NICE Road Controversy: ಬೆಂಗಳೂರಿನ ನೈಸ್ ರಸ್ತೆಯ ಟೋಲ್ ಸಂಗ್ರಹ, ಯೋಜನೆಗೆ ಮಾಡಿರುವ ಹೂಡಿಕೆ ಹಾಗೂ ಕಾಮಗಾರಿಯ ಪ್ರಗತಿ ಕುರಿತು ಹೊಸ ವಿವಾದ ಮುನ್ನೆಲೆಗೆ ಬಂದಿದೆ. ನೈಸ್ ಯೋಜನೆಯ ಆದಾಯದ ಲೆಕ್ಕಾಚಾರದಲ್ಲಿ ದೊಡ್ಡ ವ್ಯತ್ಯಾಸಗಳಿವೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಈ ಸಂಬಂಧ ಸರ್ಕಾರದ ಬಳಿ ಇರುವ ವರದಿಯನ್ನ ಸಾರ್ವಜನಿಕವಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಫಾಸ್ಟ್‌ಟ್ಯಾಗ್ ವ್ಯವಸ್ಥೆ ಜಾರಿಗೆ ಬರುವುದಕ್ಕೂ ಮುನ್ನ ಮತ್ತು ನಂತರದ ಟೋಲ್ ಆದಾಯದ ಅಂಕಿ-ಅಂಶಗಳನ್ನ ಮುಂದಿಟ್ಟುಕೊಂಡು ಅವರು ಹಲವು ಪ್ರಶ್ನೆಗಳನ್ನ ಎತ್ತಿದ್ದಾರೆ.
ಜೆಡಿಎಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನೈಸ್ ಯೋಜನೆಯ ಹಣಕಾಸು ನಿರ್ವಹಣೆ ಮತ್ತು ಕಾಮಗಾರಿಯ ಪ್ರಗತಿಗೆ ಸಂಬಂಧಿಸಿದಂತೆ ವರದಿಯಲ್ಲಿ ಉಲ್ಲೇಖವಾಗಿರುವ ಅಂಶಗಳನ್ನ ಪ್ರಸ್ತಾಪಿಸಿದರು. ಯೋಜನೆಗೆ ಸಂಬಂಧಿಸಿದ ಒಪ್ಪಂದದ ಷರತ್ತುಗಳು, ಹೂಡಿಕೆಯ ಪ್ರಮಾಣ, ಟೋಲ್ ಮೂಲಕ ಸಂಗ್ರಹವಾಗಿರುವ ಹಣ ಹಾಗೂ ನಿರ್ವಹಣಾ ವೆಚ್ಚದ ಲೆಕ್ಕಗಳನ್ನ ಸಮಗ್ರವಾಗಿ ಪರಿಶೀಲಿಸಬೇಕು ಎಂಬುದು ಅವರ ಪ್ರಮುಖ ಆಗ್ರಹವಾಗಿದೆ.
ಫಾಸ್ಟ್‌ಟ್ಯಾಗ್ ನಂತರ ಆದಾಯದಲ್ಲಿ ಭಾರೀ ಏರಿಕೆ?
ನೈಸ್ ರಸ್ತೆಯ ಟೋಲ್ ಸಂಗ್ರಹದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಫಾಸ್ಟ್‌ಟ್ಯಾಗ್ ಜಾರಿಗೆ ಬರುವ ಮೊದಲು ವಾರ್ಷಿಕ ಟೋಲ್ ಆದಾಯವನ್ನ ಸುಮಾರು ₹60ರಿಂದ ₹70 ಕೋಟಿ ಎಂದು ತೋರಿಸಲಾಗುತ್ತಿತ್ತು. ಆದರೆ 2022ರಲ್ಲಿ ಫಾಸ್ಟ್‌ಟ್ಯಾಗ್ ವ್ಯವಸ್ಥೆ ಅಳವಡಿಸಿದ ಬಳಿಕ ವಾರ್ಷಿಕ ಸಂಗ್ರಹ ಸುಮಾರು ₹700 ಕೋಟಿಗೆ ಏರಿಕೆಯಾಗಿದೆ ಎಂದು ವರದಿಯ ಅಂಕಿ-ಅಂಶಗಳನ್ನ ಉಲ್ಲೇಖಿಸಿದರು. ಹಿಂದಿನ ಮತ್ತು ನಂತರದ ಆದಾಯದ ನಡುವೆ ಇಷ್ಟೊಂದು ದೊಡ್ಡ ವ್ಯತ್ಯಾಸ ಕಾಣಿಸಿಕೊಂಡಿರುವುದಕ್ಕೆ ಕಾರಣವೇನು ಎಂಬುದನ್ನ ಸ್ಪಷ್ಟಪಡಿಸಬೇಕೆಂದು ಅವರು ಒತ್ತಾಯಿಸಿದರು. ಫಾಸ್ಟ್‌ಟ್ಯಾಗ್ ಅಳವಡಿಕೆಗೂ ಮುನ್ನ ಸಂಗ್ರಹವಾಗುತ್ತಿದ್ದ ಹಣದ ನಿಖರ ಲೆಕ್ಕವನ್ನ ಬಹಿರಂಗಪಡಿಸಬೇಕು. ಹಿಂದಿನ ಆದಾಯದ ವಿವರಗಳು ಮತ್ತು ಈಗಿನ ಸಂಗ್ರಹದ ನಡುವೆ ಕಂಡುಬರುವ ವ್ಯತ್ಯಾಸದ ಬಗ್ಗೆ ತನಿಖೆ ನಡೆಯಬೇಕು ಎಂಬುದು ಅವರ ವಾದವಾಗಿದೆ.
₹730 ಕೋಟಿ ವಾರ್ಷಿಕ ಸಂಗ್ರಹದ ಬಗ್ಗೆ ಪ್ರಶ್ನೆ
ಯೋಜನೆಗೆ ಸಂಬಂಧಿಸಿದ ಹೂಡಿಕೆ ಮತ್ತು ಆದಾಯದ ಲೆಕ್ಕಾಚಾರವನ್ನೂ ಕೇಂದ್ರ ಸಚಿವರು ಪ್ರಶ್ನಿಸಿದ್ದಾರೆ. ನೈಸ್ ಸಂಸ್ಥೆಯು ಯೋಜನೆಗಾಗಿ ಮಾಡಬೇಕಿದ್ದ ಸಂಪೂರ್ಣ ಹೂಡಿಕೆಗೆ ಹೋಲಿಸಿದರೆ ಸುಮಾರು ಶೇ.40ರಷ್ಟು ಮೊತ್ತವನ್ನಷ್ಟೇ ಹೂಡಿಕೆ ಮಾಡಲಾಗಿದೆ ಎಂಬ ಆರೋಪವನ್ನ ಅವರು ಮುಂದಿಟ್ಟರು. ಪ್ರಸ್ತುತ ವರ್ಷಕ್ಕೆ ಸುಮಾರು ₹730 ಕೋಟಿ ಟೋಲ್ ಆದಾಯ ಸಂಗ್ರಹವಾಗುತ್ತಿದೆ ಎಂದು ಉಲ್ಲೇಖಿಸಿದ ಅವರು, ಈವರೆಗೆ ಒಟ್ಟಾರೆ ಸುಮಾರು ₹4,500 ಕೋಟಿ ಸಂಗ್ರಹವಾಗಿದೆ ಎಂದು ತಿಳಿಸಿದರು. ನಿರ್ವಹಣಾ ವೆಚ್ಚವನ್ನೂ ಪರಿಗಣಿಸಬೇಕೆಂಬ ವಾದವಿದ್ದರೂ, ಯೋಜನೆಯ ಒಪ್ಪಂದದ ಅವಧಿ 30 ವರ್ಷಗಳಾಗಿದ್ದು, ಆ ಅವಧಿಯಲ್ಲಿ ನಿರ್ವಹಣೆಯ ಜವಾಬ್ದಾರಿಯೂ ಸಂಸ್ಥೆಯ ಮೇಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬಿಡದಿ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಎಷ್ಟು ಪೂರ್ಣ?
ನೈಸ್ ಯೋಜನೆಯ ಕಾಮಗಾರಿಯ ವೇಗದ ಬಗ್ಗೆಯೂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ಕ್ಲೋವರ್‌ಲೀಫ್ ಜಂಕ್ಷನ್‌ನಿಂದ ಬಿಡದಿವರೆಗಿನ ಎಕ್ಸ್‌ಪ್ರೆಸ್‌ವೇ ಕಾಮಗಾರಿಯಲ್ಲಿ, ನೇಮಕಾತಿಯ ದಿನಾಂಕದಿಂದ ಎಂಟು ವರ್ಷಗಳ ಅವಧಿಯಲ್ಲಿ ಕೇವಲ ಶೇ.20ರಷ್ಟು ಕೆಲಸ ಮಾತ್ರ ಪೂರ್ಣಗೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು. ಮೈಸೂರುವರೆಗೆ ಯೋಜನೆಯನ್ನ ವಿಸ್ತರಿಸುವ ಉದ್ದೇಶವಿದ್ದಾಗ ಅದಕ್ಕೆ ಅಡ್ಡಿಯಾದವರು ಯಾರು ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು. ಯೋಜನೆಯ ಅನುಷ್ಠಾನದಲ್ಲಿ ಒಪ್ಪಂದದ ಷರತ್ತುಗಳು ಮತ್ತು ಸರ್ಕಾರದ ಆದೇಶಗಳನ್ನ ಪಾಲಿಸಲಾಗಿದೆಯೇ ಎಂಬುದನ್ನ ಪರಿಶೀಲಿಸಬೇಕೆಂದು ಆಗ್ರಹಿಸಿದರು. ಸರ್ಕಾರವೇ ನೇಮಿಸಿದ ಖಾಸಗಿ ಸಂಸ್ಥೆ ಸಿದ್ಧಪಡಿಸಿದೆ ಎನ್ನಲಾದ ವರದಿಯನ್ನ ಸಾರ್ವಜನಿಕರ ಮುಂದಿಡಬೇಕು. ಯೋಜನೆಯ ಪ್ರಗತಿ ಮತ್ತು ಹಣಕಾಸಿನ ವ್ಯವಹಾರಗಳ ಬಗ್ಗೆ ಅಧಿಕೃತ ದಾಖಲೆಗಳ ಆಧಾರದಲ್ಲಿ ಚರ್ಚೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ನೈಸ್ ವಿವಾದಕ್ಕೆ ಜಾತಿಯ ಬಣ್ಣ ಬೇಡ
ಈ ಯೋಜನೆಯ ಕುರಿತ ಚರ್ಚೆಯನ್ನ ಜಾತಿ ವಿಚಾರದೊಂದಿಗೆ ಜೋಡಿಸಲಾಗುತ್ತಿರುವುದಕ್ಕೂ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ನೈಸ್ ಗುತ್ತಿಗೆದಾರರು ಲಿಂಗಾಯತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ದೇವೇಗೌಡರು ಮತ್ತು ತಾವು ಯೋಜನೆಯನ್ನ ವಿರೋಧಿಸುತ್ತಿದ್ದಾರೆ ಎಂಬ ರೀತಿಯ ಹೇಳಿಕೆಗಳು ಸರಿಯಲ್ಲವೆಂದು ಅವರು ತಿಳಿಸಿದರು. ಯೋಜನೆಯಲ್ಲಿನ ಹಣಕಾಸು ವ್ಯವಹಾರಗಳು, ಕಾಮಗಾರಿಯ ಪ್ರಗತಿ ಮತ್ತು ಒಪ್ಪಂದದ ಪಾಲನೆಯ ಬಗ್ಗೆ ಪ್ರಶ್ನೆ ಎತ್ತುವುದು ಜಾತಿಗೆ ಸಂಬಂಧಿಸಿದ ವಿಚಾರವಲ್ಲ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳನ್ನ ಸಮುದಾಯದ ಗುರುತಿನೊಂದಿಗೆ ಬೆರೆಸಬಾರದು ಎಂಬುದು ಅವರ ನಿಲುವಾಗಿದೆ.
ಬರ ಪರಿಹಾರ, ರೈತರ ನೆರವಿನ ಬಗ್ಗೆಯೂ ಪ್ರಸ್ತಾಪ
ಸುದ್ದಿಗೋಷ್ಠಿಯಲ್ಲಿ ರಾಜ್ಯದ ಬರ ಪರಿಸ್ಥಿತಿ, ಕೇಂದ್ರದ ನೆರವಿನ ಬೇಡಿಕೆ ಹಾಗೂ ಸರ್ಕಾರದ ವೆಚ್ಚಗಳ ಬಗ್ಗೆಯೂ ಕುಮಾರಸ್ವಾಮಿ ಮಾತನಾಡಿದರು. ರಾಜ್ಯದ ಬರ ನಿರ್ವಹಣೆಗಾಗಿ ಸುಮಾರು ₹20,164 ಕೋಟಿ ನೆರವು ನೀಡುವಂತೆ ಮನವಿ ಮಾಡಲಾಗಿದೆ ಎಂದು ಅವರು ಉಲ್ಲೇಖಿಸಿದರು. ಬರದಿಂದ ಉಂಟಾದ ಒಟ್ಟು ನಷ್ಟವನ್ನ ಸುಮಾರು ₹20,585 ಕೋಟಿ ಎಂದು ಅಂದಾಜಿಸಲಾಗಿದೆ ಎಂಬ ಅಂಶವನ್ನೂ ಪ್ರಸ್ತಾಪಿಸಿದರು.
ಬೆಳೆ ನಷ್ಟಕ್ಕೆ ₹6,000 ಕೋಟಿ, ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನೋಪಾಯಕ್ಕೆ ₹12,000 ಕೋಟಿ ಹಾಗೂ ಜಾನುವಾರುಗಳ ಮೇವಿಗಾಗಿ ₹700 ಕೋಟಿಗೂ ಹೆಚ್ಚಿನ ನೆರವು ಅಗತ್ಯವಿದೆ ಎಂಬ ಬೇಡಿಕೆಗಳನ್ನ ಅವರು ಉಲ್ಲೇಖಿಸಿದರು. ರೈತರು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರ ಅನಗತ್ಯ ವೆಚ್ಚಗಳನ್ನ ಕಡಿತಗೊಳಿಸಿ, ಕೃಷಿ ಮತ್ತು ಗ್ರಾಮೀಣ ಜನರ ನೆರವಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅವರು ಅಭಿಪ್ರಾಯಪಟ್ಟರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯುವಕರಿಗೆ ಹಣ ಹಂಚುವ ಯೋಜನೆಗಳು, ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ, ಅವರಿಗೆ ನೀಡಲಾಗುವ ಸೌಲಭ್ಯಗಳು ಹಾಗೂ ಗ್ಯಾರಂಟಿ ಸಮಿತಿಗಳ ವೆಚ್ಚಗಳ ಬಗ್ಗೆಯೂ ಪ್ರಶ್ನೆಗಳನ್ನ ಎತ್ತಿದರು. ಒಟ್ನಲ್ಲಿ ನೈಸ್ ಯೋಜನೆಯ ಟೋಲ್ ಆದಾಯ, ಹೂಡಿಕೆ ಮತ್ತು ಕಾಮಗಾರಿಯ ಪ್ರಗತಿಯ ಕುರಿತು ಕುಮಾರಸ್ವಾಮಿ ಮಾಡಿರುವ ಆರೋಪಗಳು ಮತ್ತೊಮ್ಮೆ ರಾಜಕೀಯ ಚರ್ಚೆಗೆ ಕಾರಣವಾಗಿವೆ.