Gruha Lakshmi Scheme: ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ಅಥವಾ ಸರ್ವೇ ಕಾರ್ಯದ ಹೆಸರಿನಲ್ಲಿ ಫಲಾನುಭವಿಗಳಿಂದ ಒಟಿಪಿ, ಬ್ಯಾಂಕ್ ಖಾತೆ ವಿವರ ಹಾಗೂ ವೈಯಕ್ತಿಕ ಮಾಹಿತಿಯನ್ನ ಸಂಗ್ರಹಿಸಲು ಮುಂದಾಗಿರುವ ನಕಲಿ ಜಾಲದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಚ್ಚರಿಕೆ ನೀಡಿದೆ. ಸದ್ಯಕ್ಕೆ ಸರ್ಕಾರದಿಂದ ಯಾವುದೇ ಅಧಿಕೃತ ಮರುಪರಿಶೀಲನೆ ಅಥವಾ ಸರ್ವೇ ಕಾರ್ಯ ಆರಂಭವಾಗಿಲ್ಲ. ಹೀಗಾಗಿ ಯೋಜನೆಯ ಹೆಸರಿನಲ್ಲಿ ಮನೆಗಳಿಗೆ ಭೇಟಿ ನೀಡುವ ಅಥವಾ ದೂರವಾಣಿ ಕರೆ ಮಾಡುವ ಅಪರಿಚಿತ ವ್ಯಕ್ತಿಗಳಿಗೆ ಯಾವುದೇ ರಹಸ್ಯ ಮಾಹಿತಿಯನ್ನ ನೀಡಬಾರದು ಎಂದು ಇಲಾಖೆ ಮನವಿ ಮಾಡಿದೆ.
ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನ ಗುರಿಯಾಗಿಸಿಕೊಂಡು ಕೆಲವು ಅನಧಿಕೃತ ವ್ಯಕ್ತಿಗಳು ವಂಚನೆಗೆ ಮುಂದಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇಂತಹ ವ್ಯಕ್ತಿಗಳು ಮನೆಗಳಿಗೆ ಭೇಟಿ ನೀಡಿ, ಗೃಹಲಕ್ಷ್ಮಿ ಯೋಜನೆಯ ಸರ್ವೇ ನಡೆಸಲಾಗುತ್ತಿದೆ ಅಥವಾ ಫಲಾನುಭವಿಗಳ ಮಾಹಿತಿಯನ್ನ ಪರಿಶೀಲಿಸಲಾಗುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ನೆಪದಲ್ಲಿ ಮಹಿಳೆಯರಿಂದ ಒಟಿಪಿ, ಬ್ಯಾಂಕ್ ಖಾತೆ ಸಂಖ್ಯೆ ಸೇರಿದಂತೆ ಹಲವು ವೈಯಕ್ತಿಕ ವಿವರಗಳನ್ನ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಕೆಲವು ಪ್ರದೇಶಗಳಲ್ಲಿ ಇಂತಹ ಘಟನೆಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಇಲಾಖೆಯಿಂದ ಸದ್ಯಕ್ಕೆ ಯಾವುದೇ ಮರುಪರಿಶೀಲನೆ ಅಥವಾ ಸರ್ವೇ ಕಾರ್ಯ ಆರಂಭಿಸಿಲ್ಲವೆಂದು ಸ್ಪಷ್ಟಪಡಿಸಿದೆ. ಆದ್ದರಿಂದ ಯೋಜನೆಯ ಹೆಸರಿನಲ್ಲಿ ಮಾಹಿತಿ ಕೇಳಿಕೊಂಡು ಮನೆಗಳಿಗೆ ಬರುವ ಅಥವಾ ಫೋನ್ ಕರೆ ಮಾಡುವ ಅನಧಿಕೃತ ವ್ಯಕ್ತಿಗಳ ಬಗ್ಗೆ ಫಲಾನುಭವಿಗಳು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಿದೆ.
ಅಧಿಕೃತ ಆದೇಶ ಬಂದ ಬಳಿಕವಷ್ಟೇ ಮರುಪರಿಶೀಲನೆ
ಸರ್ಕಾರದ ಆದೇಶದಂತೆ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಮರುಪರಿಶೀಲನೆ ಪ್ರಕ್ರಿಯೆ ಆರಂಭವಾದರೆ, ಫಲಾನುಭವಿಗಳ ಗುರುತನ್ನ ದೃಢೀಕರಿಸುವ ಪ್ರಕ್ರಿಯೆ ನಡೆಯಲಿದೆ. ಈ ಸಂದರ್ಭದಲ್ಲಿ ಫಲಾನುಭವಿಯ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಮೂಲಕ ದೃಢೀಕರಣ ಮಾಡುವ ಅಗತ್ಯವಿರಬಹುದು ಎಂದು ಇಲಾಖೆ ತಿಳಿಸಿದೆ.
ಆದರೆ ಪ್ರಸ್ತುತ ಯಾವುದೇ ಅಧಿಕೃತ ಸರ್ವೇ ಅಥವಾ ಮರುಪರಿಶೀಲನೆ ಪ್ರಕ್ರಿಯೆ ನಡೆಯುತ್ತಿಲ್ಲ. ಹೀಗಾಗಿ ಯಾರಾದರೂ ಸರ್ವೇ ಹೆಸರಿನಲ್ಲಿ ಒಟಿಪಿ ಅಥವಾ ಇತರ ವೈಯಕ್ತಿಕ ಮಾಹಿತಿಯನ್ನ ಕೇಳಿದರೆ ಅದನ್ನ ಹಂಚಿಕೊಳ್ಳಬಾರದು ಎಂದು ಇಲಾಖೆ ಎಚ್ಚರಿಸಿದೆ. ಸರ್ಕಾರದಿಂದ ಅಧಿಕೃತ ಆದೇಶ ಹೊರಬಂದ ನಂತರವಷ್ಟೇ ಈ ಪ್ರಕ್ರಿಯೆ ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ಒಟಿಪಿ, ಬ್ಯಾಂಕ್ ವಿವರ ಹಂಚಿಕೊಂಡರೆ ವಂಚನೆ ಅಪಾಯ
ಮಹಿಳೆಯರು ತಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನ ಯಾವುದೇ ಅಪರಿಚಿತ ವ್ಯಕ್ತಿಗೆ ತಿಳಿಸಬಾರದು. ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ವಿವರಗಳು, ವೈಯಕ್ತಿಕ ದಾಖಲೆಗಳು ಹಾಗೂ ಬ್ಯಾಂಕಿಂಗ್‌ಗೆ ಸಂಬಂಧಿಸಿದ ಮಾಹಿತಿಯನ್ನ ಕೂಡ ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದೇವೆ ಎಂಬ ಕಾರಣಕ್ಕೆ ಯಾರಾದರೂ ಮನೆಗೆ ಬಂದು ಮಾಹಿತಿ ಕೇಳಿದರೆ ತಕ್ಷಣವೇ ನಂಬಬಾರದು. ಅವರು ಇಲಾಖೆಯ ಅಧಿಕೃತ ಸಿಬ್ಬಂದಿಯೇ ಎಂಬುದನ್ನ ಮೊದಲು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ವಂಚನೆ ಮಾಡುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಗೃಹಲಕ್ಷ್ಮಿ ಯೋಜನೆಯನ್ನೇ ಕೆಲವರು ದುರುಪಯೋಗಪಡಿಸಿಕೊಳ್ಳಲು ಮುಂದಾಗಿರುವುದು ಗಂಭೀರ ವಿಚಾರವಾಗಿದೆ. ಒಮ್ಮೆ ಒಟಿಪಿ ಅಥವಾ ಬ್ಯಾಂಕ್ ಖಾತೆಯ ವಿವರಗಳು ವಂಚಕರ ಕೈಗೆ ಸಿಕ್ಕರೆ ಬ್ಯಾಂಕ್ ಖಾತೆಯಲ್ಲಿರುವ ಹಣ ಕಳೆದುಕೊಳ್ಳುವ ಅಪಾಯವೂ ಎದುರಾಗಬಹುದು. ಆದ್ದರಿಂದ ಯಾವುದೇ ಆಮಿಷಗಳಿಗೆ ಒಳಗಾಗದೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಸರ್ಕಾರದ ಪ್ರಕಟಣೆಗಾಗಿ ಕಾಯಲು ಸೂಚನೆ
ಗೃಹಲಕ್ಷ್ಮಿ ಯೋಜನೆಯ ಅಧಿಕೃತ ಮರುಪರಿಶೀಲನೆ ಪ್ರಕ್ರಿಯೆ ಆರಂಭಿಸುವ ಕುರಿತು ಸರ್ಕಾರದಿಂದ ಆದೇಶ ಹೊರಬಂದ ಬಳಿಕವಷ್ಟೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಹಿತಿ ನೀಡಲಿದೆ. ಅಲ್ಲಿಯವರೆಗೆ ಸರ್ವೇ ಅಥವಾ ಮರುಪರಿಶೀಲನೆ ಹೆಸರಿನಲ್ಲಿ ಯಾರಾದರೂ ಮಾಹಿತಿ ಕೇಳಿದರೆ ಸ್ಪಂದಿಸಬಾರದು ಎಂದು ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಒಟ್ನಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿರುವ ಮಹಿಳೆಯರು ಇಂತಹ ವಂಚಕರ ಜಾಲಕ್ಕೆ ಸಿಲುಕದಂತೆ ಎಚ್ಚರಿಕೆ ವಹಿಸಬೇಕು. ಸರ್ಕಾರದ ಅಧಿಕೃತ ಪ್ರಕಟಣೆಗಳನ್ನ ಮಾತ್ರ ನಂಬಬೇಕು. ಅಪರಿಚಿತರಿಗೆ ಒಟಿಪಿ, ಬ್ಯಾಂಕ್ ಖಾತೆ ವಿವರಗಳು ಹಾಗೂ ವೈಯಕ್ತಿಕ ಮಾಹಿತಿಯನ್ನ ನೀಡದೆ ಜಾಗರೂಕರಾಗಿರಬೇಕು ಎಂಬುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೂಚನೆಯಾಗಿದೆ.