Japan Space Mission: ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಜಪಾನ್, ಮಂಗಳ ಗ್ರಹದ ಎರಡು ಚಂದ್ರಗಳಾದ ಫೋಬೋಸ್ ಮತ್ತು ಡೀಮೋಸ್ಗಳ ರಹಸ್ಯ ಭೇದಿಸಲು ತನ್ನ ಮಹತ್ವಾಕಾಂಕ್ಷೆಯ MMX ಬಾಹ್ಯಾಕಾಶ ಕಾರ್ಯಾಚರಣೆಯನ್ನ ಆರಂಭಿಸಿದೆ. ಜಪಾನ್ ಏರೋಸ್ಪೇಸ್ ಎಕ್ಸ್ಪ್ಲೋರೇಶನ್ ಏಜೆನ್ಸಿ (JAXA) ನೇತೃತ್ವದಲ್ಲಿ ರೂಪುಗೊಂಡಿರುವ ಈ ಯೋಜನೆಯ ಬಾಹ್ಯಾಕಾಶ ನೌಕೆಯನ್ನ ಹೊತ್ತ H3 ರಾಕೆಟ್ ಅಕ್ಟೋಬರ್ 20ರಂದು ಯಶಸ್ವಿಯಾಗಿ ಉಡಾವಣೆಯಾಗಿದೆ. ಫೋಬೋಸ್ನಿಂದ ಮಾದರಿಗಳನ್ನ ಸಂಗ್ರಹಿಸಿ ಭೂಮಿಗೆ ಮರಳಿ ತರುವುದು ಈ ಮಿಷನ್ನ ಪ್ರಮುಖ ಗುರಿಯಾಗಿದೆ.
ಮಂಗಳನ ಚಂದ್ರಗಳ ಅನ್ವೇಷಣೆಗೆ ಚಾಲನೆ
ಜಪಾನ್ನ ತನೆಗಶಿಮಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ H3 ರಾಕೆಟ್ ತನ್ನ ಕಾರ್ಯಾಚರಣೆಯನ್ನ ಯಶಸ್ವಿಯಾಗಿ ಪೂರ್ಣಗೊಳಿಸಿ MMX ನೌಕೆಯನ್ನ ನಿಗದಿತ ಕಕ್ಷೆಗೆ ಸೇರಿಸಿದೆ. ಈ ಯೋಜನೆಯ ಮೂಲಕ ಮಂಗಳನ ಚಂದ್ರಗಳ ರಚನೆ, ಮೇಲ್ಮೈ ಲಕ್ಷಣಗಳು ಮತ್ತು ಅವುಗಳ ಮೂಲದ ಕುರಿತು ಮಹತ್ವದ ವೈಜ್ಞಾನಿಕ ಮಾಹಿತಿ ಸಂಗ್ರಹಿಸಲು ವಿಜ್ಞಾನಿಗಳು ಉದ್ದೇಶಿಸಿದ್ದಾರೆ. ಮಂಗಳ ಗ್ರಹಕ್ಕೆ ಎರಡು ನೈಸರ್ಗಿಕ ಉಪಗ್ರಹಗಳಿವೆ. ಅವುಗಳಲ್ಲಿ ದೊಡ್ಡದಾದ ಫೋಬೋಸ್ ಮತ್ತು ಮತ್ತೊಂದು ಚಂದ್ರನಾದ ಡೀಮೋಸ್ ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿವೆ. ಇವು ಹೇಗೆ ರೂಪುಗೊಂಡವು ಮತ್ತು ಮಂಗಳ ಗ್ರಹದ ಇತಿಹಾಸದೊಂದಿಗೆ ಅವುಗಳ ಸಂಬಂಧವೇನು ಎಂಬ ಪ್ರಶ್ನೆಗಳಿಗೆ ಇನ್ನೂ ಸಂಪೂರ್ಣ ಉತ್ತರ ದೊರೆತಿಲ್ಲ.
ಫೋಬೋಸ್ನಿಂದ 10 ಗ್ರಾಂ ಮಾದರಿ ಸಂಗ್ರಹ
MMX ಕಾರ್ಯಾಚರಣೆಯ ಅತ್ಯಂತ ಪ್ರಮುಖ ಹಂತ ಫೋಬೋಸ್ನ ಮೇಲ್ಮೈಯಿಂದ ಕನಿಷ್ಠ 10 ಗ್ರಾಂ ಮಣ್ಣು ಮತ್ತು ಕಲ್ಲಿನ ಮಾದರಿಗಳನ್ನ ಸಂಗ್ರಹಿಸುವುದು. ಸಂಗ್ರಹಿಸಿದ ಮಾದರಿಗಳನ್ನ ವಿಶೇಷ ವ್ಯವಸ್ಥೆಯ ಮೂಲಕ ಭೂಮಿಗೆ ಮರಳಿ ತರಲಾಗುತ್ತದೆ. ನಂತರ ಪ್ರಯೋಗಾಲಯಗಳಲ್ಲಿ ಅವುಗಳ ರಾಸಾಯನಿಕ ಸಂಯೋಜನೆ, ಖನಿಜಗಳು ಮತ್ತು ವಯಸ್ಸನ್ನ ವಿಶ್ಲೇಷಿಸಲಾಗುತ್ತದೆ. ಮಾದರಿಗಳನ್ನ ನೇರವಾಗಿ ಭೂಮಿಗೆ ತರುವುದರಿಂದ, ದೂರದಿಂದ ನಡೆಸುವ ವೀಕ್ಷಣೆಗಳಿಗಿಂತ ಹೆಚ್ಚು ನಿಖರವಾದ ವೈಜ್ಞಾನಿಕ ಅಧ್ಯಯನಕ್ಕೆ ಅವಕಾಶ ಸಿಗಲಿದೆ. ಈ ಪ್ರಯತ್ನ ಯಶಸ್ವಿಯಾದರೆ, ಮಂಗಳನ ಚಂದ್ರದಿಂದ ಮಾದರಿಗಳನ್ನ ಸಂಗ್ರಹಿಸಿ ಭೂಮಿಗೆ ತರುವ ಮೊದಲ ಕಾರ್ಯಾಚರಣೆಯಾಗಲಿದೆ.
ಕ್ಷುದ್ರಗ್ರಹಗಳೇ ಅಥವಾ ಘರ್ಷಣೆಯ ಅವಶೇಷಗಳೇ?
ಫೋಬೋಸ್ ಮತ್ತು ಡೀಮೋಸ್ಗಳ ಮೂಲದ ಬಗ್ಗೆ ವಿಜ್ಞಾನಿಗಳು ಎರಡು ಪ್ರಮುಖ ಸಿದ್ಧಾಂತಗಳನ್ನ ಪರಿಶೀಲಿಸುತ್ತಿದ್ದಾರೆ. ಒಂದು ಸಿದ್ಧಾಂತದ ಪ್ರಕಾರ, ಈ ಚಂದ್ರಗಳು ಸೌರವ್ಯೂಹದಲ್ಲಿ ಸಂಚರಿಸುತ್ತಿದ್ದ ಕ್ಷುದ್ರಗ್ರಹಗಳಾಗಿದ್ದು, ಮಂಗಳನ ಗುರುತ್ವಾಕರ್ಷಣೆಗೆ ಸಿಲುಕಿ ಅದರ ಸುತ್ತ ಸುತ್ತಲು ಆರಂಭಿಸಿರಬಹುದು. ಮತ್ತೊಂದು ಸಿದ್ಧಾಂತದ ಪ್ರಕಾರ, ಮಂಗಳ ಗ್ರಹಕ್ಕೆ ಸಂಭವಿಸಿದ ಭಾರೀ ಘರ್ಷಣೆಯ ಬಳಿಕ ಬಾಹ್ಯಾಕಾಶಕ್ಕೆ ಚಿಮ್ಮಿದ ಕಲ್ಲು ಮತ್ತು ಧೂಳಿನ ಅವಶೇಷಗಳು ಒಟ್ಟುಗೂಡಿ ಈ ಚಂದ್ರಗಳು ರೂಪುಗೊಂಡಿರಬಹುದು. ಫೋಬೋಸ್ನ ಮಾದರಿಗಳ ವಿಶ್ಲೇಷಣೆಯು ಈ ಎರಡೂ ಸಿದ್ಧಾಂತಗಳನ್ನ ಪರಿಶೀಲಿಸಲು ನೆರವಾಗಲಿದೆ. ಇದರೊಂದಿಗೆ ಮಂಗಳ ಗ್ರಹದ ಆರಂಭಿಕ ಇತಿಹಾಸ ಮತ್ತು ಸೌರವ್ಯೂಹದ ವಿಕಾಸದ ಕುರಿತು ಹೊಸ ಮಾಹಿತಿ ದೊರೆಯುವ ನಿರೀಕ್ಷೆಯಿದೆ.
2027ರಲ್ಲಿ ಮಂಗಳನ ವ್ಯವಸ್ಥೆ ತಲುಪುವ ಗುರಿ
MMX ನೌಕೆಯು 2027ರಲ್ಲಿ ಮಂಗಳನ ವ್ಯವಸ್ಥೆಯನ್ನ ತಲುಪುವ ನಿರೀಕ್ಷೆಯಿದೆ. ಅಲ್ಲಿ ಅದು ಫೋಬೋಸ್ ಮತ್ತು ಡೀಮೋಸ್ಗಳನ್ನ ಅಧ್ಯಯನ ಮಾಡಲಿದೆ. ಫೋಬೋಸ್ನ ಮೇಲ್ಮೈಯನ್ನ ವಿವರವಾಗಿ ಪರಿಶೀಲಿಸಿ ಮಾದರಿ ಸಂಗ್ರಹಕ್ಕೆ ಸೂಕ್ತವಾದ ಸ್ಥಳವನ್ನ ಆಯ್ಕೆ ಮಾಡುವುದು ಕಾರ್ಯಾಚರಣೆಯ ಪ್ರಮುಖ ಹಂತವಾಗಿದೆ. ಮಾದರಿಗಳನ್ನ ಸಂಗ್ರಹಿಸಿದ ಬಳಿಕ ಅವುಗಳನ್ನ ಸುರಕ್ಷಿತವಾಗಿ ಭೂಮಿಗೆ ಮರಳಿ ತರುವ ಪ್ರಯತ್ನ ನಡೆಯಲಿದೆ. ಯೋಜನೆಯ ವೇಳಾಪಟ್ಟಿಯ ಪ್ರಕಾರ, ಮಾದರಿಗಳನ್ನ ಹೊತ್ತ ನೌಕೆಯು 2031ರ ವೇಳೆಗೆ ಭೂಮಿಗೆ ಮರಳುವ ಗುರಿ ಹೊಂದಿದೆ. ದೀರ್ಘ ಬಾಹ್ಯಾಕಾಶ ಪ್ರಯಾಣ, ಕಡಿಮೆ ಗುರುತ್ವಾಕರ್ಷಣೆಯ ಪರಿಸರದಲ್ಲಿ ಕಾರ್ಯನಿರ್ವಹಿಸುವುದು ಮತ್ತು ಮಾದರಿಗಳನ್ನ ಸುರಕ್ಷಿತವಾಗಿ ಮರಳಿ ತರುವುದು ಈ ಮಿಷನ್ನ ಪ್ರಮುಖ ಸವಾಲುಗಳಾಗಿವೆ.
ಅಂತಾರಾಷ್ಟ್ರೀಯ ಸಹಕಾರದ ಮಹತ್ವದ ಯೋಜನೆ
MMX ಕಾರ್ಯಾಚರಣೆಗೆ ಅಮೆರಿಕದ NASA ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ESA ಸೇರಿದಂತೆ ಅಂತಾರಾಷ್ಟ್ರೀಯ ಪಾಲುದಾರರ ಸಹಕಾರವಿದೆ. ವಿವಿಧ ದೇಶಗಳ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪರಿಣತಿಯನ್ನ ಬಳಸಿಕೊಳ್ಳುವ ಈ ಯೋಜನೆ, ಭವಿಷ್ಯದ ಗ್ರಹಗಳ ಅನ್ವೇಷಣೆಗೆ ಸಹಕಾರಿಯಾಗಲಿದೆ. ಒಟ್ನಲ್ಲಿ ಜಪಾನ್ನ MMX ಮಿಷನ್ ಮಂಗಳನ ಚಂದ್ರಗಳ ಅಧ್ಯಯನಕ್ಕೆ ಹೊಸ ದಿಕ್ಕು ನೀಡುವ ನಿರೀಕ್ಷೆಯಿದೆ. 2031ರಲ್ಲಿ ಮಾದರಿಗಳು ಯಶಸ್ವಿಯಾಗಿ ಭೂಮಿಗೆ ಮರಳಿದರೆ, ಮಂಗಳನ ಚಂದ್ರಗಳ ಮೂಲ ಮತ್ತು ಸೌರವ್ಯೂಹದ ವಿಕಾಸದ ಕುರಿತು ದೀರ್ಘಕಾಲದ ವೈಜ್ಞಾನಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಬಹುದು.