SOCIAL MEDIA

Newsletter

PARTNER SITES
Select Language Select State

UP Polls: ನಿರುದ್ಯೋಗಿಗಳಿಗೆ ₹5,000 ಭತ್ಯೆ, 25 ಲಕ್ಷ ಉದ್ಯೋಗದ ಭರವಸೆ! ಪ್ರತ್ಯೇಕ ಪ್ರಣಾಳಿಕೆಯಿಂದ SP-Congress ಮೈತ್ರಿಯಲ್ಲಿ ಬಿರುಕು?

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ತನ್ನ ಪ್ರಣಾಳಿಕೆಯಲ್ಲಿ ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ₹5,000 ಭತ್ಯೆ ಹಾಗೂ ಐದು ವರ್ಷಗಳಲ್ಲಿ 27 ಲಕ್ಷ ಸರ್ಕಾರಿ ಉದ್ಯೋಗಗಳ ಭರವಸೆ ನೀಡಿದೆ. ಉಚಿತ ಶಿಕ್ಷಣ, ಶಿಕ್ಷಾ ಮಿತ್ರರಿಗೆ ಖಾಯಂ ಉದ್ಯೋಗ ಸೇರಿದಂತೆ ಹಲವು ಘೋಷಣೆಗಳನ್ನ ಮಾಡಿದೆ. ಆದರೆ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿರುವಾಗಲೇ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿರುವುದು ಮೈತ್ರಿಕೂಟದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

Written By Puttaraj K Alur
Published: Nov 26, 2026, 18:52 IST | Updated: Nov 26, 2026, 19:10 IST
Image Credit: SP Manifesto 2027
Join

SP Manifesto 2027: ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ಸಿದ್ಧತೆ ಜೋರಾಗಿದ್ದು, ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಅಖಿಲೇಶ್ ಯಾದವ್ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆ ಈಗ ಗಮನ ಸೆಳೆದಿದೆ. ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು ₹5,000 ಭತ್ಯೆ, ಐದು ವರ್ಷಗಳಲ್ಲಿ 25 ಲಕ್ಷ ಸರ್ಕಾರಿ ಉದ್ಯೋಗಗಳ ಸೃಷ್ಟಿ ಸೇರಿದಂತೆ ಯುವಜನರು, ರೈತರು, ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳನ್ನ ಗಮನದಲ್ಲಿಟ್ಟುಕೊಂಡು ಹಲವು ಭರವಸೆಗಳನ್ನ ಘೋಷಿಸಲಾಗಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಜೊತೆಗಿನ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿರುವಾಗಲೇ ಸಮಾಜವಾದಿ ಪಕ್ಷ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿರುವುದು ಮೈತ್ರಿಕೂಟದೊಳಗಿನ ಅಸಮಾಧಾನಕ್ಕೂ ಕಾರಣವಾಗಿದೆ.

27 ಲಕ್ಷ ಸರ್ಕಾರಿ ಉದ್ಯೋಗಗಳ ಸೃಷ್ಟಿಯ ಭರವಸೆ

ಅಖಿಲೇಶ್ ಯಾದವ್ ಬಿಡುಗಡೆ ಮಾಡಿರುವ ಪ್ರಣಾಳಿಕೆಗೆ 'ಜನ್-ಮನ್ ಕಾ ಪ್ರಣಾಳಿಕೆ' ಹಾಗೂ 'ಪಿಡಿಎ ಕಾ ಪ್ರಾಣ್ ಪತ್ರ' ಎಂಬ ಶೀರ್ಷಿಕೆ ನೀಡಲಾಗಿದೆ. 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿರುವ ಈ ಪ್ರಣಾಳಿಕೆಯಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ 27 ಲಕ್ಷ ಸರ್ಕಾರಿ ಉದ್ಯೋಗಗಳನ್ನ ಭರ್ತಿ ಮಾಡುವುದಾಗಿ ಸಮಾಜವಾದಿ ಪಕ್ಷ ಭರವಸೆ ನೀಡಿದೆ. ಇದರೊಂದಿಗೆ ಉದ್ಯೋಗವಿಲ್ಲದೆ ಇರುವ ಪದವೀಧರರಿಗೆ ಪ್ರತಿ ತಿಂಗಳು ₹5,000 ನಿರುದ್ಯೋಗ ಭತ್ಯೆ ನೀಡುವ ಪ್ರಸ್ತಾಪವನ್ನೂ ಮುಂದಿಟ್ಟಿದೆ. ಉದ್ಯೋಗ ದೊರೆಯುವವರೆಗೆ ನಿರುದ್ಯೋಗಿ ಪದವೀಧರರಿಗೆ ಈ ಆರ್ಥಿಕ ನೆರವು ಒದಗಿಸುವುದಾಗಿ ಪಕ್ಷ ತಿಳಿಸಿದೆ.

ಯುವಜನರ ಉದ್ಯೋಗ ಮತ್ತು ಭವಿಷ್ಯವನ್ನ ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆಯಲ್ಲಿ ಹಲವು ಭರವಸೆಗಳನ್ನ ಸೇರಿಸಲಾಗಿದೆ. ಶಿಕ್ಷಣ ಕ್ಷೇತ್ರಕ್ಕೂ ವಿಶೇಷ ಆದ್ಯತೆ ನೀಡಲಾಗಿದ್ದು, ಉಚಿತ ಶಾಲಾ ಶಿಕ್ಷಣದ ಭರವಸೆ ನೀಡಲಾಗಿದೆ. ಮುಚ್ಚಲ್ಪಟ್ಟಿರುವ ಪ್ರಾಥಮಿಕ ಶಾಲೆಗಳನ್ನ ಮತ್ತೆ ಆರಂಭಿಸುವುದಾಗಿ ತಿಳಿಸಲಾಗಿದೆ. ಅಲ್ಲದೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಾ ಮಿತ್ರರ ವೇತನ ಹೆಚ್ಚಳ ಮತ್ತು ಅವರಿಗೆ ಖಾಯಂ ಉದ್ಯೋಗ ಕಲ್ಪಿಸುವ ಭರವಸೆಯನ್ನೂ ನೀಡಲಾಗಿದೆ.

ಮಹಿಳೆಯರು, ರೈತರು ಮತ್ತು ಹಿಂದುಳಿದ ವರ್ಗಗಳಿಗೂ ಆದ್ಯತೆ

ಸಮಾಜವಾದಿ ಪಕ್ಷದ ಈ ಪ್ರಣಾಳಿಕೆ ಕೇವಲ ಉದ್ಯೋಗ ಮತ್ತು ಶಿಕ್ಷಣಕ್ಕೆ ಸೀಮಿತವಾಗಿಲ್ಲ. ಮಹಿಳೆಯರು, ರೈತರು ಹಾಗೂ ಹಿಂದುಳಿದ ಸಮುದಾಯಗಳ ಸಮಸ್ಯೆಗಳಿಗೂ ಆದ್ಯತೆ ನೀಡಲಾಗಿದೆ. ಪಕ್ಷದ ಪಿಡಿಎ (PDA) ಕಾರ್ಯತಂತ್ರವು ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನ ಒಳಗೊಂಡಿದೆ. ಈ ಸಮುದಾಯಗಳತ್ತ ಗಮನಹರಿಸುವ ಉದ್ದೇಶವನ್ನ ಪ್ರಣಾಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೂ ಹಲವು ಭರವಸೆಗಳನ್ನ ನೀಡಲಾಗಿದೆ. ಹಳ್ಳಿಗಳಲ್ಲಿ ವೈ-ಫೈ ಸಂಪರ್ಕ, ಬೀದಿ ದೀಪಗಳು, ನಿರಂತರ ವಿದ್ಯುತ್ ಸೌಲಭ್ಯ ಹಾಗೂ ಸುಸಜ್ಜಿತ ರಸ್ತೆಗಳನ್ನು ಒದಗಿಸುವ ಮೂಲಕ ಹೊಸ ಮಾದರಿಯ ಗ್ರಾಮಗಳನ್ನ ನಿರ್ಮಿಸುವುದಾಗಿ ಸಮಾಜವಾದಿ ಪಕ್ಷ ಹೇಳಿದೆ.

ಈ ಮೂಲಕ ಯುವಜನರು, ಮಹಿಳೆಯರು, ರೈತರು, ಶಿಕ್ಷಣ ಕ್ಷೇತ್ರ ಮತ್ತು ಹಿಂದುಳಿದ ಸಮುದಾಯಗಳನ್ನ ಒಳಗೊಂಡಂತೆ ವಿವಿಧ ವರ್ಗಗಳನ್ನ ಪ್ರಣಾಳಿಕೆಯ ವ್ಯಾಪ್ತಿಗೆ ತರಲಾಗಿದೆ. ಸಂವಿಧಾನ ದಿನದಂದೇ ಅಖಿಲೇಶ್ ಯಾದವ್ ಪ್ರಣಾಳಿಕೆ ಬಿಡುಗಡೆ ಮಾಡಿರುವುದು ಮತ್ತೊಂದು ವಿಶೇಷವಾಗಿದೆ. ಈ ಸಂದರ್ಭದಲ್ಲಿ ಅವರು ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಅಚ್ಛೇ ದಿನ್ ಆಯೇ ನಹೀಂ, ಬುರೇ ದಿನ್ ಜಾನೇ ವಾಲೇ ಹೈ (ಒಳ್ಳೆಯ ದಿನಗಳು ಬರಲಿಲ್ಲ, ಕೆಟ್ಟ ದಿನಗಳು ಕೊನೆಗೊಳ್ಳಲಿವೆ) ಎಂದು ಹೇಳುವ ಮೂಲಕ ಬಿಜೆಪಿ ನೀಡಿದ್ದ 'ಅಚ್ಛೇ ದಿನ್ ಆಯೇಂಗೆ' ಘೋಷಣೆಯನ್ನ ಉಲ್ಲೇಖಿಸಿ ಟೀಕಿಸಿದ್ದಾರೆ.

ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆಗೆ ಕಾಂಗ್ರೆಸ್ ಅಸಮಾಧಾನ

 

 ಒಂದೆಡೆ ಅಖಿಲೇಶ್ ಯಾದವ್ ಚುನಾವಣಾ ಭರವಸೆಗಳ ಮೂಲಕ ಮತದಾರರನ್ನ ಸೆಳೆಯಲು ಮುಂದಾಗಿದ್ದರೆ, ಮತ್ತೊಂದೆಡೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಮಾತುಕತೆಯಲ್ಲಿ ಅಸಮಾಧಾನ ಹೆಚ್ಚಾಗಿದೆ. 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವೆ ಕ್ಷೇತ್ರ ಹಂಚಿಕೆ ಮಾತುಕತೆ ಇನ್ನೂ ಅಂತಿಮಗೊಂಡಿಲ್ಲ. ಇಂತಹ ಸಂದರ್ಭದಲ್ಲಿ ಸಮಾಜವಾದಿ ಪಕ್ಷ ಪ್ರತ್ಯೇಕವಾಗಿ ತನ್ನ ಚುನಾವಣಾ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿರುವುದು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

 

ಉತ್ತರ ಪ್ರದೇಶ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಅವರು ಎಸ್‌ಪಿಯ ನಿರ್ಧಾರದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡು ಪಕ್ಷಗಳ ನಡುವೆ ಸೀಟು ಹಂಚಿಕೆ ಕುರಿತು ಮಾತುಕತೆಗಳು ನಡೆಯುತ್ತಿರುವಾಗ ಪ್ರತ್ಯೇಕವಾಗಿ ಪ್ರಣಾಳಿಕೆ ಬಿಡುಗಡೆ ಮಾಡುವ ಅಥವಾ ಕ್ಷೇತ್ರಗಳ ಘೋಷಣೆ ಮಾಡುವ ಆತುರ ಏನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ. ಸೀಟು ಹಂಚಿಕೆ ವಿಚಾರದಲ್ಲಿ ಇನ್ನೂ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ಹೀಗಿರುವಾಗ ಎರಡೂ ಪಕ್ಷಗಳು ಪರಸ್ಪರ ಸಮಾಲೋಚನೆ ನಡೆಸಿ ಒಪ್ಪಂದದ ಮೂಲಕ ನಿರ್ಧಾರ ಕೈಗೊಳ್ಳಬೇಕಿತ್ತು ಅಂತಾ ಹೇಳಿದ್ದಾರೆ. ಆದರೆ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಆರಾಧನಾ ಮಿಶ್ರಾ ಮೋನಾ ಅವರು ಈ ವಿಚಾರದಲ್ಲಿ ವಿಭಿನ್ನ ನಿಲುವು ವ್ಯಕ್ತಪಡಿಸಿದ್ದಾರೆ. ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ತನ್ನದೇ ಆದ ಪ್ರಣಾಳಿಕೆಯನ್ನ ಬಿಡುಗಡೆ ಮಾಡುವ ಹಕ್ಕಿದೆ. ಸಮಾಜವಾದಿ ಪಕ್ಷವೂ ಅದನ್ನೇ ಮಾಡಿದೆ. ಇದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಮೈತ್ರಿಯಲ್ಲಿ ಸಮನ್ವಯದ ಕೊರತೆ ಬಗ್ಗೆ ಪ್ರಶ್ನೆ

ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಕೂಡ ಸಮಾಜವಾದಿ ಪಕ್ಷದ ನಡೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಮೈತ್ರಿಕೂಟದ ಪಕ್ಷಗಳು ಸಾಮಾನ್ಯವಾಗಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಪ್ರಮುಖ ಘೋಷಣೆಗಳನ್ನ ಒಟ್ಟಿಗೆ ಮಾಡುತ್ತವೆ. ಆದರೆ ಎಸ್‌ಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿ ಮತ್ತು ಪ್ರಣಾಳಿಕೆ ಆ ಪಕ್ಷಕ್ಕೆ ಮಾತ್ರ ಸಂಬಂಧಿಸಿದಂತಿವೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಸಮಾಜವಾದಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ಗೆ ಆಹ್ವಾನ ನೀಡಲಾಗಿತ್ತೇ ಎಂಬುದೂ ತಮಗೆ ತಿಳಿದಿಲ್ಲವೆಂದು ಅವರು ಹೇಳಿದ್ದಾರೆ. ಬಿಡುಗಡೆಯಾದ ಪ್ರಣಾಳಿಕೆ ಮೈತ್ರಿಕೂಟವನ್ನ ಪ್ರತಿನಿಧಿಸುತ್ತದೆಯೇ ಅಥವಾ ಸಮಾಜವಾದಿ ಪಕ್ಷಕ್ಕೆ ಮಾತ್ರ ಸೀಮಿತವೇ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲವೆಂದು ತಿಳಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಕೂಡ ತನ್ನದೇ ಆದ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸುತ್ತಿದೆ ಎಂದು ರಾಜೇಂದ್ರ ಪಾಲ್ ಗೌತಮ್ ಹೇಳಿದ್ದಾರೆ. ರೈತರು, ಯುವಕರು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರು ಸೇರಿದಂತೆ ಸಮಾಜದ ವಿವಿಧ ವರ್ಗಗಳೊಂದಿಗೆ ಚರ್ಚೆ ನಡೆಸಿ ಅವರ ಸಮಸ್ಯೆ ಹಾಗೂ ಬೇಡಿಕೆಗಳನ್ನ ತಿಳಿದುಕೊಂಡು ಪ್ರಣಾಳಿಕೆಯ ಕರಡು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ 'ಇಂಡಿಯಾ' ಮೈತ್ರಿಕೂಟದ ಮಾತುಕತೆಗಳು ಪೂರ್ಣಗೊಳ್ಳುವವರೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಲು ಕಾಯುತ್ತಿದೆ.

ಉತ್ತರ ಪ್ರದೇಶದಲ್ಲಿ ಮೈತ್ರಿ ಅಂತಿಮಗೊಂಡರೆ ಎರಡೂ ಪಕ್ಷಗಳು ಜಂಟಿಯಾಗಿ ಪ್ರಣಾಳಿಕೆ ಬಿಡುಗಡೆ ಮಾಡಲಿವೆ. ಒಂದು ವೇಳೆ ಮೈತ್ರಿ ಸಾಧ್ಯವಾಗದಿದ್ದರೆ ಕಾಂಗ್ರೆಸ್ ತನ್ನ ಸಿದ್ಧಪಡಿಸಿರುವ ಕರಡನ್ನೇ ಬಿಡುಗಡೆ ಮಾಡಲಿದೆ ಎಂದು ಗೌತಮ್ ಸ್ಪಷ್ಟಪಡಿಸಿದ್ದಾರೆ. ಉಭಯ ಪಕ್ಷಗಳ ನಾಯಕರು ಪರಸ್ಪರ ಟೀಕೆ-ಟಿಪ್ಪಣಿಗಳನ್ನ ಮಾಡದೆ ಸಂಯಮದಿಂದ ವರ್ತಿಸಬೇಕು. ಇಂತಹ ಹೇಳಿಕೆಗಳು ಮೈತ್ರಿ ಮಾತುಕತೆ ಹಾಗೂ ಪಕ್ಷಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರಬಾರದು ಎಂದು ಅವರು ಮನವಿ ಮಾಡಿದ್ದಾರೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES