ಕೇಂದ್ರ ಸಚಿವ ಸಂಪುಟದಿಂದ 2 ಪ್ರಮುಖ ನಿರ್ಧಾರ.. DA ಹೆಚ್ಚಳದ ಬಗ್ಗೆ ಮುಂದುವರೆದ ಸಸ್ಪೆನ್ಸ್
ನಿನ್ನೆ (ಅ. 14) ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಎರಡು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಆದರೆ, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ.
ನಿನ್ನೆ (ಅ. 14, ಬುಧವಾರ) ನಡೆದಕೇಂದ್ರ ಸರ್ಕಾರದ ಮಹತ್ವದ ಕ್ಯಾಬಿನೆಟ್ ಸಭೆಯಲ್ಲಿ ರೈಲ್ವೆ ಉದ್ಯೋಗಿಗಳಿಗೆ PLB ಪಾವತಿ ಮತ್ತು ಪಿಂಚಣಿ ಯೋಜನೆಗಳ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಆದಾಗ್ಯೂ, 2026ರ ಎರಡನೇ ಕಂತಿನ ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿರುವ ಕೇಂದ್ರ ಸರ್ಕಾರಿ ಉದ್ಯೋಗಿಗಳ ಕುತೂಹಲ ಮಾತ್ರ ಹಾಗೆಯೇ ಉಳಿದಿದೆ.
ಹೌದು, ಅಕ್ಟೋಬರ್ 14 ರ ಬುಧವಾರದಂದು ನಡೆದ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ. ಇದರೊಂದಿಗೆ ಕೇಂದ್ರ ಸರ್ಕಾರಿ ನೌಕರರ ಡಿಎ ಹೆಚ್ಚಳದ ಬಗೆಗಿನ ಸಸ್ಪೆನ್ಸ್ ಇನ್ನೂ ಮುಂದುವರೆದಿದೆ. ಆದರೆ, ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ ಎರಡು ಪ್ರಮುಖ ವಿಚಾರಗಳ ಬಗ್ಗೆ ಮೋದಿ ಕ್ಯಾಬಿನೆಟ್ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.
ಎರಡು ವಿಚಾರಗಳ ಬಗ್ಗೆ ಮೋದಿ ಸಂಪುಟದ ಮಹತ್ವದ ನಿರ್ಧಾರ:
ಅಕ್ಟೋಬರ್ 14ರಂದು ಮೋದಿ ಕ್ಯಾಬಿನೆಟ್ನಲ್ಲಿ ಕೈಗೊಳ್ಳಲಾದ ಎರಡು ಪ್ರಮುಖ ನಿರ್ಧಾರಗಳೆಂದರೆ...
ಮೊದಲನೆಯದಾಗಿ - ರೈಲ್ವೆ ಉದ್ಯೋಗಿಗಳಿಗೆ ಪಿ.ಎಲ್.ಬಿ. ದಸರಾ ಬೋನಸ್ ಘೋಷಣೆ
ಎರಡನೆಯದಾಗಿ - ಪಿಂಚಣಿ ಯೋಜನೆಗಳ ಹೆಸರುಗಳಲ್ಲಿನ ಬದಲಾವಣೆ
* ರೈಲ್ವೆ ಉದ್ಯೋಗಿಗಳಿಗೆ ಪಿ.ಎಲ್.ಬಿ. ದಸರಾ ಬೋನಸ್:
ಮೋದಿ ಕ್ಯಾಬಿನೆಟ್ 2026 ರ ದಸರಾ ಹಬ್ಬಕ್ಕೂ ಮೊದಲೇ ಭಾರತೀಯ ರೈಲ್ವೆ ಉದ್ಯೋಗಿಗಳಿಗೆ ಬಂಪರ್ ಗುಡ್ ನ್ಯೂಸ್ ನೀಡಿದ್ದು, 78 ದಿನಗಳ ಕಾರ್ಯಕ್ಷಮತೆ-ಸಂಬಂಧಿತ ಬೋನಸ್ ನೀಡುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ.
ಲಭ್ಯವಿರುವ ಮಾಹಿತಿಗಳ ಪ್ರಕಾರ, ಅರ್ಹ ರೈಲ್ವೆ ನೌಕರರಿಗೆ ಪಿಎಲ್ಬಿ (PLB) ಆಗಿ 78 ದಿನಗಳವರೆಗೆ ಪಾವತಿಸಬಹುದಾದ ಗರಿಷ್ಠ ಮೊತ್ತ ₹17,951 ಆಗಿರಲಿದೆ ಎನ್ನಲಾಗಿದೆ.
* ಪಿಂಚಣಿ ಯೋಜನೆಗಳ ಹೆಸರು ಬದಲಾವಣೆ:
ಪಿಂಚಣಿ ಯೋಜನೆಗಳ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಮೋದಿ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರನ್ವಯ ವೃದ್ಧರು, ವಿಧವೆಯರು ಮತ್ತು ಅಂಗವಿಕಲ ನಾಗರಿಕರಿಗಾಗಿ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ ಮತ್ತು ವಿವಿಧ ಪಿಂಚಣಿ ಯೋಜನೆಗಳ ಹೆಸರನ್ನು ಮರುನಾಮಕರಣ ಮಾಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಹೊಸ ಹೆಸರುಗಳು PMSSY, PMVPY, PMDPY, PMPLY. ಇದಲ್ಲದೆ ಸಚಿವ ಸಂಪುಟವು ಅಂಗವಿಕಲ ಪಿಂಚಣಿ ಮೊತ್ತವನ್ನು ಸಹ ಹೆಚ್ಚಿಸಲು ನಿರ್ಧರಿಸಿದೆ.
ಕೇಂದ್ರ ನೌಕರರು ಡಿಎ ಹೆಚ್ಚಳ:
ವಾಸ್ತವವಾಗಿ, ದೇಶಾದ್ಯಂತ ಲಕ್ಷಾಂತರ ಮಂದಿ ಸರ್ಕಾರಿ ನೌಕರರು 2026ರ ಎರಡನೇ ಕಂತಿನ ಡಿಎ ಹಣಕ್ಕಾಗಿ ಕಾತುರಾಗಿ ಕಾಯುತ್ತಿದ್ದಾರೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ಏಳನೇ ವೇತನ ಆಯೋಗದ ಸೂತ್ರದ ಆಧಾರದ ಮೇಲೆ ಈ ಬಾರಿ 3% ತುಟ್ಟಿಭತ್ಯೆ ಏರಿಕೆಯನ್ನು ನಿರೀಕ್ಷಿಸಲಾಗಿದೆ. ಈ ಡಿಎ ಹೆಚ್ಚಳವು ಜುಲೈ 1, 2026 ರಿಂದಲೇ ಅನ್ವಯವಾಗುವಂತೆ ಜಾರಿಗೆ ಬರಲಿದೆ ಎಂದಲೂ ನಿರೀಕ್ಷಿಸಲಾಗಿದೆ.
ದೀಪಾವಳಿ ವೇಳೆಗೆ ಡಿಎ ಹೆಚ್ಚಳ ಸಾಧ್ಯತೆ:
ಕೇಂದ್ರ ಸರ್ಕಾರಿ ನೌಕರರಿಗೆ ಸಾಮಾನ್ಯವಾಗಿ ದಸರಾ ಸಂದರ್ಭದಲ್ಲಿ ವರ್ಷದ ಎರಡನೇ ಕಂತಿನ ತುಟ್ಟಿಭತ್ಯೆ ಪರಿಷ್ಕರಣೆಯನ್ನು ಘೋಷಿಸಲಾಗುತ್ತಿತ್ತು. ಈ ವರ್ಷ ಅಕ್ಟೋಬರ್ 20 ರಂದು ದಸರಾ ಆಚರಣೆ ಇರಲಿದೆ. ಇದುವರೆಗೂ ಡಿಎ ಪರಿಷ್ಕರಣೆ ಬಗ್ಗೆ ಯಾವುದೇ ಘೋಷಣೆ ಮಾಡಲಾಗಿಲ್ಲ. ಹಾಗಾಗಿ, ಕೇಂದ್ರ ಸರ್ಕಾರದ ಉದ್ಯೋಗಿಗಳು ದೀಪಾವಳಿ ಹಬ್ಬಕ್ಕೂ ಮೊದಲೇ ಡಿಎ ಹೆಚ್ಚಳದ ಬಗ್ಗೆ ಸಿಹಿ ಸುದ್ದಿಯನ್ನು ನಿರೀಕ್ಷಿಸಬಹುದು ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಇದೀಗ ದೇಶಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಹಾಗೂ ಪಿಂಚಣಿದಾರರ ಚಿತ್ತ ಮುಂದಿನ ಕೇಂದ್ರ ಸಚಿವ ಸಂಪುಟ ಸಭೆಯತ್ತ ನೆಟ್ಟಿದ್ದು ಅಲ್ಲಿಯವರೆಗೂ ತುಟ್ಟಿಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಸ್ಪೆನ್ಸ್ ಮುಂದುವರೆಯಲಿದೆ.