Train Ticket Booking: ದಶಕಗಳ ಹಿಂದಿನ ಪಿಎನ್‌ಆರ್ ನಿಯಮ ಬದಲಿಸಲು ಮುಂದಾದ ಭಾರತೀಯ ರೈಲ್ವೆ
ದೇಶಾದ್ಯಂತ ಆರಾಮದಾಯಕ ಮತ್ತು ಅಗ್ಗದ ಪ್ರಯಾಣಕ್ಕೆ ಹೆಸರುವಾಸಿ ಆಗಿರುವ ಭಾರತೀಯ ರೈಲ್ವೆ ದಶಕಗಳ ಬಳಿಕ ರೈಲು ಟಿಕೆಟ್ ಬುಕ್ಕಿಂಗ್‌ನಲ್ಲಿ ಪಿಎನ್‌ಆರ್ ನಿಯಮ ಬದಲಾಯಿಸಲು ಸಜ್ಜಾಗಿದೆ. ಪಿಎನ್‌ಆರ್ ನಿಯಮ ಬದಲಾವಣೆ ಏಕೆ ಅಗತ್ಯ? ಎಂಬ ಮಾಹಿತಿ ಇಲ್ಲಿದೆ.
ರಾಷ್ಟ್ರವ್ಯಾಪಿ ಅಗ್ಗದ ಹಾಗೂ ಸುಖಕರ ಪ್ರಯಾಣಕ್ಕೆ ಫೇಮಸ್ ಆಗಿರುವ ಭಾರತೀಯ ರೈಲ್ವೆ ಆಗಾಗ್ಗೆ ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಹಲವು ಬದಲಾವಣೆಗಳನ್ನು ತರುತ್ತಲೇ ಇರುತ್ತದೆ. ಇದೀಗ, ರೈಲ್ವೆ ಇಲಾಖೆಯು ರೈಲ್ವೆ ಬುಕ್ಕಿಂಗ್‌ಗೆ ಸಂಬಂಧಿಸಿದಂತೆ ತನ್ನ ದಶಕಗಳ ಹಳೆಯ ನಿಯಮವನ್ನು ಬದಲಾಯಿಸಲು ಮುಂದಾಗಿದೆ. ರಿಸರ್ವೇಶನ್ ಟ್ರೈನ್ ಟಿಕೆಟ್‌ಗಳಲ್ಲಿ ಪ್ರದರ್ಶಿಸಲಾಗುವ ಪಿಎನ್‌ಆರ್‌ಗೆ ಸಂಬಂಧಿಸಿದಂತೆ ನಿಯಮ ಬದಲಾಯಿಸಲು ಸಜ್ಜಾಗಿದೆ.
ಲಭ್ಯವಿರುವ ಮಾಹಿತಿಗಳ ಪ್ರಕಾರ, ಭಾರತೀಯ ರೈಲ್ವೆ ಇಲಾಖೆಯು ಮೀಸಲಾತಿ ಟ್ರೈನ್ ಟಿಕೆಟ್‌ಗಳಲ್ಲಿ ಕಾಣುವ 10- ಅಂಕಿಯ ಪಿಎನ್‌ಆರ್ ಸರಣಿಯನ್ನು ʼಮೈಗ್ರೇಟ್ ಪಿಎನ್‌ಆರ್ʼ ನೊಂದಿಗೆ ಬದಲಾಯಿಸಲು ಚಿಂತನೆ ನಡೆಸಿದ್ದು ಈ ನಿಯಮವು 2026ರ ಡಿಸೆಂಬರ್ ವೇಳೆಗೆ ಜಾರಿಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ವಾಸ್ತವವಾಗಿ, ಪ್ರಸ್ತುತ ರೈಲ್ವೆ ರಿಸರ್ವೇಶನ್ ಟಿಕೆಟ್‌ನಲ್ಲಿ ಕಾಣಲಾಗುವ 10- ಅಂಕಿಯ ಪಿಎನ್‌ಆರ್ ವ್ಯವಸ್ಥೆಯು ದಶಕಗಳ ಹಳೆಯ ವ್ಯವಸ್ಥೆ ಆಗಿದೆ. ಇದೀಗ ಹೊಸ ʼಪಿಎನ್‌ಆರ್ʼ ವ್ಯವಸ್ಥೆಯ ಪೈಲೆಟ್ ಯೋಜನೆಯನ್ನು ಲಕ್ನೋದಲ್ಲಿ ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.
ಹೊಸ ಪಿಎನ್‌ಆರ್‌ನಲ್ಲಿ ಏನು ಬದಲಾಗಲಿದೆ?
ಲಕ್ನೋದಲ್ಲಿ 14210 ರೈಲಿನ PNR ಸರಣಿಯನ್ನು ಬದಲಾಯಿಸಲಾಗಿದೆ. ಈಗ ಈ ರೈಲಿನ PNR 500 ರಿಂದ ಪ್ರಾರಂಭವಾಗುತ್ತದೆ. 2026ರ ಡಿಸೆಂಬರ್‌ನಲ್ಲಿ ಜಾರಿಯಾಗಬಹುದು ಎಂದು ನಿರೀಕ್ಷಿಸಲಾಗಿರುವ ರೈಲ್ವೆ ಪಿಎನ್‌ಆರ್ ವ್ಯವಸ್ಥೆಯಲ್ಲಿನ ಬದಲಾವಣೆಯ ನಂತರ ಎಲ್ಲಾ ರೈಲುಗಳ PNR 1, 3, 5 ಅಥವಾ 7 ನಂತಹ ಬೆಸ ಸಂಖ್ಯೆಗಳೊಂದಿಗೆ ಪ್ರಾರಂಭವಾಗುತ್ತದೆ. ಪ್ರಸ್ತುತ, PNR ನ ಮೊದಲ ಮೂರು ಅಂಕೆಗಳು ನಿರ್ದಿಷ್ಟವಾಗಿ ದೆಹಲಿ, ಕೋಲ್ಕತ್ತಾ, ಚೆನ್ನೈ ಮತ್ತು ಮುಂಬೈ ಎಂಬ ನಾಲ್ಕು ಡೇಟಾಬೇಸ್ ಕೇಂದ್ರಗಳನ್ನು ಪ್ರತಿನಿಧಿಸುತ್ತವೆ. ಉದಾಹರಣೆಗೆ, ದೆಹಲಿಗೆ PNR2, ಮುಂಬೈಗೆ PNR8, ಅಂದರೆ ಪ್ರಸ್ತುತ ಸಂಖ್ಯೆ ಸಮ ಸಂಖ್ಯೆಗಳೊಂದಿಗೆ ಪ್ರಾರಂಭವಾಗುತ್ತದೆ ಎನ್ನಲಾಗಿದೆ.
ರೈಲ್ವೆ ಪಿಎನ್‌ಆರ್ ವ್ಯವಸ್ಥೆಯಲ್ಲಿ ಬದಲಾವಣೆಗೆ ಕಾರಣವೇನು?
ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರವು ಅಸ್ತಿತ್ವದಲ್ಲಿರುವ ಮೀಸಲಾತಿ ವ್ಯವಸ್ಥೆಯನ್ನು ನವೀಕರಿಸಿದೆ. ಈ ವ್ಯವಸ್ಥೆಯು ಟಿಕೆಟ್ ತಿದ್ದುಪಡಿಯಿಂದ ಹಿಡಿದು ಸೀಟ್ ಚೇಂಜ್‌ವರೆಗೆ ಸರಳೀಕೃತ ಕಾರ್ಯಗಳನ್ನು ಒಳಗೊಂಡಿದೆ. ಆದರೆ, ಹಳೆಯ ಪಿಎನ್‌ಆರ್ ವ್ಯವಸ್ಥೆಯು ಈ ಆಧುನೀಕರಣದಲ್ಲಿ ಅಡಚಣೆ ಉಂಟು ಮಾಡುತ್ತಿವೆ. ಹಾಗಾಗಿ, ದಶಕಗಳಿಂದ ಬದಲಾಗದೇ ಉಳಿದಿರುವ 10- ಅಂಕಿಯ ಪಿಎನ್‌ಆರ್ ವ್ಯವಸ್ಥೆಯನ್ನು ಬದಲಾಯಿಸಲು ಭಾರತೀಯ ರೈಲ್ವೆ ಮುಂದಾಗಿದೆ ಎನ್ನಲಾಗುತ್ತಿದೆ.
ಪೈಲಟ್ ಯೋಜನೆಗೆ ಸುಮಾರು 1,230 ರೈಲುಗಳ ಆಯ್ಕೆ:
ಪಿಎನ್‌ಆರ್ ವಲಸೆಗೆ ಸಂಬಂಧಿಸಿದ ಪೈಲಟ್ ಯೋಜನೆಗೆ ಸುಮಾರು 1,230 ರೈಲುಗಳನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಹೊಸ ವ್ಯವಸ್ಥೆಯನ್ನು ನಂತರ ಹೆಚ್ಚಿನ ರೈಲುಗಳಿಗೆ ವಿಸ್ತರಿಸುವ ನಿರೀಕ್ಷೆಯಿದೆ. ಡಿಸೆಂಬರ್ ಮೂರನೇ ವಾರದಲ್ಲಿ ಸಂಪೂರ್ಣ ಬದಲಾವಣೆ ಪ್ರಾರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಹೊಸ ವ್ಯವಸ್ಥೆಯು ಈಗಾಗಲೇ ಟಿಕೆಟ್‌ಗಳನ್ನು ಹೊಂದಿರುವ ಕೆಲವು ಪ್ರಯಾಣಿಕರ ಮೇಲೂ ಪರಿಣಾಮ ಬೀರಬಹುದು. ಹಳೆಯ ವ್ಯವಸ್ಥೆಯಡಿಯಲ್ಲಿ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿ ನಂತರ ಪ್ರಯಾಣದ ದಿನಾಂಕವನ್ನು ಬದಲಾಯಿಸಲು ಬಯಸಿದರೆ, ವಲಸೆಯ ನಂತರ ಬದಲಾವಣೆ ಸಾಧ್ಯವಾಗದಿರಬಹುದು. ಅಂತಹ ಸಂದರ್ಭಗಳಲ್ಲಿ, ಪ್ರಯಾಣಿಕರು ಅಸ್ತಿತ್ವದಲ್ಲಿರುವ ಟಿಕೆಟ್ ಅನ್ನು ರದ್ದುಗೊಳಿಸಿ ಹೊಸ ವ್ಯವಸ್ಥೆಯಡಿಯಲ್ಲಿ ಹೊಸ ಟಿಕೆಟ್ ಅನ್ನು ಬುಕ್ ಮಾಡಬೇಕಾಗಬಹುದು.
ಆದ್ದರಿಂದ ರೈಲ್ವೆ ಪ್ರಯಾಣಿಕರು ತಮ್ಮ ಬುಕಿಂಗ್‌ಗಳಲ್ಲಿ ಬದಲಾವಣೆಗಳನ್ನು ಮಾಡುವ ಮೊದಲು ಇತ್ತೀಚಿನ ಅಧಿಕೃತ ಮಾಹಿತಿಯನ್ನು ಪರಿಶೀಲಿಸಲು ಸೂಚಿಸಲಾಗಿದೆ. ಹೊಸ PNR ವ್ಯವಸ್ಥೆಯು ನವೀಕರಿಸಿದ ರೈಲ್ವೆ ತಂತ್ರಜ್ಞಾನಕ್ಕೆ ಅನುಗುಣವಾಗಿ ಮೀಸಲಾತಿ ಪ್ರಕ್ರಿಯೆಯನ್ನು ತರುವ ನಿರೀಕ್ಷೆಯಿದೆ. ಭವಿಷ್ಯದಲ್ಲಿ ಇದು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎನ್ನಲಾಗುತ್ತಿದೆ.