ದಾವಣಗೆರೆ: ಆನ್‌ಲೈನ್ ಗೇಮಿಂಗ್ ಸೈಬರ್ ವಂಚನೆಗೆ 13 ವರ್ಷದ ಬಾಲಕ ಬ*ಲಿ
ಆನ್‌ಲೈನ್ ಗೇಮ್ ಆಸೆಗೆ 13 ವರ್ಷದ ಬಾಲಕ ಜೀವ ಕಳೆದುಕೊಂಡಿರುವ ಘಟನೆ ದಾವಣಗೆರೆಯ ಚನ್ನಗಿರಿಯಲ್ಲಿ ನಡೆದಿದೆ.
ದಾವಣಗೆರೆ: ಆನ್‌ಲೈನ್ ಗೇಮ್ ಆಸೆಗೆ 8ನೇ ತರಗತಿ ವಿದ್ಯಾರ್ಥಿ ಬಲಿಯಾದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ನಡೆದಿದೆ. 13 ವರ್ಷದ 8ನೇ ತರಗತಿ ವಿದ್ಯಾರ್ಥಿಯೇ ಆನ್‌ಲೈನ್ ಗೇಮ್ ನಿಂದ ಆ**ತ್ಮಹ**ತ್ಯೆ ಮಾಡಿಕೊಂಡಿರುವ ದುರ್ದೈವಿ ಎನ್ನಲಾಗಿದೆ.
ಆನ್‌ಲೈನ್ ಗೇಮ್ ಐಡಿ ಹೆಸರಿನಲ್ಲಿ ಬೆದರಿಕೆ:
ಲಭ್ಯವಿರುವ ಮಾಹಿತಿಗಳ ಪ್ರಕಾರ, ಆನ್‌ಲೈನ್ ಗೇಮ್ ಐಡಿ ನೀಡುವುದಾಗಿ ನಂಬಿಸಿದ್ದ ಸೈಬರ್ ವಂಚಕರು 13 ವರ್ಷದ ಬಾಲಕನಿಂದ ಹಂತ ಹಂತವಾಗಿ ಸುಮಾರು 4 ಲಕ್ಷದ 11 ಸಾವಿರ ರೂಪಾಯಿವರೆಗೆ ಹಣ ವಸೂಲಿ ಮಾಡಿದ್ದರು. ಹಣ ನೀಡದಿದ್ದರೆ ಆತನ ಜೊತೆಗೆ ಅವನ ಅಣ್ಣನನ್ನೂ ಕೊ*ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.
ವಂಚಕರ ಬೆದರಿಕೆಯಿಂದ ಮನನೊಂದಿದ್ದ ಬಾಲಕ:
ಸೈಬರ್ ವಂಚಕರ ನಿರಂತರ ಬೆದರಿಕೆಯಿಂದ ಮನನೊಂದಿದ್ದ ಬಾಲಕ ಸೆಪ್ಟೆಂಬರ್ 7ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಆ*ತ್ಮಹ**ತ್ಯೆಗೆ ಶರಣಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಬಾಲಕನ ತಂದೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಬಾಲಕನ ಸಾ*ವಿಗೆ ಕಾರಣರಾದವರನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅದೇನೆ ಇರಲಿ ಒಂದೆಡೆ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳುವ ಬದಲು ಮಕ್ಕಳು ಆನ್‌ಲೈನ್ ಗೇಮ್ ಚಟಕ್ಕೆ ಈ ರೀತಿ ಬ*ಲಿ ಆಗುತ್ತಿರುವುದು ನಿಜಕ್ಕೂ ದುರಂತವೇ ಸರಿ.
ಪೋಷಕರು ತಮ್ಮ ಮಕ್ಕಳಿಗೆ ಬೇಕಾಗಿರುವ ಮೊಬೈಲ್, ಲ್ಯಾಪ್‌ಟಾಪ್ ರೀತಿಯ ಎಲ್ಲಾ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಮಕ್ಕಳು ಏನು ಮಾಡುತ್ತಿದ್ದಾರೆ? ಅವರ ಜೀವನದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆಯೂ ಗಮನವಹಿಸಬೇಕು. ಈ ವಯಸ್ಸಿನಲ್ಲಿ ಮಕ್ಕಳು ತಪ್ಪು ಮಾಡುವುದು, ಅಡ್ಡ ದಾರಿ ಹಿಡಿಯುವುದು ಸಹಜವೇ. ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ತಾಳ್ಮೆಯಿಂದ ವರ್ತಿಸಿ, ಅವರಿಗೆ ಸರಿ ತಪ್ಪುಗಳ ಬಗ್ಗೆ ತಿಳಿ ಹೇಳಿ. ಎಂತದ್ದೇ ಸಂದರ್ಭದಲ್ಲೂ ಪೋಷಕರು ನಿಮ್ಮೊಂದಿಗೆ ಇರುತ್ತಾರೆ ಎಂಬುದನ್ನು ಮನವರಿಕೆ ಮಾಡಿಸಿ. ಸಮಸ್ಯೆ ಯಾವುದೇ ಆದರೂ ನಾವು ಅದನ್ನು ಬಗೆಹರಿಸೋಣ. ನಿಮ್ಮ ಜೊತೆಗೆ ಸದಾ ನಾವು ಇರುತ್ತೇವೆ ಎಂಬ ವಿಶ್ವಾಸ ಬರುವಂತೆ ಮಾಡುವುದು ತಂದೆ ತಾಯಿಯರ ಜವಾಬ್ದಾರಿ ಆಗಿದೆ. ಆಗಷ್ಟೇ ಇಂತಹ ದುರಂತಗಳನ್ನು ತಪ್ಪಿಸಬಹುದಾಗಿದೆ. ಒಮ್ಮೆ ಮಕ್ಕಳಿಗೆ ತಪ್ಪಿನ ಬಗ್ಗೆ ಅರಿವಾದರೆ ಅವರು ಮುಂದೆ ತಪ್ಪು ದಾರಿಯಲ್ಲಿ ಹೆಜ್ಜೆ ಹಾಕುವುದನ್ನು ಬಿಡಬಹುದು. ಕೇವಲ ಮೋಜು ಮಸ್ತಿಯೇ ಜೀವನವಲ್ಲ. ನಮ್ಮ ಕಾಲ ಮೇಲೆ ನಾವು ನಿಲ್ಲುವುದನ್ನು ಕಲಿಯಬೇಕು. ಬದುಕು ನಾವಂದುಕೊಂಡಷ್ಟು ಸುಖದ ಹಾದಿ ಆಗಿರುವುದಿಲ್ಲ. ಜೀವನದಲ್ಲಿ ಏಳು-ಬೀಳುಗಳು ಇದ್ದೇ ಇರುತ್ತವೆ. ಜೀವನದಲ್ಲಿ ಎದುರಾಗಬಹುದಾದ ಬೆಟ್ಟದಂತಹ ಸಮಸ್ಯೆಗಳನ್ನು ನಿಭಾಯಿಸಲು, ಕಲ್ಲು ಮುಳ್ಳಿನ ಹಾದಿಯಲ್ಲಿ ಹೆಜ್ಜೆ ಹಾಕಲು ಆತ್ಮವಿಶ್ವಾಸ ಮುಖ್ಯ ಎನ್ನುವ ಜೀವನದ ಪಾಠವನ್ನು ಮಕ್ಕಳಿಗೆ ಪೋಷಕರಿಗಿಂತ ಉತ್ತಮವಾಗಿ ಯಾರೂ ಕಲಿಸಲು ಸಾಧ್ಯವಿಲ್ಲ. ಹಣ ಹೋದರೆ ಸಂಪಾದಿಸಬಹುದು, ಆದರೆ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಅಲ್ಲವೇ...