ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ 56 ವರ್ಷದ ವ್ಯಕ್ತಿ ಬಲಿ? ಆಸ್ಪತ್ರೆ ಮುಂಭಾಗದಲ್ಲೇ ಸಾವು
ಕುಟುಂಬಸ್ಥರು ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಇಂದು ಮುಂಜಾನೆ ಮತ್ತೆ ಅವರ ಕೈ ನಡುಗಲು ಆರಂಭಿಸಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ತಡಮಾಡದೆ ಖಾಸಗಿ ಓಮಿನಿ ವಾಹನದಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಕರೆತಂದಿದ್ದರು.
ಶಿವಮೊಗ್ಗ: ಜಿಲ್ಲೆಯ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯದ ಆರೋಪ ಕೇಳಿಬಂದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ 56 ವರ್ಷದ ವ್ಯಕ್ತಿಯೊಬ್ಬರು ಆಸ್ಪತ್ರೆಯ ಮುಂಭಾಗದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ತುರ್ತು ಸಂದರ್ಭದಲ್ಲಿ ಸ್ಟ್ರೆಚರ್ ಅಥವಾ ವೀಲ್‌ಚೇರ್ ವ್ಯವಸ್ಥೆ ಮಾಡದ ಕಾರಣ ಅರ್ಧ ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತರನ್ನು ಶಿವಮೊಗ್ಗ ಜಿಲ್ಲೆಯ ಮುದುವಾಲ ಗ್ರಾಮದ ನಿವಾಸಿ ಕರಿಬಸಪ್ಪ (56) ಎಂದು ಗುರುತಿಸಲಾಗಿದೆ. ಸುಮಾರು ಒಂದು ವರ್ಷದ ಹಿಂದೆ ಕರಿಬಸಪ್ಪ ಅವರಿಗೆ ಸ್ಟ್ರೋಕ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಇಂದು ಮುಂಜಾನೆ ಮತ್ತೆ ಅವರ ಕೈ ನಡುಗಲು ಆರಂಭಿಸಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ತಡಮಾಡದೆ ಖಾಸಗಿ ಓಮಿನಿ ವಾಹನದಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಕರೆತಂದಿದ್ದರು.
ಆದರೆ, ಆಸ್ಪತ್ರೆಗೆ ಬಂದ ಬಳಿಕ ಕರಿಬಸಪ್ಪ ಅವರನ್ನು ಒಳಗೆ ಕರೆದೊಯ್ಯಲು ಸ್ಟ್ರೆಚರ್ ಅಥವಾ ವೀಲ್‌ಚೇರ್ ಲಭ್ಯವಿರಲಿಲ್ಲ ಎನ್ನಲಾಗಿದೆ. ಸುಮಾರು ಅರ್ಧ ಗಂಟೆ ಕಳೆದರೂ ಅಗತ್ಯ ವ್ಯವಸ್ಥೆ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರೇ ಅವರನ್ನು ಕೈಯಲ್ಲಿ ಎತ್ತಿಕೊಂಡು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಈ ವೇಳೆ, ಕೈಯಲ್ಲಿ ಎತ್ತಿಕೊಂಡು ಹೋಗಲು ಅವಕಾಶವಿಲ್ಲ ಎಂದು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ತಡೆದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕರಿಬಸಪ್ಪ ಅವರು ಆಸ್ಪತ್ರೆಯ ಮುಂಭಾಗದಲ್ಲೇ ಮೃತಪಟ್ಟಿದ್ದಾರೆ. ತುರ್ತು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಗೆ ಸಕಾಲದಲ್ಲಿ ಅಗತ್ಯ ನೆರವು ಸಿಗಲಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯಿಂದ ಕೋಪಗೊಂಡ ಮೃತರ ಕುಟುಂಬಸ್ಥರು ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಜೀವ ಉಳಿಸಿಕೊಳ್ಳಲು ಆಸ್ಪತ್ರೆಗೆ ಬಂದರೆ ಜೀವವನ್ನೇ ತೆಗೆದಿದ್ದೀರಾ’ ಎಂದು ಕಿಡಿಕಾರಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.