ಆಸ್ತಿ ನೊಂದಣಿ ಹಾಗೂ ಆನಂತರದ ಪ್ರಕ್ರಿಯೆಗಳು ಸಂಕೀರ್ಣವಾದ ಸಮಸ್ಯೆಗಳು. ಹೋಲಿಸಿಕೊಂಡರೆ ನಗರ ಪ್ರದೇಶಗಳಲ್ಲಿ ಈ ಸಮಸ್ಯೆ ತುಸು ಕಡಿಮೆ. ಗ್ರಾಮಾಂತರ ಭಾಗಗಳಲ್ಲಿ ವಿಪರೀತ. ಇದರಿಂದಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಇ-ಸ್ವತ್ತು ನೀಡಲು ಆಗುತ್ತಿದ್ದ ವಿಳಂಬವನ್ನು ತಪ್ಪಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ.
ಕೆಲಸ ಕಾರ್ಯ ಬಿಟ್ಟು ನಿತ್ಯವೂ ನಾಡಕಛೇರಿ, ಗ್ರಾಮ ಪಂಚಾಯಿತಿ ಕಚೇರಿ ಅಲೆಯುತ್ತಿದ್ದ ಹಳ್ಳಿಗಾಡಿನ ಜನರ ಸಮಸ್ಯೆಗಳಿಗೆ ರಾಜ್ಯ ಸರ್ಕಾರವು ಸ್ಪಂದಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಈಶ್ವರ ಬಿ. ಖಂಡ್ರೆ ಅವರ ಸೂಚನೆಯ ಮೇರೆಗೆ ಮೊದಲ ಹಂತದಲ್ಲಿ ಇದೇ ಅಕ್ಟೋಬರ್ 2ರಿಂದ ಗ್ರಾಮಠಾಣಾ ವ್ಯಾಪ್ತಿಯಲ್ಲಿರುವ ಆಸ್ತಿಗಳಿಗೆ ಇ-ಸ್ವತ್ತು ವಿತರಿಸಲು ಮುಂದಾಗಿದೆ.
'ಇ-ಸ್ವತ್ತು-03' ತಂತ್ರಾಂಶ ಸಿದ್ಧಪಡಿಸಲು ಸಚಿವರ ಸೂಚನೆ:
ಗ್ರಾಮಾಂತರ ಪ್ರದೇಶಗಳಲ್ಲಿ ಇ-ಸ್ವತ್ತು ನೀಡಲು ಇದ್ದ ಪ್ರಮುಖ ಸಮಸ್ಯೆ ಮತ್ತು ಸವಾಲು ಎಂದರೆ ತಾಂತ್ರಿಕ ಅಡತಡೆಗಳು. ನಂತರದ್ದು ಆಡಳಿತಾತ್ಮಕ ತೊಡಕುಗಳು. ಈ ಹಿನ್ನೆಲೆಯಲ್ಲಿ ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಸುಲಭವಾಗಿ ಇ-ಸ್ವತ್ತು ಪಡೆಯಬಹುದಾದಂತಹ ಪರಿಸ್ಥಿತಿ ನಿರ್ಮಿಸಲು ಸಚಿವ ಈಶ್ವರ ಬಿ. ಖಂಡ್ರೆ ಅವರು ಇಲಾಖೆಯ ಕಾರ್ಯದರ್ಶಿಗೆ 'ಇ-ಸ್ವತ್ತು-03' ತಂತ್ರಾಂಶ ಸಿದ್ಧಪಡಿಸುವಂತೆ ಲಿಖಿತ ಸೂಚನೆ ನೀಡಿದ್ದಾರೆ.

'ಇ-ಸ್ವತ್ತು-03' ತಂತ್ರಾಂಶ ಸಿದ್ಧಪಡಿಸಲು ಇರುವ ಕಾರಣಗಳೇನು?
ಆಸ್ತಿಗಳನ್ನು ಇ-ಸ್ವತ್ತು ಮಾಡಿಸಲು ಸಲ್ಲಿಕೆಯಾಗುತ್ತಿದ್ದ ಅರ್ಜಿಗಳು ಸುಲಭವಾಗಿ ಮತ್ತು ಸರಳವಾಗಿ ವಿಲೇವಾರಿ ಆಗುತ್ತಿರಲಿಲ್ಲ. ದಾಖಲೆ ಪರಿಶೀಲನೆ ಇನ್ನೊಂದು ತೊಡಕಾಗಿರುತ್ತಿತ್ತು. ಸ್ಥಳ ಪರಿಶೀಲನೆ ಮತ್ತೊಂದು ಸಮಸ್ಯೆಯಾಗಿರುತ್ತಿತ್ತು. ಈ ಎಲ್ಲಾ ಪ್ರಕ್ರಿಯೆಗಳನ್ನು ಸುಗಮಗೊಳಿಸಿದರೆ ಸುಲಭವಾಗಿ ಇ-ಸ್ವತ್ತು ಸಿಗುವಂತೆ ಮಾಡಬಹುದು ಎಂದು 'ಇ-ಸ್ವತ್ತು-03' ತಂತ್ರಾಂಶ ಸಿದ್ಧಪಡಿಸಲ ಸಚಿವ ಈಶ್ವರ ಬಿ. ಖಂಡ್ರೆ ಅವರು ಇಲಾಖೆಯ ಕಾರ್ಯದರ್ಶಿಗೆ 'ಇ-ಸ್ವತ್ತು-03' ತಂತ್ರಾಂಶ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದಾರೆ.
ನವೆಂಬರ್ ತಿಂಗಳಲ್ಲಿ 10 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು ವಿತರಿಸುವ ಗುರಿ!
ಅಕ್ಟೊಬರ್ 2ರಿಂದ ಇ-ಸ್ವತ್ತು ವಿತರಣೆ ಶುರುವಾಗಲಿದೆ. ಆರಂಭದಲ್ಲಿ ಅಷ್ಟು ತ್ವರಿತವಾಗಿ ವಿತರಣೆ ಆಗದಿದ್ದರೂ ಅನುಷ್ಠಾನದ ವೇಳೆ ಎದುರಾಗುವ ಸಮಸ್ಯೆಗಳನ್ನು ನಿವಾರಿಸಿಕೊಂಡು ನಂತರದ ನವೆಂಬರ್ ತಿಂಗಳ ಅವಧಿಯಲ್ಲಿ 10 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು ವಿತರಿಸಬೇಕು ಎನ್ನುವ ಗುರಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊಂದಿದೆ. ಈ ಹಿನ್ನೆಲೆಯಲ್ಲಿ ವಿವಿಧ ನ್ಯಾಯಾಲಯದಲ್ಲಿ ಇರುವ ಆಸ್ತಿಗಳು, ಸರ್ಕಾರಿ ಜಾಗದಲ್ಲಿರುವ ಆಸ್ತಿಗಳು, ಕೆರೆ ಅಂಗಳ ಅಥವಾ ಬಿ-ಖರಾಬು ಪ್ರದೇಶದಲ್ಲಿ ನಿರ್ಮಿಸಿರುವ ಮನೆಗಳು ಹಾಗೂ ಅರಣ್ಯ ಒತ್ತುವರಿ ಮಾಡಿಕೊಂಡು ಕಟ್ಟಲಾಗಿರುವ ಕಟ್ಟಡಗಳನ್ನು ಹೊರತುಪಡಿಸಿ ಬೇರೆ ಅರ್ಹ ವಾರಸುದಾರರಿಗೆ ಮಾತ್ರ ಇ-ಸ್ವತ್ತು ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.
ಕೆಲವು ದಾಖಲೆಗಳು ಇಲ್ಲದಿದ್ದರೂ ಸಿಗುತ್ತದೆ ಇ-ಸ್ವತ್ತು!
ಇ-ಸ್ವತ್ತು ಮಾಡಿಸಲು ಇರುವ ಮತ್ತೊಂದು ಸಮಸ್ಯೆ ಎಂದರೆ ಸೂಕ್ತ ದಾಖಲೆಗಳು. ಕೆಲವು ಪ್ರಕರಣಗಳಲ್ಲಿ ಸೂಕ್ತ ದಾಖಲೆಗಳು ಇಲ್ಲದ ಕಾರಣಕ್ಕೆ ಹಲವಾರು ವರ್ಷಗಳಿಂದ ಇ-ಸ್ವತ್ತು ಮಾಡಿಸಲು ಸಾಧ್ಯವಾಗಿರುವುದಿಲ್ಲ. ಉದಾಹರಣೆಗೆ ಕೆಲವರು ಗ್ರಾಮಠಾಣಾ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುತ್ತಾರೆ. ಅವರ ಬಳಿ ನೋಂದಾಯಿತ ಕ್ರಯಪತ್ರ, ಹಕ್ಕುಪತ್ರ ಸೇರಿದಂತೆ ಸೂಕ್ತ ದಾಖಲೆಗಳು ಇರುವುದಿಲ್ಲ. ಅದರಿಂದ ಅವರಿಗೆ ಇ-ಸ್ವತ್ತು ಪಡೆಯಲು ಸಾಧ್ಯವಾಗಿರುವುದಿಲ್ಲ. ಅಂತಹವರಿಗೆ ಕೆಲವು ದಾಖಲೆಗಳು ಇಲ್ಲದಿದ್ದರೂ ಇ-ಸ್ವತ್ತು ಮಾಡಿಸಲು ಬೇರೆ ರೀತಿಯಲ್ಲಿ ಅವಕಾಶ ಮಾಡಿಕೊಡುತ್ತಿದೆ.
ದಾಖಲೆಗಳು ಇಲ್ಲದಿದ್ದರೂ ಇ-ಸ್ವತ್ತು ಪಡೆಯುವ ಅವಕಾಶ ಯಾರಿಗೆ?
ದಾಖಲೆಗಳು ಇಲ್ಲದಿದ್ದರೂ ಇ-ಸ್ವತ್ತು ಪಡೆಯಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕೆಲವು ಷರತ್ತುಗಳನ್ನು ವಿಧಿಸಿದೆ. ಹಿತ್ತಲು, ಮನೆ ಅಂಗಳ ಸೇರಿದಂತೆ 4,000 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ಆಸ್ತಿಗಳಿಗೆ ಇ-ಸ್ವತ್ತು ನೀಡಲು ಅವಕಾಶ ನೀಡಲಾಗುತ್ತಿದೆ. ಇಂತಹ ಫಲಾನುಭವಿಗಳನ್ನು ಪತ್ತೆಹಚ್ಚಲು ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರತ್ಯೇಕ ಗ್ರಾಮಸಭೆ ನಡೆಸಲಿದ್ದಾರೆ. ಇ-ಸ್ವತ್ತು ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿರುವವರು ಸದರಿ ಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆಯೇ? ನಿಜಕ್ಕೂ ಅವರೇ ಆಸ್ತಿಯ ನೈಜವಾದ ಮಾಲೀಕರೇ? ಎನ್ನುವ ಪ್ರಮುಖ ವಿಷಯವನ್ನು ಗ್ರಾಮಸ್ಥರ ಸಮ್ಮುಖದಲ್ಲೇ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಸಾರ್ವಜನಿಕರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಇರುತ್ತದೆ. 21 ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಪಂಚಾಯಿತಿ ಕಚೇರಿಯಲ್ಲಿ ಪ್ರಕಟಣೆ ಹೊರಡಿಸಲಾಗುತ್ತದೆ. ಆ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು ಬಾರದಿದ್ದರೆ ನಿಯಮಾನುಸಾರ ಪರಿಶೀಲನೆ ಪೂರ್ಣಗೊಳಿಸಿ ಇ-ಸ್ವತ್ತು ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.
ಇ-ಸ್ವತ್ತು ಪಡೆಯಲು ಯಾವ ದಾಖಲೆಗಳನ್ನು ಸಲ್ಲಿಸಬೇಕು?
ಕೆಲವರ ಬಳಿ ಆಸ್ತಿಗೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ದಾಖಲೆಗಳು ಇರುವುದಿಲ್ಲ. ಅಂತಹ ಆಸ್ತಿಯ ಮಾಲೀಕರು ತಮ್ಮ ಬಳಿ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆಯೇ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ ತಮ್ಮ ಬಳಿ ಇರುವ ವಿದ್ಯುತ್ ಬಿಲ್, ಅವರು ಕಟ್ಟಿರುವ ಮನೆಗಂದಾಯ ಅಥವಾ ತೆರಿಗೆ ಪಾವತಿ ರಸೀದಿ, ಅದೇ ಮನೆಯ ವಿಳಾಸ ಹೊಂದಿರುವ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ನಿವಾಸಿ ಪ್ರಮಾಣಪತ್ರ ಮತ್ತಿತರ ದಾಖಲೆಗಳನ್ನು ಪೂರಕವಾಗಿ ಲಗತ್ತಿಸಿ ಇ-ಸ್ವತ್ತು ಪಡೆಯಲು ಅರ್ಜಿ ಸಲ್ಲಿಸಬಹುದು. ಅಂತಹ ಪ್ರಕರಣಗಳನ್ನು ಇಲಾಖೆಯ ಅಧಿಕಾರಿಗಳು ಗ್ರಾಮಸಭೆಯಲ್ಲಿ ಪರಿಶೀಲನೆಗೆ ಒಳಪಡಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.
ಅಕ್ಟೋಬರ್ 2ರಿಂದ ಇ-ಸ್ವತ್ತು ವಿತರಣೆಗೂ ಮುನ್ನ ಏನಾಗಲಿದೆ?
ರಾಜ್ಯ ಸರ್ಕಾರ ಅಕ್ಟೋಬರ್ 2ರಿಂದ ಗ್ರಾಮೀಣ ಭಾಗಗಲ್ಲಿ ಇ-ಸ್ವತ್ತು ವಿತರಣೆ ಮಾಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇ-ಸ್ವತ್ತು ನೀಡುವ ಪ್ರಕ್ರಿಯೆಯನ್ನು ವೇಗಗೊಳಿಸಲು ಮೊದಲಿಗೆ ಅಕ್ಟೋಬರ್ 2ರಿಂದ ಪಂಚನಾಮೆ ಹಾಗೂ ಸ್ಥಳ ಪರಿಶೀಲನಾ ಪ್ರಕ್ರಿಯೆ ಆರಂಭಿಸಬೇಕು ಎಂದು ಸಚಿವ ಈಶ್ವರ ಖಂಡ್ರೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಂತರ ನವೆಂಬರ್ 1ರಿಂದ 'ಮನೆ ಬಾಗಿಲಿಗೇ ಇ-ಸ್ವತ್ತು' ಎನ್ನುವ ಅಭಿಯಾನ ಶುರುವಾಗಲಿದೆ. ನವೆಂಬರ್ ಒಂದೇ ತಿಂಗಳಲ್ಲಿ 10 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು ವಿತರಿಸಬೇಕು ಎನ್ನುವ ಗುರಿಯನ್ನು ಅಧಿಕಾರಿಗಳಿಗೆ ನೀಡಲಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ಮಾಲೀಕರು ಇ-ಸ್ವತ್ತು ಪಡೆಯಲು ಅರ್ಜಿ ಸಲ್ಲಿಸಿ ತಿಂಗಳು ಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಪಂಚ ಸದಸ್ಯರ ಸಮಿತಿ ರಚಿಸಲಾಗಿತ್ತು. ಸಮಿತಿಯು ನೀಡಿರುವ ವರದಿ ಹಾಗೂ ಪ್ರಸ್ತುತ ಪರಿಸ್ಥಿತಿಯನ್ನು ಆಧರಿಸಿ ಇ-ಸ್ವತ್ತು ವಿತರಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲು ಸರ್ಕಾರ ಈಗ ಮುಂದಾಗಿದೆ.