'60 ದಿನದಲ್ಲಿ 6 ಕೆಜಿ ತೂಕ ಇಳಿಸಿ', 'ವಯಸ್ಸಾಗೋದನ್ನ ತಡೆಯಿರಿ'... ಹೆಲ್ತ್ ಸಪ್ಲಿಮೆಂಟ್ ಜಾಹೀರಾತುಗಳ ಬಣ್ಣ ಬಯಲು ಮಾಡಿದ ASCI
ಆರೋಗ್ಯದ ಕಾಳಜಿಯಿಂದ ನೀವು ಹೆಲ್ತ್ ಸಪ್ಲಿಮೆಂಟ್ಸ್ (ನ್ಯೂಟ್ರಾಸುಟಿಕಲ್ಸ್), ಪ್ರೋಟೀನ್ ಪೌಡರ್ ಅಥವಾ ವಿಟಮಿನ್ ಮಾತ್ರೆಗಳನ್ನು ಖರೀದಿಸುತ್ತಿದ್ದೀರಾ? ಟಿವಿ, ಮೊಬೈಲ್‌ಗಳಲ್ಲಿ ಬರುವ ಜಾಹೀರಾತುಗಳನ್ನು ನೋಡಿ ಈ ಉತ್ಪನ್ನಗಳು 'ಮ್ಯಾಜಿಕ್' ಮಾಡುತ್ತವೆ ಎಂದು ನಂಬಿದ್ದರೆ, ನೀವು ಎಚ್ಚರಗೊಳ್ಳಲೇಬೇಕು.
ಬೆಂಗಳೂರು : ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ (ಎಎಸ್‌ಸಿಐ) ಬಿಡುಗಡೆ ಮಾಡಿರುವ ‘A Pill for Thought’ (ಎ ಪಿಲ್ ಫಾರ್ ಥಾಟ್) ಎಂಬ ಹೊಸ ವರದಿಯಲ್ಲಿ, ಆರೋಗ್ಯ ಮತ್ತು ವೆಲ್‌ನೆಸ್ ಉತ್ಪನ್ನಗಳ ಜಾಹೀರಾತುಗಳಲ್ಲಿ ಮಾಡಲಾಗುತ್ತಿರುವ ಸುಳ್ಳು ಭರವಸೆಗಳನ್ನು ಬಯಲಿಗೆಳೆಯಲಾಗಿದೆ.
ಜುಲೈನಿಂದ ಸೆಪ್ಟೆಂಬರ್ 2026ರವರೆಗೆ ಎಎಸ್‌ಸಿಐ ಪರಿಶೀಲಿಸಿದ 61 ಜಾಹೀರಾತುಗಳ ಪೈಕಿ ಬರೋಬ್ಬರಿ 60 ಜಾಹೀರಾತುಗಳು ಗ್ರಾಹಕರನ್ನು ದಾರಿತಪ್ಪಿಸುತ್ತಿವೆ ಮತ್ತು ನಿಯಮಗಳನ್ನು ಉಲ್ಲಂಘಿಸಿವೆ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ.
ಯಾವೆಲ್ಲಾ ಸುಳ್ಳು ಭರವಸೆಗಳನ್ನು ನೀಡಲಾಗುತ್ತಿದೆ?
ʼ60 ದಿನಗಳಲ್ಲಿ 6 ಕೆ.ಜಿ ತೂಕ ಇಳಿಸಿʼ, ʼ12 ವಾರಗಳಲ್ಲಿ ತೊಡೆಯ ಬೊಜ್ಜು ಕರಗಿಸಿʼ, ʼಯುವಿ ಕಿರಣಗಳಿಂದ ಶೇ. 300ರಷ್ಟು ರಕ್ಷಣೆʼ - ಹೀಗೆ ತೂಕ ಇಳಿಕೆ, ವಯಸ್ಸಾಗುವುದನ್ನು ತಡೆಯುವುದು, ಚರ್ಮದ ಕಾಂತಿ ಹೆಚ್ಚಿಸುವ ಜಾಹೀರಾತುಗಳು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದೆ ಪ್ರಸಾರವಾಗುತ್ತಿವೆ.
ಅಷ್ಟೇ ಅಲ್ಲದೆ, ಕೆಲವೊಂದು ಉತ್ಪನ್ನಗಳು ಅಸ್ತಮಾ, ರಕ್ತದೊತ್ತಡ (ಬಿಪಿ), ಕೊಲೆಸ್ಟ್ರಾಲ್ ಮತ್ತು ಪಿಸಿಓಎಸ್‌ನಂತಹ ಗಂಭೀರ ಕಾಯಿಲೆಗಳನ್ನು ಗುಣಪಡಿಸುತ್ತವೆ ಎಂದು ಹೇಳಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಜನರ ಅನಾರೋಗ್ಯವನ್ನೇ ಬಂಡವಾಳ ಮಾಡಿಕೊಂಡು ಕಂಪನಿಗಳು ಭ್ರಮೆ ಹುಟ್ಟಿಸುತ್ತಿವೆ ಎಂದು ವರದಿ ಹೇಳಿದೆ.
ಕಂಪನಿಗಳು ಜನರನ್ನು ಯಾಮಾರಿಸುವುದು ಹೇಗೆ?
ಎಎಸ್‌ಸಿಐ ವರದಿಯ ಪ್ರಕಾರ, ಈ ಕಂಪನಿಗಳು ಪ್ರಮುಖವಾಗಿ 3 ವಿಧಾನಗಳಲ್ಲಿ ಜನರನ್ನು ಯಾಮಾರಿಸುತ್ತಿವೆ. ಮೊದಲನೆಯದ್ದು ಅರ್ಧ ಸತ್ಯ. ಉತ್ಪನ್ನದಲ್ಲಿರುವ ಯಾವುದೋ ಒಂದು ಮೂಲವಸ್ತುವಿಗೆ (ಉದಾಹರಣೆಗೆ: ಅಶ್ವಗಂಧ ಅಥವಾ ವಿಟಮಿನ್ ಸಿ) ಒಳ್ಳೆಯ ಗುಣವಿರುತ್ತದೆ. ಆ ಒಂದು ವಸ್ತುವಿನ ಲಾಭವನ್ನೇ ಮುಂದಿಟ್ಟುಕೊಂಡು, ಇಡೀ ಉತ್ಪನ್ನವೇ ಅದ್ಭುತ ಎಂದು ಬಿಂಬಿಸಲಾಗುತ್ತದೆ. ಆದರೆ ಆ ಅಂತಿಮ ಉತ್ಪನ್ನದಿಂದ ನಿಜಕ್ಕೂ ಲಾಭವಿದೆಯೇ ಎಂಬುದಕ್ಕೆ ಕಂಪನಿಗಳ ಬಳಿ ಯಾವುದೇ ಕ್ಲಿನಿಕಲ್ ಸಾಕ್ಷ್ಯಗಳಿರುವುದಿಲ್ಲ.
ಎರಡನೆಯದ್ದು ಸಾಕ್ಷ್ಯವಿಲ್ಲದ ಹೋಲಿಕೆ. "ನಮ್ಮ ಉತ್ಪನ್ನ ಇತರರಿಗಿಂತ ವೇಗವಾಗಿ ಕೆಲಸ ಮಾಡುತ್ತದೆ", "ಬಹಳ ಎಫೆಕ್ಟಿವ್" ಎಂದು ಹೇಳುತ್ತಾರೆ. ಆದರೆ ಯಾರಿಗೆ ಅಥವಾ ಯಾವ ಉತ್ಪನ್ನಕ್ಕೆ ಹೋಲಿಸಿ ಈ ಮಾತು ಹೇಳುತ್ತಿದ್ದಾರೆ ಎಂಬುದಕ್ಕೆ ಯಾವುದೇ ಆಧಾರ ಇರುವುದಿಲ್ಲ.
ಮೂರನೆಯದ್ದು ಸುಳ್ಳು ಬಿಫೋರ್-ಆಫ್ಟರ್ ಫೋಟೋಗಳು ಮತ್ತು ಎಸ್ಕೇಪ್ ತಂತ್ರ. ಗ್ರಾಹಕರನ್ನು ಸೆಳೆಯಲು ನಕಲಿ 'ಬಿಫೋರ್-ಆಫ್ಟರ್' ಫೋಟೋಗಳನ್ನು ಬಳಸಲಾಗುತ್ತಿದೆ. ವಿಪರ್ಯಾಸವೆಂದರೆ, ಎಸ್‌ಸಿಐ ಈ ಬಗ್ಗೆ ಸಾಕ್ಷ್ಯ ಕೇಳಿ ನೋಟಿಸ್ ನೀಡಿದಾಗ, 31 ಕಂಪನಿಗಳು ಯಾವುದೇ ಸಾಕ್ಷ್ಯ ಒದಗಿಸಲು ವಿಫಲವಾಗಿವೆ. ಹಲವು ಕಂಪನಿಗಳು ಸಾಕ್ಷ್ಯ ನೀಡುವ ಬದಲು ತಮ್ಮ ಜಾಹೀರಾತುಗಳನ್ನೇ ದಿಢೀರ್ ಹಿಂಪಡೆದಿವೆ.
ಭಾರೀ ದೊಡ್ಡ ಮಾರುಕಟ್ಟೆ
ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಹೆಚ್ಚಾದಂತೆ, ರೋಗ ಬರುವ ಮುನ್ನವೇ ತಡೆಯಬೇಕು ಎಂಬ ಉದ್ದೇಶದಿಂದ ನ್ಯೂಟ್ರಾಸ್ಯುಟಿಕಲ್ಸ್ (ಆರೋಗ್ಯ ವರ್ಧಕಗಳು) ಬಳಕೆ ಹೆಚ್ಚಾಗಿದೆ. 2025ರ ಹೊತ್ತಿಗೆ ಭಾರತದಲ್ಲಿ ಈ ಮಾರುಕಟ್ಟೆ 38.77 ಬಿಲಿಯನ್ ಡಾಲರ್ ಮೌಲ್ಯ ತಲುಪಿದ್ದು, 2033ರ ವೇಳೆಗೆ ಇದು ಬರೋಬ್ಬರಿ 1,151.5 ಬಿಲಿಯನ್ ಡಾಲರ್‌ಗೆ ಏರಿಕೆಯಾಗುವ ಅಂದಾಜಿದೆ. ಇದೇ ಕಾರಣಕ್ಕೆ ಕಂಪನಿಗಳು ಆಕರ್ಷಕ ಜಾಹೀರಾತುಗಳ ಮೊರೆ ಹೋಗುತ್ತಿವೆ.
"ಜನರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆಯಿಂದ ಇಂತಹ ಉತ್ಪನ್ನಗಳನ್ನು ಖರೀದಿಸುತ್ತಾರೆ. ದಿಢೀರ್ ತೂಕ ಇಳಿಕೆ ಅಥವಾ ವಯಸ್ಸಾಗುವಿಕೆಯನ್ನು ತಡೆಯುವಂತಹ ಜಾಹೀರಾತುಗಳನ್ನು ನೀಡುವಾಗ, ಕಂಪನಿಗಳು ಅದಕ್ಕೆ ತಕ್ಕ ಬಲವಾದ ವೈಜ್ಞಾನಿಕ ಪುರಾವೆಗಳನ್ನು ನೀಡಲೇಬೇಕು. ಯಾವುದೋ ಒಂದು ಕಚ್ಚಾವಸ್ತುವಿನ ಗುಣವನ್ನು ಇಡೀ ಉತ್ಪನ್ನದ ಗುಣ ಎಂದು ಹೇಳಬಾರದು. ಕಂಪನಿಗಳ ಜಾಹೀರಾತಿನ ಭರವಸೆಗಳು ಸಾಕ್ಷ್ಯಾಧಾರಿತವಾಗಿರಬೇಕು, ಗ್ರಾಹಕರ ನಂಬಿಕೆಯನ್ನು ಒಡೆಯಬಾರದು," ಎಂದು ಎಎಸ್‌ಸಿಐ ಸಿಇಒ ಮನೀಶಾ ಕಪೂರ್ ಎಚ್ಚರಿಸಿದ್ದಾರೆ.
ಗ್ರಾಹಕರಿಗೆ ಪಾಠ
ಟಿವಿಯಲ್ಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಬರುವ ಜಾಹೀರಾತುಗಳನ್ನು ನೋಡಿ, ದಿಢೀರ್ ಮ್ಯಾಜಿಕ್ ನಡೆಯುತ್ತದೆ ಎಂದು ನಂಬಿ ಸಾವಿರಾರು ರೂಪಾಯಿ ಸುರಿದು ಹೆಲ್ತ್ ಸಪ್ಲಿಮೆಂಟ್ಸ್ ಖರೀದಿಸುವ ಮುನ್ನ ಗ್ರಾಹಕರು ಎಚ್ಚರ ವಹಿಸುವುದು ಅತ್ಯಗತ್ಯ