Post Office NSC Scheme: ಷೇರು ಮಾರುಕಟ್ಟೆಯ ಏರಿಳಿತಗಳ ಆತಂಕವಿಲ್ಲದೆ, ಸುರಕ್ಷಿತವಾಗಿ ಹಣ ಹೂಡಿಕೆ ಮಾಡಿ ಉತ್ತಮ ಆದಾಯ ಪಡೆಯಲು ಬಯಸುವವರಿಗೆ ಅಂಚೆ ಇಲಾಖೆಯ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC - National Savings Certificate) ಯೋಜನೆ ಉತ್ತಮ ಆಯ್ಕೆಯಾಗಿದೆ. ಕೇಂದ್ರ ಸರ್ಕಾರದ ಬೆಂಬಲ ಹೊಂದಿರುವ ಈ ಸಣ್ಣ ಉಳಿತಾಯ ಯೋಜನೆಯಲ್ಲಿ ವಾರ್ಷಿಕ ಶೇ.7.7ರಷ್ಟು ಬಡ್ಡಿ ನೀಡಲಾಗುತ್ತಿದೆ. ವಿಶೇಷವೆಂದರೆ ಈ ಯೋಜನೆಯಲ್ಲಿ ಕೇವಲ ₹1,000ರಿಂದ ಹೂಡಿಕೆ ಆರಂಭಿಸಬಹುದು. ಐದು ವರ್ಷಗಳ ಮೆಚ್ಯೂರಿಟಿ ಅವಧಿ ಹೊಂದಿರುವ ಈ ಯೋಜನೆಯಲ್ಲಿ ಬಂದ ಹಣವನ್ನ ಮರುಹೂಡಿಕೆ ಮಾಡುತ್ತಾ ಹೋದರೆ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತವನ್ನ ಸಂಗ್ರಹಿಸಬಹುದು.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಎಂದರೇನು?
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಭಾರತೀಯ ಅಂಚೆ ಇಲಾಖೆಯ ಪ್ರಮುಖ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಬ್ಯಾಂಕ್‌ಗಳ ಸ್ಥಿರ ಠೇವಣಿ (FD) ಮಾದರಿಯಲ್ಲಿ ನಿಗದಿತ ಅವಧಿಗೆ ಹಣ ಹೂಡಿಕೆ ಮಾಡುವ ಅವಕಾಶವನ್ನ ಇದು ಒದಗಿಸುತ್ತದೆ. ಪ್ರಸ್ತುತ ಈ ಯೋಜನೆಗೆ ವಾರ್ಷಿಕ ಶೇ.7.7ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ. ಭಾರತದಲ್ಲಿ ವಾಸಿಸುವ ಯಾವುದೇ ನಾಗರಿಕರು ಈ ಯೋಜನೆಯಡಿ ಖಾತೆ ತೆರೆಯಬಹುದು. 10 ವರ್ಷ ಮೇಲ್ಪಟ್ಟವರ ಹೆಸರಿನಲ್ಲಿ ಖಾತೆ ತೆರೆಯಲು ಅವಕಾಶವಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಪೋಷಕರು ಹೂಡಿಕೆ ಮಾಡಬಹುದು. ಅಲ್ಲದೆ ಇಬ್ಬರು ಅಥವಾ ಮೂವರು ವಯಸ್ಕರು ಸೇರಿ ಜಂಟಿ ಖಾತೆ ತೆರೆಯುವ ಸೌಲಭ್ಯವೂ ಇದೆ.
ಎಷ್ಟು ಹಣ ಹೂಡಿಕೆ ಮಾಡಬಹುದು?
ಈ ಯೋಜನೆಯಲ್ಲಿ ಕನಿಷ್ಠ ₹1,000 ಹೂಡಿಕೆ ಮಾಡುವುದು ಕಡ್ಡಾಯವಾಗಿದೆ. ಅದಕ್ಕಿಂತ ಹೆಚ್ಚಿನ ಮೊತ್ತವನ್ನ ಹೂಡಿಕೆ ಮಾಡಲು ಅವಕಾಶವಿದ್ದು, ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯನ್ನ ನಿಗದಿಪಡಿಸಿಲ್ಲ. ಹೀಗಾಗಿ ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಪ್ರತಿ ತಿಂಗಳು ಹಣ ಪಾವತಿಸುವ ಅಗತ್ಯವಿಲ್ಲ. ಒಂದೇ ಬಾರಿಗೆ ನಿರ್ದಿಷ್ಟ ಮೊತ್ತವನ್ನ ಹೂಡಿಕೆ ಮಾಡುವ ಲಂಪ್ಸಮ್ (Lumpsum) ಮಾದರಿಯನ್ನ ಅನುಸರಿಸಲಾಗುತ್ತದೆ. ಹೂಡಿಕೆ ಮಾಡಿದ ದಿನದಿಂದ ಐದು ವರ್ಷಗಳ ಮೆಚ್ಯೂರಿಟಿ ಅವಧಿ ಅನ್ವಯವಾಗುತ್ತದೆ.
₹1 ಲಕ್ಷ ಹೂಡಿಕೆ ಮಾಡಿದರೆ ಎಷ್ಟು ಹಣ ಸಿಗುತ್ತದೆ?
ಎನ್‌ಎಸ್‌ಸಿ ಯೋಜನೆಯ ಪ್ರಮುಖ ವಿಶೇಷತೆ ಎಂದರೆ ಮರುಹೂಡಿಕೆ ಮೂಲಕ ಚಕ್ರಬಡ್ಡಿಯ ಲಾಭ ಪಡೆಯುವ ಅವಕಾಶ. ಸಾಮಾನ್ಯವಾಗಿ ಐದು ವರ್ಷಗಳ ಅವಧಿ ಮುಗಿದ ಬಳಿಕ ಅಸಲು ಮತ್ತು ಬಡ್ಡಿ ಸೇರಿ ಬಂದ ಮೊತ್ತವನ್ನ ಹಿಂಪಡೆಯಬಹುದು. ಆದರೆ ಆ ಹಣವನ್ನ ಖರ್ಚು ಮಾಡದೆ ಮತ್ತೆ ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ ಹಣ ಮತ್ತಷ್ಟು ಬೆಳೆಯುತ್ತದೆ. ಪ್ರಸ್ತುತ ಇರುವ ಶೇ.7.7ರಷ್ಟು ವಾರ್ಷಿಕ ಬಡ್ಡಿದರವೇ ಮುಂದಿನ ಅವಧಿಗಳಲ್ಲಿಯೂ ಮುಂದುವರಿಯುತ್ತದೆ ಎಂದು ಲೆಕ್ಕ ಹಾಕಿದರೆ, ₹1 ಲಕ್ಷ ಹೂಡಿಕೆಗೆ ಸಿಗಬಹುದಾದ ಅಂದಾಜು ಮೊತ್ತ ಹೀಗಿದೆ.
5 ವರ್ಷಗಳು: ₹1,44,903
10 ವರ್ಷಗಳು: ₹2,09,970
15 ವರ್ಷಗಳು: ₹3,04,253
20 ವರ್ಷಗಳು: ₹4,40,874
ಅಂದರೆ ಆರಂಭದಲ್ಲಿ ₹1 ಲಕ್ಷ ಹೂಡಿಕೆ ಮಾಡಿ ಪ್ರತಿ ಐದು ವರ್ಷಗಳಿಗೊಮ್ಮೆ ಮೆಚ್ಯೂರಿಟಿ ಮೊತ್ತವನ್ನ ಮರುಹೂಡಿಕೆ ಮಾಡಿದರೆ, 20 ವರ್ಷಗಳ ಅಂತ್ಯಕ್ಕೆ ಸುಮಾರು ₹4.40 ಲಕ್ಷ ಸಂಗ್ರಹವಾಗಬಹುದು. ಹೀಗೆ ದೀರ್ಘಾವಧಿಯ ಹೂಡಿಕೆಯಿಂದ ಆರಂಭಿಕ ಮೊತ್ತಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಹಣ ಪಡೆಯುವ ಅವಕಾಶವಿದೆ. ಆದರೆ ಈ ಲೆಕ್ಕಾಚಾರವು ಶೇ.7.7ರ ಬಡ್ಡಿದರ ಇಡೀ ಅವಧಿಯಲ್ಲಿ ಬದಲಾಗದೆ ಮುಂದುವರಿಯುತ್ತದೆ ಎಂಬ ಅಂದಾಜಿನ ಮೇಲೆ ಆಧಾರಿತವಾಗಿದೆ.
ತೆರಿಗೆ ವಿನಾಯಿತಿ ಮತ್ತು ಸಾಲ ಸೌಲಭ್ಯವೂ ಇದೆ
ಎನ್‌ಎಸ್‌ಸಿ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ತೆರಿಗೆ ಪ್ರಯೋಜನವೂ ಲಭ್ಯವಿದೆ. ಹಳೆಯ ತೆರಿಗೆ ಪದ್ಧತಿ (Old Tax Regime) ಆಯ್ಕೆ ಮಾಡಿಕೊಂಡಿರುವವರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ವಾರ್ಷಿಕ ₹1.5 ಲಕ್ಷದವರೆಗಿನ ಹೂಡಿಕೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಮೆಚ್ಯೂರಿಟಿ ಸಂದರ್ಭದಲ್ಲಿ ಅಂಚೆ ಕಚೇರಿಯಿಂದ ಟಿಡಿಎಸ್ (TDS) ಕಡಿತಗೊಳಿಸಲಾಗುವುದಿಲ್ಲ. ಆದರೆ ಐದನೇ ವರ್ಷದ ಬಡ್ಡಿಯನ್ನ ಹೂಡಿಕೆದಾರರು ತಮ್ಮ ಆದಾಯ ತೆರಿಗೆ ವಿವರದಲ್ಲಿ ತೋರಿಸಿ, ಅನ್ವಯವಾಗುವ ತೆರಿಗೆಯನ್ನ ಪಾವತಿಸಬೇಕಾಗುತ್ತದೆ. ಇದರ ಜೊತೆಗೆ ತುರ್ತು ಹಣಕಾಸಿನ ಅಗತ್ಯ ಎದುರಾದಾಗ ಎನ್‌ಎಸ್‌ಸಿ ಪ್ರಮಾಣಪತ್ರವನ್ನ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಅಡಮಾನವಿಟ್ಟು ಸಾಲ ಪಡೆಯುವ ಅವಕಾಶವೂ ಇದೆ. ಇದರಿಂದ ಹೂಡಿಕೆದಾರರಿಗೆ ಹೆಚ್ಚುವರಿ ಅನುಕೂಲ ದೊರೆಯುತ್ತದೆ.
ಐದು ವರ್ಷಕ್ಕೂ ಮುನ್ನ ಹಣ ಹಿಂಪಡೆಯಲು ಸಾಧ್ಯವೇ?
ಈ ಯೋಜನೆಯಲ್ಲಿ ಐದು ವರ್ಷಗಳ ಲಾಕ್‌ಇನ್ ಅವಧಿ ಇರುವುದರಿಂದ ಮೆಚ್ಯೂರಿಟಿಗೂ ಮುನ್ನ ಸಾಮಾನ್ಯವಾಗಿ ಹಣ ಹಿಂಪಡೆಯಲು ಅವಕಾಶವಿಲ್ಲ. ಆದರೆ ಖಾತೆದಾರರ ಮರಣ ಅಥವಾ ನ್ಯಾಯಾಲಯದ ಆದೇಶದಂತಹ ವಿಶೇಷ ಸಂದರ್ಭಗಳಲ್ಲಿ ಮಾತ್ರ ಅವಧಿಗೂ ಮುನ್ನ ಖಾತೆ ಮುಕ್ತಾಯಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಒಟ್ನಲ್ಲಿ ₹1,000ರಿಂದ ಹೂಡಿಕೆ ಆರಂಭಿಸುವ ಅವಕಾಶ, ಐದು ವರ್ಷಗಳ ಮೆಚ್ಯೂರಿಟಿ, ವಾರ್ಷಿಕ ಶೇ.7.7ರಷ್ಟು ಬಡ್ಡಿ, ತೆರಿಗೆ ವಿನಾಯಿತಿ ಹಾಗೂ ಮರುಹೂಡಿಕೆಯ ಮೂಲಕ ದೀರ್ಘಾವಧಿಯಲ್ಲಿ ಹಣ ಬೆಳೆಸುವ ಅವಕಾಶಗಳು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯ ಪ್ರಮುಖ ವೈಶಿಷ್ಟ್ಯಗಳಾಗಿವೆ.