Karnataka Drought Crisis: ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ವ್ಯಾಪಕವಾಗಿದ್ದು, ರಾಜ್ಯ ಸರ್ಕಾರವು ಹೊಸದಾಗಿ 40 ತಾಲೂಕುಗಳನ್ನ ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿದೆ. ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಒಟ್ಟು ಸಂಖ್ಯೆ 217ಕ್ಕೆ ಏರಿಕೆಯಾಗಿದೆ. ಈಗಾಗಲೇ 177 ತಾಲೂಕುಗಳನ್ನ ಬರಪೀಡಿತ ಎಂದು ಘೋಷಿಸಲಾಗಿತ್ತು. ಇದೀಗ ಸ್ಥಳ ಪರಿಶೀಲನೆ ಹಾಗೂ ವೈಜ್ಞಾನಿಕ ಮೌಲ್ಯಮಾಪನವಾದ ಗ್ರೌಂಡ್ ಟ್ರೂಥಿಂಗ್ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೆಚ್ಚುವರಿ 40 ತಾಲೂಕುಗಳ ಅಂತಿಮ ಪಟ್ಟಿಯನ್ನ ಪ್ರಕಟಿಸಲಾಗಿದೆ.
ಹೊಸ ತಾಲೂಕುಗಳ ಸೇರ್ಪಡೆಯೊಂದಿಗೆ ರಾಜ್ಯದ ಬಹುತೇಕ ಭಾಗ ಬರದ ಪರಿಣಾಮಕ್ಕೆ ಒಳಗಾದಂತಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ರಾಜ್ಯದ 240 ತಾಲೂಕುಗಳ ಪೈಕಿ ಇದೀಗ 217 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿವೆ. ಅಂದರೆ ಕೇವಲ 23 ತಾಲೂಕುಗಳು ಮಾತ್ರ ಪ್ರಸ್ತುತ ಬರಪೀಡಿತ ಪಟ್ಟಿಯಿಂದ ಹೊರಗಿವೆ.
ಗ್ರೌಂಡ್ ಟ್ರೂಥಿಂಗ್ ಬಳಿಕ ಅಂತಿಮ ಪಟ್ಟಿ
ಬರ ಪರಿಸ್ಥಿತಿಯನ್ನ ನಿರ್ಧರಿಸಲು ಸರ್ಕಾರವು ವೈಜ್ಞಾನಿಕ ಮೌಲ್ಯಮಾಪನ ಹಾಗೂ ಸ್ಥಳೀಯ ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಿದೆ. ಮಳೆ ಕೊರತೆ, ಕೃಷಿ ಪರಿಸ್ಥಿತಿ ಸೇರಿದಂತೆ ವಿವಿಧ ಅಂಶಗಳನ್ನ ಪರಿಗಣಿಸಿ ತಾಲೂಕುಗಳನ್ನ ಬರಪೀಡಿತ ಎಂದು ಗುರುತಿಸಲಾಗುತ್ತಿದೆ. ಈ ಪ್ರಕ್ರಿಯೆಯ ಭಾಗವಾಗಿ ಈಗಾಗಲೇ 177 ತಾಲೂಕುಗಳನ್ನ ಬರಪೀಡಿತ ಎಂದು ಘೋಷಿಸಲಾಗಿತ್ತು. ನಂತರ ಬರ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ತಾಲೂಕುಗಳಲ್ಲೂ ಪರಿಶೀಲನೆ ನಡೆಸಲಾಯಿತು. ಗ್ರೌಂಡ್ ಟ್ರೂಥಿಂಗ್ ಪೂರ್ಣಗೊಂಡ ಬಳಿಕ ಇದೀಗ ಮತ್ತೊಂದು 40 ತಾಲೂಕುಗಳನ್ನ ಅಧಿಕೃತ ಪಟ್ಟಿಗೆ ಸೇರಿಸಲಾಗಿದೆ.
ರಾಜ್ಯದ ಬರ ಪರಿಸ್ಥಿತಿಯನ್ನು ಸರ್ಕಾರ ನಿರಂತರವಾಗಿ ಪರಿಶೀಲಿಸುತ್ತಿದ್ದು, ರೈತರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. 217 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನೂ 23 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಪರಿಶೀಲನೆಯ ಬಳಿಕ 10ರಿಂದ 15 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರುವ ಸಾಧ್ಯತೆ ಇದೆ. ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಅವರ ಬದುಕಿಗೆ ಅಗತ್ಯ ನೆರವು ಒದಗಿಸಲು ಸರ್ಕಾರ ಸದಾ ಬದ್ಧವಾಗಿದೆ. The Government is continuously reviewing the drought situation across the State and taking necessary measures to respond swiftly to the difficulties faced by farmers. 217 taluks have already been declared drought-affected, while ground truthing is underway in another 23 taluks. Following the assessment, 10 to 15 more taluks are likely to be added to the drought-affected list. Our Government remains committed to standing by farmers and providing them with the support they need during this difficult period.
— Dr. G Parameshwara (@DrParameshwara) October 7, 2026
ಇಂಡಿ, ಚಡಚಣ ಸೇರಿ ಯಾವ ತಾಲೂಕುಗಳು?
ಹೊಸದಾಗಿ ಬರಪೀಡಿತ ಪಟ್ಟಿಗೆ ಸೇರ್ಪಡೆಯಾದ 40 ತಾಲೂಕುಗಳಲ್ಲಿ ಇಂಡಿ, ಚಡಚಣ, ಗದಗ, ಮುಂಡರಗಿ, ರೋಣ, ತಾಳಿಕೋಟೆ, ಕುಷ್ಟಗಿ, ಜಗಳೂರು, ಕನಕಪುರ, ಚನ್ನಪಟ್ಟಣ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ತಾಲೂಕುಗಳಿವೆ.
ಹೊಸ ಪಟ್ಟಿಯಲ್ಲಿರುವ ತಾಲೂಕುಗಳ ವಿವರ ಹೀಗಿದೆ:
ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ, ಜಗಳೂರು, ಪಿರಿಯಾಪಟ್ಟಣ, ಕುಷ್ಟಗಿ, ಔರಾದ್, ಗೋಕಾಕ್, ರಾಮದುರ್ಗ, ಸವದತ್ತಿ, ಕಾಗವಾಡ, ಇಂಡಿ, ಚಡಚಣ, ತಾಳಿಕೋಟೆ, ಗದಗ, ಮುಂಡರಗಿ, ರೋಣ, ಹಿರೇಕೆರೂರು, ಧಾರವಾಡ, ಕಲಘಟಗಿ, ಕುಂದಗೋಳ, ಅಳ್ನಾವರ, ಭದ್ರಾವತಿ, ಶಿಕಾರಿಪುರ, ಶಿವಮೊಗ್ಗ, ಸೊರಬ, ತೀರ್ಥಹಳ್ಳಿ, ಚಿಕ್ಕಮಗಳೂರು, ಕಳಸ, ಮಡಿಕೇರಿ, ಕುಶಾಲನಗರ, ಬೆಳ್ತಂಗಡಿ, ಬಂಟ್ವಾಳ, ಉಳ್ಳಾಲ, ಉಡುಪಿ, ಬೈಂದೂರು, ಅಂಕೋಲ, ಭಟ್ಕಳ, ಹಳಿಯಾಳ ಮತ್ತು ಶಿರಸಿ. ಹೀಗಾಗಿ ಉತ್ತರ ಕರ್ನಾಟಕದಿಂದ ಮಲೆನಾಡು, ಕರಾವಳಿ ಹಾಗೂ ದಕ್ಷಿಣ ಕರ್ನಾಟಕದ ಹಲವು ತಾಲೂಕುಗಳಿಗೂ ಬರದ ಬಿಸಿ ತಟ್ಟಿರುವುದು ಪಟ್ಟಿಯಿಂದ ಸ್ಪಷ್ಟವಾಗುತ್ತದೆ.
ಹಂತ ಹಂತವಾಗಿ ಹೆಚ್ಚಿದ ಬರಪೀಡಿತ ತಾಲೂಕುಗಳ ಸಂಖ್ಯೆ
ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಘೋಷಣೆ ಒಂದೇ ಹಂತದಲ್ಲಿ ನಡೆದಿಲ್ಲ. ಮೊದಲ ಹಂತದಲ್ಲಿ ಆಗಸ್ಟ್ 27ರಂದು 101 ತಾಲೂಕುಗಳನ್ನ ಬರಪೀಡಿತ ಎಂದು ಘೋಷಿಸಲಾಗಿತ್ತು. ಬಳಿಕ ಸೆಪ್ಟೆಂಬರ್‌ನಲ್ಲಿ ಹೆಚ್ಚುವರಿಯಾಗಿ 23 ತಾಲೂಕುಗಳು, ನಂತರ 53 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿದ್ದವು. ಇದೀಗ ನಾಲ್ಕನೇ ಹಂತದಲ್ಲಿ 40 ತಾಲೂಕುಗಳನ್ನ ಸೇರಿಸಲಾಗಿದೆ. ಈ ಎಲ್ಲಾ ಹಂತಗಳ ಬಳಿಕ ಒಟ್ಟು ಸಂಖ್ಯೆ 217ಕ್ಕೆ ತಲುಪಿದೆ.
ರಾಜ್ಯದ ಶೇ.90ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ
240 ತಾಲೂಕುಗಳ ಪೈಕಿ 217 ತಾಲೂಕುಗಳು ಬರಪೀಡಿತವಾಗಿರುವುದರಿಂದ ರಾಜ್ಯದ ಸುಮಾರು 90.4% ತಾಲೂಕುಗಳು ಬರ ಪರಿಸ್ಥಿತಿಗೆ ಒಳಗಾಗಿವೆ. ಉಳಿದ 23 ತಾಲೂಕುಗಳು ಮಾತ್ರ ಈ ಪಟ್ಟಿಯಿಂದ ಹೊರಗಿವೆ. ಈ ವ್ಯಾಪಕ ಬರ ಪರಿಸ್ಥಿತಿಯ ಪರಿಣಾಮ ಕೃಷಿ ಚಟುವಟಿಕೆ, ಬೆಳೆ ಉತ್ಪಾದನೆ, ಜಲಮೂಲಗಳು ಹಾಗೂ ರೈತರ ಆದಾಯದ ಮೇಲೆ ಬೀರುವ ಆತಂಕ ಹೆಚ್ಚಾಗಿದೆ.
ರೈತರಿಗೆ ಪರಿಹಾರದ ನಿರೀಕ್ಷೆ
ಬರಪೀಡಿತ ತಾಲೂಕುಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಪರಿಹಾರ, ಬೆಳೆ ನಷ್ಟದ ಮೌಲ್ಯಮಾಪನ ಹಾಗೂ ಕುಡಿಯುವ ನೀರು ಸೇರಿದಂತೆ ಅಗತ್ಯ ಪರಿಹಾರ ಕ್ರಮಗಳತ್ತ ಸರ್ಕಾರದ ಗಮನ ಮತ್ತಷ್ಟು ಹೆಚ್ಚಬೇಕಾಗಿದೆ. ಈಗಾಗಲೇ 177 ತಾಲೂಕುಗಳಲ್ಲಿ ಬೆಳೆ ನಷ್ಟದ ಅಂದಾಜು ಪ್ರಕ್ರಿಯೆ ನಡೆಸಲಾಗಿದ್ದು, ಕೇಂದ್ರ ಸರ್ಕಾರದಿಂದ ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ನೆರವು ಕೋರಿದೆ. ಹೊಸದಾಗಿ ಸೇರ್ಪಡೆಯಾದ 40 ತಾಲೂಕುಗಳಲ್ಲೂ ಬೆಳೆ ನಷ್ಟದ ಮೌಲ್ಯಮಾಪನ ಹಾಗೂ ಸಂಬಂಧಿತ ಕ್ರಮಗಳು ಮುಂದುವರಿಯಲಿವೆ. ಕರ್ನಾಟಕದ ಬರ ಪರಿಸ್ಥಿತಿಯ ಮೌಲ್ಯಮಾಪನಕ್ಕಾಗಿ ಕೇಂದ್ರ ತಂಡವೂ ರಾಜ್ಯಕ್ಕೆ ಭೇಟಿ ನೀಡಿ ವಿವಿಧ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ನಷ್ಟ ಹಾಗೂ ರೈತರ ಪರಿಸ್ಥಿತಿಯನ್ನ ಪರಿಶೀಲಿಸಿದೆ. ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳು ಬರಪೀಡಿತವಾಗಿವೆ ಎಂದು ಕೇಂದ್ರ ತಂಡಕ್ಕೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಒಟ್ನಲ್ಲಿ ಇಂಡಿ, ಚಡಚಣ ಸೇರಿದಂತೆ ಮತ್ತೆ 40 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿದ್ದು, ಕರ್ನಾಟಕದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 217ಕ್ಕೆ ಏರಿಕೆಯಾಗಿದೆ. ರಾಜ್ಯದ ಬಹುತೇಕ ತಾಲೂಕುಗಳು ಬರದ ಪರಿಣಾಮ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪರಿಹಾರ ಕಾರ್ಯಗಳು, ಬೆಳೆ ನಷ್ಟದ ಅಂದಾಜು ಹಾಗೂ ಕೇಂದ್ರದ ನೆರವು ಪ್ರಮುಖವಾಗಲಿದೆ.