RBI Gold Reserves: ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಆರ್ಥಿಕ ಅನಿಶ್ಚಿತತೆಯ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ಕ್ರಮ ಕೈಗೊಂಡಿದೆ. ವಿದೇಶಗಳಲ್ಲಿ ಸಂಗ್ರಹಿಸಿಟ್ಟಿದ್ದ 60.08 ಮೆಟ್ರಿಕ್ ಟನ್ ಚಿನ್ನವನ್ನ ಕಳೆದ ಆರು ತಿಂಗಳ ಅವಧಿಯಲ್ಲಿ ಭಾರತಕ್ಕೆ ಮರಳಿ ತರಲಾಗಿದೆ. ಇದರಿಂದ ದೇಶದೊಳಗೆ ಸಂಗ್ರಹಿಸಿಟ್ಟಿರುವ ಒಟ್ಟು ಚಿನ್ನದ ಪ್ರಮಾಣ 740.13 ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ. ಆರ್‌ಬಿಐನ ಒಟ್ಟು ಚಿನ್ನದ ಮೀಸಲಿನಲ್ಲಿ ದೇಶೀಯ ಸಂಗ್ರಹದ ಪಾಲು ಶೇ.84.06ಕ್ಕೆ ತಲುಪಿದೆ. ಈ ಹಿಂದೆ ಮಾರ್ಚ್ 2026ರಲ್ಲಿ ಈ ಪ್ರಮಾಣ ಶೇ.77.23ರಷ್ಟಿತ್ತು.
ಆರ್‌ಬಿಐ ಬಳಿ ಒಟ್ಟು ಎಷ್ಟು ಚಿನ್ನವಿದೆ?
ಭಾರತೀಯ ರಿಸರ್ವ್ ಬ್ಯಾಂಕ್ ಬಳಿ ಸೆಪ್ಟೆಂಬರ್ 2026ರ ಅಂತ್ಯದ ವೇಳೆಗೆ ಒಟ್ಟು 880.52 ಮೆಟ್ರಿಕ್ ಟನ್ ಚಿನ್ನದ ಸಂಗ್ರಹವಿದೆ. ಈ ಪೈಕಿ 740.13 ಮೆಟ್ರಿಕ್ ಟನ್ ಚಿನ್ನವನ್ನ ಭಾರತದೊಳಗಿನ ಸಂಗ್ರಹಾಗಾರಗಳಲ್ಲಿ ಇರಿಸಲಾಗಿದೆ. ಉಳಿದ ಸುಮಾರು 140.39 ಮೆಟ್ರಿಕ್ ಟನ್ ಚಿನ್ನವನ್ನ ವಿದೇಶಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗಿದೆ. ಮಾರ್ಚ್ 2026ರ ಅಂತ್ಯಕ್ಕೆ ದೇಶೀಯವಾಗಿ 680.05 ಮೆಟ್ರಿಕ್ ಟನ್ ಚಿನ್ನವಿತ್ತು.
ವಿದೇಶಗಳಲ್ಲಿ 197.67 ಮೆಟ್ರಿಕ್ ಟನ್ ಚಿನ್ನ ಸಂಗ್ರಹಿಸಲಾಗಿತ್ತು. ಇದೀಗ ಆರು ತಿಂಗಳ ಅವಧಿಯಲ್ಲಿ 60.08 ಮೆಟ್ರಿಕ್ ಟನ್ ಚಿನ್ನವನ್ನ ಭಾರತಕ್ಕೆ ವರ್ಗಾಯಿಸಲಾಗಿದೆ. ಪರಿಣಾಮ ವಿದೇಶಗಳಲ್ಲಿ ಇರಿಸಿರುವ ಚಿನ್ನದ ಪ್ರಮಾಣ ಕಡಿಮೆಯಾಗಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಆರ್‌ಬಿಐನ ಒಟ್ಟು ಚಿನ್ನದ ಸಂಗ್ರಹದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ವಿದೇಶಗಳಲ್ಲಿದ್ದ ಚಿನ್ನವನ್ನ ದೇಶೀಯ ಸಂಗ್ರಹಾಗಾರಗಳಿಗೆ ಸ್ಥಳಾಂತರಿಸಿರುವುದರಿಂದ ಭಾರತದಲ್ಲಿರುವ ಚಿನ್ನದ ಪ್ರಮಾಣ ಹೆಚ್ಚಾಗಿದೆ.
ಮುಂಬೈ, ನಾಗ್ಪುರದಲ್ಲಿ ಚಿನ್ನದ ಸಂಗ್ರಹ
ಆರ್‌ಬಿಐ ಭಾರತಕ್ಕೆ ಮರಳಿ ತಂದಿರುವ ಚಿನ್ನವನ್ನ ಮುಂಬೈ ಮತ್ತು ನಾಗ್ಪುರದಲ್ಲಿರುವ ತನ್ನ ಸಂಗ್ರಹಾಗಾರಗಳಲ್ಲಿ ಇರಿಸಿದೆ. ಸೆಪ್ಟೆಂಬರ್ 2026ರ ಅಂತ್ಯದ ವೇಳೆಗೆ ದೇಶೀಯವಾಗಿ ಸಂಗ್ರಹಿಸಲಾಗಿರುವ 740.13 ಮೆಟ್ರಿಕ್ ಟನ್ ಚಿನ್ನ ಈ ಸಂಗ್ರಹಾಗಾರಗಳಲ್ಲಿದೆ. ಉಳಿದ ಸುಮಾರು 140.39 ಮೆಟ್ರಿಕ್ ಟನ್ ಚಿನ್ನವನ್ನ ಲಂಡನ್‌ನ ಬ್ಯಾಂಕ್ ಆಫ್ ಇಂಗ್ಲೆಂಡ್ (Bank of England) ಮತ್ತು ಬ್ಯಾಂಕ್ ಫಾರ್ ಇಂಟರ್‌ನ್ಯಾಷನಲ್ ಸೆಟಲ್‌ಮೆಂಟ್ಸ್ (BIS) ಬಳಿ ಸುರಕ್ಷಿತವಾಗಿ ಇರಿಸಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಆರ್‌ಬಿಐ ವಿದೇಶಗಳಲ್ಲಿರುವ ಚಿನ್ನವನ್ನ ಹಂತ ಹಂತವಾಗಿ ಭಾರತಕ್ಕೆ ಸ್ಥಳಾಂತರಿಸುತ್ತಿದೆ. 2025-26ರ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿಯೂ ಸುಮಾರು 104 ಮೆಟ್ರಿಕ್ ಟನ್ ಚಿನ್ನವನ್ನು ದೇಶಕ್ಕೆ ಮರಳಿ ತರಲಾಗಿತ್ತು. ಇದೀಗ 2026ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಆರು ತಿಂಗಳ ಅವಧಿಯಲ್ಲಿ ಮತ್ತೆ 60.08 ಮೆಟ್ರಿಕ್ ಟನ್ ಚಿನ್ನವನ್ನ ಸ್ಥಳಾಂತರಿಸಲಾಗಿದೆ.
ಚಿನ್ನವನ್ನ ಭಾರತಕ್ಕೆ ಮರಳಿ ತರಲು ಕಾರಣವೇನು?
ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ರಾಜಕೀಯ ಮತ್ತು ಭೌಗೋಳಿಕ ಅನಿಶ್ಚಿತತೆ ಚಿನ್ನದ ಸಂಗ್ರಹದ ಸ್ಥಳ ಬದಲಾವಣೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ರಷ್ಯಾ-ಉಕ್ರೇನ್ ಸಂಘರ್ಷ, ಇರಾನ್-ಇಸ್ರೇಲ್-ಅಮೆರಿಕ ನಡುವಿನ ಉದ್ವಿಗ್ನತೆ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿದೇಶಗಳಲ್ಲಿರುವ ಆಸ್ತಿಗಳ ಸುರಕ್ಷತೆ ಮತ್ತು ಲಭ್ಯತೆಯ ಬಗ್ಗೆ ಕಳವಳಗಳು ಹೆಚ್ಚಿವೆ. ವಿದೇಶಗಳಲ್ಲಿ ಆರ್ಥಿಕ ನಿರ್ಬಂಧಗಳು ಜಾರಿಯಾದ ಸಂದರ್ಭದಲ್ಲಿ ಅಲ್ಲಿನ ಬ್ಯಾಂಕ್‌ಗಳಲ್ಲಿ ಸಂಗ್ರಹಿಸಿಟ್ಟಿರುವ ಆಸ್ತಿಗಳನ್ನ ಬಳಸಿಕೊಳ್ಳುವುದು ಕಷ್ಟವಾಗುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ದೇಶದೊಳಗೆ ಚಿನ್ನವನ್ನ ಸಂಗ್ರಹಿಸಿಟ್ಟರೆ ಅದರ ಮೇಲೆ ನೇರ ನಿಯಂತ್ರಣ ಹೊಂದಲು ಸಾಧ್ಯವಾಗುತ್ತದೆ ಎಂಬುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ. ಇದರ ಜೊತೆಗೆ ವಿದೇಶಗಳಲ್ಲಿನ ಸಂಗ್ರಹಾಗಾರಗಳಲ್ಲಿ ಚಿನ್ನವನ್ನ ಇರಿಸಲು ನಿರ್ವಹಣೆ ಮತ್ತು ಸುರಕ್ಷತಾ ಶುಲ್ಕಗಳನ್ನ ಪಾವತಿಸಬೇಕಾಗುತ್ತದೆ. ದೇಶೀಯವಾಗಿ ಚಿನ್ನವನ್ನ ಸಂಗ್ರಹಿಸುವುದರಿಂದ ಇಂತಹ ವೆಚ್ಚಗಳನ್ನ ಕಡಿಮೆ ಮಾಡಿಕೊಳ್ಳುವ ಅವಕಾಶವೂ ಇದೆ.
ಚಿನ್ನದ ಮೌಲ್ಯದಲ್ಲಿ ಇಳಿಕೆ; ವಿದೇಶಿ ವಿನಿಮಯ ಮೀಸಲು ಏರಿಕೆ
ಚಿನ್ನದ ಪ್ರಮಾಣದಲ್ಲಿ ಬದಲಾವಣೆ ಇಲ್ಲದಿದ್ದರೂ ಅದರ ಮೌಲ್ಯದಲ್ಲಿ ಇಳಿಕೆ ದಾಖಲಾಗಿದೆ. 2026ರ ಮಾರ್ಚ್ ಅಂತ್ಯದಲ್ಲಿ ಆರ್‌ಬಿಐನ ಚಿನ್ನದ ಸಂಗ್ರಹದ ಮೌಲ್ಯ ಸುಮಾರು 115.40 ಬಿಲಿಯನ್ ಡಾಲರ್ ಇತ್ತು. ಸೆಪ್ಟೆಂಬರ್ ಅಂತ್ಯದ ವೇಳೆಗೆ ಇದು ಸುಮಾರು 106 ಬಿಲಿಯನ್ ಡಾಲರ್‌ಗೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಭಾರತದ ಒಟ್ಟು ವಿದೇಶಿ ವಿನಿಮಯ ಮೀಸಲು (Forex Reserves) ಏರಿಕೆಯಾಗಿದೆ. ಮಾರ್ಚ್ 2026ರ ಅಂತ್ಯದಲ್ಲಿ 691.11 ಬಿಲಿಯನ್ ಡಾಲರ್ ಇದ್ದ ವಿದೇಶಿ ವಿನಿಮಯ ಮೀಸಲು, ಸೆಪ್ಟೆಂಬರ್ ಅಂತ್ಯಕ್ಕೆ ಸುಮಾರು 737.79 ಬಿಲಿಯನ್ ಡಾಲರ್ ತಲುಪಿದೆ.
ಆದರೆ ಒಟ್ಟು ವಿದೇಶಿ ವಿನಿಮಯ ಮೀಸಲಿನಲ್ಲಿ ಚಿನ್ನದ ಪಾಲು ಶೇ.16.70ರಿಂದ ಶೇ.14.38ಕ್ಕೆ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಒಟ್ನಲ್ಲಿ ಆರ್‌ಬಿಐನ ಒಟ್ಟು ಚಿನ್ನದ ಸಂಗ್ರಹ 880.52 ಮೆಟ್ರಿಕ್ ಟನ್‌ನಷ್ಟಿದ್ದರೂ, ಅದರಲ್ಲಿ ಶೇ.84.06ರಷ್ಟು ಚಿನ್ನವನ್ನ ಈಗ ದೇಶದೊಳಗೇ ಸಂಗ್ರಹಿಸಿಡಲಾಗಿದೆ. ಜಾಗತಿಕ ಅನಿಶ್ಚಿತತೆಯ ನಡುವೆಯೇ ವಿದೇಶಗಳಲ್ಲಿದ್ದ ಚಿನ್ನವನ್ನ ಭಾರತಕ್ಕೆ ಮರಳಿ ತರುವ ಪ್ರಕ್ರಿಯೆ ಮುಂದುವರಿದಿದೆ.