ಬೆಂಗಳೂರು : ಬ್ಲಾಕ್ ಮೇಲ್ ಮಾಡೋರಿಗೆ ರಕ್ಷಣೆ ಕೊಡುವುದಕ್ಕೆ ಹಾಗೂ ಇಷ್ಟ ಬಂದವರನ್ನೆಲ್ಲ ಕರೆಸಿ, ವಿಚಾರಣೆ ನಡೆಸುವುದಕ್ಕೆ ಗೃಹ ಇಲಾಖೆ ಏನು ನಿಮ್ಮ ಅಪ್ಪ ನಿಮಗೆ ಕೊಟ್ಟ ಬಳುವಳಿ ಅಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದೆ ವೇಳೆ ತಮ್ಮ ಹೇಳಿಕೆಗೆ ದರ್ಪದಿಂದ ಉತ್ತರ ಕೊಟ್ಟಿದ್ದ ಪ್ರಿಯಾಂಕ್ ಖರ್ಗೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಾಚಿಕೆ ಇಲ್ಲದೆ ಬ್ಲಾಕ್ ಮೇಲ್ ಮಾಡುವ ದುಷ್ಟರಿಗೆ ರಕ್ಷಣೆ ಕೊಡುತ್ತೀರಿ. ಅದನ್ನು ಪ್ರಶ್ನಿಸಿದ ಕುಮಾರಸ್ವಾಮಿಯನ್ನು ವಿಚಾರಣೆಗೆ ಕರೆಯುತ್ತಾರೆ ಅಂತೆ. ನಾನೇನು ನಿಮ್ಮಪ್ಪನ ಗಂಟು ತಿಂದಿದ್ದೀನಾ? ರಾಜ್ಯದ ಮುಖ್ಯಮಂತ್ರಿಗಳನ್ನು ಯಾರೋ ಟ್ರ್ಯಾಪ್ ಮಾಡುತ್ತಾರೆ ಎಂದು ಸ್ವತಃ ಪ್ರಿಯಾಂಕ್ ಖರ್ಗೆ ಹೇಳುತ್ತಾರೆ. ಹಾಗಾದರೆ ಅಂಥ ಬ್ಲಾಕ್ ಮೇಲ್, ಸ್ಟಿಂಗ್ ಮಾಡೋರಿಗೆ ಸರಕಾರ ರಕ್ಷಣೆ ನೀಡುತ್ತಿರುವುದೇಕೆ ಎಂದು ಹೆಚ್ಡಿಕೆ ಪ್ರಶ್ನಿಸಿದರು.
ಬಂದು ಟಚ್ ಮಾಡಿ ನೋಡೋಣ. ಏನ್ ನಿನಗೆ ಇಷ್ಟ ಬಂದೋರೆನ್ನೆಲ್ಲಾ ಕರೆಸಿ ವಿಚಾರಣೆ ಮಾಡೋದಕ್ಕೆ ನಿನಗೆ ಗೃಹ ಇಲಾಖೆಯನ್ನ ನಿಮ್ಮಪ್ಪ ಕೊಟ್ಟಿಲ್ಲ, ದರ್ಬಾರ್ ಮಾಡೋದಕ್ಕೆ. ನಿಮ್ಮ ಮುಖ್ಯಮಂತ್ರಿ ಅವರು ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಸ್ಟಿಂಗ್ ಮಾಡೋನು ರಾಜಾರೋಷವಾಗಿ ತಿರುಗುತ್ತಿದ್ದಾನೆ. ಅವನನ್ನು ಟಚ್ ಮಾಡುವುದಕ್ಕೆ ನಿಮಗೆ ಯೋಗ್ಯತೆ ಇಲ್ಲ. ಇಲ್ಲಿ ಬಂದು ಜೆಡಿಎಸ್ ಹುಡುಗರಿಗೆ ಹೆದರಿಸುವುದಕ್ಕೆ ಬರುತ್ತಿರಿ. ಬಂದು ನೋಡು, ನನ್ನನ್ನು ಮತ್ತು ನನ್ನ ಕಾರ್ಯಕರ್ತರನ್ನು ಮುಟ್ಟಿ ನೋಡು, ಆಮೇಲೆ ಏನಾಗುತ್ತದೆ ನೋಡುವಿಯಂತೆ ಎಂದು ಪ್ರಿಯಾಂಕ ಖರ್ಗೆಗೆ ಸಚಿವರು ಏಕವಚನದಲ್ಲಿಯೇ ಸವಾಲು ಹಾಕಿದರು.
ರಾಕೇಶ್ ಶೆಟ್ಟಿ ಅಂದ್ರೆ ಯಾರು? ಯಾರವನು? ಅವನಿಗೂ ನಿನ್ನ ಮುಖ್ಯಮಂತ್ರಿಗು ಏನು ಸಂಬಂಧ? ನೀವೆಲ್ಲ ಇಷ್ಟ ಬಂದ ಹಾಗೆ ಜಂಗಲ್ ರಾಜ್ ಮಾಡಿಕೊಂಡಿದ್ದೀರಿ. ರಾಜ್ಯದ ಹಾಲಿ ಮುಖ್ಯಮಂತ್ರಿ ಈ ರಾಕೇಶ್ ಶೆಟ್ಟಿ ಎಂಬಾತನ ಜತೆ ಸೇರಿ ಕಳೆದ ಐದು ವರ್ಷಗಳಲ್ಲಿ ಏನೇನು ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲವೇ? ಆತನಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ, ಆತನನ್ನು ವಶಕ್ಕೆ ಪಡೆಯುವುದಿಲ್ಲ. ಆದರೆ ಕುಮಾರಸ್ವಾಮಿ ಮೇಲೆ ಕೇವಲ ಸಂಶಯ ಬಂದರೆ ವಶಕ್ಕೆ ಪಡೆಯುತ್ತೀರಾ? ಎಂದು ಸಚಿವರು ಕಿಡಿಕಾರಿದರು.
ಬಾರಪ್ಪ, ಕಳಿಸಪ್ಪ, ಯಾವನನ್ನು ಕಳಿಸುತ್ತೀಯಾ ಕಳಿಸು, ನನ್ನನ್ನೇ ಅರೆಸ್ಟ್ ಮಾಡಿಸು. ಸಂಶಯವಂತೆ ಇವನಿಗೆ. ಮೊದಲು ನಿಮ್ಮ ಮುಖ್ಯಮಂತ್ರಿ ಇಟ್ಟುಕೊಂಡಿರುವುದನ್ನು ಮುಟ್ಟಿಕೊಳ್ಳಿ. ನಾನೇನು ನಿಮ್ಮ ಅಪ್ಪನ್ ಗಂಟು ತಿಂದಿದ್ದೀನಾ? ನನ್ನ ತಾಳ್ಮೆಗೂ ಒಂದು ಇತಿಮಿತಿ ಇದೆ ಎಂದು ಪ್ರಿಯಾಂಕ್ ಖರ್ಗೆ ಹಾಗೂ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರು ಕುಮಾರಸ್ವಾಮಿ ಅವರು.
ತಾಕತ್ತಿದ್ದರೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಿ
ಸುಳ್ಳು ಪ್ರಕರಣಗಳು ಹಾಗೂ ಬೆದರಿಕೆಗಳಿಗೆ ತಾವು ಜಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಹೆಚ್ಡಿಕೆ; ಈ ಸರ್ಕಾರಕ್ಕೆ ಹಾಗೂ ಸಚಿವರಿಗೆ ಬಹಿರಂಗ ಸವಾಲು ಹಾಕಿದರು. ಪ್ರಿಯಾಂಕ್ ಖರ್ಗೆ, ಶಿವಕುಮಾರ್ ನಿಮ್ಕಿಬ್ಬರಿಗೆ ತಾಕತ್ತಿದ್ದರೆ ರಾಜ್ಯದ ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಿ. ನಿಮಗೆ ಯೋಗ್ಯತೆ ಇದ್ದರೆ ಈ ಕೆಲಸ ಮಾಡಿ. ನಾನು ಗಂಡಸ್ತನದಿಂದ ಮಾತನಾಡುತ್ತಿದ್ದೇನೆ, ನಿಮ್ಮ ತರಹ ಹೇಡಿ ಕೆಲಸ ಮಾಡುತ್ತಿಲ್ಲ ಎಂದು ಅವರು ಸವಾಲು ಎಸೆದರು.
ನಾನು ಎಲ್ಲವನ್ನು ನೇರವಾಗಿ ಹೇಳುತ್ತಿದ್ದೇನೆ. ನೇರವಾಗಿ ಪ್ರಶ್ನೆ ಮಾಡುತ್ತಿದ್ದೇನೆ. ನಿಮ್ಮ ಹಾಗೆ ಹೇಡಿಗಳಂತೆ ಹಿಂದಿನಿಂದ ಕುತಂತ್ರ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಎಲ್ಲರೂ ಸೇರಿ ಬೆನ್ನಿಗೆ ಚೂರಿ ಹಾಕಿದರಲ್ಲ, ಆ ರೀತಿ ಎಲ್ಲರಿಗೂ ಮಾಡಲು ಸಾಧ್ಯವಿಲ್ಲ. ನಿಮ್ಮ ಪಾಪದ ಕೊಡ ತುಂಬಿದೆ. ಈ ಕಿರಾತಕರಿಗೆ ಪಾಠ ಕಲಿಸುವ ಸಮಯ ಹತ್ತಿರ ಬಂದಿದೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಎಸ್ಸಿ ಅಕ್ರಮದ ಬಗ್ಗೆ ವ್ಯಂಗ್ಯ
ಕೆಪಿಎಸ್ಸಿ ಕರ್ಮಕಾಂಡದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತೀವ್ರವಾಗಿ ವ್ಯಂಗ್ಯವಾಡಿದ ಕುಮಾರಸ್ವಾಮಿ ಅವರು; ಹಾಲಿ ಗೃಹ ಸಚಿವರು ಹಿಂದೆ ಪಂಚಾಯತ್ ರಾಜ್ ಸಚಿವರಾಗಿದ್ದಾಗ 24 ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ಗಳ (AEE) ನೇಮಕಾತಿಯಲ್ಲಿ ನಡೆದ ಅಕ್ರಮದ ದಾಖಲೆಗಳನ್ನು ನಾನು ಇಟ್ಟಿದ್ದೇನೆ. ಪ್ರಿಯಾಂಕ್ ಖರ್ಗೆ ಅವರೇ, ನೀವು ಸಮಾಜಕ್ಕೆ ದೊಡ್ಡ ಮಟ್ಟದ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಪ್ರದರ್ಶನ ಮಾಡುವವರು. ತಪ್ಪು ಮಾಡಿಕೊಂಡಿರುವ ನೀವು ಈ ಎಇಇ ಸೆಲೆಕ್ಷನ್ ಬಗ್ಗೆ ಇವತ್ತಿನವರೆಗೂ ಏನಾದರೂ ಉತ್ತರ ಕೊಟ್ಟಿದ್ದೀರಾ? ಎಂದು ಖಾರವಾಗಿ ಪ್ರಶ್ನಿಸಿದರು.