ಬೆಂಗಳೂರು : ಫಾರ್ಮ್-7ರ ದುರ್ಬಳಕೆ, ಮತದಾರರ ಹೆಸರು ಡಿಲೀಷನ್ ಹಾಗೂ ಹೊಸ ಸೇರ್ಪಡೆ ಕುರಿತಂತೆ ಹಬ್ಬಿರುವ ಗೊಂದಲಗಳಿಗೆ ತೆರೆ ಎಳೆದಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ, ಫಾರ್ಮ್-7 ಸ್ವೀಕರಿಸಿದ ತಕ್ಷಣ ಯಾವುದೇ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿಲ್ಲ. ಅಂತಿಮ ನಿರ್ಧಾರ ವಿಚಾರಣೆ ಹಾಗೂ ಪರಿಶೀಲನೆಯ ನಂತರವೇ ಹೊರಬರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಬಿಟ್ಟುಹೋದ ಅರ್ಹ ಮತದಾರರಿಗಾಗಿ ಅಕ್ಟೋಬರ್ 22ರ ನಂತರ ಮತ್ತೊಂದು ಸ್ಪೆಷಲ್ ಡ್ರೈವ್ ಹಮ್ಮಿಕೊಳ್ಳುವುದಾಗಿಯೂತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಚುರುಕಿನಿಂದ ಸಾಗುತ್ತಿದ್ದು, ಅಂತಿಮ ಮತದಾರರ ಪಟ್ಟಿ 2026ರ ಅಕ್ಟೋಬರ್ 27ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಅಕ್ಟೋಬರ್ 5ರ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಪ್ರಸ್ತುತ ಒಟ್ಟು 4,50,29,916 ಮತದಾರರಿದ್ದಾರೆ.
* ಪುರುಷ ಮತದಾರರು: 2,23,41,784
* ಮಹಿಳಾ ಮತದಾರರು: 2,26,85,269
* ತೃತೀಯ ಲಿಂಗಿ ಮತದಾರರು: 2,863
ರಾಜ್ಯಾದ್ಯಂತ ಒಟ್ಟು 43,82,313 ನೋಟೀಸ್‌ಗಳನ್ನು ನೀಡಲಾಗಿದ್ದು, ಈ ಪೈಕಿ ಶೇಕಡಾ 99.40 ರಷ್ಟು (43,55,818) ನೋಟೀಸ್‌ಗಳನ್ನು ಯಶಸ್ವಿಯಾಗಿ ತಲುಪಿಸಲಾಗಿದೆ. ಉಳಿದ 26,495 ನೋಟೀಸ್‌ಗಳು ಮತದಾರರಿಗೆ ತಲುಪಬೇಕಿದೆ. ವಿಚಾರಣೆಗಳ ವಿಷಯದಲ್ಲಿ, ವಿತರಿಸಲಾದ ನೋಟೀಸ್‌ಗಳಲ್ಲಿ ಶೇಕಡಾ 84.69 ರಷ್ಟು (36,89,063) ಪ್ರಕ್ರಿಯೆ ಪೂರ್ಣಗೊಂಡಿದ್ದು, 6,66,755 ವಿಚಾರಣೆಗಳು ಬಾಕಿ ಇವೆ. ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿಗೆ ಅಕ್ಟೋಬರ್ 22 ಕೊನೆಯ ದಿನಾಂಕವಾಗಿದ್ದು, ಅಂತಿಮ ವಿಚಾರಣೆ ಅಕ್ಟೋಬರ್ 12 ರಂದು ನಡೆಯಲಿದೆ. ಇನ್ನು ಅಕ್ಟೋಬರ್ 4 ರವರೆಗೆ ಸಾರ್ವಜನಿಕರಿಂದ ಒಟ್ಟು 22,05,171 ನಮೂನೆಗಳು (ಫಾರ್ಮ್‌ಗಳು) ಸ್ವೀಕೃತಗೊಂಡಿವೆ:
* ನಮೂನೆ 6 (ಹೊಸ ಸೇರ್ಪಡೆ): 9,10,732
* ನಮೂನೆ 6A (ಅನಿವಾಸಿ ಭಾರತೀಯರು): 4,677
* ನಮೂನೆ 7 (ಹೆಸರು ತೆಗೆದುಹಾಕುವಿಕೆ/ಆಕ್ಷೇಪಣೆ): 91,278
* ನಮೂನೆ 8 (ತಿದ್ದುಪಡಿ/ಸ್ಥಳಾಂತರ): 11,98,484
ಮುಖ್ಯವಾಗಿ, ನಮೂನೆ-7 ರಲ್ಲಿ ಸ್ವೀಕರಿಸಲಾದ 91,278 ಅರ್ಜಿಗಳ ಪೈಕಿ, ಹೊಸಬರ ಹೆಸರು ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿಗಳ ಸಂಖ್ಯೆ ‘ಶೂನ್ಯ’ ಆಗಿದೆ. ಫಾರ್ಮ್-7 ಸಲ್ಲಿಕೆಯಾದ ತಕ್ಷಣ ಯಾರ ಹೆಸರನ್ನೂ ಡಿಲೀಟ್ ಮಾಡಿಲ್ಲ. ಪ್ರತಿಯೊಬ್ಬರಿಗೂ ನೋಟೀಸ್ ನೀಡಿ, ವಿಚಾರಣೆ ನಡೆಸಿದ ನಂತರವೇ ಕಾನೂನುಬದ್ಧ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ.
ಫಾರ್ಮ್-7 ಅರ್ಜಿಯ ದುರ್ಬಳಕೆ ತಡೆಯಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ. ನಿಯಮಬಾಹಿರವಾಗಿ ಅರ್ಜಿ ಸಲ್ಲಿಸಿದರೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
* ಒಬ್ಬ ಸಾಮಾನ್ಯ ಮತದಾರ ದಿನಕ್ಕೆ ಗರಿಷ್ಠ 10 ಫಾರ್ಮ್-7 ಅರ್ಜಿಗಳನ್ನು ನೀಡಬಹುದು.
* ಬೂತ್ ಮಟ್ಟದ ಏಜೆಂಟ್‌ಗಳು (BLA) ಗರಿಷ್ಠ 50 ಫಾರ್ಮ್‌ಗಳನ್ನು ನೀಡಲು ಅವಕಾಶವಿದೆ.
ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಲ್ಕ್ ಅರ್ಜಿಗಳನ್ನು ಸಲ್ಲಿಸಿದರೆ, ಸ್ಥಳೀಯ ಇಆರ್‌ಒ (ERO - ಚುನಾವಣಾ ನೋಂದಣಾಧಿಕಾರಿ) ಅರ್ಜಿಗಳನ್ನು ನೇರವಾಗಿ ತಿರಸ್ಕರಿಸಬಹುದು ಅಥವಾ ವಿಚಾರಣೆ ನಡೆಸಿ 1960ರ ಮತದಾರರ ನೋಂದಣಿ ನಿಯಮ 20ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬಹುದು.
ಫಾರ್ಮ್-7 ದುರ್ಬಳಕೆ ಹಾಗೂ ಸುಳ್ಳು ದೂರುಗಳ ಕುರಿತು ಈಗಾಗಲೇ ಹಲವು ಪೊಲೀಸ್ ಎಫ್‌ಐಆರ್ (FIR) ದಾಖಲಾಗಿವೆ. ಪ್ರಸ್ತುತ 91 ಸಾವಿರಕ್ಕೂ ಹೆಚ್ಚು ನಮೂನೆ-7 ಸಲ್ಲಿಕೆಯಾಗಿದ್ದು, ಅದರಲ್ಲಿರುವ ನೈಜತೆಯನ್ನು ಇಆರ್‌ಒಗಳು ಪ್ರತ್ಯೇಕಿಸಿ ತನಿಖೆ ನಡೆಸುತ್ತಿದ್ದಾರೆ. ಬಲ್ಕ್ ಅರ್ಜಿಗಳ ದುರ್ಬಳಕೆಗೆ ಆಸ್ಪದ ನೀಡದೆ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಲಾಗುತ್ತಿದೆ ಎಂದು ಆಯೋಗ ತಿಳಿಸಿದೆ.
ರಾಜಕೀಯ ನಾಯಕರ ಪ್ರತಿಭಟನೆ, ಸಿಎಂ ತಂಡದ ಮನವಿ ಹಾಗೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವ ಆರೋಪಗಳಿಗೆ ಪ್ರತಿಕ್ರಿಯಿಸಲು ಸಿಇಒ ಅನ್ಬುಕುಮಾರ್ ನಿರಾಕರಿಸಿದ್ದಾರೆ. "ಈ ವಿಚಾರ ನ್ಯಾಯಾಲಯದಲ್ಲಿದೆ, ಜೊತೆಗೆ ಇದು ಕಾನೂನಿಗೆ ಒಳಪಟ್ಟ ವಿಷಯ. ಅಧಿಕಾರಿಯಾಗಿ ನನ್ನ ಇತಿಮಿತಿಗಳನ್ನು ಗೌರವಿಸಿ, ನಾನು ರಾಜಕೀಯ ಹೇಳಿಕೆಗಳಿಗೆ ಕಮೆಂಟ್ ಮಾಡುವುದಿಲ್ಲ" ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಆಯೋಗವು ಯಾವುದೇ ಡೇಟಾವನ್ನು ಮುಚ್ಚಿಡುತ್ತಿಲ್ಲ ಹಾಗೂ ಎಲ್ಲಾ ಪಟ್ಟಿಗಳನ್ನು ಗುರುತಿಸಲ್ಪಟ್ಟ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗಿದೆ. ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾದ ಬಳಿಕ, ರಾಜಕೀಯ ಪಕ್ಷಗಳಿಗೆ ಅದರ ಪ್ರಿಂಟೆಡ್ ಮತ್ತು ಸಾಫ್ಟ್ ಕಾಪಿಗಳನ್ನು ನೀಡಲಾಗುತ್ತದೆ.
ಅರ್ಹ ಮತದಾರರಿಗೆ ಬಿಗ್ ರಿಲೀಫ್
ಸಮ್ಮರಿ ರಿವಿಷನ್ (SIR) ಪ್ರಕ್ರಿಯೆ ಪೂರ್ಣಗೊಂಡ ನಂತರ, ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟು ಹೋಗಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಅಕ್ಟೋಬರ್ 22ರ ನಂತರ 'ಸ್ಪೆಷಲ್ ಡ್ರೈವ್' ನಡೆಸಲಾಗುವುದು. ಹಳೆ ಮತದಾರರ ಪಟ್ಟಿ ಹಾಗೂ ಹೊಸ ಎಸ್‌ಐಆರ್ ಪಟ್ಟಿಯನ್ನು ಹೋಲಿಕೆ ಮಾಡಿ, ಬಿಟ್ಟುಹೋದ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಫಾರ್ಮ್-6 ಮೂಲಕ ಹೆಸರು ಸೇರಿಸಲು ಮತ್ತೊಂದು ಅವಕಾಶ ನೀಡಲಾಗುವುದು.