ಬಡ್ಡಿ ಹಣಕ್ಕಾಗಿ ಸಾಲಗಾರನಿಗೆ ನರಕಯಾತನೆ... ಬಂಕಾಪುರ ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಅಮಾನವೀಯ ಕೃತ್ಯ..!
ವಾರದ ಬಡ್ಡಿ ಕಟ್ಟದಿದ್ದಕ್ಕೆ ಸಾಲ ಪಡೆದ ವ್ಯಕ್ತಿಯನ್ನೇ ಕಿಡ್ನಾಪ್ ಮಾಡಿ ಆತನಿಗೆ ನರಕಯಾತನೆ ತೋರಿಸಿರುವ ಅಮಾನವೀಯ ಘಟನೆ ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ನಡೆದಿದೆ.
ಬಡ್ಡಿ ಹಣಕ್ಕಾಗಿ ಸಾಲಗಾರನಿಗೆ ನರಕಯಾತನೆಯನ್ನೇ ತೋರಿಸಿರುವ ಬೆಚ್ಚಿಬೀಳಿಸುವ ಅಮಾನವೀಯ ಕೃತ್ಯ ಹಾವೇರಿಯ ಬಂಕಾಪುರ ಪಟ್ಟಣದಲ್ಲಿ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.
ಏನಿದು ಘಟನೆ?
ಮಣಿಕಂಠ ಹಳವಳ್ಳಿ ಎಂಬಾತ ವಾರದ ಬಡ್ಡಿಯಲ್ಲಿ 70 ಸಾವಿರ ಸಾಲ ಪಡೆದಿದ್ದನು. ಸಾಲಕ್ಕೆ ಸಾಲಗಾರನ ಮೇಲೆಯೇ ಬಡ್ಡಿದಾರರು ಕ್ರೌರ್ಯ ಎಸಗಿದ್ದು, ವಾರಕ್ಕೆ 1,500 ರಿಂದ 2 ಸಾವಿರ ವರೆಗೆ ಬಡ್ಡಿ ಕಟ್ಟುತ್ತಿದ್ದ ಮಣಿಕಂಠ, ಕಳೆದ ಕೆಲವು ವಾರದಿಂದ ಬಡ್ಡಿ ಕೊಡದಿದ್ದಕ್ಕೆ ಆರೋಪಿಗಳು ಈ ರೀತಿ ಅಟ್ಟಹಾಸ ಮೆರೆದಿದ್ದಾರೆ ಎನ್ನಲಾಗಿದೆ.
ವಾರದ ಬಡ್ಡಿ ಕಟ್ಟದಿದ್ದಕ್ಕೆ ಕಿಡ್ಯಾಪ್, ಚಿತ್ರಹಿಂಸೆ:
ಹೌದು, ಬಂಕಾಪೂರದಲ್ಲಿ ಮಣಿಕಂಠ ಹಳವಳ್ಳಿ ಎಂಬ ವ್ಯಕ್ತಿಯೊಬ್ಬ ಸಾಲ ಪಡೆದು ವಾರದ ಬಡ್ಡಿ ಕಟ್ಟದಿದ್ದಕ್ಕೆ ಆತನನ್ನು ಕಿಡ್ನ್ಯಾಪ್ ಮಾಡಲಾಗಿದ್ದು, ಬಾಯಿಗೆ ಮೂತ್ರ ಸುರಿಸಿ ವಿಕೃತವಾಗಿ ಹ*ಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಕಾಲು ಕಟ್ಟಿ ಹಾಕಿ ನಾಲ್ಕು ದಿನಗಳ ಕಾಲ ಕೂಡಿ ಹಾಕಿ ಹೇಯ ಕೃತ್ಯ ಎಸಗಿರುವ ಆರೋಪಿಗಳು, ಮರದ ಕಟ್ಟಿಗೆ, ಪೈಪ್‌ನಿಂದ ಹೊಡೆದು ಸಿಗರೇಟ್‌ನಿಂದ ಸು*ಟ್ಟು ಚಿತ್ರಹಿಂಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ನಡೆದಿದ್ದು ಯಾವಾಗ?
ಅ.16ರಂದು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಮಣಿಕಂಠನನ್ನು ಕರೆದೊಯ್ದು ಬಡ್ಡಿದಾರರು ಜನಬೀಡ ಪ್ರದೇಶಕ್ಕೆ ಕರೆದೊಯ್ದು ಬಳಿಕ ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾಗಿದೆ. 4 ದಿನಗಳ ಚಿತ್ರಹಿಂಸೆ ಬಳಿಕ ಆರೋಪಿಗಳಿಂದ ತಪ್ಪಿಸಿಕೊಂಡ ಸಂತ್ರಸ್ತ, ಅಕ್ಟೋಬರ್ 20ರಂದು ಅಪರಿಚಿತ ವ್ಯಕ್ತಿಯ ನೆರವಿನಿಂದ ಆ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದುಬಂದಿದೆ.
ಸ್ಥಳೀಯರ ಸಹಾಯದಿಂದ ಕುಟುಂಬಸ್ಥರಿಗೆ ವಿಷಯ ತಿಳಿಸಿದ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಮಣಿಕಂಠ ಬಳಿಕ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾನೆ.
ಮಣಿಕಂಠ ಹಳವಳ್ಳಿ ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಮಂಜುನಾಥ ಕತ್ತಿ, ನವೀನ್ ಹಾನಗಲ್, ಗಣೇಶ ಸ್ವಾಧಿ, ಸುನೀಲ್ ಕತ್ತಿ ವಿರುದ್ಧ ದೂರು ದಾಖಲಿಸಲಾಗಿದೆ. ಈ ನಾಲ್ವರು ಆರೋಪಿಗಳು ವಿರುದ್ಧ ಚಿತ್ರಹಿಂಸೆ ನೀಡಿರೋ ಬಗ್ಗೆ ಬಂಕಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದೇನೇ ಇರಲಿ ಯಾರಾದರೂ ಸಾಲದ ಹಣಕ್ಕೆ ಬಡ್ಡಿ ತಡವಾಗಿರುವುದಕ್ಕೆ ಈ ರೀತಿಯ ಹೇಯ ಕೃತ್ಯ ಎಸಗಿರುವುದು ಮಾತ್ರ ನಿಜಕ್ಕೂ ಸಮಾಜವೇ ತಲೆತಗ್ಗಿಸುವಂತಹ ಅಮಾನವೀಯ ಕೃತ್ಯ. ಸಾಲ ನೀಡಿದವರು ತಾವು ಸಾಲಗಾರರಿಗೆ ನೀಡಿರುವ ಹಣವನ್ನು ಮರಳಿ ಪಡೆಯುವುದು ತಪ್ಪಲ್ಲ. ಆದರೆ, ಸಾಲಗಾರನಿಂದ ಅವರ ಹಣ ಹಿಂಪಡೆಯುವ ನೆಪದಲ್ಲಿ ಈ ರೀತಿ ಚಿತ್ರಹಿಂಸೆ ನೀಡುವುದು, ಬಡ್ಡಿ ಹೆಸರಿನಲ್ಲಿ ಈ ರೀತಿ ಜನರ ರಕ್ತ ಹೀರುವುದು ಸರಿಯಲ್ಲ.