ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಯುವ ನಟ ಧನ್ವೀರ್ ಗೌಡ ನಡುವಿನ ಬಾಂಧವ್ಯ ಈಗ ಸಂಪೂರ್ಣವಾಗಿ ಹಳಸಿ ಹೋಗಿದೆ. ಒಂದು ಕಾಲದಲ್ಲಿ ದರ್ಶನ್ ಅವರ ನೆರಳಿನಂತೆ ಓಡಾಡಿಕೊಂಡಿದ್ದ ಧನ್ವೀರ್ ಮತ್ತು ವಿಜಯಲಕ್ಷ್ಮಿ ದರ್ಶನ್ ಅವರ ನಡುವೆ ಆರಂಭವಾದ ಸಣ್ಣ ಭಿನ್ನಾಭಿಪ್ರಾಯ, ಈಗ ದೊಡ್ಡ ಮಟ್ಟದ ಕಾನೂನು ಸಮರಕ್ಕೆ ಸಾಕ್ಷಿಯಾಗಿದೆ..
ಜೈಲಿನಿಂದಲೇ ಇಂಜಕ್ಷನ್ ಅಸ್ತ್ರ ಪ್ರಯೋಗಿಸಿದ ದರ್ಶನ್
ಸಾಮಾಜಿಕ ಜಾಲತಾಣಗಳಲ್ಲಿ ವಿಜಯಲಕ್ಷ್ಮಿ ವಿರುದ್ಧ "ಪತಿಗೆ ಜೈಲಿನಿಂದ ಹೊರಬರಲು ಇಷ್ಟವಿಲ್ಲ" ಎಂಬ ರೀತಿಯ ತಪ್ಪು ಕಥೆಗಳು ಹಾಗೂ ವಾದಗಳು ಹರಿದಾಡಿದ್ದವು. ಈ ಎಲ್ಲಾ ಬೆಳವಣಿಗೆಗಳಿಂದ ತೀವ್ರ ಬೇಸತ್ತಿರುವ ಡಿ-ಬಾಸ್ ದರ್ಶನ್, ಜೈಲಿನಲ್ಲಿದ್ದರೂ ತಮ್ಮ ಕುಟುಂಬದ ಮೇಲಿನ ಆರೋಪಗಳಿಗೆ ಬ್ರೇಕ್ ಹಾಕಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ತಮ್ಮ ಹೆಂಡತಿ, ಮಗ ಹಾಗೂ ಕುಟುಂಬದ ವೈಯಕ್ತಿಕ ವಿಚಾರಗಳ ಬಗ್ಗೆ ನಟ ಧನ್ವೀರ್ ಯಾವುದೇ ರೀತಿಯ ಹೇಳಿಕೆಗಳನ್ನು ನೀಡದಂತೆ ನಿರ್ಬಂಧ ವಿಧಿಸಬೇಕೆಂದು ಕೋರಿ ದರ್ಶನ್ ಪರವಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಅಷ್ಟೇ ಅಲ್ಲದೆ, ಟಿವಿ, ಯೂಟ್ಯೂಬ್, ಇನ್‌ಸ್ಟಾಗ್ರಾಂ ಸೇರಿದಂತೆ ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಅಥವಾ ಸಾರ್ವಜನಿಕ ವೇದಿಕೆಗಳಲ್ಲಿ ದರ್ಶನ್ ಅವರ ದಾಂಪತ್ಯ, ಆರ್ಥಿಕ ಹಾಗೂ ಕಾನೂನು ವಿಚಾರಗಳ ಬಗ್ಗೆ ಮಾತನಾಡಬಾರದು ಎಂದು ತಡೆಯಾಜ್ಞೆ (Injunction) ಕೋರಲಾಗಿದೆ. ಇದು ಕೇವಲ ಧನ್ವೀರ್‌ಗೆ ಮಾತ್ರವಲ್ಲದೆ, ಅವರ ಬೆಂಬಲಿಗರಿಗೂ ಈ ನಿರ್ಬಂಧ ಅನ್ವಯಿಸುವಂತೆ ದಾವೆ ಹೂಡಲಾಗಿದೆ.
ವಿವಾದದ ಹಿನ್ನೆಲೆ ಹಾಗೂ ಹಣಕಾಸಿನ ಆರೋಪ
ಇನ್ನು ಈ ಜಗಳಕ್ಕೆ ಪ್ರಮುಖ ಕಾರಣ ಹಣದ ವ್ಯವಹಾರ ಎಂಬುದು ಈಗ ಬಹಿರಂಗವಾಗಿದೆ. ವಿಜಯಲಕ್ಷ್ಮಿ ಅವರು ನಟ ಧನ್ವೀರ್ ಬಳಿ ಬರೋಬ್ಬರಿ 10 ಕೋಟಿ ರೂಪಾಯಿ ನಗದು ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ನೀಡಿದ್ದರು ಎನ್ನಲಾಗಿದೆ. ಆದರೆ, ದರ್ಶನ್ ಜೈಲಿನಿಂದಲೇ ಆ ಹಣವನ್ನು ವಾಪಸ್ ನೀಡುವಂತೆ ಧನ್ವೀರ್‌ಗೆ ಸೂಚಿಸಿದಾಗ ಅಸಲಿ ಗಲಾಟೆ ಶುರುವಾಗಿದೆ. ಈ ಪ್ರಕರಣದ ಕುರಿತು ಹೈಕೋರ್ಟ್ ಹಿರಿಯ ವಕೀಲರೊಬ್ಬರು ಆದಾಯ ತೆರಿಗೆ ಇಲಾಖೆ (IT) ಹಾಗೂ ಜಾರಿ ನಿರ್ದೇಶನಾಲಯಕ್ಕೆ (ED) ಅಧಿಕೃತ ದೂರು ಕೂಡ ದಾಖಲಿಸಿದ್ದಾರೆ ಅನ್ನೋದು ಗಮನಾರ್ಹ.
ದೂರು ಪ್ರತಿದೂರು ದಾಖಲು
ಗಲಾಟೆ ಬೆನ್ನಲ್ಲೇ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ನೀಡಿದ ದೂರಿನ ಮೇರೆಗೆ ನಟ ಧನ್ವೀರ್ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು. ಇದಕ್ಕೆ ಪ್ರತಿಯಾಗಿ ಧನ್ವೀರ್ ತಂದೆ ತಿಮ್ಮೇಗೌಡ ಕೂಡ ವಿಜಯಲಕ್ಷ್ಮಿ ವಿರುದ್ಧ ರಾಜಾಜಿನಗರ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿ, ಪ್ರಕರಣಕ್ಕೆ ಟ್ವಿಸ್ಟ್ ನೀಡಿದರು. ಇದರ ಮಧ್ಯೆ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ನಟ ಜೈದ್ ಖಾನ್ ಹೆಸರು ಈ ಪ್ರಕರಣದಲ್ಲಿ ತಳುಕುಹಾಕಿಕೊಂಡು ವಿವಾದಕ್ಕೆ ಹೊಸ ತಿರುವು ನೀಡಿತ್ತು.
ಒಟ್ಟಾರೆಯಾಗಿ.. ಜೈಲಿನಲ್ಲಿದ್ದರೂ ತಮ್ಮ ಕುಟುಂಬದ ಮಾನ-ಮರ್ಯಾದೆ ಹಾಗೂ ಆಂತರಿಕ ವಿಚಾರಗಳಲ್ಲಿ ದರ್ಶನ್ ಎಷ್ಟು ಎಚ್ಚರಿಕೆಯಿಂದಿದ್ದಾರೆ ಎಂಬುದಕ್ಕೆ ಈ ಬೆಳವಣಿಗೆ ಸ್ಪಷ್ಟ ಸಾಕ್ಷಿಯಾಗಿದೆ. ಸದ್ಯ ಕಾನೂನು ಸಮರ ಶುರುವಾಗಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ನಟ ಧನ್ವೀರ್ ಅವರ ನಡೆ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.