ವಿರೋಧದ ನಡುವೆಯೂ ಕೆಆರ್ಎಸ್ನಲ್ಲಿ ಕಾವೇರಿ ಆರತಿ... ಮಂಡ್ಯ ರೈತರ ತೀವ್ರ ವಿರೋಧ
ಕೆಆರ್ಎಸ್ನಲ್ಲಿ ಕಾವೇರಿ ಆರತಿಗೆ ಸಿದ್ಧತೆ ನಡೆಸಿರುವ ರಾಜ್ಯ ಸರ್ಕಾರದ ವಿರುದ್ದ ಅನ್ನದಾತರು ಆಕ್ರೋಶ ಹೊರಹಾಕಿದ್ದಾರೆ.
ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ದಸರಾ ಅಂಗವಾಗಿ ಕೆಆರ್ಎಸ್ನಲ್ಲಿ ʼಕಾವೇರಿ ಆರತಿʼ ಮಾಡಲು ಸಜ್ಜಾಗಿರುವುದಕ್ಕೆ ಮಂಡ್ಯ ರೈತರು ಹಾಗೂ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಮಂಡ್ಯದಲ್ಲಿ ಇಂದು ಪ್ರತಿಭಟನೆ ನಡೆಸಿದ ಅನ್ನದಾರು ಹಾಗೂ ಕನ್ನಡಪರ ಸಂಘಟನೆಗಳು ಕಪ್ಪು ಪಟ್ಟಿ ಕಟ್ಟಿ ಕಾವೇರಿ ಪ್ರತಿಮೆ ಬಳಿ ಕುಳಿತು ಪ್ರತಿಭಟನೆ ನಡೆಸಿದರು.
ಮಂಡ್ಯದ ಡಿಸಿ ಕಚೇರಿ ಎದುರಿನ ಕಾವೇರಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ರೈತರು, ಬಳಿಕ ಹಳೆ ಬೆಂ-ಮೈ ಹೆದ್ದಾರಿ ತಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ದಸರಾ ಅಂಗವಾಗಿ ನಾಳೆಯಿಂದ (ಅ.16) ಕೃಷ್ಣ ರಾಜ ಸಾಗರ ಎಂದರೆ ಕೆಆರ್ಎಸ್ ನಲ್ಲಿ ಕಾವೇರಿ ಆರತಿ ಮಾಡಲು ಹೊರಟಿರುವ ಸರ್ಕಾರದ ನಡೆಯ ವಿರುದ್ಧ ತೀವ್ರ ಆಕ್ರೋಶದ ಮಾತುಗಳನ್ನಾಡಿದ ಮಂಡ್ಯದ ಅನ್ನದಾತರು ಹಾಗೂ ಕನ್ನಡಪರ ಸಂಘಟನೆಗಳು ಕೆಆರ್ಎಸ್ನಲ್ಲಿ ಯಾವುದೇ ಕಾರಣಕ್ಕೂ ʼಕಾವೇರಿ ಆರತಿʼ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಕೋರ್ಟ್ ನಲ್ಲಿ ಮಧ್ಯಂತರ ಆದೇಶ ಇದ್ದರೂ ಕೆಆರ್ಎಸ್ನಲ್ಲಿ ಕಾವೇರಿ ಆರತಿಗೆ ಸರ್ಕಾರ ಹಠ ಬಿದ್ದಿದೆ ಎಂದು ರೈತರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ತಕ್ಷಣವೇ ಕಾವೇರಿ ಆರತಿ ನಿಲ್ಲಿಸುವಂತೆ ಆಗ್ರಹ:
ಭೀಕರ ಬರಗಾಲದ ಸಂದರ್ಭದಲ್ಲಿ ಮೋಜು ಮಸ್ತಿಗಾಗಿ ಕಾವೇರಿ ಆರತಿ ಮಾಡ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡಲೇ ಈ ಕಾವೇರಿ ಆರತಿ ಸ್ಥಗಿತಗೊಳಸಿ, ಕನ್ನಂಬಾಡಿ ಅಣೆಕಟ್ಟನ್ನು ಉಳಿಸಬೇಕು ಎಂದು ಆಗ್ರಹಿಸಿದ್ದಾರೆ. ಇದರ ಜೊತೆಗೆ ಮೌಢ್ಯ ಬಿತ್ತುವ ಬದಲು ಅಭಿವೃದ್ಧಿ ಕೆಲಸ ಮಾಡುವಂತೆ ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ರೈತರಿಗೆ ಭಿಕ್ಷೆಯಂತೆ ಪರಿಹಾರ... ಮೋಜು ಮಸ್ತಿಗೆ ಕೋಟ್ಯಾಂತರ ರೂ. ವ್ಯರ್ಥ:
ಕೋಟ್ಯಾಂತರ ರೂ. ಖರ್ಚು ಮಾಡಿ ಕಾವೇರಿ ಆರತಿ ಮಾಡುವುದು ಸರಿಯಲ್ಲ. ಕನ್ನಂಬಾಡಿ ಕಟ್ಟೆಯಲ್ಲಿ ನೀರೇ ಇಲ್ಲ. ಇದು ತಮಿಳುನಾಡಿಗೆ ನೀರು ಬಿಡುವ ಹುನ್ನಾರ. ರೈತರಿಗೆ ಭಿಕ್ಷೆಯಂತೆ ಪರಿಹಾರ ಕೊಟ್ಟು ಇವರ ಮೋಜು ಮಸ್ತಿಗೆ ಕೋಟ್ಯಾಂತರ ರೂ. ಖರ್ಚು ಮಾಡ್ತಾರೆ ಎಂದು ಮಂಡ್ಯ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕನ್ನಡಪರ ಹೋರಾಟಗಾರ ನಾಗಣ್ಣಗೌಡರು ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರ ನಿಜಕ್ಕೂ ರೈತರ ಪಾಲಿಗೆ ರಣಹದ್ದುಗಳೇ ಆಗಿದ್ದಾರೆ. ಕಾವೇರಿ ಆರತಿ ಮಾಡಬಾರದು ಎಂದು ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಸಹ ಹಿಂಬಾಗಿಲ ಮೂಲಕ ಇಂದು ಕಾವೇರಿ ಆರತಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಕೆಆರ್ಎಸ್ ಅಣೆಕಟ್ಟೆಯಲ್ಲಿ ನೂರು ಅಡಿಗೆ ನೀರು ಕುಸಿದಿದೆ. ರೈತರು ಬೆಳೆದಿರುವ ಬೆಳೆಗೆ ನೀರಿಲ್ಲ. ಪ್ರತಿನಿತ್ಯ ತಮಿಳುನಾಡಿನ ಕಿರುಕುಳ ನಡೆಯುತ್ತಿದೆ. ಇದ್ಯಾವುದಕ್ಕೂ ನ್ಯಾಯ ಕೊಡಿಸಲು ಆಗದಿರುವ ರಾಜ್ಯ ಸರ್ಕಾರ ಈಗ ಕಾವೇರಿ ಆರತಿ ಮಾಡಲು ಹೊರಟಿದ್ದಾರೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ತಮ್ಮ ಜಿಲ್ಲೆಯ ಸಚಿವರುಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ನಾಯಕಿ ಸುನಂದಾ ಜಯರಾಮ್, ಜೈ ಕರ್ನಾಟಕ ಪರಿಷತ್ತ್ ರಾಜ್ಯಾಧ್ಯಕ್ಷ ನಾರಾಯಣ್, ಕನ್ನಡ ಸೇನೆ ಜಿಲ್ಲಾದ್ಯಕ್ಷ ಮಂಜುನಾಥ್, ನಾಗಣ್ಣಗೌಡ, ಸೇರಿದಂತೆ ಹಲವು ರೈತರು ಭಾಗಿ ಆಗಿದ್ದರು.