ಶಿವಮೊಗ್ಗ: ರಾಜ್ಯದಲ್ಲಿ ಕೆಪಿಎಸ್‌ಸಿ ಅಕ್ರಮಗಳ ಬೆನ್ನಲ್ಲೀಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಪರೀಕ್ಷಾ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಹಗರಣವೊಂದು ಬೆಳಕಿಗೆ ಬಂದಿದೆ.
ಶಿವಮೊಗ್ಗ ನಗರದ ಆಲ್ಕೋಳ ಸರ್ಕಲ್ ಸಮೀಪವಿರುವ ಕೆಎಸ್‌ಒಯು ಪ್ರಾದೇಶಿಕ ಕಚೇರಿಯ ಪರೀಕ್ಷಾ ಕೇಂದ್ರದಲ್ಲಿ ಹಣಕ್ಕಾಗಿ ಸಾಮೂಹಿಕ ನಕಲು ಹಾಗೂ ಭ್ರಷ್ಟಾಚಾರದ ಕರಾಳ ದಂಧೆ ಅನಾವರಣಗೊಂಡಿದೆ. ಇಲ್ಲಿ ಹಣ ಕೊಟ್ಟರೆ ಸರ್ಕಾರಿ ಹುದ್ದೆ ಸಿಗುವಂತೆ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಅಂಕಗಳು ಫಿಕ್ಸ್ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಅಕ್ಟೋಬರ್ 7ರಂದು ಆರಂಭವಾಗಿರುವ ಮುಕ್ತ ವಿವಿಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನವೆಂಬರ್ 20ರವರೆಗೆ ನಡೆಯುತ್ತಿವೆ. ಕಳೆದ ಕೆಲ ದಿನಗಳಿಂದ ಇಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿಯನ್ನು ಮುಂದೆ ಬಿಟ್ಟು ದೊಡ್ಡ ಮಟ್ಟದಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಹಣ ನೀಡಿದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ಪುಸ್ತಕ ಹಾಗೂ ಮೊಬೈಲ್ ಇಟ್ಟುಕೊಂಡು ಬರೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ವಿಶೇಷವಾಗಿ ಹಣ ನೀಡಿದವರಿಗೆ ಎರಡನೇ ಫ್ಲೋರ್‌ನಲ್ಲಿ ಪರೀಕ್ಷೆ ಬರೆಯಲು ಸಕಲ ವ್ಯವಸ್ಥೆ ಮಾಡಲಾಗುತ್ತಿದ್ದರೆ, ಹಣ ನೀಡದವರಿಗೆ ಮೊದಲ ಫ್ಲೋರ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ.
ಓರ್ವ ವಿದ್ಯಾರ್ಥಿಯಿಂದ ಒಂದು ವಿಷಯಕ್ಕೆ 1 ಸಾವಿರ ರೂಪಾಯಿಯಂತೆ ಹಣ ವಸೂಲಿ ಮಾಡಲಾಗುತ್ತಿದ್ದು, ಪ್ರತಿನಿತ್ಯ 70 ರಿಂದ 100 ವಿದ್ಯಾರ್ಥಿಗಳ ಬಳಿ ಪರೀಕ್ಷೆ ಮುಗಿದ ಬಳಿಕ ಆನ್‌ಲೈನ್ ಮೂಲಕ (ಫೋನ್ ಪೇ, ಗೂಗಲ್ ಪೇ) ಹಣ ಪಡೆಯಲಾಗುತ್ತಿದೆ. ಪರೀಕ್ಷೆ ಆರಂಭವಾದ ಅರ್ಧ ಗಂಟೆಯ ಬಳಿಕ ಬರುವ ಪ್ರಾದೇಶಿಕ ನಿರ್ದೇಶಕ ಸ್ವಾಮಿ ಅವರ ನೇತೃತ್ವದಲ್ಲೇ ಈ ಅಕ್ರಮ ನಡೆಯುತ್ತಿದೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಪರೀಕ್ಷಾ ಕೇಂದ್ರದ ಒಳಗೆ ವಿದ್ಯಾರ್ಥಿಗಳು ಮೊಬೈಲ್ ನೋಡಿ ಪರೀಕ್ಷೆ ಬರೆಯುತ್ತಿರುವ ವಿಡಿಯೋ ಸಾಕ್ಷ್ಯಗಳು ಸಹ ಈಗ ಲೀಕ್ ಆಗಿವೆ.
ಕಷ್ಟಪಟ್ಟು ರಾತ್ರಿ-ಹಗಲು ಓದಿ ಪರೀಕ್ಷೆ ಬರೆಯುವ ಪ್ರಾಮಾಣಿಕ ವಿದ್ಯಾರ್ಥಿಗಳ ಶ್ರಮವನ್ನು ಈ ವ್ಯವಸ್ಥೆ ಮಣ್ಣುಪಾಲು ಮಾಡುತ್ತಿದೆ. ಹಗಲುಹಗಲೇ ನಡೆಯುತ್ತಿರುವ ಈ ಪರೀಕ್ಷಾ ಅಕ್ರಮದ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ, ಭ್ರಷ್ಟ ಸಿಬ್ಬಂದಿ ಹಾಗೂ ನಿರ್ದೇಶಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.