ಕಂದಾಯ ಇಲಾಖೆಯ ಕೆಲಸ ಎಂದರೆ ಕಿರಿಕಿರಿ ಎನ್ನುವ ಅಭಿಪ್ರಾಯ ಸಾಮಾನ್ಯವಾಗಿಬಿಟ್ಟಿದೆ. ನೂರರಲ್ಲಿ ತೊಬ್ಬತ್ತು ಜನನಾದರೂ ಈ ರೀತಿ ಹೇಳುತ್ತಾರೆ. ಆದರೆ ಇದು ಸುಳ್ಳು. ಈಗ ರಾಜ್ಯ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜನರು ನಿಜಕ್ಕೂ ಖುಷಿ ಪಡುವ ಸುದ್ದಿಯೊಂದನ್ನು ಕೊಟ್ಟಿದೆ. ಪ್ರಾಪರ್ಟಿ ರಿಜಿಸ್ಟ್ರೇಷನ್ ಮಾಡಿಸಲು ನೀವು ಉಪನೋಂದಣಾಧಿಕಾರಿ ಕಚೇರಿಯ ಮುಂದೆ ದಿನಗಟ್ಟಲೆಯಲ್ಲ, ಗಂಟೆಗಟ್ಟಲೆ ಕೂಡ ಕಾಯುವ ಅಗತ್ಯ ಇಲ್ಲ ಅಂತಾ ಹೇಳಿದೆ. ಇನ್ನೂ ಇಂಟೆರೆಸ್ಟಿಂಗ್ ವಿಷಯ ಎಂದರೆ ನೀವು ನಂಬುವುದಕ್ಕೆ ಸಾಧ್ಯವಾಗದಂತೆ ಕೇವಲ 10 ನಿಮಿಷದಲ್ಲಿ ನಿಮ್ಮ ಆಸ್ತಿಯನ್ನು ನೋಂದಣಿ ಮಾಡಿಸಬಹುದು ಎಂದು ಹೇಳುತ್ತದೆ.
ಗ್ಯಾರಂಟಿ ಇಷ್ಟು ಓದಿದರೆ ನಿಮಗೆ ಅನುಮಾನ ಬರುತ್ತದೆ. ಇದು ಸಾಧ್ಯನಾ? ಕೇವಲ 10 ನಿಮಿಷದಲ್ಲಿ ಆಸ್ತಿಯನ್ನು ನೋಂದಣಿ ಮಾಡಿಸೋಕೆ ಪ್ರಾಕ್ಟಿಕಲಿ ಸಾಧ್ಯನಾ ಅನಿಸುತ್ತೆ. ಆದರೆ ಇಲಾಖೆ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಹೇಗೆಂದರೆ, ಒಟ್ಟಾರೆಯಾಗಿ ಕಠಿಣವಾಗಿದ್ದ ಅಥವಾ ಸಂಕೀರ್ಣವಾಗಿದ್ದ ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಲು ಹಾಗೂ ಅವುಗಳಲ್ಲಿ ಪಾರದರ್ಶಕತೆ ತರಬೇಕು ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯು 'ಕಾಗದರಹಿತ ಆಸ್ತಿ ನೋಂದಣಿ' ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ.
ಇದೇ ಹಿನ್ನೆಲೆಯಲ್ಲಿ ಕಾವೇರಿ 2.0 ತಂತ್ರಾಂಶದಲ್ಲಿ ಗಣನೀಯವಾದ ಬದಲಾವಣೆ ತಂದಿದೆ. ಇದು ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಇತ್ತೀಚಿನ ವರ್ಷಗಳಲ್ಲಿ ಅಳವಡಿಸಿಕೊಂಡ ಪ್ರಮುಖವಾದ ಆಧುನಿಕ ಆನ್‌ಲೈನ್ ಆಸ್ತಿ ನೋಂದಣಿ ವ್ಯವಸ್ಥೆ. ಇದನ್ನು ಹಳೆಯ ಕಾವೇರಿ ತಂತ್ರಾಂಶದ ಸುಧಾರಿತ ಆವೃತ್ತಿ ಎಂದು ಕರೆಯಲಾಗುತ್ತಿದೆ. ಕಾವೇರಿ 2.0 ತಂತ್ರಾಂಶದ ಜೊತೆಗೆ ಕಂದಾಯ ಇಲಾಖೆಗೆ ಸಂಬಂಧಿಸಿದ ಭೂಮಿ, ಇ-ಸ್ವತ್ತು, ಖಜಾನೆ-2, ಮತ್ತು ಸಕಾಲ ಮತ್ತಿತರ ತಂತ್ರಾಂಶಗಳು ಸಂಯೋಜಿತಗೊಂಡಿವೆ. ಅದರಿಂದಾಗಿ ಕೇವಲ 10 ನಿಮಿಷಗಳಲ್ಲಿ ಪ್ರಾಪರ್ಟಿ ರಿಜಿಸ್ಟ್ರೇಷನ್ ಮಾಡಿಸಬಹುದಾಗಿದೆ.
ಜನೋಪಯೋಗಿ ಕಾವೇರಿ 2.0 ತಂತ್ರಾಂಶ
ಕಾವೇರಿ 2.0 ತಂತ್ರಾಂಶದಿಂದ ಜನಸಾಮಾನ್ಯರಿಗೆ ಇನ್ನೂ ಹಲವು ಉಪಯೋಗಗಳು ಸಿಗಲಿವೆ. ಮೊದಲನೆಯದಾಗಿ ಇನ್ನು ಮುಂದೆ ಆಸ್ತಿ ನೋಂದಣಿ ಮಾಡಿಸಲು ಮಧ್ಯವರ್ತಿಗಳ ಮೊರೆಹೋಗುವ ಅಗತ್ಯ ಇರುವುದಿಲ್ಲ. ಇಲ್ಲಿಯವರೆಗೆ ಮಧ್ಯವರ್ತಿಗಳು ಇಲ್ಲದಿದ್ದರೆ ಆಸ್ತಿ ನೋಂದಣಿ ಮಾಡಿಸಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇತ್ತು. ಈಗ ಅದು ಬದಲಾಗುತ್ತದೆ. ಇದಲ್ಲದೆ ಇನ್ನೊಂದು ಪ್ರಮುಖವಾದ ಪ್ರಯೋಜನ ಇದೆ. ಅದೇನೆಂದರೆ ಕಾವೇರಿ 2.0 ತಂತ್ರಾಂಶವು 'ಕಾಗದರಹಿತ ಆಸ್ತಿ ನೋಂದಣಿ' ವ್ಯವಸ್ಥೆಯನ್ನು ಹೊಂದಿರುವುದರಿಂದ ಇನ್ನು ಮುಂದೆ ಪ್ರಾಪರ್ಟಿ ರಿಜಿಸ್ಟ್ರೇಷನ್ ಮಾಡಿಸಲು ಉಪನೋಂದಣಾಧಿಕಾರಿ ಕಚೇರಿಗೆ ಜನರು ಕಾಗದದ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಾದ ಅಗತ್ಯವಿಲ್ಲ.
ಕಾವೇರಿ 2.0 ತಂತ್ರಾಂಶದಲ್ಲಿ ಡಿಜಿಟಲ್ ಇ-ಸ್ಟಾಂಪ್ ಸೇವೆಯನ್ನು ಶುರುಮಾಡಲಾಗಿದೆ. ಅದರಿಂದಾಗಿ ಆಸ್ತಿ ನೋಂದಣಿ ಪ್ರಕ್ರಿಯೆಗಳೆಲ್ಲವೂ ಡಿಜಿಟಲ್ ರೂಪ ಪಡೆಯಲಿದೆ. ಇದರಿಂದಾಗಿ ಭೌತಿಕ ದಾಖಲೆ ಪತ್ರಗಳ ಬದಲು ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಮೂಲಕ ಪ್ರಾಪರ್ಟಿ ರಿಜಿಸ್ಟ್ರೇಷನ್ ಮಾಡಿಸಬೇಕಾಗುತ್ತದೆ. ಪ್ರಾಪರ್ಟಿ ರಿಜಿಸ್ಟ್ರೇಷನ್ ಆದ ಮೇಲೆ ನಿಮ್ಮ ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಡಿಜಿಟಲ್ ರೂಪದಲ್ಲೇ ಸಿಗುತ್ತವೆ. ಅಷ್ಟು ಮಾತ್ರವಲ್ಲ, ಅವು ಡಿಜಿಟಿಲ್ ರೂಪದಲ್ಲಿ ಸುರಕ್ಷಿತವಾಗಿರುತ್ತವೆ. ಇದರಿಂದಾಗಿ ಕಾವೇರಿ 2.0 ತಂತ್ರಾಂಶಕ್ಕೆ ಹೆಚ್ಚಿನ ಮಹತ್ವವಿದೆ.
ಕಾವೇರಿ 2.0 ಮೂಲಕ ಅರ್ಜಿ ಸಲ್ಲಿಕೆಯಿಂದ ಅನುಮೋದನೆಯವರೆಗೆ 7 ಸರಳ ಹಂತಗಳಲ್ಲಿ ಕಾಗದರಹಿತ ನೋಂದಣಿ ಪೂರ್ಣಗೊಳಿಸಿ.#eGovernance #GoodGovernance #DigitalIndia #stamps #property #propertyregistration #Kaveri2 #PaperlessRegistration pic.twitter.com/eijndPqdAz
— IGR karnataka (@IGRKarnataka) February 3, 2026
ಕಾವೇರಿ 2.0 ತಂತ್ರಾಂಶದಲ್ಲಿ ಸಿಗುವ ಸಪ್ತ ಸೇವೆಗಳು ಯಾವುವು?
1 ಬಹಳ ಪ್ರಮುಖವಾದುದು ಆಸ್ತಿ ನೋಂದಣಿ:
ಇದರಿಂದ ಜನರಿಗೆ ದೊಡ್ಡ ಪ್ರಮಾಣದಲ್ಲಿ ಸಮಯ ಮತ್ತು ಹಣ ಉಳಿತಾಯವಾಗಲಿದೆ.
ಆನ್‌ಲೈನ್ ಮೂಲಕವೇ ಆಸ್ತಿ ನೋಂದಣಿಗೆ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬಹುದು.
ನೋಂದಣಿ ಪ್ರಕ್ರಿಯೆ ಆನ್‌ಲೈನ್ ಮೂಲಕ ನಡೆಯಲಿದೆ ಮತ್ತು ಪಾರದರ್ಶಕವಾಗಿರಲಿದೆ.
2 ಋಣಭಾರ ಪ್ರಮಾಣಪತ್ರ ಪಡೆಯಬಹುದು:
ಆಸ್ತಿ ಖರೀದಿಸಲು ಅಥವಾ ಮಾರಾಟ ಮಾಡಲು ಋಣಭಾರ ಪ್ರಮಾಣಪತ್ರ (EC) ಬಹಳ ಮುಖ್ಯ.
ಇದು ಆಸ್ತಿ ಕಾನೂನುಬದ್ಧವಾಗಿದೆಯೋ ಇಲ್ಲವೋ ಎನ್ನುವ ಪ್ರಮುಖ ಸಂಗತಿಯನ್ನು ಖಚಿತಪಡಿಸುತ್ತದೆ.
ಆಸ್ತಿ ಮೇಲೆ ಸಾಲ ಇದೆಯೋ ಇಲ್ಲವೋ? ಸಾಲ ಯಾವ ರೀತಿ ಇದೆ ಎನ್ನುವುದನ್ನು ತಿಳಿಸುತ್ತದೆ.
ಕಾವೇರಿ 2.0 ತಂತ್ರಾಂಶದ ಮೂಲಕ ಸುಲಭವಾಗಿ ಋಣಭಾರ ಪ್ರಮಾಣಪತ್ರವನ್ನು ಪಡೆಯಬಹುದು.
ಕಾವೇರಿ 2.0 ಪೋರ್ಟಲ್ ಮೂಲಕ ಋಣಭಾರ ಪ್ರಮಾಣಪತ್ರವನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
3 ಆನ್‌ಲೈನ್ ಮೂಲಕವೇ ದಾಖಲೆಗಳ ಪರಿಶೀಲನೆ:
ಆಸ್ತಿ ಖರೀದಿಸುವಾಗ ಆ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುವುದು ಅತ್ಯಂತ ಅಗತ್ಯ. ಆಸ್ತಿ ದಾಖಲೆಗಳು ಅಸಲಿಯೇ ಅಥವಾ ನಕಲಿಯೇ ಎನ್ನುವುದನ್ನು ಖಚಿತಪಡಿಸಿಕೊಂಡೇ ಮುಂದಡಿ ಇಡಬೇಕು. ಈ ಹಿನ್ನೆಲೆಯಲ್ಲಿ ಯಾವುದೇ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಈ ಪೋರ್ಟಲ್‌ನಲ್ಲಿ ಪರಿಶೀಲಿಸಬಹುದಾಗಿದೆ. ಇದು ಆಸ್ತಿ ಖರೀದಿ ಮಾಡಬೇಕು ಎನ್ನುವವರಿಗೆ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗಲಿದೆ.
4 ಸುಲಭವಾಗಿ ಶುಲ್ಕದ ಅಂದಾಜು ಮಾಡಬಹುದು:
ಸಾಲ-ಸೋಲ ಮಾಡಿ ಆಸ್ತಿ ಖರೀದಿಸಿದ ಬಳಿಕ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಪಾವತಿಸಲು ಪರದಾಡುವ ಪರಿಸ್ಥಿತಿ ಇರುತ್ತದೆ.
ಮಧ್ಯವರ್ತಿಗಳು ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕದ ಹೆಸರಿನಲ್ಲಿ ಆಸ್ತಿ ಖರೀದಿ ಮಾಡುವವರಿಗೆ ವಂಚಿಸುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಕಾವೇರಿ 2.0 ತಂತ್ರಾಂಶವು ಜನರಿಗೆ ಉಪಯುಕ್ತವಾಗಿದೆ. ಆಸ್ತಿಯ ಮೌಲ್ಯಕ್ಕೆ ತಕ್ಕಂತೆ ಎಷ್ಟು ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕವನ್ನು ಪಾವತಿಸಬೇಕು ಎನ್ನುವ ಬಗ್ಗೆ ಮಾಹಿತಿ ನೀಡುತ್ತದೆ.
5 ವಿವಾಹ ನೋಂದಣಿಯನ್ನೂ ಮಾಡಬಹುದು:
ಕಾವೇರಿ 2.0 ತಂತ್ರಾಂಶದ ಮೂಲಕ ವಿವಾಹವನ್ನು ನೋಂದಾಯಿಸಿಕೊಳ್ಳಬಹುದು. ವಿವಾಹ ನೋಂದಣಿಗೆ ಸಂಬಂಧಿಸಿದಂತೆ ಔಪಚಾರಿಕ ಪ್ರಕ್ರಿಯೆಗಳಿಗಾಗಿ ಮುಂಚಿತವಾಗಿಯೇ ಆನ್ಲೈನ್ ಮೂಲಕ ಸಮಯವನ್ನು ನಿಗದಿಪಡಿಸಿಕೊಳ್ಳಬಹುದು.
6 ಇ-ಮುದ್ರಾಂಕ ಸೇವೆಗಳೆಲ್ಲವೂ ಲಭ್ಯ:
ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಭೌತಿಕ ಸ್ಟ್ಯಾಂಪ್ ಪೇಪರ್ ಬಳಕೆ ಕಮ್ಮಿ ಮಾಡಲು ಮತ್ತು ವಂಚನೆ ತಡೆಯಲು ಅಧಿಕೃತ ಚಾನೆಲ್‌ಗಳ ಮೂಲಕ ಆನ್‌ಲೈನ್‌ನಲ್ಲಿಯೇ ಮುದ್ರಾಂಕ ಶುಲ್ಕ ಪಾವತಿಸುವ ಆಧುನಿಕ ವ್ಯವಸ್ಥೆ ಜಾರಿಮಾಡಿದೆ. ಇದರಿಂದ ಜನರಿಗೆ ಮಧ್ಯವರ್ತಿಗಳಿಗೆ ಹೆಚ್ಚಿನ ಪ್ರಮಾಣದ ದುಡ್ಡು ಕೊಡುವುದು ಮತ್ತು ಸಮಯ ವ್ಯಯವಾಗುವುದು ತಪ್ಪುತ್ತದೆ.
7 ಆಸ್ತಿ ಮೌಲ್ಯಮಾಪನದ ಪ್ರಯೋಜನ:
ಯಾವುದೇ ಆಸ್ತಿಯನ್ನು ಖರೀದಿ ಮಾಡುವ ಅಥವಾ ಮಾರಾಟ ಮಾಡುವ ಮೊದಲು ಆ ಪ್ರದೇಶದ ಮಾರ್ಗದರ್ಶಿ ಮೌಲ್ಯ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಕಾವೇರಿ 2.0 ತಂತ್ರಾಂಶದ ಮೂಲಕ ಇನ್ನು ಮುಂದೆ ಆಸ್ತಿ ಮೌಲ್ಯಮಾಪನದ ಮಾಹಿತಿಗಳನ್ನು ಆನ್‌ಲೈನ್ ಮೂಲಕವೇ ಪರಿಶೀಲಿಸಬಹುದಾಗಿದೆ.
ಕಾವೇರಿ 2.0 ತಂತ್ರಾಂಶದ ಮೂಲಕ ಆಸ್ತಿ ನೋಂದಣಿ ಮಾಡಿಸುವ ಪ್ರಕ್ರಿಯೆ ಏನು?
1 ಮೊಟ್ಟ ಮೊದಲಿಗೆ ಕಾವೇರಿ 2.0 ಪೋರ್ಟಲ್‌ನಲ್ಲಿ ಸಿಟಿಜನ್ (ನಾಗರಿಕರ) ಲಾಗಿನ್ ಆಗಬೇಕು.
2 ಲಾಗಿನ್ ಆದ ಬಳಿಕ ಆಸ್ತಿಗೆ ಸಂಬಂಧಿಸಿದ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಅಪ್ಲೋಡ್ ಮಾಡಬೇಕು.
3 ಆಸ್ತಿಯನ್ನು ಖರೀದಿ ಮಾಡುವವರು ಯಾರು? ಮಾರಾಟ ಮಾಡುವವರು ಯಾರು? ಎಂಬ ಹೆಸರುಗಳನ್ನು ಅಪ್ಲೋಡ್ ಮಾಡಬೇಕು.
4 ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಸಹಿ ಹಾಕುವವರು ಯಾರು ಎನ್ನುವವರ ವಿವರಗಳನ್ನೂ ಅಪ್ಲೋಡ್ ಮಾಡಬೇಕು.
5 ನೀವು ಕಾವೇರಿ 2.0 ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಿರುವ ವಿವರಗಳು ಸರಿ ಇವೆಯೇ? ಅವುಗಳಲ್ಲಿ ಲೋಪವಿದೆಯೇ ಎನ್ನುವುದನ್ನು ಉಪನೋಂದಣಾಧಿಕಾರಿಗಳು ಆನ್‌ಲೈನ್ ಮೂಲಕ ಪರಿಶೀಲನೆ ಮಾಡುತ್ತಾರೆ.
6 ನೀವು ಸಲ್ಲಿಸಿರುವ ಆಸ್ತಿ ವಿವರಗಳು ಸಮರ್ಪಕವಾಗಿ ಎನ್ನುವುದು ಖಚಿತವಾದರೆ ಉಪನೋಂದಣಾಧಿಕಾರಿಗಳು ಮುಂದಿನ ಪ್ರಕ್ರಿಯೆಗಳಿಗೆ ಅನುಮತಿ ನೀಡುತ್ತಾರೆ.
7 ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಸಮರ್ಪಕವಾಗಿದ್ದರೆ ಉಪನೋಂದಾಣಾಧಿಕಾರಿಗಳು ಶುಲ್ಕ ಪಾವತಿ ಮಾಡುವುದಕ್ಕೆ ಅನುಮೋದನೆ ನೀಡುತ್ತಾರೆ.
8 ಉಪನೋಂದಾಣಾಧಿಕಾರಿಗಳ ಅನುಮೋದನೆ ಬಳಿಕ ನೆಟ್ ಬ್ಯಾಂಕಿಂಗ್ ಅಥವಾ UPI ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳನ್ನು ಪಾವತಿ ಮಾಡಬೇಕು.
9 ಶುಲ್ಕ ಪಾವತಿಯ ಬಳಿಕ ಆಧಾರ್ ಆಧಾರಿತ ಇ-ಸೈನ್ ಅಥವಾ ಡಿಜಿಟಲ್ ಸಿಗ್ನೇಚರ್ ಮೂಲಕ ಆಸ್ತಿ ಮಾರಾಟ ಮಾಡುವವರು, ಖರೀದಿ ಮಾಡುವವರು ಮತ್ತು ಸಾಕ್ಷಿಗಳು ಸಹಿ ಮಾಡಬೇಕು.
10 ಆಸ್ತಿ ಮಾರಾಟ ಮಾಡುವವರು, ಖರೀದಿ ಮಾಡುವವರು ಮತ್ತು ಸಾಕ್ಷಿದಾರರು ಸಹಿ ಮಾಡಿದ ಬಳಿಕ ಉಪನೋಂದಣಾಧಿಕಾರಿ ಆಸ್ತಿ ನೋಂದಣಿಗೆ ಸಮಯ ನಿಗದಿ ಮಾಡುತ್ತಾರೆ.
11 ಉಪನೋಂದಣಾಧಿಕಾರಿ ನಿಗದಿಪಡಿಸಿದ ಸಮಯದಲ್ಲಿ ಆಸ್ತಿ ಮಾರಾಟ ಮಾಡುವವರು, ಖರೀದಿ ಮಾಡುವವರು ಮತ್ತು ಸಾಕ್ಷಿದಾರರು ಸಬ್‌ರಿಜಿಸ್ಟ್ರಾರ್ ಕಚೇರಿಗೆ ಹೋಗಬೇಕು.
12 ಇಷ್ಟೆಲ್ಲಾ ಪ್ರಕ್ರಿಯೆಗಳು ಆದ ನಂತರ ಉಪನೋಂದಣಾ ಕಚೇರಿಯಲ್ಲಿ ಬಯೋಮೆಟ್ರಿಕ್ (ಬೆರಳಚ್ಚು) ಮತ್ತು ಫೋಟೋ ನೀಡಬೇಕು.
13 ಇಡೀ ಪ್ರಕ್ರಿಯೆಯನ್ನು ಅಂತಿಮವಾಗಿ ಪರಿಶೀಲಿಸಿ ಉಪನೋಂದಣಾಧಿಕಾರಿಗಳು ಡಿಜಿಟಲ್ ಸಹಿ ಮಾಡಿದರೆ ಅಲ್ಲಿಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.