ಪ್ರಯಾಣಿಕರ ಅನುಕೂಲಕ್ಕಾಗಿ ಆಗಾಗ್ಗೆ ಅಗತ್ಯ ನಿಯಮಗಳನ್ನು ಜಾರಿಗೆ ತರುವ ಭಾರತೀಯ ರೈಲ್ವೆ ಇದೀಗ ಟ್ರೈನ್‌ನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಫೋನ್‌ನಲ್ಲಿ ಜೋರಾಗಿ ಮಾತನಾಡುವುದು ಹಾಗೂ ಫೋನ್ ಸ್ಪೀಕರ್ ಬಳಕೆ ಬಗ್ಗೆ ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಭಾರತೀಯ ರೈಲ್ವೆಯ ಹೊಸ ನಿಯಮ ಏನು? ಎಂಬ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
ಭಾರತೀಯ ರೈಲ್ವೆಯ ಕಠಿಣ ನಿಯಮ:
ಭಾರತೀಯ ರೈಲ್ವೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು ಇತ್ತೀಚೆಗೆ ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ, ರೈಲಿನಲ್ಲಿ ಮೊಬೈಲ್ ಫೋನ್ ಸ್ಪೀಕರ್ ಬಳಕೆ ಮತ್ತು ಜೋರಾಗಿ ಮಾತನಾಡುವುದನ್ನು ನಿಷೇಧಿಸಲಾಗಿದೆ.
ರೈಲು ಪ್ರಯಾಣದ ಸಂದರ್ಭದಲ್ಲಿ ಫೋನ್‌ನಲ್ಲಿ ಜೋರಾಗಿ ಮಾತನಾಡುವುದರಿಂದ ಹಾಗೂ ಸ್ಪೀಕರ್ ಬಳಸುವುದರಿಂದ ಸಹಪ್ರಯಾಣಿಕರಿಗೆ ಉಂಟಾಗುವ ಅನಾನುಕೂಲತೆಯನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಭಾರತೀಯ ರೈಲ್ವೆಯ ಜನ್ ವಿಶ್ವಾಸ್ (ತಿದ್ದುಪಡಿ) ರೈಲ್ವೆ ಕಾಯ್ದೆಯ ಸೆಕ್ಷನ್ 145 (2) (ಎ) ಅಡಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಜೋರಾಗಿ ಮಾತಾಡುವುದು, ಮೊಬೈಲ್ ಫೋನ್‌ಗಳನ್ನು ಸ್ಪೀಕರ್ ಮೋಡ್‌ನಲ್ಲಿ ಬಳಸುವ ಮೂಲಕ ಬೇರೆಯವರಿಗೆ ಸಮಸ್ಯೆ ಉಂಟಾದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿರುವ ರೈಲ್ವೆ ಇಲಾಖೆ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕ ವಾಹನಗಳಲ್ಲಿ ಶಾಂತಿಯನ್ನು ಕಾಪಾಡಲು ಮೊಬೈಲ್ ಬಳಸುವಾಗ ಇಯರ್‌ಫೋನ್ ಬಳಸಿ, ಸಾರ್ವಜನಿಕ ಶಿಷ್ಟಾಚಾರ ಪಾಲಿಸಿ ಎಂತಲೂ ರೈಲ್ವೆ ಸೂಚಿಸಿದೆ.
ಮೊಬೈಲ್ ಫೋನ್ ಸ್ಪೀಕರ್ ಬಳಕೆ ಮತ್ತು ಜೋರಾಗಿ ಮಾತನಾಡುವಿಕೆ ಕುರಿತಂತೆ ರೈಲು ಪ್ರಯಾಣದಲ್ಲಿ ರೈಲ್ವೆ ಅಧಿಕಾರಿಗಳು ನಿಮಗೆ ಎಚ್ಚರಿಕೆ ನೀಡಿದರೂ ಸಹ ರೈಲ್ವೆ ನಿಯಮಗಳನ್ನು ಉಲ್ಲಂಘಿಸುವ ಪ್ರಯಾಣಿಕರಿಗೆ ₹5,000 ದಂಡ ಹಾಗೂ ಆರು ತಿಂಗಳುಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು. ರೈಲಿನ ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಟಿಕೆಟ್ ಪರೀಕ್ಷಕರಿಗೆ ಹಾಗೂ ರೈಲ್ವೆ ಸಿಬ್ಬಂದಿಗೆ ಅಧಿಕಾರ ಇರಲಿದೆ ಎನ್ನಲಾಗಿದೆ.
ಸೌತ್ ರೈಲ್ವೇಸ್ ಸೇರಿದಂತೆ ಭಾರತೀಯ ರೈಲ್ವೆಯ ವಿವಿಧ ವಲಯಗಳು ರೈಲ್ವೆ ಇಲಾಖೆಯ ಹೊಸ ನಿಯಮದ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೂಚನೆ ನೀಡಲಾಗಿದೆ.
ಭಾರತೀಯ ರೈಲ್ವೆಯ ಈ ಹೊಸ ನಿಯಮಕ್ಕೆ ಕಾರಣ ಏನು?
ರೈಲು ಪ್ರಯಾಣದ ಸಂದರ್ಭದಲ್ಲಿ ಹಲವರು ಮೊಬೈಲ್‌ನಲ್ಲಿ ಜೋರಾಗಿ ಸೌಂಡ್ ಹಾಕಿ ಸಿನಿಮಾ, ಧಾರಾವಾಹಿ ನೋಡುವುದು ಅಥವಾ ಹೈ ವಾಲೂಮ್‌ನಲ್ಲಿ ರೀಲ್ಸ್‌ಗಳನ್ನು ವೀಕ್ಷಿಸುವುದರ ಕುರಿತಂತೆ ರೈಲ್ವೆ ಇಲಾಖೆಗೆ ನಿರಂತರವಾಗಿ ದೂರುಗಳು ಬರುತ್ತಿದ್ದವು.
ಈ ಹಿನ್ನಲೆಯಲ್ಲಿ ರೈಲು ಪ್ರಯಾಣದ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಜೋರಾಗಿ ಮಾತಾಡದಂತೆ ಹಾಗೂ ಜೋರು ಧ್ವನಿಯಲ್ಲಿ ವಿಡಿಯೋ ವೀಕ್ಷಿಸುವುದು, ಹಾಡು ಕೇಳುವುದನ್ನು ಮಾಡದೆ, ಪ್ರಯಾಣಿಕರು ಸಾರ್ವಜನಿಕ ಶಿಷ್ಟಾಚಾರವನ್ನು ಪಾಲಿಸಬೇಕು. ಒಂದೊಮ್ಮೆ ಪ್ರಯಾಣಿಕರು ಮೊಬೈಲ್‌ನಲ್ಲಿ ಸಿನಿಮಾ, ಗೀತೆ ಏನನ್ನೇ ನೋಡಲು ಬಯಸಿದರೆ ಅದರಿಂದ ಹೊರಹೊಮ್ಮುವ ಧ್ವನಿಯಿಂದ ಸಹ ಪ್ರಯಾಣಿಕರಿಗೆ ತೊಂದರೆ ಆಗದಂತೆ ನಿಗಾವಹಿಸಲು ಕಡ್ಡಾಯವಾಗಿ ಇಯರ್‌ಫೋನ್‌ಗಳನ್ನು ಬಳಸಬೇಕು. ಜೊತೆಗೆ ಮೊಬೈಲ್ ಫೋನ್‌ನಲ್ಲಿ ಮಾತನಾಡುವಾಗಲೂ ಮಿತ ಧ್ವನಿಯಲ್ಲಿ ಬೇರೆಯವರಿಗೆ ತೊಂದರೆ ಆಗದಂತೆ ಮಾತನಾಡುವಂತೆ ಭಾರತೀಯ ರೈಲ್ವೆ ಇಲಾಖೆ ಮನವಿ ಮಾಡಿದೆ.
ಪ್ರಯಾಣಿಕರು ಎಲ್ಲಿ ದೂರು ದಾಖಲಿಸಬಹುದು?
ನೀವು ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಒಂದು ವೇಳೆ ಪಕ್ಕದ ಪ್ರಯಾಣಿಕರಿಂದ ನಿರಂತರವಾಗಿ ತೊಂದರೆಯುಂಟಾದಲ್ಲಿ, ಪ್ರಯಾಣಿಕರು ತಕ್ಷಣವೇ ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಬಹುದು ಅಥವಾ ‘ರೈಲ್ಮದದ್’ ಪೋರ್ಟಲ್ ಮೂಲಕ ದೂರು ದಾಖಲಿಸಬಹುದಾಗಿದೆ.