SOCIAL MEDIA

Newsletter

PARTNER SITES
Select Language Select State

ಜಿಲ್ಲಾ, ತಾಲೂಕು ಪಂಚಾಯ್ತಿ ಚುನಾವಣೆ: ಶೇ.50ಕ್ಕೂ ಹೆಚ್ಚು ಸ್ಥಾನಗಳು ಮಹಿಳೆಯರಿಗೆ ಮೀಸಲು

ಕರ್ನಾಟಕದ 31 ಜಿಲ್ಲಾ ಪಂಚಾಯಿತಿಗಳ 1,129 ಮತ್ತು 239 ತಾಲೂಕು ಪಂಚಾಯಿತಿಗಳ 3,656 ಸದಸ್ಯ ಸ್ಥಾನಗಳಿಗೆ ಮೀಸಲಾತಿ ಅಂತಿಮಗೊಂಡಿದೆ. ಒಟ್ಟು 4,785 ಸ್ಥಾನಗಳ ಪೈಕಿ 2,476 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದ್ದು, ಈ ಮೂಲಕ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದ ಪ್ರಮುಖ ಪ್ರಕ್ರಿಯೆಯೊಂದು ಪೂರ್ಣಗೊಂಡಿದೆ.

Written By Puttaraj K Alur
Published: Oct 07, 2026, 10:35 PM IST | Updated: Oct 07, 2026, 10:48 PM IST
Image Credit: Karnataka Panchayat Elections
Join

Karnataka Panchayat Elections 2026: ಕರ್ನಾಟಕದಲ್ಲಿ ಬಹುದಿನಗಳಿಂದ ಬಾಕಿ ಉಳಿದಿರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಪ್ರಕ್ರಿಯೆಗೆ ಇದೀಗ ಮಹತ್ವದ ವೇಗ ಸಿಕ್ಕಿದೆ. ರಾಜ್ಯ ಸರ್ಕಾರವು 31 ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ವರ್ಗವಾರು ಮತ್ತು ಮಹಿಳಾ ಮೀಸಲಾತಿಯನ್ನ ಅಂತಿಮಗೊಳಿಸಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ಚುನಾವಣೆಗೆ ಸಂಬಂಧಿಸಿದ ಪ್ರಮುಖ ಹಂತವೊಂದು ಪೂರ್ಣಗೊಂಡಂತಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಅನ್ವಯ ಮೀಸಲಾತಿ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳ ಕ್ಷೇತ್ರವಾರು ಮೀಸಲಾತಿಯ ವಿವರಗಳನ್ನ ಪ್ರಕಟಿಸಲಾಗಿದೆ.  

31 ಜಿಲ್ಲಾ ಪಂಚಾಯಿತಿಗಳ 1,129 ಸ್ಥಾನ

ರಾಜ್ಯದ 31 ಜಿಲ್ಲಾ ಪಂಚಾಯಿತಿಗಳಲ್ಲಿ ಒಟ್ಟು 1,129 ಸದಸ್ಯ ಸ್ಥಾನಗಳನ್ನ ನಿಗದಿಪಡಿಸಲಾಗಿದೆ. ಈ ಪೈಕಿ 571 ಸ್ಥಾನಗಳನ್ನ ಮಹಿಳೆಯರಿಗೆ ಮೀಸಲಿಡಲಾಗಿದೆ. ಅಂದರೆ ಜಿಲ್ಲಾ ಪಂಚಾಯಿತಿ ಹಂತದಲ್ಲೇ ಒಟ್ಟು ಸ್ಥಾನಗಳ ಅರ್ಧಕ್ಕಿಂತ ಹೆಚ್ಚಿನವು ಮಹಿಳೆಯರ ಪಾಲಾಗಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಸಾಮಾನ್ಯ ವರ್ಗಗಳಿಗೆ ಸೇರಿದ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ಅನ್ವಯವಾಗಲಿದೆ. ಇದರಿಂದ ಗ್ರಾಮೀಣ ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ರಾಜಕೀಯ ಪ್ರಾತಿನಿಧ್ಯಕ್ಕೆ ಮತ್ತಷ್ಟು ಅವಕಾಶ ದೊರೆಯಲಿದೆ.

239 ತಾಲೂಕು ಪಂಚಾಯಿತಿಗಳ 3,656 ಸ್ಥಾನ

ಇನ್ನು ರಾಜ್ಯದ 31 ಜಿಲ್ಲೆಗಳ ವ್ಯಾಪ್ತಿಯ 239 ತಾಲೂಕು ಪಂಚಾಯಿತಿಗಳಲ್ಲಿ ಒಟ್ಟು 3,656 ಸದಸ್ಯ ಸ್ಥಾನಗಳನ್ನ ನಿಗದಿಪಡಿಸಲಾಗಿದೆ. ಈ ಪೈಕಿ 1,905 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಹೀಗಾಗಿ ತಾಲೂಕು ಪಂಚಾಯಿತಿ ಹಂತದಲ್ಲಿಯೂ ಮಹಿಳೆಯರಿಗೆ ಅರ್ಧಕ್ಕಿಂತ ಹೆಚ್ಚಿನ ಸ್ಥಾನಗಳು ಮೀಸಲಾಗಿವೆ. 
ತಾಲೂಕು ಪಂಚಾಯಿತಿಯ 3,656 ಸ್ಥಾನಗಳ ವರ್ಗವಾರು ಹಂಚಿಕೆ ಹೀಗಿದೆ:

ವರ್ಗಒಟ್ಟು ಸ್ಥಾನಮಹಿಳೆಯರಿಗೆ ಮೀಸಲು
 ಪರಿಶಿಷ್ಟ ಜಾತಿ (SC)733429
ಪರಿಶಿಷ್ಟ ಪಂಗಡ (ST)394 287
ಹಿಂದುಳಿದ ವರ್ಗ–A   508306
ಹಿಂದುಳಿದ ವರ್ಗ–B  11164
ಸಾಮಾನ್ಯ ವರ್ಗ1,910 819
ಒಟ್ಟು3,6561,905

ಈ ಅಂಕಿ-ಅಂಶಗಳು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ವಿವಿಧ ಸಾಮಾಜಿಕ ವರ್ಗಗಳ ಜೊತೆಗೆ ಮಹಿಳೆಯರಿಗೂ ದೊಡ್ಡ ಪ್ರಮಾಣದ ರಾಜಕೀಯ ಪ್ರಾತಿನಿಧ್ಯ ಸಿಗಲಿದೆ ಎಂಬುದನ್ನ ತೋರಿಸುತ್ತವೆ.  

ಹಿಂದಿನ ಮೀಸಲಾತಿ ಅಧಿಸೂಚನೆ ರದ್ದು

ಈ ಬಾರಿಯ ಅಧಿಸೂಚನೆಯ ಮತ್ತೊಂದು ಪ್ರಮುಖ ಅಂಶವೆಂದರೆ, ಸರ್ಕಾರ ಈ ಹಿಂದೆ ಹೊರಡಿಸಿದ್ದ ಸಂಬಂಧಿತ ಮೀಸಲಾತಿ ಅಧಿಸೂಚನೆಗಳನ್ನ ರದ್ದುಪಡಿಸಿ ಹೊಸ ಮೀಸಲಾತಿ ಪಟ್ಟಿಯನ್ನ ಅಂತಿಮಗೊಳಿಸಿದೆ. ಅಂದರೆ ಹಿಂದಿನ ಮೀಸಲಾತಿ ಪಟ್ಟಿಯನ್ನೇ ಮುಂದುವರಿಸುವ ಬದಲು ಹೊಸದಾಗಿ ಕ್ಷೇತ್ರವಾರು ಮೀಸಲಾತಿಯನ್ನ ನಿಗದಿಪಡಿಸಲಾಗಿದೆ. ಯಾವ ಕ್ಷೇತ್ರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಅಥವಾ ಸಾಮಾನ್ಯ ವರ್ಗಕ್ಕೆ ಮೀಸಲು ಎಂಬುದರ ಜೊತೆಗೆ ಮಹಿಳೆಯರಿಗೆ ಮೀಸಲಾಗಿರುವ ಕ್ಷೇತ್ರಗಳ ವಿವರಗಳನ್ನೂ ಅಧಿಸೂಚನೆಯಲ್ಲಿ ನೀಡಲಾಗಿದೆ.  

ಮಹಿಳೆಯರಿಗೆ 50% ಮೀಸಲಾತಿಯ ಹಿನ್ನೆಲೆ ಏನು?

ಕರ್ನಾಟಕ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸುವ ಕಾನೂನುಬದ್ಧ ವ್ಯವಸ್ಥೆ ಇದೆ. ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವೂ ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆ, 2010ರ ಅಡಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ಒದಗಿಸಿರುವುದನ್ನ ದಾಖಲಿಸಿದೆ. ತಾಲೂಕು ಪಂಚಾಯಿತಿ ಮೀಸಲಾತಿಗೆ ಸಂಬಂಧಿಸಿದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಸೆಕ್ಷನ್ 123ರಲ್ಲೂ ಮಹಿಳೆಯರಿಗೆ ಮೀಸಲಾತಿ ಹಾಗೂ ಕ್ಷೇತ್ರಗಳ ರೋಟೇಷನ್‌ಗೆ ಸಂಬಂಧಿಸಿದ ನಿಯಮಗಳಿವೆ. ವಿವಿಧ ವರ್ಗಗಳಿಗೆ ಮೀಸಲಾದ ಸ್ಥಾನಗಳಲ್ಲಿಯೂ ಮಹಿಳೆಯರಿಗೆ ಕನಿಷ್ಠ ಶೇ.50ರಷ್ಟು ಮೀಸಲಾತಿ ಕಲ್ಪಿಸುವ ವ್ಯವಸ್ಥೆ ಇದೆ. ಮೀಸಲಾತಿಯನ್ನ ವಿವಿಧ ಕ್ಷೇತ್ರಗಳಿಗೆ ರೋಟೇಷನ್ ಆಧಾರದ ಮೇಲೆ ಹಂಚಿಕೆ ಮಾಡುವ ವ್ಯವಸ್ಥೆಯೂ ಕಾನೂನಿನಲ್ಲಿ ಇದೆ. ಹೀಗಾಗಿ ಒಂದು ಚುನಾವಣೆಯಲ್ಲಿ ನಿರ್ದಿಷ್ಟ ವರ್ಗ ಅಥವಾ ಮಹಿಳೆಯರಿಗೆ ಮೀಸಲಾಗಿರುವ ಕ್ಷೇತ್ರ ಮುಂದಿನ ಚುನಾವಣೆಯಲ್ಲೂ ಅದೇ ವರ್ಗಕ್ಕೆ ಮೀಸಲಾಗಿರಬೇಕು ಎಂಬ ನಿಯಮವಿಲ್ಲ.

ಚುನಾವಣೆಗೆ ದಾರಿ ಸುಗಮ

ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ, ಮೀಸಲಾತಿ ಅಂತಿಮಗೊಳಿಸಿರುವುದು ಚುನಾವಣಾ ಪ್ರಕ್ರಿಯೆಯ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಈ ಹಿಂದೆ ಸೆಪ್ಟೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ಮುಂದೆ ಸರ್ಕಾರವು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದ ವಾರ್ಡ್ ರಚನೆ ಮತ್ತು ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ತಿಳಿಸಿತ್ತು. ಇದೀಗ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಅಧಿಸೂಚನೆಯೂ ಪ್ರಕಟವಾಗಿರುವುದರಿಂದ ಮುಂದಿನ ಹಂತದ ಚುನಾವಣಾ ಪ್ರಕ್ರಿಯೆಗೆ ದಾರಿ ಮತ್ತಷ್ಟು ಸುಗಮವಾಗಿದೆ. ಇತ್ತೀಚೆಗೆ ಸಚಿವ ಬಸವರಾಜ ರಾಯರೆಡ್ಡಿ ಅವರು ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಡಿಸೆಂಬರ್‌ ವೇಳೆಗೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಆದರೆ ಚುನಾವಣೆಯ ಅಧಿಕೃತ ದಿನಾಂಕವನ್ನ ರಾಜ್ಯ ಚುನಾವಣಾ ಆಯೋಗವೇ ಪ್ರಕಟಿಸಬೇಕಿದೆ. ಆದ್ದರಿಂದ ಸರ್ಕಾರದ ಮೀಸಲಾತಿ ಅಧಿಸೂಚನೆ ಹೊರಬಂದಿರುವುದನ್ನ ಚುನಾವಣಾ ದಿನಾಂಕ ಘೋಷಣೆಯಾಗಿ ಪರಿಗಣಿಸಲು ಸಾಧ್ಯವಿಲ್ಲ.  

ರಾಜಕೀಯ ಪಕ್ಷಗಳಲ್ಲಿ ಹೆಚ್ಚಿದ ಚಟುವಟಿಕೆ

ಮೀಸಲಾತಿ ಪಟ್ಟಿ ಪ್ರಕಟವಾಗಿರುವುದರಿಂದ ಗ್ರಾಮೀಣ ರಾಜಕೀಯದಲ್ಲೂ ಚಟುವಟಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಯಾವ ಕ್ಷೇತ್ರ ಯಾವ ವರ್ಗಕ್ಕೆ ಅಥವಾ ಮಹಿಳೆಯರಿಗೆ ಮೀಸಲಾಗಿದೆ ಎಂಬುದು ಸ್ಪಷ್ಟವಾಗಿರುವುದರಿಂದ ಆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ, ಸ್ಥಳೀಯ ಮಟ್ಟದ ರಾಜಕೀಯ ಲೆಕ್ಕಾಚಾರ ಹಾಗೂ ಪಕ್ಷಗಳ ಸಂಘಟನಾ ಚಟುವಟಿಕೆಗಳಿಗೆ ವೇಗ ಸಿಗುವ ನಿರೀಕ್ಷೆಯಿದೆ. ವಿಶೇಷವಾಗಿ ಮಹಿಳೆಯರಿಗೆ 571 ಜಿಲ್ಲಾ ಪಂಚಾಯಿತಿ ಹಾಗೂ 1,905 ತಾಲೂಕು ಪಂಚಾಯಿತಿ ಸ್ಥಾನಗಳು ಮೀಸಲಾಗಿರುವುದರಿಂದ ಗ್ರಾಮೀಣ ರಾಜಕೀಯದಲ್ಲಿ ಮಹಿಳಾ ನಾಯಕತ್ವಕ್ಕೆ ದೊಡ್ಡ ಅವಕಾಶ ಸೃಷ್ಟಿಯಾಗಿದೆ.

ಒಟ್ಟಾರೆ ಎಷ್ಟು ಸ್ಥಾನ?

ಜಿಲ್ಲಾ ಪಂಚಾಯಿತಿಯ 1,129 ಸ್ಥಾನಗಳು ಮತ್ತು ತಾಲೂಕು ಪಂಚಾಯಿತಿಯ 3,656 ಸ್ಥಾನಗಳು ಸೇರಿ ಒಟ್ಟು 4,785 ಸ್ಥಾನಗಳಿಗೆ ಮೀಸಲಾತಿ ಅಂತಿಮಗೊಂಡಿದೆ. ಇವುಗಳಲ್ಲಿ ಜಿಲ್ಲಾ ಪಂಚಾಯಿತಿಯ 571 ಮತ್ತು ತಾಲೂಕು ಪಂಚಾಯಿತಿಯ 1,905 ಸ್ಥಾನಗಳು ಸೇರಿದಂತೆ ಒಟ್ಟು 2,476 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಹೀಗಾಗಿ ಒಟ್ಟು 4,785 ಸ್ಥಾನಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಥಾನಗಳು ಮಹಿಳೆಯರ ಪಾಲಾಗಿವೆ. ಈ ಬೆಳವಣಿಗೆ ಕರ್ನಾಟಕದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರ ರಾಜಕೀಯ ಪ್ರಾತಿನಿಧ್ಯಕ್ಕೆ ಮತ್ತಷ್ಟು ಬಲ ನೀಡುವ ನಿರೀಕ್ಷೆ ಮೂಡಿಸಿದೆ. ಮುಂದಿನ ಹಂತದಲ್ಲಿ ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿ ಪ್ರಕಟಿಸುವುದು ಪ್ರಮುಖವಾಗಲಿದೆ. ಕ್ಷೇತ್ರವಾರು ಮೀಸಲಾತಿ ಅಂತಿಮಗೊಂಡಿರುವುದರಿಂದ ಇದೀಗ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಗಮನ ಚುನಾವಣಾ ದಿನಾಂಕದತ್ತ ನೆಟ್ಟಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES