ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಪಡೆಯುವ ಮೂಲಕ ಅಫ್ಘಾನಿಸ್ತಾನದ ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದು ವಿಶ್ವ ದಾಖಲೆ ಬರೆದದ್ದಾರೆ. ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ, ಜಿಂಬಾಬ್ವೆಯ ಆಟಗಾರ ತಡಿವಾನಾಶೆ ಮರುಮಾನಿ ಅವರನ್ನು ಔಟ್ ಮಾಡುವ ಮೂಲಕ ರಶೀದ್ ಖಾನ್ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಪಡೆದ ವಿಶ್ವದ ಮೊದಲ ಮತ್ತು ಏಕೈಕ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ತಮ್ಮ ಹೆಸರನ್ನು ಮುದ್ರಿಸಿದ್ದಾರೆ.
ಗಮನಾರ್ಹವಾಗಿ, ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೂ ಯಾವುದೇ ಬೌಲರ್ ಈ ದಾಖಲೆಯನ್ನು ಬರೆದಿಲ್ಲ. ಇಂಗ್ಲೆಂಡ್‌ನ ಲೆಗ್ ಸ್ಪಿನ್ನರ್ ಆದಿಲ್ ರಶೀದ್ 171 ವಿಕೆಟ್‌ಗಳೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
2015 ರಲ್ಲಿ ಜಿಂಬಾಬ್ವೆ ವಿರುದ್ಧವೇ ತಮ್ಮ ಚೊಚ್ಚಲ ಪಂಡ್ಯ ಆಡಿದ್ದ ರಶೀದ್ ಖಾನ್:
ಅಫ್ಘಾನಿಸ್ತಾನದ ಸ್ಟಾರ್ ಲೆಗ್ ಸ್ಪಿನ್ನರ್ ಆಗಿರುವ ರಶೀದ್ ಖಾನ್ 2015 ರ ಅಕ್ಟೋಬರ್‌ನಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಟಿ20 ಅಂತರರಾಷ್ಟ್ರೀಯ ಪಂದ್ಯದ ಮೂಲಕ ಟಿ20ಐ ಕ್ರಿಕೆಟ್‌ಗೆ ಚೊಚ್ಚಲ ಪ್ರವೇಶ ಮಾಡಿದ್ದರು.
ಇದಕ್ಕೂ ಮೊದಲು ಅದೇ ವರ್ಷ ಎಂದರೆ 2015 ಸೆಪ್ಟೆಂಬರ್‌ನಲ್ಲಿ, ಶಾರ್ಜಾದಲ್ಲಿ ಯುಎಇ ವಿರುದ್ಧ ನಡೆದ ತ್ರಿಕೋನ ಸರಣಿಯ ಸಮಯದಲ್ಲಿ, ರಶೀದ್ ಖಾನ್ ನ್ಯೂಜಿಲೆಂಡ್‌ನ ಟಿಮ್ ಸೌಥಿಯವರನ್ನು ಹಿಂದಿಕ್ಕಿ ಪುರುಷರ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
200 ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್:
ರಶೀದ್ ಖಾನ್ ತಮ್ಮ 120ನೇ ಟಿ20ಐ ಪಂದ್ಯದಲ್ಲಿ 200 ವಿಕೆಟ್‌ಗಳನ್ನು ಪೂರೈಸಿದ್ದಾರೆ. ಈ ಐತಿಹಾಸಿಕ ವೃತ್ತಿಜೀವನದಲ್ಲಿ ರಶೀದ್ ಖಾನ್ ಎರಡು ಬಾರಿ ಐದು ವಿಕೆಟ್‌ಗಳನ್ನು ಕಬಳಿಸಿದ್ದರೆ, ಇಂಗ್ಲೆಂಡ್‌ನ ಆದಿಲ್ ರಶೀದ್ ಟಿ20ಐಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆದಿಲ್ ರಶೀದ್ 153 ಪಂದ್ಯಗಳಲ್ಲಿ 171 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಲ್ಲಿಯವರೆಗೆ, ಕೇವಲ ಎಂಟು ಬೌಲರ್‌ಗಳು ಮಾತ್ರ ಟಿ20ಐ ಕ್ರಿಕೆಟ್‌ನಲ್ಲಿ 150 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ ಎಂಬುದು ಗಮನಾರ್ಹವಾಗಿದೆ.
ಟಿ20ಐಗಳಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಸ್ಟಾರ್ ಆಟಗಾರರು:
* 200 ವಿಕೆಟ್‌ಗಳು - ರಶೀದ್ ಖಾನ್ (ಅಫ್ಘಾನಿಸ್ತಾನ)
* 173 ವಿಕೆಟ್‌ಗಳು - ಆದಿಲ್ ರಶೀದ್ (ಇಂಗ್ಲೆಂಡ್)
* 165 ವಿಕೆಟ್‌ಗಳು - ಇಶ್ ಸೋಧಿ (ನ್ಯೂಜಿಲೆಂಡ್)
* 164 ವಿಕೆಟ್‌ಗಳು - ಟಿಮ್ ಸೌಥಿ (ನ್ಯೂಜಿಲೆಂಡ್)
* 163 ವಿಕೆಟ್ - ವನಿಂದು ಹಸರಂಗಾ (ಶ್ರೀಲಂಕಾ)
ಒಟ್ಟಾರೆ ಟಿ20ಐಗಳಲ್ಲಿ ರಶೀದ್ ಖಾನ್ ವಿಶ್ವ ದಾಖಲೆಗಳು ಏನು?
ಒಟ್ಟಾರೆ ಟಿ20 ವೃತ್ತಿಜೀವನದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವ ದಾಖಲೆಯೂ ರಶೀದ್ ಖಾನ್ ಅವರ ಹೆಸರಿನಲ್ಲಿದೆ. ರಶೀದ್ ತಮ್ಮ ಟಿ20 ವೃತ್ತಿಜೀವನದಲ್ಲಿ 551 ಪಂದ್ಯಗಳನ್ನು ಆಡಿದ್ದು, 742 ವಿಕೆಟ್‌ಗಳನ್ನು ಪಡೆದಿದ್ದಾರೆ. ವಿಶ್ವದ ಯಾವುದೇ ಬೌಲರ್ ಟಿ20ಯಲ್ಲಿ 700 ವಿಕೆಟ್‌ಗಳ ಗಡಿಯನ್ನು ತಲುಪಿಲ್ಲ. 658 ವಿಕೆಟ್‌ಗಳನ್ನು ಪಡೆದಿರುವ ಸುನಿಲ್ ನರೈನ್ ಎರಡನೇ ಸ್ಥಾನದಲ್ಲಿದ್ದರೆ, ಡ್ವೇನ್ ಬ್ರಾವೋ 631 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಜಿಂಬಾಬ್ವೆ ತಂಡವು 222 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿತ್ತು. ಈ ಇನ್ನಿಂಗ್ಸ್‌ನಲ್ಲಿ, ರಶೀದ್ ಖಾನ್ ತಡಿವಾನಾಶೆ ಮರುಮಾನಿ ಅವರನ್ನು ಔಟ್ ಮಾಡುವ ಮೂಲಕ ತಮ್ಮ 200 ನೇ ವಿಕೆಟ್ ಪಡೆದರು. ಅವರು ತಮ್ಮ ನಾಲ್ಕು ಓವರ್‌ಗಳ ಅವಧಿಯಲ್ಲಿ 29 ರನ್‌ಗಳಿಗೆ ಒಂದು ವಿಕೆಟ್ ಪಡೆದರು. ಇದಕ್ಕೂ ಮೊದಲು, ರಶೀದ್ ಕೇವಲ ಆರು ಎಸೆತಗಳಲ್ಲಿ 25 ರನ್‌ಗಳನ್ನು ಗಳಿಸುವ ಮೂಲಕ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.