ಕರ್ನಾಟಕದ ಹಲವು ಭಾಗಗಳಲ್ಲಿ ಇಂದು (ಅಕ್ಟೋಬರ್ 15, ಗುರುವಾರ) ಮತ್ತು ನಾಳೆ (ಅಕ್ಟೋಬರ್ 16, ಶುಕ್ರವಾರ) ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಈಶಾನ್ಯ ಮಾನ್ಸೂನ್ ದಕ್ಷಿಣ ಭಾರತದತ್ತ ಸಮೀಪಿಸುತ್ತಿರುವುದರಿಂದ ಮುಂದಿನ ಎರಡು ದಿನಗಳ ಕಾಲ ಕರ್ನಾಟಕದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 15 ರಿಂದ ಅಕ್ಟೋಬರ್ 18ರ ನಡುವೆ ರಾಜ್ಯದಲ್ಲಿ ಭಾರೀ ಮಳೆ:
ಅಕ್ಟೋಬರ್ 15 ಮತ್ತು ಅಕ್ಟೋಬರ್ 16ರಂದು ಎಂದರೆ ಗುರುವಾರ & ಶುಕ್ರವಾರ ಎರಡೂ ದಿನಗಳ ಕಾಲ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಭವಿಷ್ಯ ನುಡಿದಿದೆ. ಇದಲ್ಲದೆ, ಅಕ್ಟೋಬರ್ 17 ಮತ್ತು ಅಕ್ಟೋಬರ್ 18 ರಂದು ಎಂದರೆ ಶನಿವಾರ, ಭಾನುವಾರದಂದು ಕರ್ನಾಟಕದ ವಿವಿಧ ಭಾಗಗಳಲ್ಲಿ ಚದುರಿದಂತೆ ಮಳೆ ಆಗುವ ನಿರೀಕ್ಷೆಯಿದೆ ಎನ್ನಲಾಗಿದೆ.
ಮುಂದಿನ ಮೂರ್ನಾಲ್ಕು ದಿನಗಳ ಕಾಲ ಕರ್ನಾಟಕದ ಹವಾಮಾನ ಹೇಗಿರಲಿದೆ? ಎಲ್ಲೆಲ್ಲಿ ಮಳೆ ಆಗಲಿದೆ ಎಂದು ನೋಡುವುದಾದರೆ...
ಅಕ್ಟೋಬರ್ 15 ಮತ್ತು ಅಕ್ಟೋಬರ್ 16ರಂದು ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ:
ಐಎಂಡಿ ನೀಡಿರುವ ಅಲರ್ಟ್ ಪ್ರಕಾರ, ಅಕ್ಟೋಬರ್ 15 ಮತ್ತು ಅಕ್ಟೋಬರ್ 16ರಂದು ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 40-50 ಕಿ.ಮೀ. ಇರಲಿದ್ದು ಗುಡುಗು, ಮಿಂಚು, ಬಿರುಗಾಳಿಯಿಂದ ಕೂಡಿದ ಭಾರೀ ಮಳೆ ನಿರೀಕ್ಷಿಸಲಾಗಿದೆ ಎನ್ನಲಾಗಿದೆ.
ಅಕ್ಟೋಬರ್ 15ರಂದು ಎಲ್ಲೆಲ್ಲಿ ಮಳೆ ಮುನ್ಸೂಚನೆ:
ಐಎಂಡಿ ಪ್ರಕಾರ, ಅಕ್ಟೋಬರ್ 15ರಂದು ಸಿಲಿಕಾನ್ ಸಿಟಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಯೂ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಆಗಲಿದೆ ಎನ್ನಲಾಗುತ್ತಿದೆ.
ಅಕ್ಟೋಬರ್ 16ರಂದು ಹವಾಮಾನ ಮುನ್ಸೂಚನೆ:
ಅಕ್ಟೋಬರ್ 16ರಂದು ಬೆಂಗಳೂರು, ಮೈಸೂರು, ಕೊಡಗು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕರಾವಳಿ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ನಿರೀಕ್ಷೆ ಇದ್ದು, ಒಂದೆರಡು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ನಿರೀಕ್ಷೆ ಇದೆ ಎನ್ನಲಾಗಿದೆ.
ಉತ್ತರ ಒಳನಾಡಿನಲ್ಲಿ ಒಣ ಹವೆ:
ಇದಲ್ಲದೆ, ಅಕ್ಟೋಬರ್ 15 & 16ರಂದು ಉತ್ತರ ಒಳನಾಡಿನ ಗದಗ, ಹಾವೇರಿ, ಕೊಪ್ಪಳ, ರಾಯಚೂರು ಸೇರಿದಂತೆ ಒಂದೆರಡು ಜಿಲ್ಲೆಗಳಲ್ಲಿ ಸಾಧಾರಣ ಮಳೆ ನಿರೀಕ್ಷೆ ಇದ್ದು, ಬೀದರ್, ಬಾಗಲಕೋಟೆ, ಬೆಳಗಾವಿ, ಧಾರವಾಡ, ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ ಎನ್ನಲಾಗಿದೆ.