ಧಾರವಾಡ : ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ಶುಕ್ರವಾರ ಜಿಲ್ಲೆಯಾದ್ಯಂತ ಬಿರುಸಿನಿಂದ ನಡೆಯಿತು. ಸಂಜೆ 4 ಗಂಟೆಯವರೆಗೆ ಧಾರವಾಡ ಜಿಲ್ಲೆಯಲ್ಲಿ ಶೇ. 69.16ರಷ್ಟು ಮತದಾನ ದಾಖಲಾಗಿದ್ದು, ಸಂಜೆ ವೇಳೆ ಸುರಿದ ಜೋರು ಮಳೆ ಮತದಾನಕ್ಕೆ ಕೆಲಕಾಲ ಅಡ್ಡಿ ಮಾಡಿತು. ಮತದಾನದ ಸಂದರ್ಭದಲ್ಲಿ ಹುಬ್ಬಳ್ಳಿ, ಧಾರವಾಡ ಹಾಗೂ ನವಲಗುಂದದ ವಿವಿಧ ಮತಗಟ್ಟೆಗಳ ಬಳಿ ಗೊಂದಲ, ವಾಗ್ವಾದ ಮತ್ತು ಗಲಾಟೆಗಳು ನಡೆದಿರುವುದು ಗಮನ ಸೆಳೆಯಿತು.
ಬೆಳಗ್ಗಿನಿಂದಲೇ ಮತಗಟ್ಟೆಗಳಲ್ಲಿ ಪದವೀಧರ ಮತದಾರರು ಉತ್ಸಾಹದಿಂದ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಸಂಜೆ ವೇಳೆಗೆ ಮಳೆ ಸುರಿದಿದ್ದರಿಂದ ಮತದಾನದ ವೇಗದ ಮೇಲೆ ಪರಿಣಾಮ ಬೀರಿತು. ಜಿಲ್ಲೆಯಾದ್ಯಂತ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಮತದಾನ ಪ್ರಕ್ರಿಯೆಯ ಮೇಲೆ ನಿಗಾ ಇರಿಸಿದ್ದರು.
24,288 ಮಂದಿ ಮತದಾನ
ಧಾರವಾಡ ಜಿಲ್ಲೆಯಲ್ಲಿ ಒಟ್ಟು 35,119 ಮತದಾರರು ನೋಂದಾಯಿಸಿಕೊಂಡಿದ್ದರು. ಸಂಜೆ 4 ಗಂಟೆಯವರೆಗೆ 24,288 ಮಂದಿ ಮತ ಚಲಾಯಿಸಿದ್ದು, ಇವರಲ್ಲಿ 14,546 ಪುರುಷರು ಹಾಗೂ 9,742 ಮಹಿಳಾ ಮತದಾರರು ಇದ್ದಾರೆ. ನಾಲ್ಕು ಜಿಲ್ಲೆಗಳನ್ನು ಒಳಗೊಂಡ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಒಟ್ಟು 97,398 ಮತದಾರರಿದ್ದಾರೆ. ಮತದಾನ ಪ್ರಕ್ರಿಯೆಯ ಸುಗಮ ನಿರ್ವಹಣೆಗಾಗಿ 822 ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಹೆಚ್ಚುವರಿಯಾಗಿ 196 ಸಿಬ್ಬಂದಿಯನ್ನು ಕಾಯ್ದಿರಿಸಲಾಗಿತ್ತು.
ಪ್ರಮುಖರಿಂದ ಮತದಾನ
ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರು ಕುಟುಂಬ ಸಮೇತರಾಗಿ ಆಗಮಿಸಿ, ಬಸವೇಶ್ವರ ನಗರದ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹುಬ್ಬಳ್ಳಿಯ ಕೇಶ್ವಾಪುರದ ಫಾತಿಮಾ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಧಾರವಾಡದ ಕರ್ನಾಟಕ ಕಲಾ ಕಾಲೇಜಿನ ಆವರಣದಲ್ಲಿರುವ ಕರ್ನಾಟಕ ಕಾಲೇಜು ಮ್ಯಾನೇಜ್‌ಮೆಂಟ್, ವಿದ್ಯಾರ್ಥಿ ಮತ್ತು ಕಂಪ್ಯೂಟರ್ ವಿಜ್ಞಾನ ಹಾಗೂ ಬಿಬಿಎ ಕಟ್ಟಡದ ಕೊಠಡಿ ಸಂಖ್ಯೆ 2ರಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಮೂವರಿಗೆ ಮತದಾನ ನಿರಾಕರಣೆ ಆರೋಪ
ಹುಬ್ಬಳ್ಳಿಯ ವಿದ್ಯಾನಗರದ ಜೆ.ಜಿ. ಕಾಲೇಜಿನ ಮತಗಟ್ಟೆಯಲ್ಲಿ ಮೂವರು ಮತದಾರರಿಗೆ ಮತ ಚಲಾಯಿಸಲು ಅವಕಾಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿತು. ಈ ಘಟನೆಯನ್ನು ಖಂಡಿಸಿ ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.
ಮತಗಟ್ಟೆ ಸಿಬ್ಬಂದಿ ಮೂವರು ಮತದಾರರಿಗೆ ಮತದಾನ ಮಾಡಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ ಕಾರ್ಯಕರ್ತರು, ಈ ಕುರಿತು ಪ್ರತಿಭಟನೆ ನಡೆಸಿದರು. ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕು ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾಗಿದ್ದು, ಅದನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಯುವ ಕಾಂಗ್ರೆಸ್ ಮುಖಂಡ ಅರುಣ್ ಪಾಟೀಲ್ ಹೇಳಿದರು.
ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಮತದಾನದ ಹಕ್ಕಿನ ರಕ್ಷಣೆಗೆ ತಮ್ಮ ಸಂಘಟನೆ ಬದ್ಧವಾಗಿದೆ ಎಂದು ಅವರು ತಿಳಿಸಿದರು. ಘಟನೆಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗಳು ಸಮಗ್ರ ತನಿಖೆ ನಡೆಸಿ, ಸತ್ಯಾಸತ್ಯತೆ ಪರಿಶೀಲಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅರ್ಜುನ್ ಪಾಟೀಲ್ ಆಗ್ರಹಿಸಿದರು.
ನವಲಗುಂದದಲ್ಲಿ ಕೈ–ಕಮಲ ಮುಖಂಡರ ಜಟಾಪಟಿ
ನವಲಗುಂದದಲ್ಲಿ ಮತದಾನದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಜಟಾಪಟಿ ನಡೆಯಿತು. ಸ್ಥಳೀಯ ತಾಲೂಕು ಪಂಚಾಯಿತಿ ಆವರಣದಲ್ಲಿನ ಮತಗಟ್ಟೆಯ ಹೊರಭಾಗದಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಾಗ್ವಾದ ತೀವ್ರಗೊಂಡು, ಎರಡೂ ಪಕ್ಷಗಳ ಕಾರ್ಯಕರ್ತರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದರು.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಎರಡೂ ಕಡೆಯವರನ್ನು ಸಮಾಧಾನಪಡಿಸಿದರು. ಇದರಿಂದ ಸ್ಥಳದಲ್ಲಿ ಉಂಟಾಗಿದ್ದ ಉದ್ವಿಗ್ನತೆ ನಿಯಂತ್ರಣಕ್ಕೆ ಬಂತು. ಚುನಾವಣೆಯ ಸಂದರ್ಭದಲ್ಲಿ ನಡೆದ ಈ ಘಟನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಯಿತು.
ಪ್ರೆಸೆಂಟೇಶನ್ ಶಾಲೆಯಲ್ಲೂ ಗೊಂದಲ
ಧಾರವಾಡದ ಪ್ರೆಸೆಂಟೇಶನ್ ಶಾಲೆಯ ಮತಗಟ್ಟೆಯಲ್ಲಿಯೂ ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಚಿಂಚೂರೆ ಅವರು ಚುನಾವಣಾ ಸೆಕ್ಟರ್ ಅಧಿಕಾರಿ ಹೆಗಡೆ ಅವರಿಗೆ ದೂರವಾಣಿ ಕರೆ ಮಾಡಿ ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಸೂಚನೆ ಇದ್ದರೂ ಮತದಾರರ ಪಟ್ಟಿಯನ್ನು ಪರಿಶೀಲಿಸಲು ಅವಕಾಶ ನೀಡುತ್ತಿಲ್ಲ ಎಂದು ಚಿಂಚೂರೆ ಆರೋಪಿಸಿದರು. ಅಲ್ಲದೆ, ಅಧಿಕಾರಿಗಳು ಆರ್‌ಎಸ್‌ಎಸ್ ಏಜೆಂಟ್‌ನಂತೆ ಕೆಲಸ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.