ರೇಣುಕಾಸ್ವಾಮಿ ಪ್ರಕರಣ: ಮಾಫಿ ಸಾಕ್ಷಿ ಪ್ರದೋಷ್‌ಗೆ ಸಿಗುತ್ತಾ ಮಧ್ಯಂತರ ಜಾಮೀನು?
ರೇಣುಕಾಸ್ವಾಮಿ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಮೂರು ವಾರಗಳ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅವರಿಗೆ ಜಾಮೀನು ಸಿಗುತ್ತಾ ಎಂದು ಇಂದು ನಿರ್ಧಾರವಾಗಲಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಜೈಲು ಪಾಲಾಗಿದ್ದರೆ, ಇತ್ತ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ಧನ್ವೀರ್ ನಡುವಿನ ಜಟಾಪಟಿ ತಾರಕಕ್ಕೇರಿದೆ. ಡಿ ಬಾಸ್ ಆಪ್ತ ವಲಯದಲ್ಲೇ ಗುರುತಿಸಿಕೊಂಡಿದ್ದ ನಟ ಧನ್ವೀರ್ ಗೌಡ ಇದೀಗ ಅವರ ಕುಟುಂಬದ ಮೇಲೆಯೇ ಆರೋಪಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕಲು ಜೈಲಿನಿಂದಲೇ ʼತಡೆಯಾಜ್ಞೆʼ ಅಸ್ತ್ರ ಪ್ರಯೋಗಿಸಿರುವ ದರ್ಶನ್, ತಮ್ಮ ಧರ್ಮ ಪತ್ನಿ, ಪುತ್ರ ಹಾಗೂ ಕುಟುಂಬದವರ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ನಟ ಧನ್ವೀರ್ ಗೌಡ ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂದು ನಿರ್ಬಂಧ ವಿಧಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇನ್ನೊಂದೆಡೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಮಾಫಿ ಸಾಕ್ಷಿ ಆಗಿರುವ ಆರೋಪಿ ಪ್ರದೋಷ್‌ಗೆ ಇಂದಾದರೂ ಮಧ್ಯಂತರ ಜಾಮೀನು ಸಿಗಲಿದ್ಯಾ? ಎಂಬ ಕುತೂಹಲವೂ ಹೆಚ್ಚಾಗಿದೆ.
ಹೌದು, ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲು ಪಾಲಾಗಿರುವ ದರ್ಶನ್ ಆಪ್ತ ಮಾಫಿ ಸಾಕ್ಷಿ ಪ್ರದೋಷ್ ಅವರು ತಮ್ಮ ತಂದೆ ತಿಥಿ ಕಾರ್ಯದಲ್ಲಿ ಭಾಗಿಯಾಗಲು ಅನುಕೂಲವಾಗುವಂತೆ ತಮಗೆ 3 ವಾರಗಳ ಮಧ್ಯಂತರ ನೀಡುವಂತೆ ಕೋರಿ 59ನೇ ಸಿಸಿಹೆಚ್ ಕೋರ್ಟ್ನಲ್ಲಿ ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಈ ಕುರಿತು ಇಂದು ಆದೇಶ ಹೊರಬೀಳುವ ನಿರೀಕ್ಷೆ ಇದೆ.
ಮಧ್ಯಂತರ ಜಾಮೀನು ನೀಡುವಂತೆ ಪ್ರದೋಷ್ ಪರ ವಕೀಲರ ವಾದ:
ಈ ಕುರಿತಂತೆ ಮಾಫಿ ಸಾಕ್ಷಿ ಪ್ರದೋಷ್ ತಮ್ಮ ತಂದೆಯ ತಿಥಿ ಕಾರ್ಯಗಳನ್ನು ತಾವೇ ಮಾಡಬೇಕಿದ್ದು, ಈ ಕಾರ್ಯದಲ್ಲಿ ಭಾಗಿಯಾಗಲು ಅನುಕೂಲವಾಗುವಂತೆ ಅವರಿಗೆ 3 ವಾರಗಳ ಜಾಮೀನು ನೀಡುವಂತೆ ಪ್ರದೋಷ್ ಪರ ವಕೀಲರು ವಾದ ಮಂಡಿಸಿದ್ದಾರೆ.
ದರ್ಶನ್ ಪರ ವಕೀಲರ ವಿರೋಧ:
ಇನ್ನೂ ಪ್ರದೋಷ್ ಜಾಮೀನು ಅರ್ಜಿಗೆ ದರ್ಶನ್ ಪರ ವಕೀಲರು ವಿರೋಧ ವ್ಯಕ್ತಪಡಿಸಿದ್ದು, ಪ್ರದೋಷ್ ಜಾಮೀನು ಅರ್ಜಿಗೆ ದರ್ಶನ್ ಪರ ವಕೀಲರ ವಿರೋಧ ಮಾಫಿ ಸಾಕ್ಷಿಯಾಗಿರುವ ವ್ಯಕ್ತಿಗೆ ಜಾಮೀನು ನೀಡಲು ಅವಕಾಶವಿಲ್ಲ. ಕ್ರಾಸ್ ಎಕ್ಸಾಮಿನೇಷನ್ ಮುಗಿಯುವವರೆಗೂ ಅವರು ಜೈಲಿನಲ್ಲಿಯೇ ಇರಬೇಕು. ಷರತ್ತು ವಿಧಿಸಿಯೇ ಕೋರ್ಟ್ ಆತನನ್ನು ಮಾಫಿ ಸಾಕ್ಷಿಯಾಗಿ ಒಪ್ಪಿಕೊಂಡಿದೆ. ಹೊರಗೆ ಬಿಟ್ಟರೆ ಕೋರ್ಟ್ ವಿಧಿಸಿರುವ ಷರತ್ತು ನಿಷ್ಪಲವಾಗುತ್ತವೆ. ಹಾಗಾಗಿ ಪ್ರದೋಷ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡದಂತೆ ಪ್ರತಿ ವಾದ ಮಂಡಿಸಿದ್ದರು.
ದರ್ಶನ್ ಪರ ವಕೀಲರ ವಾದಕ್ಕೆ ಪ್ರದೋಷ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರದೋಷ್ ಜಾಮೀನು ಅರ್ಜಿ ವಿರೋಧಿಸುವ ಯಾವುದೇ ಹಕ್ಕು ದರ್ಶನ್‌ಗೆ ಇಲ್ಲ. ಹಿಂದೂ ಧರ್ಮದ ಪ್ರಕಾರ, ಪುತ್ರನೇ ತಂದೆಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಬೇಕು ಎಂದು ಉಲ್ಲೇಖಿಸಿದ್ದರು.
ಈ ವಿಚಾರದಲ್ಲಿ ವಾದಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್, ಇಲ್ಲಿ ಪ್ರದೋಷ್ ಅರ್ಜಿಯನ್ನು ಸಮರ್ಥಿಸುತ್ತಿಲ್ಲ ಅಥವಾ ರೋಧಿಸುವುದೂ ಇಲ್ಲ. ಕೇವಲ ಕಾನೂನಿನ ಅಂಶಗಳನ್ನು ಮಾತ್ರ ಉಲ್ಲೇಖಿಸಲು ಇಚ್ಚಿಸುತ್ತೇನೆ. ಪ್ರದೋಷ್ ತಂದೆ ಸಾವನ್ನಪ್ಪಿದ್ದಾಗ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಈಗ ಪಿತೃಕಾರ್ಯಕ್ಕಾಗಿ ಮಧ್ಯಂತರ ಜಾಮೀನು ಕೇಳುತ್ತಿದ್ದಾರೆ. ಪ್ರದೋಷ್ ಈಗ ಆರೋಪಿ ಅಲ್ಲ, ಆದರೆ ಜೈಲುವಾಸಿ ಆಗಿದ್ದಾರೆ. ಸಿಆರ್‌ಪಿಸಿ ಸೆಕ್ಷನ್ 306 ಷರತ್ತಿನ ಅನ್ವಯ ಪ್ರದೋಷ್ ಜೈಲಿನಲ್ಲಿ ಇದ್ದಾರೆ. ಆರೋಪಿಗಳ ಜೊತೆಗೆ ಶಾಮೀಲಾಗಬಾರದು ಎಂದು ಜೈಲಿನಲ್ಲಿ ಇಡುವ ಷರತ್ತು ವಿಧಿಸಲಾಗಿದೆ ಎಂದು ವಾದ ಮಂಡಿಸಿದ್ದರು.
ರೇಣುಕಾಸ್ವಾಮಿ ಕೇಸ್‌ನ ಮಾಫಿ ಸಾಕ್ಷಿ ಪ್ರದೋಷ್ ಮಧ್ಯಂತರ ಜಾಮೀನಿಗೆ ಸಂಬಂಧಿಸಿದಂತೆ ವಾದ ಪ್ರತಿವಾದ ಆಲಿಸಿದ್ದ ನ್ಯಾಯಲಯ ಅ.30ಕ್ಕೆ ಜಾಮೀನು ಆದೇಶ ಕಾಯ್ದರಿಸಿತ್ತು. ಇಂದು ಪ್ರದೋಷ್‌ಗೆ ತಂದೆ ತಿಥಿ ಕಾರ್ಯದಲ್ಲಿ ಭಾಗಿಯಾಗಲು ಮಧ್ಯಂತರ ಜಾಮೀನು ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.