ಕೋಲಾರ: ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಚೋದನಾತ್ಮಕ ಭಾಷಣ ಮಾಡಿದ್ದಾರೆ ಎಂಬ ಆರೋಪಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ತಾವು ಯಾವುದೇ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿಲ್ಲ. ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಮಾತ್ರ ಮಾತನಾಡಿದ್ದೇನೆ. ಇದರಲ್ಲಿ ಯಾವುದೇ ಪ್ರಚೋದನಕಾರಿ ಅಂಶವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ಪಕ್ಷ ಅರಾಜಕತೆಯನ್ನು ಸೃಷ್ಟಿಸುತ್ತಿದೆ. ಕಾಂಗ್ರೆಸ್‌ನ ಮಿತ್ರಪಕ್ಷಗಳೂ ಅರಾಜಕತೆಯ ಸೃಷ್ಟಿಗೆ ಕಾರಣವಾಗುತ್ತಿವೆ ಎಂದು ಚಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಕಾಂಗ್ರೆಸ್‌ನ ಈ ಅರಾಜಕತೆಯ ವಿರುದ್ಧ ಬಿಜೆಪಿ ದೇಶಾದ್ಯಂತ ‘ಅರಾಜಕತೆ ಅಳಿಯಲಿ, ಪ್ರಜಾಪ್ರಭುತ್ವ ಉಳಿಯಲಿ’ ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ಹಮ್ಮಿಕೊಂಡಿದೆ. ಇದರ ಭಾಗವಾಗಿ ಇಂದು ಕೋಲಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅರಾಜಕತೆಯನ್ನು ಸೃಷ್ಟಿಸುತ್ತಿದೆ. ಇಂತಹ ಅರಾಜಕತೆ ಸೃಷ್ಟಿಸುವ ಕಾಂಗ್ರೆಸ್ ಪಕ್ಷವನ್ನು ಜನರು ತುಂಡು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಹಾಕುತ್ತಾರೆ ಎಂದು ಹೇಳಿದ್ದೇನೆ. ನನ್ನ ಹೇಳಿಕೆಯನ್ನು ಕೆಲವು ಕಾಂಗ್ರೆಸ್ ಕಾರ್ಯಕರ್ತರು ತಿರುಚುವ ಕೆಲಸ ಮಾಡಿದ್ದಾರೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನ್ನ ಹೇಳಿಕೆ ಯಾವುದೇ ವ್ಯಕ್ತಿಯನ್ನು ಉದ್ದೇಶಿಸಿ ನೀಡಿದ್ದಲ್ಲ. ಇದು ವ್ಯಕ್ತಿಗತ ಹೇಳಿಕೆಯೂ ಅಲ್ಲ, ಯಾವುದೇ ವ್ಯಕ್ತಿಯ ವಿರುದ್ಧದ ಪ್ರಚೋದನಾತ್ಮಕ ಹೇಳಿಕೆಯೂ ಅಲ್ಲ. ಕಾಂಗ್ರೆಸ್ ಪಕ್ಷದ ವಿಚಾರವಾಗಿ ಮಾತ್ರ ಮಾತನಾಡಿದ್ದೇನೆ. ನಾನು ನೀಡಿರುವ ಹೇಳಿಕೆಯಲ್ಲಿ ಯಾವುದೇ ಗೊಂದಲವಿಲ್ಲ. ನನ್ನ ಮಾತಿನ ಅರ್ಥ ಸ್ಪಷ್ಟವಾಗಿದೆ ಎಂದು ಚಲವಾದಿ ನಾರಾಯಣಸ್ವಾಮಿ ಸ್ಪಷ್ಟಪಡಿಸಿದ್ದಾರೆ.