Gruha Jyothi Scheme: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಈ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಸುಮಾರು 16 ಲಕ್ಷ ಫಲಾನುಭವಿಗಳು ಮರು ಪರಿಶೀಲನಾ ಪ್ರಕ್ರಿಯೆಯಿಂದ ಹೊರಗುಳಿದಿರುವ ಸಾಧ್ಯತೆ ಎದುರಾಗಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಕೈಗೊಂಡಿರುವ ಮರು ಪರಿಶೀಲನಾ ಕಾರ್ಯದಲ್ಲಿ ಈ ಫಲಾನುಭವಿಗಳಿಂದ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನ ಇನ್ನೂ ಸಂಗ್ರಹಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಅಕ್ಟೋಬರ್ 31ರೊಳಗೆ ಬೆಸ್ಕಾಂ ಉಪವಿಭಾಗ ಕಚೇರಿಗೆ ಭೇಟಿ ನೀಡಿ ಮಾಹಿತಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಯಡಿ ಸುಮಾರು 69 ಲಕ್ಷ ಫಲಾನುಭವಿಗಳಿದ್ದು, ಅವರಲ್ಲಿ 16 ಲಕ್ಷ ಮಂದಿಯ ಮಾಹಿತಿ ಇನ್ನೂ ಬೆಸ್ಕಾಂಗೆ ತಲುಪಿಲ್ಲ ಎಂಬುದು ಆತಂಕಕ್ಕೆ ಕಾರಣವಾಗಿದೆ. ನಿಗದಿತ ಅವಧಿಯಲ್ಲಿ ಮರು ಪರಿಶೀಲನೆ ಪೂರ್ಣಗೊಳಿಸದಿದ್ದರೆ ಸಂಬಂಧಪಟ್ಟ ಫಲಾನುಭವಿಗಳ ಪಟ್ಟಿಯನ್ನ ಪ್ರತ್ಯೇಕವಾಗಿ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದೆ. ಇದರಿಂದ ಉಚಿತ ವಿದ್ಯುತ್ ಸೌಲಭ್ಯ ಮುಂದುವರಿಯುವ ಬಗ್ಗೆ ಫಲಾನುಭವಿಗಳಲ್ಲಿ ಗೊಂದಲ ಉಂಟಾಗಿದೆ.
ಮೂರು ಬಾರಿ ಮನೆಗೆ ಭೇಟಿ ನೀಡಿದರೂ ಸಿಗದ ಫಲಾನುಭವಿಗಳು!
ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ವಿವರಗಳನ್ನ ನವೀಕರಿಸುವ ಉದ್ದೇಶದಿಂದ ಬೆಸ್ಕಾಂ ಸಿಬ್ಬಂದಿ ಮನೆಮನೆಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಮೀಟರ್ ರೀಡರ್ಗಳು ಕೆಲವು ಮನೆಗಳಿಗೆ ಮೂರು ಬಾರಿ ಭೇಟಿ ನೀಡಿದರೂ ಸಂಬಂಧಪಟ್ಟ ಫಲಾನುಭವಿಗಳು ಸಿಗುತ್ತಿಲ್ಲ ಎನ್ನಲಾಗಿದೆ. ಕೆಲವು ಮನೆಗಳಿಗೆ ಬೀಗ ಹಾಕಿರುವುದು, ನಿವಾಸಿಗಳು ಮನೆ ಖಾಲಿ ಮಾಡಿರುವುದು ಹಾಗೂ ಮನೆಗಳಲ್ಲಿ ಯಾರೂ ಲಭ್ಯವಿಲ್ಲದಿರುವುದು ಮಾಹಿತಿ ಸಂಗ್ರಹಕ್ಕೆ ಅಡ್ಡಿಯಾಗಿದೆ. ಇನ್ನು ಕೆಲವರು ಅಗತ್ಯ ದಾಖಲೆಗಳನ್ನ ನೀಡಲು ಹಿಂದೇಟು ಹಾಕುತ್ತಿರುವುದೂ ಮರು ಪರಿಶೀಲನಾ ಪ್ರಕ್ರಿಯೆ ವಿಳಂಬವಾಗಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳ ನೈಜ ವಿವರಗಳನ್ನ ಸಂಗ್ರಹಿಸಿ, ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವವರ ಮಾಹಿತಿಯನ್ನ ಸರಿಯಾಗಿ ನವೀಕರಿಸಲು ಬೆಸ್ಕಾಂ ಮುಂದಾಗಿದೆ.
ಆದಾಯ ತೆರಿಗೆ ಪಾವತಿದಾರರು, ಹೊರರಾಜ್ಯದ ಮತದಾರರಿಂದ ಮಾಹಿತಿ ವಿಳಂಬ!
ಮರು ಪರಿಶೀಲನಾ ಕಾರ್ಯದಲ್ಲಿ ಕೆಲವು ಫಲಾನುಭವಿಗಳು ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವುದು ಬೆಸ್ಕಾಂಗೆ ಸವಾಲಾಗಿದೆ. ಆದಾಯ ತೆರಿಗೆ ಪಾವತಿಸುವವರು ಹಾಗೂ ಹೊರರಾಜ್ಯದ ಮತದಾರರ ವಿವರಗಳನ್ನ ಸಂಗ್ರಹಿಸುವ ಸಂದರ್ಭದಲ್ಲಿಯೂ ಸಮಸ್ಯೆಗಳು ಎದುರಾಗುತ್ತಿವೆ ಎನ್ನಲಾಗಿದೆ. ಫಲಾನುಭವಿಗಳ ಅರ್ಹತೆ ಮತ್ತು ದಾಖಲೆಗಳ ವಿವರಗಳನ್ನ ಪರಿಶೀಲಿಸುವುದು ಈ ಪ್ರಕ್ರಿಯೆಯ ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಸಂಬಂಧಪಟ್ಟವರು ತಮ್ಮ ಅಗತ್ಯ ದಾಖಲೆಗಳನ್ನ ಒದಗಿಸಿ, ಮರು ಪರಿಶೀಲನೆಗೆ ಸಹಕರಿಸಬೇಕೆಂದು ಸೂಚಿಸಲಾಗಿದೆ. ಆದರೆ ಮರು ಪರಿಶೀಲನೆಯಲ್ಲಿ ಭಾಗವಹಿಸದ ಎಲ್ಲಾ ಫಲಾನುಭವಿಗಳು ಯೋಜನೆಯಿಂದ ಹೊರಗುಳಿಯುತ್ತಾರೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅಂತಿಮವಾಗಿ ಸರ್ಕಾರ ಹಾಗೂ ಬೆಸ್ಕಾಂ ಕೈಗೊಳ್ಳುವ ನಿರ್ಧಾರ ಮತ್ತು ಅನ್ವಯವಾಗುವ ನಿಯಮಗಳೇ ನಿರ್ಣಾಯಕವಾಗಲಿವೆ.
ಅಕ್ಟೋಬರ್ 31ರೊಳಗೆ ಬೆಸ್ಕಾಂ ಕಚೇರಿಗೆ ಭೇಟಿ ನೀಡಿ!
ಮನೆಗೆ ಭೇಟಿ ನೀಡಿದಾಗ ಲಭ್ಯವಾಗದ ಫಲಾನುಭವಿಗಳಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಸಂಬಂಧಪಟ್ಟವರು ತಮ್ಮ ವ್ಯಾಪ್ತಿಯ ಬೆಸ್ಕಾಂ ಉಪವಿಭಾಗ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಅಗತ್ಯ ದಾಖಲೆಗಳನ್ನ ಸಲ್ಲಿಸಬಹುದು. ಅಲ್ಲದೆ ನಿಗದಿತ ಅರ್ಜಿಯನ್ನ ಭರ್ತಿ ಮಾಡಿ ತಮ್ಮ ಮಾಹಿತಿಯನ್ನ ದಾಖಲಿಸಿಕೊಳ್ಳಬಹುದು. ಅಕ್ಟೋಬರ್ 31ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದ್ದು, ಫಲಾನುಭವಿಗಳು ಕೊನೆಯ ಅವಕಾಶವನ್ನ ಬಳಸಿಕೊಳ್ಳುತ್ತಾರೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ. ಮನೆಗೆ ಬೀಗ ಹಾಕಿರುವುದರಿಂದ ಅಥವಾ ಬೇರೆಡೆ ವಾಸಿಸುತ್ತಿರುವುದರಿಂದ ಪರಿಶೀಲನೆಗೆ ಒಳಪಡದವರು ಕಚೇರಿಗೆ ಭೇಟಿ ನೀಡಿ ತಮ್ಮ ವಿವರಗಳನ್ನ ಸಲ್ಲಿಸುವುದು ಸೂಕ್ತ. ಯಾವ ದಾಖಲೆಗಳನ್ನ ಸಲ್ಲಿಸಬೇಕು ಎಂಬುದನ್ನ ಖಚಿತಪಡಿಸಿಕೊಳ್ಳಲು ತಮ್ಮ ವ್ಯಾಪ್ತಿಯ ಬೆಸ್ಕಾಂ ಕಚೇರಿಯನ್ನ ಸಂಪರ್ಕಿಸಬಹುದು.
ಮಾಹಿತಿ ನೀಡದವರ ಪಟ್ಟಿ ಸರ್ಕಾರಕ್ಕೆ ಸಲ್ಲಿಕೆ ಸಾಧ್ಯತೆ!
ನಿಗದಿತ ಗಡುವಿನೊಳಗೆ ಮರು ಪರಿಶೀಲನೆಗೆ ಸಹಕರಿಸದ ಫಲಾನುಭವಿಗಳ ಪಟ್ಟಿಯನ್ನ ಪ್ರತ್ಯೇಕವಾಗಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದೆ. ಇದರಿಂದಾಗಿ ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಮುಂದುವರಿಯುವ ಬಗ್ಗೆ ಫಲಾನುಭವಿಗಳಲ್ಲಿ ಆತಂಕ ಹೆಚ್ಚಾಗಿದೆ. ರಾಜ್ಯ ಸರ್ಕಾರದ ಉಚಿತ ವಿದ್ಯುತ್ ಯೋಜನೆಯ ಲಾಭ ಪಡೆಯುತ್ತಿರುವವರು ಈ ಅವಕಾಶವನ್ನ ನಿರ್ಲಕ್ಷಿಸದೆ ತಮ್ಮ ದಾಖಲೆಗಳನ್ನ ಸಲ್ಲಿಸುವುದು ಮುಖ್ಯವಾಗಿದೆ. ಅದರಲ್ಲೂ ಮನೆ ಬದಲಾಯಿಸಿರುವವರು, ಬಾಡಿಗೆ ಮನೆಯಲ್ಲಿ ವಾಸಿಸುವವರು ಹಾಗೂ ಪರಿಶೀಲನೆ ವೇಳೆ ಲಭ್ಯವಾಗದವರು ವಿಶೇಷ ಗಮನ ನೀಡಬೇಕಿದೆ.
ಒಟ್ನಲ್ಲಿ ಗೃಹ ಜ್ಯೋತಿ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿ ನವೀಕರಣಕ್ಕೆ ಬೆಸ್ಕಾಂ ಮುಂದಾಗಿದ್ದು, ಅಕ್ಟೋಬರ್ 31ರ ಗಡುವು ಮಹತ್ವ ಪಡೆದುಕೊಂಡಿದೆ. 16 ಲಕ್ಷ ಫಲಾನುಭವಿಗಳು ನಿಗದಿತ ಅವಧಿಯಲ್ಲಿ ಮಾಹಿತಿ ಸಲ್ಲಿಸುತ್ತಾರೆಯೇ ಅಥವಾ ಅವರ ಹೆಸರುಗಳು ಪ್ರತ್ಯೇಕ ಪಟ್ಟಿಗೆ ಸೇರುತ್ತವೆಯೇ ಎಂಬುದನ್ನ ಕಾದು ನೋಡಬೇಕಿದೆ.