Sugarcane Farmers Protest: ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ನಡೆಯುತ್ತಿದ್ದ ರೈತರ ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಜನಪ್ರತಿನಿಧಿಗಳೊಂದಿಗೆ ನಡೆದ ಮಾತುಕತೆಯ ಬಳಿಕ ರೈತ ಸಂಘಟನೆಗಳು ತಮ್ಮ ಪ್ರತಿಭಟನೆಯನ್ನ ಒಂದು ತಿಂಗಳ ಕಾಲ ಮುಂದೂಡಲು ನಿರ್ಧರಿಸಿವೆ. ಆದರೆ ರೈತರ ಪ್ರಮುಖ ಬೇಡಿಕೆಗಳಿಗೆ ಇನ್ನೂ ಅಂತಿಮ ಪರಿಹಾರ ದೊರೆತಿಲ್ಲ. ಹೀಗಾಗಿ ಸರ್ಕಾರದ ಮುಂದಿನ ಕ್ರಮಗಳ ಮೇಲೆ ರೈತರ ಗಮನ ನೆಟ್ಟಿದೆ.
ಕಳೆದ ಹಲವು ದಿನಗಳಿಂದ ಕಬ್ಬಿನ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನ ಮುಂದಿಟ್ಟುಕೊಂಡು ರೈತರು ಹೋರಾಟ ನಡೆಸುತ್ತಿದ್ದರು. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಪ್ರದೇಶಗಳಿಂದ ರೈತರು ಪಾದಯಾತ್ರೆ ಮೂಲಕ ಧಾರವಾಡದ ಯರಿಕೊಪ್ಪದತ್ತ ಆಗಮಿಸಿದ್ದರು. ಅಲ್ಲಿಂದ ಹುಬ್ಬಳ್ಳಿಗೆ ತೆರಳಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸದ ಬಳಿ ಪ್ರತಿಭಟನೆ ನಡೆಸಲು ರೈತ ಮುಖಂಡರು ಯೋಜಿಸಿದ್ದರು.
ಈ ಹಿನ್ನೆಲೆಯಲ್ಲಿ ರೈತ ಮುಖಂಡರು, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ನಡುವೆ ಮಾತುಕತೆ ನಡೆಯಿತು. ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರೈತರ ಬೇಡಿಕೆಗಳನ್ನ ಆಲಿಸಿದರು. ಸಮಸ್ಯೆಗಳನ್ನ ಪರಿಹರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬ ಭರವಸೆಯನ್ನ ಅವರು ನೀಡಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಮಾತುಕತೆಯ ಬಳಿಕ ಹೋರಾಟವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ರೈತರ ಪ್ರಮುಖ ಬೇಡಿಕೆಗಳೇನು?
ಕಬ್ಬು ಬೆಳೆಗಾರರು ತಮ್ಮ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ದೊರೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕಬ್ಬಿನ ಖರೀದಿ ಬೆಲೆಯನ್ನ ಹೆಚ್ಚಿಸುವುದು, ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆ (MSP) ನಿಗದಿಪಡಿಸುವುದು ಹಾಗೂ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ಖಚಿತಪಡಿಸುವುದು ಅವರ ಪ್ರಮುಖ ಬೇಡಿಕೆಗಳಾಗಿವೆ.
ಇದರ ಜೊತೆಗೆ ಕೃಷಿ ಉತ್ಪಾದನಾ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಸೂಕ್ತ ಆದಾಯ ದೊರೆಯಬೇಕು ಎಂಬುದು ಸಂಘಟನೆಗಳ ಆಗ್ರಹವಾಗಿದೆ. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನ ಜಾರಿಗೊಳಿಸುವಂತೆಯೂ ರೈತರು ಒತ್ತಾಯಿಸಿದ್ದಾರೆ. ಕಬ್ಬು ಬೆಳೆಯಲು ಬೀಜ, ಗೊಬ್ಬರ, ಕಾರ್ಮಿಕರು, ನೀರಾವರಿ ಮತ್ತು ಸಾಗಣೆ ಸೇರಿದಂತೆ ಹಲವು ವೆಚ್ಚಗಳನ್ನ ಭರಿಸಬೇಕಾಗಿದ್ದು, ಸಿಗುವ ಬೆಲೆ ಕೃಷಿ ವೆಚ್ಚಕ್ಕೆ ಅನುಗುಣವಾಗಿರಬೇಕು ಎಂಬುದು ಬೆಳೆಗಾರರ ಅಭಿಪ್ರಾಯವಾಗಿದೆ.
ಕಬ್ಬು ಕಾರ್ಖಾನೆಗಳ ಆರಂಭಕ್ಕೂ ಮುನ್ನ ಬೆಲೆ ನಿಗದಿ ಆಗ್ರಹ
ರಾಜ್ಯದಲ್ಲಿ ಕಬ್ಬು ಅರೆಯುವ ಹಂಗಾಮು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಸಕ್ಕರೆ ಕಾರ್ಖಾನೆಗಳು ಕಬ್ಬು ಖರೀದಿಗೆ ಏಕರೂಪದ ಬೆಲೆ ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ. ಕಾರ್ಖಾನೆಗಳು ಕಾರ್ಯಾರಂಭ ಮಾಡುವ ಮೊದಲು ರಾಜ್ಯ ಸರ್ಕಾರವು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳೊಂದಿಗೆ ಸಭೆ ನಡೆಸಿ ಬೆಲೆ ವಿಚಾರಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂಬ ಬೇಡಿಕೆಯೂ ಮುಂದಿಟ್ಟಿದ್ದಾರೆ. ಕಬ್ಬಿನ ಬೆಲೆ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ಬೆಳೆಗಾರರಿಗೆ ಆರ್ಥಿಕ ನಷ್ಟ ಉಂಟಾಗುವ ಆತಂಕವಿದೆ. ಹೀಗಾಗಿ ಬೆಲೆ ನಿಗದಿಯ ವಿಚಾರವನ್ನ ಮುಂದೂಡದೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.
ಸಮಿತಿ ಪರಿಶೀಲನೆ ಮೇಲೆ ರೈತರ ನಿರೀಕ್ಷೆ
ಕಬ್ಬು ಬೆಳೆಗಾರರ ಸಮಸ್ಯೆಗಳನ್ನ ಅಧ್ಯಯನ ಮಾಡಲು ಕೇಂದ್ರ ಮಟ್ಟದಲ್ಲಿ ಸಮಿತಿ ರಚಿಸುವ ಪ್ರಸ್ತಾಪವೂ ಚರ್ಚೆಯಲ್ಲಿದೆ. ಈ ಸಮಿತಿಯು ರೈತರ ಬೇಡಿಕೆಗಳು, ಕಬ್ಬಿನ ಬೆಲೆ ನಿಗದಿ ಹಾಗೂ ಸಕ್ಕರೆ ಉದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನ ಪರಿಶೀಲಿಸಿ ವರದಿ ಸಲ್ಲಿಸುವ ನಿರೀಕ್ಷೆಯಿದೆ. ಸಮಿತಿಯ ಅಧ್ಯಯನ ಮತ್ತು ಶಿಫಾರಸುಗಳ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಸಭೆಯ ಸಂದರ್ಭದಲ್ಲಿ ರೈತರ ಬೇಡಿಕೆಗಳನ್ನ ಸಕಾರಾತ್ಮಕವಾಗಿ ಪರಿಗಣಿಸುವ ಭರವಸೆ ದೊರೆತ ಹಿನ್ನೆಲೆಯಲ್ಲಿ ಹೋರಾಟಕ್ಕೆ ವಿರಾಮ ನೀಡಲು ರೈತ ಮುಖಂಡರು ಒಪ್ಪಿಕೊಂಡಿದ್ದಾರೆ. ಆದರೆ ಭರವಸೆಗಳು ಪ್ರಾಯೋಗಿಕವಾಗಿ ಜಾರಿಯಾಗುವವರೆಗೆ ಹೋರಾಟವನ್ನ ಸಂಪೂರ್ಣವಾಗಿ ಕೈಬಿಡಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ.
ಒಂದು ತಿಂಗಳ ಬಳಿಕ ಮತ್ತೆ ಹೋರಾಟದ ಸಾಧ್ಯತೆ?
ಸದ್ಯದ ಬೆಳವಣಿಗೆಯು ರೈತರು ಮತ್ತು ಸರ್ಕಾರದ ನಡುವೆ ಮಾತುಕತೆಗೆ ಅವಕಾಶ ಕಲ್ಪಿಸಿದೆ. ಆದರೆ, ಕಬ್ಬಿನ ಬೆಲೆ, ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಹಾಗೂ ಇತರ ಬೇಡಿಕೆಗಳ ಕುರಿತು ಸ್ಪಷ್ಟ ನಿರ್ಧಾರ ಪ್ರಕಟವಾಗುವುದು ಮುಖ್ಯವಾಗಿದೆ. ರೈತರ ಬೇಡಿಕೆಗಳಿಗೆ ಕಾಲಮಿತಿಯೊಳಗೆ ಪರಿಹಾರ ದೊರೆಯದಿದ್ದರೆ ಮುಂದಿನ ಹೋರಾಟದ ಬಗ್ಗೆ ಸಂಘಟನೆಗಳು ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಒಟ್ನಲ್ಲಿ ಪ್ರಹ್ಲಾದ್ ಜೋಶಿ ಅವರೊಂದಿಗಿನ ಮಾತುಕತೆಯ ಬಳಿಕ ರೈತರ ಪ್ರತಿಭಟನೆಗೆ ತಾತ್ಕಾಲಿಕ ವಿರಾಮ ದೊರೆತಿದೆ. ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವ ಕ್ರಮ ಕೈಗೊಳ್ಳಲಿವೆ, ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರೆಯಲಿದೆಯೇ ಎಂಬುದನ್ನ ಕಾದು ನೋಡಬೇಕಿದೆ. ಹೋರಾಟಕ್ಕೆ ವಿರಾಮ ಸಿಕ್ಕಿದ್ದರೂ ರೈತರ ಬೇಡಿಕೆಗಳ ಈಡೇರಿಕೆಯೇ ಈ ಬೆಳವಣಿಗೆಯ ಅಂತಿಮ ಫಲಿತಾಂಶವನ್ನ ನಿರ್ಧರಿಸಲಿದೆ.