬ್ಯಾಂಕ್ ಖಾತೆಯ ವಿವರಗಳು ಹಾಗೂ ಕಂಪನಿಯಲ್ಲಿ ಎಷ್ಟು ಮೊತ್ತದ ಹಣ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳಿಗೆ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬರ ದಾಖಲೆಗಳನ್ನು ಪರಿಶೀಲಿಸಿ, ಅರ್ಹ ಹೂಡಿಕೆದಾರರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಆದರೆ ಹಣ ವಾಪಸ್ ಪಡೆಯುವ ನಿರೀಕ್ಷೆಯಲ್ಲಿ ಬಂದಿರುವ ಜನರಿಗೆ ದಾಖಲೆಗಳ ಪರಿಶೀಲನೆಯೇ ದೊಡ್ಡ ಸವಾಲಾಗಿದೆ. ಆನೇಕಲ್‌ನಲ್ಲಿ ಒಂದೇ ಒಂದು ವ್ಯವಸ್ಥೆಯ ಮೂಲಕ ದಾಖಲೆಗಳನ್ನು ಪರಿಶೀಲಿಸುತ್ತಿರುವುದರಿಂದ ನೂರಾರು ಜನರು ಸರದಿ ಸಾಲಿನಲ್ಲಿ ನಿಂತು ಕಾಯುವಂತಾಗಿದೆ. ದೂರದ ಊರುಗಳಿಂದ ಬಂದಿರುವ ಹೂಡಿಕೆದಾರರು ಬೆಳಗ್ಗೆಯಿಂದಲೇ ಊಟ, ನೀರಿಲ್ಲದೆ ಪೊಲೀಸ್ ಠಾಣೆ ಮುಂದೆ ಕಾಯುತ್ತಿದ್ದಾರೆ. ವಯಸ್ಸಾದವರು ಹಾಗೂ ಮಹಿಳೆಯರು ಕೂಡ ಗಂಟೆಗಟ್ಟಲೆ ನಿಂತು ತಮ್ಮ ಸರದಿ ಬರುವುದನ್ನೇ ಎದುರು ನೋಡುತ್ತಿದ್ದಾರೆ.
ಹೀಗಾಗಿ ದಾಖಲೆಗಳ ಪರಿಶೀಲನೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು, ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಬೇಕು ಹಾಗೂ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂಬುದು ಹೂಡಿಕೆದಾರರ ಪ್ರಮುಖ ಒತ್ತಾಯವಾಗಿದೆ.
ಒಂದು ಕಾಲದಲ್ಲಿ ಹೆಚ್ಚಿನ ಲಾಭದ ಆಸೆಯಿಂದ ಅಗ್ರಿಗೋಲ್ಡ್ ಕಂಪನಿಯನ್ನು ನಂಬಿ ಹಣ ಹೂಡಿಕೆ ಮಾಡಿದ್ದ ಜನರು, ಇಂದು ತಮ್ಮದೇ ಹಣಕ್ಕಾಗಿ ಅಧಿಕಾರಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ತು ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ಇದೀಗ ದಾಖಲೆಗಳ ಪರಿಶೀಲನೆ ಆರಂಭವಾಗಿರುವುದು ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿಸಿದೆ. ಆದರೆ ದಾಖಲೆಗಳ ಪರಿಶೀಲನೆ ಮುಗಿದು ಅರ್ಹ ಹೂಡಿಕೆದಾರರ ಖಾತೆಗೆ ಹಣ ಯಾವಾಗ ಜಮೆಯಾಗಲಿದೆ, ಹತ್ತು ವರ್ಷಗಳ ಹಿಂದೆ ಕಳೆದುಕೊಂಡಿದ್ದ ಹಣ ನಿಜವಾಗಿಯೂ ವಾಪಸ್ ಸಿಗುತ್ತ, ಎಂಬ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಒಟ್ಟಿನಲ್ಲಿ ವರ್ಷಗಳ ಕಾಲ ಕಾದು ಕುಳಿತಿರುವ ಅಗ್ರಿಗೋಲ್ಡ್ ಹೂಡಿಕೆದಾರರಿಗೆ ನ್ಯಾಯ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.