ಬೆಂಗಳೂರು : ಕೆಪಿಎಸ್‌ಸಿ ಅಕ್ರಮದ ತನಿಖೆಗೆ ಇಳಿದ ಇ.ಡಿ ಅತಿದೊಡ್ಡ ಬೇಟೆಯಾಡಿದೆ. ಕೆಪಿಎಸ್‌ಸಿಯ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಗೀತಾರನ್ನ ಇ.ಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಪಶುವೈದ್ಯಾಧಿಕಾರಿಗಳ ಪರೀಕ್ಷೆ ಮಾತ್ರವಲ್ಲದೆ ಬೇರೆ ನೇಮಕಾತಿಯಲ್ಲಿ ಅಕ್ರಮ ನಡೆದ ಬಗ್ಗೆ ದಾಖಲೆ ಇ.ಡಿ ಕೈಸೇರಿದೆ. ಇದೇ ಕಾರಣಕ್ಕೆ ಇಬ್ಬರನ್ನ ಇ.ಡಿ ಅರೆಸ್ಟ್ ಮಾಡಿ ವಿಚಾರಣೆ ನಡೆಸ್ತಿದೆ.
ಇವತ್ತು ಮಧ್ಯಾಹ್ನ 12ಗಂಟೆಗೆ ಡಾಲರ್ಸ್ ಕಾಲೋನಿಯ ಶಿವಶಂಕರಪ್ಪ ನಿವಾಸದ ಮೇಲೆ ಎರಡನೇ ಬಾರಿಗೆ ಇ.ಡಿ ರೇಡ್ ಮಾಡಿತ್ತು. ಅಲ್ಲದೆ ಕೆಪಿಎಸ್ ಸಿ ಸದಸ್ಯೆ ಗೀತಾ ನಿವಾಸದ ಮೇಲು ದಾಳಿ ಮಾಡಿ ದಾಖಲೆ ಹುಡುಕಾಡಿದ್ದಾರೆ. ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ನೀಡಿದ ಹೇಳಿಕೆ ಆಧಾರದಲ್ಲಿ ಈ ರೇಡ್ ನಡೆದಿದೆ. ವಿಚಾರಣೆಗೆ ಸಹಕಾರ ನೀಡಿಲ್ಲ ಅಂತ ಇಬ್ಬರನ್ನ ಇಡಿ ಅರೆಸ್ಟ್ ಮಾಡಿಕೊಂಡಿದೆ.
ಇದರ ನಡುವೆ ಕೆ.ಪಿ.ಎಸ್.ಸಿ ಅಕ್ರಮದ ತನಿಖೆಯಲ್ಲಿ ಇ.ಡಿ ಹಾಗೂ ಸಿಐಡಿ ನಡುವ ದಾಖಲೆಗಳ ವಿಚಾರವಾಗಿ ಹಗ್ಗಜಗ್ಗಾಟ ಶುರುವಾಗಿದೆ. ಸಿಐಡಿ ತನಿಖೆಗೂ ಮುನ್ನವೇ ಇಡಿ ಅಧಿಕಾರಿಗಳು ಐಎಎಸ್ ಅಧಿಕಾರಿ ಗ್ಯಾನೇಂದ್ರ ನಿವಾಸ, ಶಿವಶಂಕರಪ್ಪ ನಿವಾಸ, ಟ್ರೈನಿಂಗ್ ಕೊಟ್ಟ ರೆಸಾರ್ಟ್ ಹಾಗೂ ಡೀಲ್ ನಡೆಸಿದ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ರು. ಆಗ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು ಮತ್ತು ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದಿದ್ದರು. ಈಗ ಪ್ರಕರಣದ ತನಿಖೆ ನಡೆಸ್ತಿರುವ ಸಿಐಡಿಗೆ ಸಿಸಿಟಿವಿ ದೃಶ್ಯಗಳು ಬೇಕಾಗಿದೆ. ಆದರೆ ಅದನ್ನ ಪಡೆಯಲು ಸಿಐಡಿ ಅಧಿಕಾರಿಗಳು ಸರ್ಕಸ್ ಮಾಡ್ತಿದ್ದಾರೆ.
ಇ.ಡಿ ವಶದಲ್ಲಿರುವ ದಾಖಲೆಗಳು ಮತ್ತು ಸಿಸಿಟಿವಿ ದೃಶ್ಯಗಳನ್ನು ನೀಡುವಂತೆ ಸಿಐಡಿ ನ್ಯಾಯಾಲಯದ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ಕೋರ್ಟ್, ಸಿಐಡಿಗೆ ಅಗತ್ಯ ದಾಖಲೆಗಳನ್ನು ನೀಡುವಂತೆ ಇಡಿಗೆ ಆದೇಶಿಸಿತ್ತು.ಆದರೆ ಕೋರ್ಟ್ ಆದೇಶದ ಬಳಿಕವೂ ದಾಖಲೆಗಳು ಮತ್ತು ಸಿಸಿಟಿವಿ ದೃಶ್ಯಗಳು ಸಿಐಡಿಗೆ ಹಸ್ತಾಂತರವಾಗಿಲ್ಲ. ಹೀಗಾಗಿ ದಾಖಲೆಗಳನ್ನು ನೀಡಿಲ್ಲ ಅಂತ ಸಿಐಡಿ ಮತ್ತೆ ಕೋರ್ಟ್ ಮೊರೆ ಹೋಗಿದೆ. ದಾಖಲೆಗಾಗಿ ಸಿಐಡಿ ಹಾಗೂ ಇ.ಡಿ ನಡುವೆ ಫೈಟ್ ನಡೆಯುತ್ತಿದೆ. ಮತ್ತೊಂದ್ಕಡೆ ಸಾಹುಕರ್ ಹಾಗೂ ಬಿ.ವಿ.ಗೀತಾ ಬಂಧನವಾಗಿದ್ದು, ಉಳಿದ ಸದಸ್ಯರಿಗೆ ನಡುಕ ಹುಟ್ಟಿಸಿದೆ.