Viral Beach Video: ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವ್ಯೂಸ್ ಗಳಿಸುವ ಹಂಬಲ ಎಷ್ಟರ ಮಟ್ಟಿಗೆ ಅಪಾಯಕಾರಿಯಾಗಬಹುದು ಎಂಬುದಕ್ಕೆ ವೈರಲ್ ಆಗಿರುವ ಈ ವಿಡಿಯೋ ಸಾಕ್ಷಿಯಾಗಿದೆ. ಬೀಚ್‌ಗೆ ಬಂದಿದ್ದ ದಂಪತಿ ತಮ್ಮ ಪುಟ್ಟ ಮಗುವನ್ನ ನೀರಿನಲ್ಲಿ ಆಟವಾಡಲು ಬಿಟ್ಟು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ನಿರತರಾಗಿರುವಾಗ, ಸಮುದ್ರದ ಅಲೆಗಳ ರಭಸಕ್ಕೆ ಮಗು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಅಪಾಯಕಾರಿ ಘಟನೆ ನಡೆದಿದೆ. ಅದೃಷ್ಟವಶಾತ್ ಅಲ್ಲಿದ್ದ ಪ್ರವಾಸಿಗರೊಬ್ಬರು ತಕ್ಷಣ ಧಾವಿಸಿ ಮಗುವನ್ನ ರಕ್ಷಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಪೋಷಕರ ನಿರ್ಲಕ್ಷ್ಯದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸೆಲ್ಫಿಯಲ್ಲಿ ಬ್ಯುಸಿಯಾದ ದಂಪತಿ!
ವೈರಲ್ ವಿಡಿಯೋದಲ್ಲಿ ದಂಪತಿ ಬೀಚ್‌ನಲ್ಲಿ ತಮ್ಮ ಮಗುವಿನೊಂದಿಗೆ ಸಮಯ ಕಳೆಯಲು ಬಂದಿರುವುದು ಕಂಡುಬರುತ್ತದೆ. ಆದರೆ ಮಗುವಿನ ಸುರಕ್ಷತೆಯ ಮೇಲೆ ಗಮನಹರಿಸುವ ಬದಲು, ಅವರು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಇದೇ ವೇಳೆ ಮಗು ಸಮುದ್ರದ ನೀರಿನಲ್ಲಿ ಆಟವಾಡುತ್ತಿರುತ್ತದೆ. ಇದ್ದಕ್ಕಿದ್ದಂತೆಯೇ ಬರುವ ಅಲೆಗಳ ರಭಸಕ್ಕೆ ಮಗು ನೀರಿನಲ್ಲಿ ಕೊಚ್ಚಿಕೊಂಡು ಹೋಗುವಂತಹ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಲವೇ ಕ್ಷಣಗಳ ನಿರ್ಲಕ್ಷ್ಯವೂ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂಬುದನ್ನ ಈ ಘಟನೆ ನೆನಪಿಸುತ್ತದೆ.
ಸಮಯಕ್ಕೆ ಸರಿಯಾಗಿ ಧಾವಿಸಿದ ಪ್ರವಾಸಿಗ!
ये रील बनाने का कैसा भूत सवार है लोगों पर वीडियो के चक्कर में अपने ही बच्चे की जान जोखिम में डाल दी इनको बस लाइक्स और व्यूज़ की पड़ी है बच्चों की सुरक्षा से बढ़कर कुछ नहीं है बहुत गलत है ये! https://t.co/igSSObAnl1
— Tanu (@ytanu7028) October 20, 2026
ಮಗು ಅಪಾಯಕ್ಕೆ ಸಿಲುಕಿರುವುದನ್ನ ಗಮನಿಸಿದ ಅಲ್ಲಿದ್ದ ಪ್ರವಾಸಿಗರೊಬ್ಬರು ತಕ್ಷಣವೇ ನೆರವಿಗೆ ಧಾವಿಸುತ್ತಾರೆ. ಮಗುವನ್ನ ಸುರಕ್ಷಿತವಾಗಿ ರಕ್ಷಿಸುವಲ್ಲಿ ಅವರು ಯಶಸ್ವಿಯಾಗುತ್ತಾರೆ. ಮಗು ರಕ್ಷಿಸಿದ ಬಳಿಕ ಆ ವ್ಯಕ್ತಿ ಪೋಷಕರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಮಗುವಿನ ಬಗ್ಗೆ ಗಮನ ಕೊಡದೆ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ತೊಡಗಿದ್ದಕ್ಕೆ ಅವರನ್ನ ತರಾಟೆಗೆ ತೆಗೆದುಕೊಳ್ಳುತ್ತಾರೆ. ಅಪಾಯಕಾರಿ ಪರಿಸ್ಥಿತಿಯಲ್ಲಿ ಸಮಯೋಚಿತವಾಗಿ ಸ್ಪಂದಿಸಿದ ವ್ಯಕ್ತಿಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಈ ಘಟನೆ ಯಾವಾಗ ಮತ್ತು ಯಾವ ಸ್ಥಳದಲ್ಲಿ ನಡೆದಿದ್ದು ಎಂಬ ಮಾಹಿತಿ ತಿಳಿದಿಲ್ಲ.
ನೆಟ್ಟಿಗರ ಆಕ್ರೋಶ: ಲೈಕ್ಸ್‌ಗಿಂತ ಮಗುವಿನ ಜೀವ ಮುಖ್ಯ!
ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಪೋಷಕರ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ್ದಾರೆ. ಮಕ್ಕಳನ್ನ ಸಾರ್ವಜನಿಕ ಸ್ಥಳಗಳಿಗೆ ಕರೆದುಕೊಂಡು ಹೋದಾಗ ಅವರ ಸುರಕ್ಷತೆಯೇ ಮೊದಲ ಆದ್ಯತೆಯಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. “ರೀಲ್ಸ್ ಮತ್ತು ಸೆಲ್ಫಿಗಳಿಗಿಂತ ಮಕ್ಕಳ ಜೀವ ಮುಖ್ಯ”, “ಒಂದು ಫೋಟೋಗಾಗಿ ಮಗುವನ್ನ ಅಪಾಯಕ್ಕೆ ತಳ್ಳುವುದು ಎಷ್ಟು ಸರಿ?” ಎಂಬ ರೀತಿಯ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಮಕ್ಕಳ ಸುರಕ್ಷತೆಯನ್ನ ಕಡೆಗಣಿಸಿ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಲು ಪ್ರಯತ್ನಿಸುವ ಪ್ರವೃತ್ತಿಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಬೀಚ್‌ನಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನ ಅಗತ್ಯ
ಸಮುದ್ರದ ಅಲೆಗಳು ಯಾವಾಗ ಮತ್ತು ಎಷ್ಟು ರಭಸದಿಂದ ಅಪ್ಪಳಿಸುತ್ತವೆ ಎಂಬುದನ್ನ ಊಹಿಸುವುದು ಕಷ್ಟ. ಕಡಲತೀರದಲ್ಲಿ ಶಾಂತವಾಗಿ ಕಾಣುವ ನೀರೂ ಕೆಲವೇ ಕ್ಷಣಗಳಲ್ಲಿ ಅಪಾಯಕಾರಿಯಾಗಬಹುದು. ಹೀಗಾಗಿ ಮಕ್ಕಳನ್ನ ನೀರಿನಲ್ಲಿ ಆಟವಾಡಲು ಬಿಡುವಾಗ ಪೋಷಕರು ಸದಾ ಹತ್ತಿರದಲ್ಲಿದ್ದು, ಮಗುವಿನ ಮೇಲೆ ನಿರಂತರ ನಿಗಾ ವಹಿಸಬೇಕು. ಮಕ್ಕಳನ್ನ ಒಬ್ಬರೇ ನೀರಿನಲ್ಲಿ ಬಿಡಬಾರದು. ಫೋಟೋ ಅಥವಾ ವಿಡಿಯೋ ತೆಗೆಯಬೇಕಾದರೂ ಮಗುವಿನ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸದೆ ಬೇರೆಡೆಗೆ ಗಮನ ಹರಿಸುವುದು ಅಪಾಯಕಾರಿ. ಕಡಲತೀರದ ಸುರಕ್ಷತಾ ಸೂಚನೆಗಳನ್ನ ಪಾಲಿಸುವುದು ಮತ್ತು ಅಪಾಯಕಾರಿ ಅಲೆಗಳಿರುವ ಪ್ರದೇಶಗಳಿಂದ ದೂರವಿರುವುದೂ ಅತ್ಯಗತ್ಯ.
ಒಟ್ನಲ್ಲಿ ವೈರಲ್ ವಿಡಿಯೋ ಮನರಂಜನೆಗಾಗಿ ಹಂಚಿಕೊಳ್ಳುವ ದೃಶ್ಯ ಮಾತ್ರವಲ್ಲ; ಪೋಷಕರ ಜವಾಬ್ದಾರಿ ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಎಚ್ಚರಿಕೆ ನೀಡುವ ಘಟನೆಯೂ ಹೌದು. ಒಂದು ಕ್ಷಣದ ನಿರ್ಲಕ್ಷ್ಯ ಮಗುವಿನ ಜೀವವನ್ನೇ ಅಪಾಯಕ್ಕೆ ತಳ್ಳಬಹುದು. ಲೈಕ್ಸ್, ವ್ಯೂಸ್ ಮತ್ತು ಸೆಲ್ಫಿಗಳಿಗಿಂತ ಮಕ್ಕಳ ಸುರಕ್ಷತೆ ಯಾವಾಗಲೂ ಮುಖ್ಯ.