ಸುಳ್ಯ ಶಾಸಕಿ ಕಾರು ಅಪಘಾತ : ಪ್ರಾಣಾಪಾಯದಿಂದ ಪಾರು, ಹೇಗಿದೆ ಆರೋಗ್ಯ?
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರದ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದಾರೆ.. ಅಲ್ಲದೆ, ಇನ್ನೊಂದೆಡೆ ಕೊಡಗಿನ ಚೇರಂಬಾಣೆ ಸಮೀಪ ಕಾರು ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಎರಡು ಪ್ರತ್ಯೇಕ ಘಟನೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಇವರ ಇಲ್ಲಿದೆ..
ಕೊಡಗು/ ಸುಳ್ಯ: ಕರಿಕ್ಕಳ ಮತ್ತು ನಿಂತಿಕಲ್ ನಡುವಿನ ಮುಚ್ಚಿಲ ಎಂಬಲ್ಲಿ ಸುಳ್ಯ ಕ್ಷೇತ್ರದ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಶಾಸಕಿ ಸೇರಿದಂತೆ ಚಾಲಕ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.
ಮುಂದೆ ಚಲಿಸುತ್ತಿದ್ದ ಕಾರಿನ ಚಾಲಕ ದಿಢೀರನೆ (ಸಡನ್) ಬ್ರೇಕ್ ಹಾಕಿದ ಪರಿಣಾಮ, ಹಿಂಬದಿಯಲ್ಲಿದ್ದ ಶಾಸಕರ ಇನ್ನೋವಾ ಕಾರು ಆ ಕಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಶಾಸಕಿಯವರ ಕಾರಿನ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಚಾಲಕ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಹೊರಬಂದಿದ್ದಾರೆ. ಘಟನೆಯ ನಂತರ ಶಾಸಕರು ಬೇರೊಂದು ವಾಹನದಲ್ಲಿ ತಮ್ಮ ನಿವಾಸಕ್ಕೆ ತೆರಳಿದ್ದಾರೆ.
ಚೇರಂಬಾಣೆ ಬಳಿ ಕಾರು-ಬೈಕ್ ನಡುವೆ ಭೀಕರ ಅಪಘಾತ; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಕೊಡಗು ಜಿಲ್ಲೆಯ ಮಡಿಕೇರಿ ಹೊರವಲಯದ ಚೇರಂಬಾಣೆ ಸಮೀಪ ಕಾರು ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನೆರವಿಗೆ ಧಾವಿಸಿದ ಸ್ಥಳೀಯರನ್ನು ಹಾಗೂ ಸಾಮಾಜಿಕ ಜಾಲತಾಣಿಗರನ್ನು ಬೆಚ್ಚಿಬೀಳಿಸಿರುವ ಈ ಭೀಕರ ಅಪಘಾತದ ದೃಶ್ಯಾವಳಿಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಚೇರಂಬಾಣೆ ಮುಖ್ಯ ರಸ್ತೆಯಲ್ಲಿ ಎದುರೆದುರು ಬಂದ ಕಾರು ಹಾಗೂ ಬೈಕ್ ನಡುವೆ ನೇರ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು, ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆದರೆ, ಅದೃಷ್ಟವಶಾತ್ ಬೈಕ್ ಸವಾರ ದೊಡ್ಡ ಅನಾಹುತದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗಾಯಾಳುವನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.