ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧ್ವನಿಯನ್ನು ಅಡಗಿಸುವ ಯತ್ನಗಳು ನಡೆಯುತ್ತಿವೆ. ದೇವೇಗೌಡರ ಕುಟುಂಬದಂತೆ, ಅವರನ್ನೂ ರಾಜಕೀಯವಾಗಿ ಮುಗಿಸುವ ಕೆಲಸ ಆಗ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದ ಆಡಳಿತ ಶೈಲಿ ಹಾಗೂ ಸ್ಟಿಂಗ್ ಆಪರೇಷನ್ ವಿವಾದದ ವಿರುದ್ಧ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಹಿಂದಿನ ಗಟ್ಟಿ ಧ್ವನಿ ಮತ್ತೆ ಹೊರಬರಬೇಕು ಎಂದು ಆಗ್ರಹಿಸಿದ್ದಾರೆ.
ಸದ್ಯ ರಾಜ್ಯದ ಚುಕ್ಕಾಣಿ ಹಿಡಿದಿರುವ ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಎದುರಿಸುತ್ತಿರುವ ಸನ್ನಿವೇಶ ಮತ್ತು ನೋವನ್ನು ತಾವೂ ಚೆನ್ನಾಗಿ ಅರ್ಥಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆಗಳು, ಬಿಡದಿ ಹೋರಾಟ ಹಾಗೂ ನೈಸ್ ಅಕ್ರಮಗಳು ಮುನ್ನೆಲೆಗೆ ಬರುತ್ತಿದ್ದಂತೆ, ಹೊಸ ಸ್ಟಿಂಗ್ ಆಪರೇಷನ್ ಭೂತ ಎಲ್ಲವನ್ನೂ ಓವರ್‌ಟೇಕ್ ಮಾಡಿದೆ ಎಂದರು. ಸಚಿವ ಸಂಪುಟದಲ್ಲೂ ಸ್ಟಿಂಗ್ ವಿಚಾರ ಪ್ರಸ್ತಾಪವಾಗಿದ್ದು, ಸದಾಶಿವನಗರದಲ್ಲಿ ನಿವೃತ್ತ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡು ಲೇಟೆಸ್ಟ್ ಉಪಕರಣಗಳ ಮೂಲಕ ಸಚಿವರು ಸೇರಿದಂತೆ ಸ್ವತಃ ಸಿದ್ದರಾಮಯ್ಯ ಅವರ ಮೇಲೂ ನಿಗಾ ಇಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಅಹಿಂದ ವರ್ಗಕ್ಕೆ ಹಾಗೂ ಜನಸಾಮಾನ್ಯರಿಗೆ ಗಟ್ಟಿಯಾಗಿ ಧ್ವನಿ ಕೊಡುತ್ತಿದ್ದ ಸಿದ್ದರಾಮಯ್ಯ ಅವರ ಹಳೆ ಧ್ವನಿಯನ್ನು ಯಾಕೆ ಅಡಗಿಸಲಾಗುತ್ತಿದೆ ಎಂದು ಹೆಚ್.ಡಿಕೆ ಪ್ರಶ್ನಿಸಿದ್ದಾರೆ. ಅಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ತಾವು ಅನುಭವಿಸಿದ ನೋವಿನಂತೆ, ಇಂದು ಅವರಿಗೂ ಅದೇ ಸ್ಥಿತಿ ಬಂದಿದೆ ಎಂದು ಅನುಕಂಪ ವ್ಯಕ್ತಪಡಿಸಿದರು. ಆದರೆ ಇದು ಕೇವಲ ಅನುಕಂಪದ ಮಾತಲ್ಲ, ಬದಲಿಗೆ ಇಂತಹ ರಾಜಕೀಯ ಕೃತ್ಯಗಳಿಂದ ರಾಜ್ಯದ ಹೆಸರಿಗೆ ಯಾವ ಸ್ಥಿತಿ ತಂದಿದ್ದಾರೆ ಎಂಬುದನ್ನು ಗಮನಿಸಬೇಕು ಎಂದರು. ತಮ್ಮ ಫೋನ್ ಸೇರಿದಂತೆ ಎಲ್ಲರ ಫೋನ್‌ಗಳೂ ಟ್ಯಾಪ್ ಆಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯನವರು ಯಾರಿಗೂ ಹೆದರಬೇಕಿಲ್ಲ ಎಂದು ಅಭಯ ನೀಡಿರುವ ಹೆಚ್.ಡಿಕೆ, ರಾಜ್ಯದಲ್ಲಿ ಅನ್ಯಾಯ ಸರಿಪಡಿಸಬೇಕು ಮತ್ತು ಸತ್ಯ ಹೊರಬರಬೇಕು ಎಂದರೆ ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಮಾಜಕ್ಕೆ ತಪ್ಪು ಸಂದೇಶ ಹೋಗುವುದನ್ನು ತಡೆಯಲು ಮತ್ತು ಇಂತಹ ವ್ಯವಸ್ಥಿತ ಸಂಚುಗಳಿಗೆ ಕಡಿವಾಣ ಹಾಕಲು ಸಿಬಿಐ ತನಿಖೆ ಮಾತ್ರ ಅಂತಿಮ ದಾರಿಯಾಗಿದೆ ಎಂದಿದ್ದಾರೆ. ಸಿದ್ದರಾಮಯ್ಯನವರ ಧ್ವನಿ ಮತ್ತೊಮ್ಮೆ ಗಟ್ಟಿಯಾಗಿ ಹೊರಬರಬೇಕು ಎಂದು ಅವರು ಈ ಸಂದರ್ಭದಲ್ಲಿ ಬಲವಾಗಿ ಪ್ರತಿಪಾದಿಸಿದ್ದಾರೆ.