ಬಿಗ್ ಬಾಸ್ ಮನೆಯಲ್ಲಿ ಈ ವಾರ ನಡೆದ ಪತ್ರದ ಟಾಸ್ಕ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮನೆಯಲ್ಲಿರುವ ಸ್ಪರ್ಧಿಗಳಿಗೆ ಎರಡು ತಿಂಗಳ ಬಳಿಕ ಕುಟುಂಬದ ಕಡೆಯಿಂದ ಪತ್ರ ಬಂದಿದ್ದು, ಅದನ್ನು ಪಡೆಯಲು ಸ್ಪರ್ಧಿಗಳು ವಿವಿಧ ಸವಾಲುಗಳನ್ನು ಎದುರಿಸಬೇಕಾಗಿದೆ. ಆದರೆ ಈ ಟಾಸ್ಕ್‌ನಲ್ಲಿ ಸ್ಪರ್ಧಿ ಕಿರಣ್ ಶಾಸ್ತ್ರಿ ನಡೆದುಕೊಂಡ ರೀತಿ ಸಹ ಸ್ಪರ್ಧಿಗಳು ಹಾಗೂ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಉದ್ದೇಶಪೂರ್ವಕವಾಗಿ ಬಾಲ್ ಕೆಳಗೆ ಬೀಳಿಸುವ ಮೂಲಕ ಟಾಸ್ಕ್ ಹಾಳು ಮಾಡಿದ್ದಾರೆ ಎಂಬ ಆರೋಪ ಕಿರಣ್ ವಿರುದ್ಧ ಕೇಳಿಬಂದಿದೆ.
ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಆಟದ ಕಾವು ಹೆಚ್ಚಾಗುತ್ತಿದೆ. ಫಿನಾಲೆ ಹಂತ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಸ್ಪರ್ಧಿಯೂ ಗೆಲುವಿಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ನಡೆದ ಪತ್ರದ ಟಾಸ್ಕ್ ಸ್ಪರ್ಧಿಗಳ ಭಾವನೆಗಳ ಜೊತೆಗೆ ಅವರ ಆಟದ ಮನಸ್ಥಿತಿಯನ್ನೂ ಪರೀಕ್ಷಿಸಿದೆ. ಮನೆಯಲ್ಲಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್ ಕಡೆಯಿಂದ ಬ್ಲ್ಯಾಂಕ್ ಪತ್ರಗಳನ್ನು ನೀಡಲಾಗಿತ್ತು. ಈ ಪತ್ರಗಳನ್ನು ಪಡೆದುಕೊಳ್ಳಲು ವಿವಿಧ ಟಾಸ್ಕ್‌ಗಳಲ್ಲಿ ಗೆಲ್ಲಬೇಕಾದ ಸವಾಲು ನೀಡಲಾಗಿತ್ತು.
ಟಾಸ್ಕ್‌ನಲ್ಲಿ ಕಿರಣ್ ಶಾಸ್ತ್ರಿ ಮಾಡಿದ್ದೇನು?
ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ಜಗದೀಶ್ ಅವರು ಸ್ಪರ್ಧಿಗಳಿಗೆ ರ್ಯಾಂಕಿಂಗ್ ನೀಡಿದ್ದರು. ಅದರಂತೆ ಸ್ಪರ್ಧಿಗಳು ನಿರ್ದಿಷ್ಟ ಕ್ರಮದಲ್ಲಿ ನಿಂತು, ಅಡೆತಡೆಗಳ ನಡುವೆ ಬಾಲ್ ಅನ್ನು ಒಬ್ಬರಿಂದ ಮತ್ತೊಬ್ಬರಿಗೆ ಪಾಸ್ ಮಾಡಬೇಕಿತ್ತು. ಬಾಲ್ ಅಂತಿಮ ಗುರಿ ತಲುಪಿದರೆ ಜಗದೀಶ್ ಅವರಿಗೆ ಮನೆಯವರಿಂದ ಬಂದಿರುವ ಪತ್ರವನ್ನು ಪಡೆಯುವ ಅವಕಾಶವಿತ್ತು.
ಈ ಟಾಸ್ಕ್‌ನ ಆರಂಭದಲ್ಲಿ ಮೊದಲ ಎರಡು ಸ್ಥಾನಗಳಲ್ಲಿದ್ದ ಗಾನವಿ ಹಾಗೂ ಸೌಂದರ್ಯಾ ಶೆಟ್ಟಿ ಉತ್ತಮವಾಗಿ ಆಟವಾಡಿದರು. ಕೇವಲ ಐದು ನಿಮಿಷಗಳಲ್ಲಿ ಬಾಲ್ ನ್ನು ಯಶಸ್ವಿಯಾಗಿ ಹಸ್ತಾಂತರಿಸಿದರು. ಆದರೆ ನಂತರ ಕಿರಣ್ ಶಾಸ್ತ್ರಿಯ ಸರದಿ ಬಂದಾಗ ಆಟದ ಸ್ವರೂಪವೇ ಬದಲಾಯಿತು. ಬಾಲ್ ಅನ್ನು ಮುಂದಕ್ಕೆ ಪಾಸ್ ಮಾಡುವ ಬದಲು ಉದ್ದೇಶಪೂರ್ವಕವಾಗಿ ಕೆಳಗೆ ಬೀಳಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂತು.
ಕಿರಣ್ ಅವರ ಈ ವರ್ತನೆಯಿಂದ ಟಾಸ್ಕ್‌ಗೆ ಅಡ್ಡಿಯಾಯಿತು. ಇದನ್ನು ಗಮನಿಸಿದ ಸಹ ಸ್ಪರ್ಧಿಗಳು ಅಸಮಾಧಾನ ವ್ಯಕ್ತಪಡಿಸಿದರು. ಆರಂಭದಲ್ಲಿ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ ಕಿರಣ್, ತಾವು ಉದ್ದೇಶಪೂರ್ವಕವಾಗಿ ಹೀಗೆ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು. ಆದರೆ ಗಾನವಿ ಅವರು ಪದೇಪದೇ ಈ ವಿಚಾರವನ್ನು ಪ್ರಸ್ತಾಪಿಸಿದ ಬಳಿಕ ಕೊನೆಗೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ನಾಮಿನೇಷನ್ ಸೇಡಿಗಾಗಿ ಈ ನಿರ್ಧಾರ?
ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮನೆಯ ಹಲವು ಸ್ಪರ್ಧಿಗಳು ಕಿರಣ್ ಶಾಸ್ತ್ರಿ ಅವರ ಹೆಸರನ್ನು ಸೂಚಿಸಿದ್ದರು. ಸುಲಭವಾಗಿ ಟಾರ್ಗೆಟ್ ಮಾಡಬಹುದಾದ ಸ್ಪರ್ಧಿ ಎಂಬ ಕಾರಣಕ್ಕೆ ತಮ್ಮನ್ನು ನಾಮಿನೇಟ್ ಮಾಡಲಾಗಿದೆ ಎಂಬ ಅಸಮಾಧಾನ ಕಿರಣ್ ಅವರಲ್ಲಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಟಾಸ್ಕ್‌ನಲ್ಲಿ ಈ ರೀತಿ ವರ್ತಿಸಿದ್ದಾರೆಯೇ ಎಂಬ ಪ್ರಶ್ನೆ ಈಗ ಮೂಡಿದೆ.
ಆರಂಭದ ದಿನಗಳಲ್ಲಿ ಕಿರಣ್ ಶಾಸ್ತ್ರಿ ಆಟದಲ್ಲಿ ಆಕ್ರಮಣಕಾರಿ ಮನೋಭಾವ ತೋರಿಸುತ್ತಿದ್ದರು. ಇತರ ಸ್ಪರ್ಧಿಗಳೊಂದಿಗೆ ಸಂಘರ್ಷಕ್ಕೆ ಇಳಿಯುತ್ತಿದ್ದ ಅವರ ವರ್ತನೆಗೆ ಸುದೀಪ್ ಕೂಡ ಬುದ್ಧಿವಾದ ಹೇಳಿದ್ದರು. ನಂತರ ಕಿರಣ್ ತಮ್ಮ ಆಟದ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದರು. ಆದರೆ ಈ ವಾರದ ನಾಮಿನೇಷನ್‌ನಲ್ಲಿ ಮತ್ತೆ ಅವರ ಹಳೆಯ ವರ್ತನೆ ಕಾಣಿಸುತ್ತಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಫಿನಾಲೆ ಕನಸಿಗೆ ಹಿನ್ನಡೆಯಾಗುತ್ತಾ?
ಕಿರಣ್ ಶಾಸ್ತ್ರಿ ಅವರ ಈ ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ನಾಮಿನೇಷನ್‌ನಲ್ಲಾದ ಅಸಮಾಧಾನವನ್ನು ಆಟದ ಮೂಲಕ ತೋರಿಸುವುದು ಸರಿಯಲ್ಲ ಎಂದು ಅನೇಕ ವೀಕ್ಷಕರು ಟೀಕಿಸುತ್ತಿದ್ದಾರೆ. ಗೆಲ್ಲುವ ಅವಕಾಶವಿದ್ದರೂ ಉದ್ದೇಶಪೂರ್ವಕವಾಗಿ ಟಾಸ್ಕ್ ಹಾಳು ಮಾಡುವುದು ಕೀಳು ಮಟ್ಟದ ಆಟದ ತಂತ್ರ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೊಂದೆಡೆ, ಇಷ್ಟು ದಿನ ಉತ್ತಮವಾಗಿ ಆಟವಾಡಿ ಅಭಿಮಾನಿಗಳ ಗಮನ ಸೆಳೆದಿದ್ದ ಕಿರಣ್ ಇದೀಗ ತಮ್ಮದೇ ನಿರ್ಧಾರದಿಂದ ಫಿನಾಲೆ ಹಾದಿಯನ್ನು ಕಠಿಣಗೊಳಿಸಿಕೊಂಡಿದ್ದಾರೆಯೇ ಎಂಬ ಪ್ರಶ್ನೆಯೂ ಎದುರಾಗಿದೆ. ಮುಂಬರುವ ದಿನಗಳಲ್ಲಿ ಕಿರಣ್ ತಮ್ಮ ಆಟದ ಮೂಲಕ ಮತ್ತೆ ವೀಕ್ಷಕರ ವಿಶ್ವಾಸ ಗಳಿಸುತ್ತಾರಾ ಅಥವಾ ಈ ವಿವಾದ ಅವರ ಫಿನಾಲೆ ಕನಸಿಗೆ ಅಡ್ಡಿಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.