ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ನವೆಂಬರ್ ಕ್ರಾಂತಿಯ ಸದ್ದು ಕೇಳಿಬರುತ್ತಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕೀಯದಲ್ಲೇ ಸಕ್ರಿಯರಾಗಲು ಕಾಲ ಪಕ್ವವಾಯಿತಾ..? ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಬಳಿಕ ಮೈತ್ರಿಕೂಟದ ಅಲೆ ಬದಲಾಗಿದೆ. ಜೆಡಿಎಸ್-ಬಿಜೆಪಿ ನಡುವಿನ ಸಮನ್ವಯ, ಪರಿಷತ್ ಫಲಿತಾಂಶದ ಶ್ರೇಯಸ್ಸು ಹಾಗೂ ಮುಂದಿನ 2028ರ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಎಚ್.ಡಿ. ಕುಮಾರಸ್ವಾಮಿ ಅವರ ಪಾತ್ರ ಈಗ ಅತ್ಯಂತ ನಿರ್ಣಾಯಕವಾಗಿದೆ. ರಾಜ್ಯದಲ್ಲಿ ಎನ್‌ಡಿಎ ನೇತೃತ್ವ ವಹಿಸಲು, ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸವಾಲನ್ನು ಎದುರಿಸಲು HDK ಮತ್ತೆ ಅಖಾಡಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ನವೆಂಬರ್ ಅಂತ್ಯದ ವೇಳೆಗೆ ಕೇಂದ್ರದಿಂದ ರಾಜ್ಯಕ್ಕೆ ಎಂಟ್ರಿ ಕೊಟ್ಟು ಎನ್‌ಡಿಎ ನಾಯಕತ್ವದ ಚುಕ್ಕಾಣಿ ಹಿಡಿಯಲು ಮಾಜಿ ಸಿಎಂ ತವಕದಲ್ಲಿದ್ದಾರಾ? ಈ ಕುರಿತ ಒಂದು ವರದಿ ಇಲ್ಲಿದೆ.
ರಾಜ್ಯ ರಾಜಕೀಯದಲ್ಲಿ ಈಗ ನವೆಂಬರ್ ಕ್ರಾಂತಿಯ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಕೇಂದ್ರ ಸಚಿವರಾಗಿ ದೆಹಲಿಯಲ್ಲಿ ಸಕ್ರಿಯರಾಗಿದ್ದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮತ್ತೆ ರಾಜ್ಯ ರಾಜಕೀಯಕ್ಕೆ ಪೂರ್ಣಪ್ರಮಾಣದಲ್ಲಿ ಧುಮುಕಲು ಕಾಲ ಸನ್ನಿಹಿತವಾಗಿದೆ ಎಂಬ ಚರ್ಚೆ ಶುರುವಾಗಿದೆ. ಮೊನ್ನೆಯ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಮೈತ್ರಿಕೂಟಕ್ಕೆ ಹೊಸ ಉತ್ಸಾಹ ತುಂಬಿದ್ದು, ಈ ಗೆಲುವಿನ ಶ್ರೇಯಸ್ಸು ಕುಮಾರಸ್ವಾಮಿ ಅವರ ರಾಜಕೀಯ ತಂತ್ರಗಾರಿಕೆಗೆ ಸಿಕ್ಕಿದೆ. ಇದನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡು, ರಾಜಕೀಯ ವೇದಿಕೆಯನ್ನು ಸಿದ್ಧಪಡಿಸಿಕೊಂಡಿರುವ HDK, ಶೀಘ್ರದಲ್ಲೇ ರಾಜ್ಯಕ್ಕೆ ಆಗಮಿಸಿ ಎನ್‌ಡಿಎ ಮೈತ್ರಿಕೂಟದ ಚುಕ್ಕಾಣಿ ಹಿಡಿಯಲು ತವಕದಲ್ಲಿದ್ದಾರೆ.
ಜೆಡಿಎಸ್ ವಲಯದಲ್ಲಂತೂ ಮುಂದಿನ ಮುಖ್ಯಮಂತ್ರಿ ಹೆಚ್.ಡಿ.ಕೆ' ಎನ್ನುವ ಕೂಗು ಮತ್ತೆ ಗರಿಗೆದರಿದೆ. 2028ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಈಗಿನಿಂದಲೇ ಎನ್‌ಡಿಎ ಮೈತ್ರಿಕೂಟವನ್ನು ತಳಮಟ್ಟದಿಂದ ಗಟ್ಟಿಗೊಳಿಸಲು ಕುಮಾರಸ್ವಾಮಿ ಯೋಜನೆ ರೂಪಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಪೂರ್ಣ ಪ್ರಮಾಣದ ಸಮನ್ವಯ ಸಾಧಿಸಲು ಹೆಚ್.ಡಿ. ಕುಮಾರಸ್ವಾಮಿ ಅವರ ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎನ್‌ಡಿಎ ಕೂಟದಲ್ಲಿ ಎಲ್ಲರಿಗಿಂತ ಪ್ರಭಾವಿ ನಾಯಕರಾಗಿ ಹೊರಹೊಮ್ಮಿರುವ ಕುಮಾರಸ್ವಾಮಿ, ಬಿಜೆಪಿಯ ರಾಜ್ಯ ನಾಯಕತ್ವದ ಬಿಕ್ಕಟ್ಟಿಗೆ ಪರಿಹಾರವಾಗಬಲ್ಲರು ಎಂಬ ಲೆಕ್ಕಾಚಾರವೂ ಇದೆ. ನವೆಂಬರ್ ಅಂತ್ಯದ ವೇಳೆಗೆ ಯಾವುದೇ ಟೆನ್ಶನ್ ಇಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ನಿರ್ಧಾರವಾಗಲಿದ್ದು, ತದನಂತರ ಮೈತ್ರಿಕೂಟಕ್ಕೆ ಸ್ಪಷ್ಟ ರೂಪುರೇಷೆ ಸಿಗಲಿದೆ.
ವಿಪಕ್ಷವಾಗಿ ಕಾಂಗ್ರೆಸ್ ಸರ್ಕಾರವನ್ನು ಚುರುಕಾಗಿ ಎದುರಿಸಲು ಹಾಗೂ-ಡಿ.ಕೆ. ಶಿವಕುಮಾರ್ ಗೆ ನೇರ ಸವಾಲು ಎಸೆಯಲು ಹೆಚ್‌ಡಿಕೆ ಸೂಕ್ತ ನಾಯಕ ಎಂಬ ನಿರ್ಧಾರಕ್ಕೆ ಎರಡೂ ಪಕ್ಷಗಳು ಬಂದಂತೆ ಕಾಣುತ್ತಿದೆ. ಹೈಕಮಾಂಡ್ ಹಸಿರು ನಿಶಾನೆ ತೋರಿದರೆ ಎನ್‌ಡಿಎ ನೇತೃತ್ವದ ಪೂರ್ಣ ಜವಾಬ್ದಾರಿ ಕುಮಾರಸ್ವಾಮಿ ಅವರ ಹೆಗಲೇರಲಿದೆ.
ಕೇಂದ್ರದ ಜವಾಬ್ದಾರಿ ತ್ಯಜಿಸಿ, ರಾಜ್ಯದ ಎನ್‌ಡಿಎ ಪಡೆಗೆ ಶಕ್ತಿ ತುಂಬುವುದು ಈಗ ಕುಮಾರಸ್ವಾಮಿ ಪ್ಲಾನ್ ಇದ್ದಂತೆ ಕಣ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿರುವ ಮಹತ್ವದ ಮಾತುಕತೆಗಳ ಬಳಿಕ, ಈ ದೊಡ್ಡ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ. 2028ರ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರಕ್ಕೆ ತರುವ ಸಂಪೂರ್ಣ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ಹೆಚ್‌ಡಿಕೆ ಸಿದ್ಧರಾಗಿದ್ದಾರೆ. ರಾಜ್ಯದಲ್ಲಿ ವಿಪಕ್ಷಗಳ ಚಟುವಟಿಕೆಗಳಿಗೆ ಹೊಸ ವೇಗ ಸಿಗಲಿದ್ದು, ಆಡಳಿತಾರೂಢ ಕಾಂಗ್ರೆಸ್‌ಗೆ ಮುಂಬರುವ ದಿನಗಳಲ್ಲಿ ತೀವ್ರ ರಾಜಕೀಯ ಸವಾಲು ಎದುರಾಗುವುದರಲ್ಲಿ ಅನುಮಾನವಿಲ್ಲ. ನವೆಂಬರ್ ಕ್ರಾಂತಿಯ ಈ ಹಾದಿಯಲ್ಲಿ ರಾಜ್ಯ ರಾಜಕೀಯದ ಮುಂದಿನ ಕ್ಯಾಪ್ಟನ್ ಆಗಿ HDK ಹೊರಹೊಮ್ಮುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಒಟ್ಟಿನಲ್ಲಿ, ದೆಹಲಿಯಿಂದ ಬೆಂಗಳೂರಿಗೆ ಕುಮಾರಸ್ವಾಮಿ ಗಮನ ಮರಳುತ್ತಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ನಿರ್ಧಾರ ಹಾಗೂ ಹೈಕಮಾಂಡ್‌ನ ಅಂತಿಮ ಒಪ್ಪಿಗೆ ಸಿಕ್ಕರೆ, 2028ರ ಚುನಾವಣೆಯ ಎನ್‌ಡಿಎ ಸೇನಾಪತಿಯಾಗಿ ಹೆಚ್‌ಡಿಕೆ ಕಣಕ್ಕಿಳಿಯುವುದು ಬಹುತೇಕ ಖಚಿತ.