ಮಂಗಳೂರು : ಉಡುಪಿ ಮತ್ತು ಮಂಗಳೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳೊಂದಿಗೆ ವಿವಿಧ ಪ್ರಮುಖ ರಾಜಕೀಯ ವಿಷಯಗಳ ಕುರಿತು ಮಾತನಾಡಿದರು. ಇತ್ತೀಚೆಗೆ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದ ಬಂಧನಗಳ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ತನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸಿಎಂ ತಿಳಿಸಿದರು..
SIR ಕುರಿತು ಸುಪ್ರೀಂಗೆ ಅರ್ಜಿ : ಇದೇ ಸಂದರ್ಭದಲ್ಲಿ ಎಸ್ಐಆರ್ (SIR) ದತ್ತಾಂಶಗಳ ವಿವಾದದ ಕುರಿತು ಮಾತನಾಡಿದ ಅವರು, ಈ ವಿಷಯವಾಗಿ ಇಂದು ತಾವು ಸುಪ್ರೀಂ ಕೋರ್ಟ್ನಲ್ಲಿ ಅಧಿಕೃತವಾಗಿ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು. ಮತದಾನದ ಹಕ್ಕು ಎಂಬುದು ಪ್ರತಿಯೊಬ್ಬ ನಾಗರಿಕನ ಬದುಕಿನ ಹಕ್ಕು ಎಂದು ಬಣ್ಣಿಸಿದ ಅವರು, ಈ ಮೂಲಭೂತ ಹಕ್ಕಿನ ರಕ್ಷಣೆಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಬಲವಾದ ಹೋರಾಟವನ್ನು ನಡೆಸುತ್ತಿದ್ದೇವೆ ಮತ್ತು ಈ ಹೋರಾಟವನ್ನು ಯಾವುದೇ ಹಿಂಜರಿಕೆಯಿಲ್ಲದೆ ಮುಂದೆಯೂ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದರು..
ಶರ್ಟ್ ಹಿಡಿದು ಎಳೆದಿಲ್ಲ, ತಮ್ಮ ಕಾರಿನಲ್ಲಿ ಬಾ ಅಂದ್ರು : ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮನ್ನು ವಾಹನದಲ್ಲಿ ಬರುವಂತೆ ಆಹ್ವಾನಿಸಿದ್ದನ್ನು ಕೆಲ ಮಾಧ್ಯಮಗಳು ಹಾಗೂ ಬಿಜೆಪಿ ನಾಯಕರು ದೊಡ್ಡ ಮಟ್ಟದಲ್ಲಿ ಅಪಪ್ರಚಾರ ಮಾಡಿ, ತಮಗೆ ದೊಡ್ಡ ಅಪಮಾನವಾಗಿದೆ ಎಂದು ಬಿಂಬಿಸಲು ಯತ್ನಿಸಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ನಾಯಕರು ಈ ಸಣ್ಣ ವಿಚಾರವನ್ನೇ ದೊಡ್ಡದು ಮಾಡಿ ರಾಜಕೀಯ ಲಾಭ ಪಡೆದುಕೊಳ್ಳಲು ಮುಂದಾಗಿದ್ದಾರೆ. ಇಂತಹ ಸಣ್ಣ ಪುಟ್ಟ ವಿಚಾರಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದ ಅವರು, ರಾಹುಲ್ ಗಾಂಧಿ ಅವರು ಉತ್ತಮ ಮಾನವೀಯ ವ್ಯಕ್ತಿತ್ವ ಹೊಂದಿರುವ ಮುಖಂಡರು ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.
ಕರಾವಳಿ ದಸರಾ ಉತ್ಸವದಲ್ಲಿ ಭಾಗಿ : ಕರಾವಳಿ ಭಾಗದ ಸಾಂಸ್ಕೃತಿಕ ವೈಭವದ ಕುರಿತು ಮಾತನಾಡಿದ ಸಿಎಂ, ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿಯ ಹೆಮ್ಮೆಯ ಕಂಬಳ ಹಾಗೂ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೋ ವಿಶೇಷವಾಗಿ ಭಾಗಿಯಾಗಿರುವುದು ಸಂತಸದ ವಿಷಯ ಎಂದರು. ದಸರಾ ಉತ್ಸವದ ಸಂದರ್ಭದಲ್ಲಿ ಕುದ್ರೋಳಿಗೆ ಆಗಮಿಸುವಂತೆ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು ತಮಗೆ ಬಹಳ ವರ್ಷಗಳಿಂದ ನಿರಂತರವಾಗಿ ಆಹ್ವಾನ ನೀಡುತ್ತಲೇ ಬಂದಿದ್ದರು. ಕಳೆದ ವರ್ಷವೂ ಹಬ್ಬದ ಮಧ್ಯೆ ಇಲ್ಲಿಗೆ ಆಗಮಿಸಿದ್ದೆ. ಈ ಬಾರಿಯ ದಸರಾ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ, ನವರಾತ್ರಿಯ ಈ ಪವಿತ್ರ ದಿನಗಳಲ್ಲಿ ನವದುರ್ಗೆಯರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುವುದರ ಜೊತೆಗೆ ಕರಾವಳಿಯ ಸಮೃದ್ಧ ಸಾಂಸ್ಕೃತಿಕ ಬದುಕನ್ನು ಈ ಮೂಲಕ ಸಮಾಜಕ್ಕೆ ಬಿಂಬಿಸಲಾಗುತ್ತಿದೆ ಎಂದು ತಿಳಿಸಿದರು.