ಬೀದರ್: ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ಇದೀಗ ಬೀದರ್ ಜಿಲ್ಲೆಗೂ ವ್ಯಾಪಿಸಿದೆ. ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿ, ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಹಳೆಯ ಆರ್ಟಿಒ ಚೆಕ್ಪೋಸ್ಟ್ವರೆಗೆ ರೈತರು ಪ್ರತಿಭಟನಾ ರ್ಯಾಲಿ ನಡೆಸಿದರು. ಬಳಿಕ ಹೈದರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರೆಯಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಕಬ್ಬು ಬೆಳೆಯಲು ಬೀಜ, ಗೊಬ್ಬರ, ಕಾರ್ಮಿಕರು, ನೀರಾವರಿ ಮತ್ತು ಸಾಗಣೆ ಸೇರಿದಂತೆ ಹಲವು ವೆಚ್ಚಗಳನ್ನು ಭರಿಸಬೇಕಾಗಿದೆ. ಉತ್ಪಾದನಾ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಸೂಕ್ತ ಬೆಲೆ ದೊರೆಯಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ. ಪ್ರತಿ ಟನ್ ಕಬ್ಬಿಗೆ ₹5,500 ನಿಗದಿಪಡಿಸಿದರೆ ಬೆಳೆಗಾರರಿಗೆ ಆರ್ಥಿಕವಾಗಿ ನೆರವಾಗಲಿದೆ ಎಂದು ರೈತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ರೈತರು ಪಾಲ್ಗೊಂಡಿದ್ದರು. ಹೆದ್ದಾರಿ ತಡೆ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಯಿದ್ದ ಕಾರಣ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಕಬ್ಬಿನ ಬೆಲೆ ವಿಚಾರವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ರೈತರ ಹೋರಾಟಗಳು ನಡೆಯುತ್ತಿರುವ ಬೆನ್ನಲ್ಲೇ ಬೀದರ್ ಜಿಲ್ಲೆಯಲ್ಲಿಯೂ ಪ್ರತಿಭಟನೆ ತೀವ್ರಗೊಂಡಿರುವುದು ಗಮನ ಸೆಳೆದಿದೆ.
ಕಬ್ಬು ಬೆಳೆಗಾರರ ಬೇಡಿಕೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದರತ್ತ ರೈತರು ಎದುರು ನೋಡುತ್ತಿದ್ದಾರೆ.
ಕಲಬುರಗಿಯಲ್ಲೂ ಕಬ್ಬು ಬೆಳೆಗಾರರ ಪ್ರತಿಭಟನೆ:
ಕಲಬುರಗಿಯ ಜೇವರ್ಗಿಯಲ್ಲೂ ರೈತರ ಪ್ರತಿಭಟನೆ ಪ್ರಾರಂಭವಾಗಿದೆ. ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರೈತರು ತಮ್ಮ ಬೆಳೆಗೆ ಬೆಂಬಲ ನಿಗದಿ ಪಡಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಟೆಂಟ್ ಹೊಡೆದು ಪ್ರತಿಭಟನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಕಬ್ಬು ಬೆಳೆಗಾರರ ಬೇಡಿಕೆಗಾಗಿ ಮುಂದುವರೆದ ಧರಣಿ:
ಧಾರವಾಡದ ಯರಿಕೊಪ್ಪ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕ ಧರಣಿ ಮುಂದುವರೆದಿದೆ. ಚುನ್ನಪ್ಪ ಪೂಜಾರ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಬರುವರೆಗೂ ಧರಣಿ ನಡೆಸಿದ ಪ್ರತಿಭಟನಾಕಾರರು, ಪಾದಯಾತ್ರೆ ಬಂದ ಬಳಿಕ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ತಮ್ಮ ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರೆಸಲಾಗುವುದ ಎಂದು ತಿಳಿಸಿದ್ದಾರೆ. ಯಾವುದೇ ಅಹಿತಕರ ಹಾಗೂ ಸಾರ್ವಜನಿಕರಿಗೆ ತೊಂದರೆ ಕೊಡದೆ ಹೋರಾಟ ಮಾಡಲು ನಿರ್ಧರಿಸುವುದಾಗಿ ಹೇಳಿದ್ದಾರೆ. ಶಾಂತಿಯುತವಾಗಿ ಹೆದ್ದಾರಿ ಪಕ್ಕದಲ್ಲಿ ಧರಣಿ ನಡೆಸಲಿದ್ದಾರೆ. ಧರಣಿಯಲ್ಲಿ ಸ್ಥಳೀಯ ರೈತರು, ರೈತ ಮುಖಂಡರು ಭಾಗಿಯಾಗಿದ್ದಾರೆ.