ಬೆಂಗಳೂರು: ಮೈಸೂರು ದಸರಾ ಮಹೋತ್ಸವದ ವೇಳೆ ದಲಿತ ಸಚಿವರೊಬ್ಬರನ್ನು ಪೂಜಾ ಸ್ಥಳದಿಂದ ಹೊರಗಡೆ ನಿಲ್ಲಿಸಿ ಅವಮಾನಿಸಿರುವ ಘಟನೆಯು ತೀವ್ರ ಸ್ವರೂಪ ಪಡೆದುಕೊಂಡಿದೆ.
ಈ ಕುರಿತು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿರಿಯ ಸಂಸದ ಗೋವಿಂದ ಕಾರಜೋಳ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಪೂಜಾ ಸ್ಥಳ ಅಪವಿತ್ರವಾಗುತ್ತದೆ ಎಂದು ದಲಿತ ಸಚಿವರನ್ನು ಹೊರಗಡೆ ನಿಲ್ಲಿಸಿದ್ದಾರೆ.ಇದು ಕೇವಲ ಶಿಷ್ಟಾಚಾರದ ಉಲ್ಲಂಘನೆಯಲ್ಲ, ಸ್ಪಷ್ಟವಾಗಿ ಅಸ್ಪೃಷ್ಯತೆಯ ಆಚರಣೆಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಇಂದಿಗೂ ಅಸ್ಪೃಷ್ಯತೆ ಜೀವಂತವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ" ಎಂದು ಕಿಡಿಕಾರಿದ್ದಾರೆ.
ಸಂಬಂಧಪಟ್ಟ ಇಲಾಖೆಯ ಸಚಿವರ ಎದೆಗೆ ತಳ್ಳಿ ಹೊರಹಾಕಲಾಗಿದೆ.ಇದು ಪೊಲೀಸ್ ಅಧಿಕಾರಿಯ ಕೃತ್ಯವಲ್ಲ, ಸ್ವತಃ ಸರ್ಕಾರವೇ ಅಸ್ಪೃಷ್ಯತೆಯನ್ನು ಆಚರಿಸುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪಕ್ಷವು ದಲಿತರನ್ನು ಎಂದಿಗೂ ಗೌರವದಿಂದ ನಡೆಸಿಕೊಂಡ ಉದಾಹರಣೆಯಿಲ್ಲ ಎಂದರು. ಮುಖ್ಯಮಂತ್ರಿಗಳ ಬಳಿಕ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಸಿಗಬೇಕಾದ ಗೌರವವನ್ನು ನೀಡದೆ, ಕಾಂಗ್ರೆಸ್ ತನ್ನ ಕೊಳಕು ಮನಸ್ಥಿತಿಯನ್ನು ಪ್ರದರ್ಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನ ಬದಲಾಯಿಸುತ್ತೇವೆ ಎಂದು ಸುಳ್ಳು ಹೇಳುವ ಕಾಂಗ್ರೆಸ್, ಸ್ವಾರ್ಥಕ್ಕಾಗಿ ಹಲವು ಬಾರಿ ಸಂವಿಧಾನವನ್ನೇ ತಿದ್ದುಪಡಿ ಮಾಡಿದೆ ಎಂದು ಟೀಕಿಸಿದರು.
ಇದೇ ವೇಳೆ ರಾಜ್ಯದಲ್ಲಿ ಇತ್ತೀಚೆಗೆ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಹಾಗೂ ವಿಡಿಯೋ ಬಿಡುಗಡೆ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ, ರಾಜ್ಯದಲ್ಲಿ ಬ್ಲಾಕ್‌ಮೇಲ್ ರಾಜಕಾರಣ ಹೆಚ್ಚಾಗಿದ್ದು, ಇದು ಅತ್ಯಂತ ಕೆಟ್ಟ ಸಂಸ್ಕೃತಿಯಾಗಿದೆ ಎಂದರು.ಹಿರಿಯ ವ್ಯಕ್ತಿಯಾದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮರ್ಯಾದೆ ತೆಗೆಯುವ ಕೆಲಸ ಮಾಡಲಾಗಿದೆ. ಆದ್ದರಿಂದ ಈ ಸಂಪೂರ್ಣ ಪ್ರಕರಣದ ಕುರಿತು ಸಿಬಿಐ ತನಿಖೆ ಅಥವಾ ನ್ಯಾಯಮೂರ್ತಿಗಳಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.