• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ಮಧ್ಯರಾತ್ರಿ ಮನೆಗೆ ನುಗ್ಗಿದ ಚಿರತೆ! ವಿಶೇಷಚೇತನ ಮಹಿಳೆಯ ಧೈರ್ಯಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು; ಕೊನೆಗೆ ನಡೆದಿದ್ದೇನು?

ಮಧ್ಯರಾತ್ರಿ ಮನೆಗೆ ನುಗ್ಗಿದ ಚಿರತೆ! ವಿಶೇಷಚೇತನ ಮಹಿಳೆಯ ಧೈರ್ಯಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು; ಕೊನೆಗೆ ನಡೆದಿದ್ದೇನು?

ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ತಲ್ಲಿ ಸೇಠಿ ಗ್ರಾಮದಲ್ಲಿ ಮಧ್ಯರಾತ್ರಿ ನಾಯಿಯನ್ನ ಬೆನ್ನಟ್ಟಿಕೊಂಡು ಚಿರತೆಯೊಂದು ಮನೆಯೊಳಗೆ ನುಗ್ಗಿದೆ. ಮನೆಯಲ್ಲಿ ಒಬ್ಬರೇ ಇದ್ದ ವಿಶೇಷಚೇತನ ಮಹಿಳೆ ಜಯಂತಿ ದೇವಿ, ಸಮಯಪ್ರಜ್ಞೆಯಿಂದ ಚಿರತೆಯನ್ನ ಕೋಣೆಯೊಳಗೆ ಬಂಧಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗೆ ಅರಿವಳಿಕೆ ನೀಡಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಮಹಿಳೆಯ ಧೈರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Written ByPuttaraj K Alur
Published: Oct 15, 2026, 03:29 PM IST|Updated: Oct 15, 2026, 03:43 PM IST
joinshare
ಮಧ್ಯರಾತ್ರಿ ಮನೆಗೆ ನುಗ್ಗಿದ ಚಿರತೆ! ವಿಶೇಷಚೇತನ ಮಹಿಳೆಯ ಧೈರ್ಯಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು; ಕೊನೆಗೆ ನಡೆದಿದ್ದೇನು?
Image Credit: Uttarakhand Leopard

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ನಟ ಇಮ್ರಾನ್ ಖಾನ್‌ಗೆ ಭಾರತ ತೊರೆಯುವಂತೆ ನೋಟಿಸ್; ಈತ ಭಾರತದ ಪ್ರಜೆಯೇ ಅಲ್ಲ!?

ನಟ ಇಮ್ರಾನ್ ಖಾನ್‌ಗೆ ಭಾರತ ತೊರೆಯುವಂತೆ ನೋಟಿಸ್; ಈತ ಭಾರತದ ಪ್ರಜೆಯೇ ಅಲ್ಲ!?

2

ಸಿದ್ದರಾಮಯ್ಯ ಪದಚ್ಯುತಿಗೆ ಆ ನೀಲಿಕಣ್ಣಿನ ಮಂತ್ರಿಯೇ ಕಾರಣ, ಆತ ಬಲಿತ ದಲಿತ : ಹೆಚ್‌ಡಿಕೆ ಆರೋಪ

3

ಪೊಲೀಸ್ ಕಮಿಷನರ್ ಕಚೇರಿ ಮೆಟ್ಟಿಲಲ್ಲೇ ಎಚ್‌ಡಿಕೆ ಧರಣಿ! ಸ್ಟಿಂಗ್ ರೂವಾರಿಯ ಬಂಧನಕ್ಕೆ 48 ಗಂಟೆ ಡೆಡ್‌ಲೈನ್!

4

ಬೀದರ್ ಜಿಲ್ಲೆಗೂ ವ್ಯಾಪಿಸಿದ ಕಬ್ಬು ಬೆಳೆಗಾರರ ಹೋರಾಟ

5

ಒಂದು ಕೆಜಿಗೆ 100 ರೂಪಾಯಿ ದಾಟುತ್ತಾ ಅಕ್ಕಿ ಬೆಲೆ? ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Uttarakhand Leopard News: ಮಧ್ಯರಾತ್ರಿ ಮನೆಯೊಳಗೆ ಚಿರತೆ ನುಗ್ಗಿದರೆ ಯಾರಿಗಾದರೂ ಭಯವಾಗುವುದು ಸಹಜ. ಅದರಲ್ಲೂ ಮನೆಯಲ್ಲಿ ಒಬ್ಬರೇ ಇರುವಾಗ ಎದುರಿನ ಕೋಣೆಯಲ್ಲಿ ಚಿರತೆ ಕಾಣಿಸಿಕೊಂಡರೆ ಪರಿಸ್ಥಿತಿ ಹೇಗಿರಬಹುದು? ಇಂತಹ ಭಯಾನಕ ಸಂದರ್ಭವನ್ನ ಉತ್ತರಾಖಂಡದ ಮಹಿಳೆಯೊಬ್ಬರು ತಮ್ಮ ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಎದುರಿಸಿದ್ದಾರೆ.

ಹೌದು, ದೈಹಿಕ ಅಂಗವೈಕಲ್ಯ ಹೊಂದಿರುವ ಜಯಂತಿ ದೇವಿ ಎಂಬ ಮಹಿಳೆಯೇ, ಮನೆಯೊಳಗೆ ನುಗ್ಗಿದ ಚಿರತೆಯನ್ನ ಕೋಣೆಯಲ್ಲೇ ಬಂಧಿಸಿ, ಅರಣ್ಯ ಇಲಾಖೆ ಸಿಬ್ಬಂದಿ ಬರುವವರೆಗೂ ಸುರಕ್ಷಿತವಾಗಿರುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಬೇತಾಲ್‌ಘಾಟ್ ವ್ಯಾಪ್ತಿಯ ತಲ್ಲಿ ಸೇಠಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದ್ದು, ಗ್ರಾಮಸ್ಥರು ಅವರ ಧೈರ್ಯವನ್ನ ಶ್ಲಾಘಿಸಿದ್ದಾರೆ.

ನಾಯಿ ಬೆನ್ನಟ್ಟಿಕೊಂಡು ಮನೆಗೆ ನುಗ್ಗಿದ ಚಿರತೆ!

ವರದಿಗಳ ಪ್ರಕಾರ, ಭಾನುವಾರ ತಡರಾತ್ರಿ ಸುಮಾರು 2ರಿಂದ 3 ಗಂಟೆಯ ನಡುವೆ ಈ ಘಟನೆ ನಡೆದಿದೆ. ಗ್ರಾಮದ ಜಯಂತಿ ದೇವಿ ಅವರ ಮನೆಯ ಬಳಿ ಚಿರತೆಯೊಂದು ಸಾಕು ನಾಯಿಯನ್ನ ಬೆನ್ನಟ್ಟಿಕೊಂಡು ಬಂದಿದೆ. ಚಿರತೆಯಿಂದ ತಪ್ಪಿಸಿಕೊಳ್ಳಲು ನಾಯಿ ಮನೆಯೊಳಗೆ ಓಡಿದ್ದು, ಅದನ್ನ ಹಿಂಬಾಲಿಸಿದ ಚಿರತೆಯೂ ಮನೆಯೊಳಗೆ ಪ್ರವೇಶಿಸಿದೆ. ಮನೆಯೊಳಗೆ ನುಗ್ಗಿದ ಚಿರತೆ ಪಕ್ಕದ ಕೋಣೆಗೆ ತೆರಳಿ ಅಲ್ಲಿಯೇ ಮಲಗಿತ್ತು ಎನ್ನಲಾಗಿದೆ. ಈ ವೇಳೆ ಮನೆಯಲ್ಲಿ ಒಬ್ಬರೇ ಇದ್ದ ಜಯಂತಿ ದೇವಿ ಅವರಿಗೆ ಏನೋ ಓಡಾಡಿದ ರೀತಿ ಅನುಭವವಾಗಿದೆ. ಅನುಮಾನಗೊಂಡು ಗಮನಿಸಿದಾಗ ಪಕ್ಕದ ಕೋಣೆಯಲ್ಲಿ ಚಿರತೆ ಇರುವುದನ್ನ ಕಂಡು ಆಘಾತಕ್ಕೊಳಗಾಗಿದ್ದಾರೆ. ಆದರೆ ಅಪಾಯದ ಸಂದರ್ಭದಲ್ಲೂ ಅವರು ಸಮಯಪ್ರಜ್ಞೆ ಕಳೆದುಕೊಳ್ಳಲಿಲ್ಲ. ಚಿರತೆಯ ಹತ್ತಿರ ಹೋಗದೆ, ಅದು ಇದ್ದ ಕೋಣೆಯ ಬಾಗಿಲನ್ನ ಹೊರಗಿನಿಂದ ಮುಚ್ಚಿದ್ದಾರೆ. ಇದರಿಂದ ಚಿರತೆ ಮನೆಯ ಇತರ ಭಾಗಗಳಿಗೆ ಸಂಚರಿಸುವುದನ್ನ ತಡೆಯಲು ಸಾಧ್ಯವಾಯಿತು.

ಅಂಗವೈಕಲ್ಯವಿದ್ದರೂ ಸಮಯಪ್ರಜ್ಞೆ ಮೆರೆದ ಮಹಿಳೆ

ಜಯಂತಿ ದೇವಿ ದೈಹಿಕ ಅಂಗವೈಕಲ್ಯ ಹೊಂದಿರುವ ಮಹಿಳೆ. ಇಂತಹ ಪರಿಸ್ಥಿತಿಯಲ್ಲಿ ಮನೆಯೊಳಗೆ ಚಿರತೆ ಕಾಣಿಸಿಕೊಂಡಾಗ ಸುರಕ್ಷಿತವಾಗಿ ಹೊರಬರುವುದು ದೊಡ್ಡ ಸವಾಲಾಗಿತ್ತು. ಆದರೂ ಅವರು ಪರಿಸ್ಥಿತಿಯನ್ನ ಅರಿತು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಚಿರತೆಯನ್ನ ಕೋಣೆಯೊಳಗೆ ಬಂಧಿಸಿದ ಬಳಿಕ ಜೋರಾಗಿ ಕೂಗಿಕೊಂಡು ನೆರೆಹೊರೆಯವರನ್ನ ಸಹಾಯಕ್ಕೆ ಕರೆದಿದ್ದಾರೆ. ಮಹಿಳೆಯ ಕೂಗು ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದು, ಮನೆಯೊಳಗೆ ಚಿರತೆ ಇರುವ ವಿಷಯ ತಿಳಿದು ಆತಂಕಗೊಂಡಿದ್ದಾರೆ. ನಂತರ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತ್ತು. ಮನೆಯೊಳಗೆ ಚಿರತೆ ಇರುವುದರಿಂದ ಅದನ್ನ ಸುರಕ್ಷಿತವಾಗಿ ಹೊರತೆಗೆಯುವುದು ಅರಣ್ಯ ಇಲಾಖೆ ಸಿಬ್ಬಂದಿಗೆ ಸವಾಲಾಗಿತ್ತು.

ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ; ಚಿರತೆಯ ರಕ್ಷಣೆ

ಗ್ರಾಮಸ್ಥರಿಂದ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ವರದಿಗಳ ಪ್ರಕಾರ, ಅರಣ್ಯ ವಲಯಾಧಿಕಾರಿ ಮನೋಜ್ ಭಗತ್ ನೇತೃತ್ವದ ತಂಡ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಮೊದಲಿಗೆ ಚಿರತೆ ಇರುವ ಕೋಣೆಯ ಪರಿಸ್ಥಿತಿಯನ್ನ ಪರಿಶೀಲಿಸಿದ ಸಿಬ್ಬಂದಿ, ಬಳಿಕ ಸೂಕ್ತ ಕ್ರಮ ಅನುಸರಿಸಿ ಚಿರತೆಗೆ ಅರಿವಳಿಕೆ ನೀಡಿ ಸೆರೆಹಿಡಿದಿದ್ದಾರೆ. ನಂತರ ಅದನ್ನ ಸುರಕ್ಷಿತವಾಗಿ ರಕ್ಷಣಾ ಕೇಂದ್ರಕ್ಕೆ ಸಾಗಿಸಲಾಗಿದೆ. ಚಿರತೆಯನ್ನ ಸೆರೆಹಿಡಿದ ಬಳಿಕ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಘಟನೆಯಲ್ಲಿ ಮಹಿಳೆ ಸುರಕ್ಷಿತವಾಗಿರುವುದು ಸ್ಥಳೀಯರಿಗೆ ಸಮಾಧಾನ ತಂದಿದೆ. ಆದರೆ ರಕ್ಷಣಾ ಕಾರ್ಯಾಚರಣೆಯ ನಂತರ ಚಿರತೆಯ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಗ್ರಾಮಸ್ಥರಲ್ಲಿ ಹೆಚ್ಚಿದ ಚಿರತೆ ದಾಳಿಯ ಆತಂಕ

ಬೇತಾಲ್‌ಘಾಟ್ ಪ್ರದೇಶದಲ್ಲಿ ಚಿರತೆಗಳ ಓಡಾಟ ಹೆಚ್ಚುತ್ತಿರುವ ಬಗ್ಗೆ ಸ್ಥಳೀಯರು ಈಗಾಗಲೇ ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಪ್ರದೇಶಗಳಿಗೆ ಸಮೀಪವಿರುವ ಗ್ರಾಮಗಳಲ್ಲಿ ಚಿರತೆಗಳು ಕಾಣಿಸಿಕೊಳ್ಳುವುದು ಹಾಗೂ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಬಸಗಾಂವ್, ಸೌಂಗಾಂವ್ ಮತ್ತು ಸಿಮಲ್ಖಾ ಸೇರಿದಂತೆ ವಿವಿಧ ಗ್ರಾಮಗಳ ನಿವಾಸಿಗಳು ಚಿರತೆಗಳ ಚಲನವಲನದ ಬಗ್ಗೆ ಅರಣ್ಯ ಇಲಾಖೆಯ ಗಮನ ಸೆಳೆದಿದ್ದಾರೆಂದು ವರದಿಯಾಗಿದೆ. ಇದೀಗ ತಲ್ಲಿ ಸೇಠಿ ಗ್ರಾಮದಲ್ಲಿ ಚಿರತೆ ನೇರವಾಗಿ ಮನೆಯೊಳಗೆ ಪ್ರವೇಶಿಸಿರುವ ಘಟನೆ ಸ್ಥಳೀಯರ ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ. ಜನವಸತಿ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಗಸ್ತು ಹೆಚ್ಚಿಸಬೇಕು ಹಾಗೂ ವನ್ಯಜೀವಿಗಳಿಂದ ಜನರಿಗೆ ಅಪಾಯವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಚಿರತೆ ಎದುರಾದಾಗ ಏನು ಮಾಡಬೇಕು?

ವನ್ಯಜೀವಿಗಳು ಮನೆಯೊಳಗೆ ಪ್ರವೇಶಿಸಿದಾಗ ಅವುಗಳನ್ನ ಸ್ವತಃ ಹಿಡಿಯಲು ಅಥವಾ ಓಡಿಸಲು ಪ್ರಯತ್ನಿಸುವುದು ಅಪಾಯಕಾರಿ. ಇಂತಹ ಸಂದರ್ಭದಲ್ಲಿ ಪ್ರಾಣಿಯಿಂದ ಸುರಕ್ಷಿತ ಅಂತರ ಕಾಯ್ದುಕೊಂಡು, ಸಾಧ್ಯವಾದಷ್ಟು ಸುರಕ್ಷಿತ ಸ್ಥಳಕ್ಕೆ ತೆರಳಿ ಅರಣ್ಯ ಇಲಾಖೆ ಅಥವಾ ತುರ್ತು ಸೇವೆಗಳಿಗೆ ಮಾಹಿತಿ ನೀಡಬೇಕು. ಚಿರತೆಯನ್ನ ಕೆರಳಿಸುವುದು, ಸುತ್ತುವರಿಯುವುದು ಅಥವಾ ಹತ್ತಿರ ಹೋಗಿ ವಿಡಿಯೋ ಚಿತ್ರೀಕರಿಸಲು ಪ್ರಯತ್ನಿಸುವುದನ್ನ ತಪ್ಪಿಸಬೇಕು. ತರಬೇತಿ ಪಡೆದ ರಕ್ಷಣಾ ಸಿಬ್ಬಂದಿಯೇ ಇಂತಹ ಕಾರ್ಯಾಚರಣೆ ನಡೆಸುವುದು ಸುರಕ್ಷಿತ. ಒಟ್ನಲ್ಲಿ ಮಧ್ಯರಾತ್ರಿ ಮನೆಯೊಳಗೆ ನುಗ್ಗಿದ ಚಿರತೆಯನ್ನ ಎದುರಿಸಿದ ಜಯಂತಿ ದೇವಿಯವರ ಸಮಯಪ್ರಜ್ಞೆ ಎಲ್ಲರ ಗಮನ ಸೆಳೆದಿದೆ. ಈ ಘಟನೆ ಧೈರ್ಯದ ಜೊತೆಗೆ ಅಪಾಯದ ಸಂದರ್ಭಗಳಲ್ಲಿ ಎಚ್ಚರಿಕೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಬೇಕೆಂಬ ಸಂದೇಶವನ್ನೂ ನೀಡಿದೆ.

Add Zee News as a Preferred Source
TAGS:
Viral
Kannada News