ಹಾಸನ : ನನಗೆ ಕಿಡ್ನಿ ಫೇಲ್ ಆಗಿದ್ದು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದೇನೆ, ಆದರೆ ಮೆದುಳು ಫೇಲ್ ಆಗಿಲ್ಲ. ಪಿತೃಪಕ್ಷ ಮುಗಿದ ತಕ್ಷಣ ಜಿಲ್ಲೆಯಷ್ಟೇ ಅಲ್ಲದೆ ರಾಜ್ಯಾದ್ಯಂತ ಪ್ರವಾಸ ಮಾಡಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಮಾಜಿ ಪ್ರಧಾನ ಮಂತ್ರಿಗಳು, ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡ ಅವರು ತಿಳಿಸಿದರು.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ಮತ್ತು ರಾಷ್ಟ್ರೀಯ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ.. ಎಸ್‌ಐಆರ್ ಹೋರಾಟದ ವಿಚಾರ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಸುಪ್ರೀಂ ಕೋರ್ಟ್ ಮನಸ್ಸಿನ ಭಾವನೆಗಳನ್ನು ತಿಳಿಸಿದ್ದು, ರಾಜೀನಾಮೆ ನೀಡಲು ಹೇಳಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇಂಡಿ ಒಕ್ಕೂಟದಲ್ಲಿ ಸ್ಟಾಲಿನ್ ಸಹಕರಿಸುವುದಿಲ್ಲ ಎಂದಿದ್ದಾರೆ ಹಾಗೂ ಅಖಿಲೇಶ್ ಯಾದವ್ ಹಿಂದೆ ಸರಿದಿದ್ದಾರೆ. ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ಬದಲು ಕಮಿಷನರ್ ಮೇಲೆ ಆರೋಪ ಮಾಡುತ್ತಿದ್ದಾರೆ, ಅವರಿಗೆ ಅನುಭವದ ಕೊರತೆಯಿಲ್ಲವಾದರೂ ಸ್ವಲ್ಪ ವೇಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಬರುವವರೆಗೆ ಕಾಯುವುದು ಅಗತ್ಯ ಎಂದರು.
ಬಿಜೆಪಿ-ಜೆಡಿಎಸ್ ಮೈತ್ರಿ
ಮುಂಬರುವ ಪ್ರತಿಯೊಂದು ಚುನಾವಣೆಯಲ್ಲೂ ಕಾಂಗ್ರೆಸ್ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಹೋರಾಟ ಮಾಡಲಿವೆ ಎಂದು ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ನಾಲ್ಕೂ ವಿಧಾನ ಪರಿಷತ್ ಸ್ಥಾನಗಳನ್ನು ಗೆಲ್ಲಿಸಲು ಎರಡೂ ಪಕ್ಷಗಳು ಒಗ್ಗಟ್ಟಿನಿಂದ ಶ್ರಮಿಸಲಿವೆ.
'ನೈಸ್' ಯೋಜನೆ ಹಾಗೂ ವಿರೋಧಿಗಳಿಗೆ ಟಾಂಗ್
1995ರಲ್ಲಿ ಡಾ. ಮನ್‌ಮೋಹನ್ ಸಿಂಗ್ ತಂದ ಆರ್ಥಿಕ ನೀತಿಯಡಿ ನೈಸ್ ಒಪ್ಪಂದವಾಯಿತು. ಹೈಕೋರ್ಟ್ ಮತ್ತು ಸಿಂಗಲ್ ಬೆಂಚ್ ತೀರ್ಪುಗಳನ್ನು ಜನತೆಯ ಮುಂದೆ ಇಡಲಾಗಿದೆ. ನೈಸ್ ಯೋಜನೆ ದೇವೇಗೌಡರ ಕೂಸು ಎಂದು ಪದೇ ಪದೇ ಹೇಳುವವರು, ಹಾಗಿದ್ದರೆ ಅದಕ್ಕೆ 'ಸೂಲಗಿತ್ತಿ' ಯಾರು ಎಂಬುದನ್ನೂ ಹೇಳಬೇಕು. ದೇವೇಗೌಡ ಇರಲಿ ಅಥವಾ ಸಾಯಲಿ, ಆತ ಮಾಡಿದ ಕೆಲಸವೇ ಇತಿಹಾಸ.
ಹರದನಹಳ್ಳಿಯಲ್ಲಿ ಪಿತೃಪಕ್ಷ ಆಚರಣೆ
ಈ ಬಾರಿ ಹೆಚ್.ಡಿ. ಕುಮಾರಸ್ವಾಮಿ, ಬಾಲಕೃಷ್ಣಗೌಡ ಸೇರಿದಂತೆ ನಾಲ್ಕೂ ಜನ ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಹರದನಹಳ್ಳಿಯಲ್ಲೇ ಪಿತೃಪಕ್ಷವನ್ನು ಆಚರಿಸಲು ತೀರ್ಮಾನಿಸಿದ್ದೇವೆ. ನಾನು ಅವಿಭಕ್ತ ಕುಟುಂಬದಲ್ಲಿದ್ದಾಗ ಎಲ್ಲರಿಗೂ ಬಡಿಸಿ ಕೊನೆಯಲ್ಲಿ ಉಣ್ಣುತ್ತಿದ್ದ ಸಂಪ್ರದಾಯವನ್ನು ಮಕ್ಕಳು ಈಗಲೂ ಗೌರವಿಸುತ್ತಿದ್ದಾರೆ.
ರೈತರ ಪರ ಹೋರಾಟ ಮತ್ತು ಪುಸ್ತಕ ಬಿಡುಗಡೆ
ನನ್ನ ಇಡೀ ರಾಜಕೀಯ ಜೀವನ ರೈತರಿಗಾಗಿ ಮುಡುಪಾಗಿದೆ. 1991ರಿಂದ 2025ರವರೆಗೆ ಸಂಸತ್ತಿನಲ್ಲಿ ನಾನು ಮಾಡಿದ ಭಾಷಣಗಳನ್ನು ಕ್ರೋಢೀಕರಿಸಿ "ನೆಗಿಲ ಗೆರೆಗಳು" (Farmers' Furrows in the Field) ಹೆಸರಿನಲ್ಲಿ ಎರಡು ಪುಸ್ತಕಗಳನ್ನು ಸಿದ್ಧಪಡಿಸಲಾಗಿದೆ. 15,000 ಪ್ರತಿಗಳನ್ನು ಮುದ್ರಿಸಲಾಗುತ್ತಿದ್ದು, ವಿದೇಶಗಳಲ್ಲೂ ಯುವಕರು ಇದನ್ನು ಓದುತ್ತಿದ್ದಾರೆ. ಶೀಘ್ರದಲ್ಲೇ ಈ ಪುಸ್ತಕ ಬಿಡುಗಡೆಯಾಗಲಿದೆ.