ನಂದಿನಿ ಹಾಲಿನ ಬೆಲೆ ಏರಿಕೆ ಎಫೆಕ್ಟ್: ಮುಟ್ಟಿದ್ರೆ ಸುಡ್ತಾ ಇದೆ ಕಾಫಿ, ಟೀ ಗ್ಲಾಸ್!
ರಾಜ್ಯದಲ್ಲೆಡೆ ಕೆಎಂಎಫ್ ಹಾಲಿನ ದರ ಲೀಟರ್‌ಗೆ ಏಕಾಏಕಿ 8 ರೂ.ಗಳಷ್ಟು ಹೆಚ್ಚಳವಾಗಿರುವ ಬೆನ್ನಲ್ಲೇ, ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಹೋಟೆಲ್‌ಗಳಲ್ಲಿ ಕಾಫಿ ಮತ್ತು ಟೀ ಬೆಲೆ 5 ರೂ.ಗಳಷ್ಟು ಏರಿಕೆ ಮಾಡಲಾಗಿದ್ದು, ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬಿದ್ದಿದೆ.
Karnataka Hotel Price Hike: ರಾಜ್ಯದಾದ್ಯಂತ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಾರಂಭಿಸಿದೆ. ತಣ್ಣನೆಯ ಚಳಿಗೆ ಬಿಸಿ ಬಿಸಿ ಕಾಫಿ-ಟೀ ಕುಡಿಯುವುದಕ್ಕೂ ಯೋಚಿಸುವಂತಹ ಪರಿಸ್ಥಿತಿ ಎದುರಾಗಿದೆ. ಕೆಎಂಎಫ್ ಹಾಲಿನ ದರವನ್ನ ಲೀಟರ್‌ಗೆ ಏಕಾಏಕಿ 8 ರೂ.ಗಳಷ್ಟು ಹೆಚ್ಚಳ ಮಾಡಿದ ಬೆನ್ನಲ್ಲೇ, ಹೋಟೆಲ್‌ಗಳಲ್ಲಿ ಒಂದು ಕಪ್ ಕಾಫಿ ಮತ್ತು ಟೀ ಬೆಲೆಯೂ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ ಹೋಟೆಲ್‌ಗಳಲ್ಲಿ ಹೊಸ ದರ ಪಟ್ಟಿ ಜಾರಿಗೆ ಬಂದಿದೆ.
5 ರೂ. ಏರಿಕೆಯಾದ ಕಾಫಿ-ಟೀ ಬೆಲೆ!
ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿದ್ದ 15 ರೂ. ಮಿನಿ ಕಾಫಿ ಮತ್ತು ಟೀ ಬೆಲೆ ಈಗ 20 ರೂ.ಗೆ ಏರಿಕೆ ಕಂಡಿದೆ. ಇನ್ನು 20 ರೂ.ರಷ್ಟಿದ್ದ ಫುಲ್ ಕಪ್ ಕಾಫಿ ಮತ್ತು ಟೀ ಬೆಲೆ ಇದೀಗ 25 ರೂ. ಗಡಿ ತಲುಪಿದೆ. ಇದರಿಂದ ಪ್ರತಿದಿನ ಹೋಟೆಲ್‌ಗಳಲ್ಲಿ ಕಾಫಿ-ಟೀ ಪ್ರಿಯರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಂತಾಗಿದೆ.
ಹೋಟೆಲ್ ಮಾಲೀಕರ ಸಂಘದ ಸ್ಪಷ್ಟನೆ
ಟೀ-ಕಾಫಿ ದರದ ಏರಿಕೆ ಕುರಿತು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾತನಾಡಿ, "ಸಾಮಾನ್ಯವಾಗಿ ಹಾಲಿನ ದರ ಲೀಟರ್‌ಗೆ 2 ಅಥವಾ 3 ರೂಪಾಯಿ ಹೆಚ್ಚಾದರೆ ನಾವು ಗ್ರಾಹಕರಿಗೆ ಹೊರೆಯಾಗದಂತೆ ಹೋಟೆಲ್ ದರಗಳನ್ನ ಬದಲಾಯಿಸುತ್ತಿರಲಿಲ್ಲ. ಆದರೆ ಹಾಲಿನ ದರದ ಇತಿಹಾಸದಲ್ಲೇ ಮೊದಲ ಬಾರಿಗೆ ಲೀಟರ್‌ಗೆ ಒಮ್ಮೆಲೇ ಬರೋಬ್ಬರಿ 8 ರೂ.ವನ್ನ ಹೆಚ್ಚಿಸಲಾಗಿದೆ. ಇದರಿಂದ ಹೋಟೆಲ್ ಉದ್ಯಮವನ್ನ ತೀವ್ರ ನಷ್ಟದಿಂದ ಉಳಿಸಿಕೊಳ್ಳಲು ಕಾಫಿ, ಟೀ ಬೆಲೆ ಏರಿಸುವುದು ಅನಿವಾರ್ಯವಾಗಿದೆ" ಅಂತಾ ಆರ್ಥಿಕ ಸಂಕಷ್ಟವನ್ನ ಬಿಚ್ಚಿಟ್ಟಿದ್ದಾರೆ.
ಮುಂದಿನ ದಿನಗಳಲ್ಲಿ ತಿಂಡಿ-ಊಟವೂ ದುಬಾರಿ!
ಕೇವಲ ಹಾಲು ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ದಿನಸಿ ಪದಾರ್ಥಗಳಾದ ಅಕ್ಕಿ, ಬೇಳೆಕಾಳುಗಳು, ಖಾದ್ಯ ತೈಲ ಮತ್ತು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಗಳೂ ಸಹ ಗಗನಕ್ಕೇರಿವೆ. ಈ ಎಲ್ಲಾ ಹೆಚ್ಚುವರಿ ವೆಚ್ಚಗಳನ್ನ ಸರಿದೂಗಿಸಲು ಹೋಟೆಲ್ ಮಾಲೀಕರು ಸಜ್ಜಾಗುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಇಡ್ಲಿ, ದೋಸೆ, ರೈಸ್ ಬಾತ್ ಸೇರಿದಂತೆ ಇತರೆ ತಿಂಡಿ ಮತ್ತು ಮಧ್ಯಾಹ್ನದ ಊಟದ ದರಗಳನ್ನೂ ಕೂಡ ಶೇ.5 ರಿಂದ 10ರಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಹೊಟೇಲ್ ಮಾಲೀಕರ ಸಂಘ ಸ್ಪಷ್ಟಪಡಿಸಿದೆ.
ದಿನನಿತ್ಯದ ಖರ್ಚಿನ ಮೇಲೂ ಬೆಲೆ ಏರಿಕೆ ಹೊರೆ!
ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಕಾಫಿ ಅಥವಾ ಟೀ ಕುಡಿಯುವುದು ಹಲವರ ದಿನಚರಿಯ ಭಾಗವಾಗಿದೆ. ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಸೇರಿದಂತೆ ಅನೇಕರು ಪ್ರತಿದಿನ ಹೋಟೆಲ್‌ಗಳಲ್ಲಿ ಕಾಫಿ-ಟೀ ಸೇವಿಸುತ್ತಾರೆ. ಇಂತಹ ಸಂದರ್ಭದಲ್ಲಿ ಒಂದು ಕಪ್‌ಗೆ 5 ರೂ. ಹೆಚ್ಚಳವಾಗಿರುವುದು ಗ್ರಾಹಕರ ಖರ್ಚಿನ ಮೇಲೂ ಪರಿಣಾಮ ಬೀರುವಂತಾಗಿದೆ. ಈ ಹಿಂದೆ 15 ರೂ.ಗೆ ಸಿಗುತ್ತಿದ್ದ ಮಿನಿ ಕಾಫಿ ಅಥವಾ ಟೀಗೆ ಈಗ 20 ರೂ. ಪಾವತಿಸಬೇಕಾಗಿದೆ. ಫುಲ್ ಕಪ್‌ಗೆ 20 ರೂ. ನೀಡುತ್ತಿದ್ದವರು ಇನ್ನು 25 ರೂ. ಖರ್ಚು ಮಾಡಬೇಕಿದೆ. ಒಬ್ಬ ವ್ಯಕ್ತಿಗೆ 5 ರೂ. ಹೆಚ್ಚುವರಿ ವೆಚ್ಚವಾಗುವುದು ಸಣ್ಣ ಮೊತ್ತವಾಗಿ ಕಂಡರೂ, ಪ್ರತಿದಿನ ಕಾಫಿ ಅಥವಾ ಟೀ ಕುಡಿಯುವವರಿಗೆ ತಿಂಗಳ ಲೆಕ್ಕದಲ್ಲಿ ಖರ್ಚು ಹೆಚ್ಚಾಗಲಿದೆ.
ಇನ್ನೊಂದೆಡೆ ಹೋಟೆಲ್ ಉದ್ಯಮದಲ್ಲಿಯೂ ವೆಚ್ಚದ ಒತ್ತಡ ಹೆಚ್ಚಾಗಿದೆ. ಹಾಲಿನ ದರದ ಜೊತೆಗೆ ಅಡುಗೆಗೆ ಬಳಸುವ ಅಗತ್ಯ ವಸ್ತುಗಳು ಮತ್ತು ವಾಣಿಜ್ಯ ಬಳಕೆಯ ಗ್ಯಾಸ್ ಬೆಲೆಗಳ ಏರಿಕೆಯೂ ಹೋಟೆಲ್‌ಗಳ ನಿರ್ವಹಣಾ ವೆಚ್ಚದ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಕಾಫಿ-ಟೀ ದರ ಹೆಚ್ಚಳದ ಬೆನ್ನಲ್ಲೇ ತಿಂಡಿ ಮತ್ತು ಊಟದ ಬೆಲೆಯಲ್ಲಿಯೂ ಬದಲಾವಣೆ ಮಾಡುವ ನಿರ್ಧಾರಕ್ಕೆ ಹೋಟೆಲ್ ಮಾಲೀಕರು ಮುಂದಾಗಿದ್ದಾರೆ. ಒಟ್ನಲ್ಲಿ ಕಾಫಿ-ಟೀ ಬೆಲೆ ಏರಿಕೆಯೊಂದಿಗೆ ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ದರ ಹೆಚ್ಚಳದ ಸಾಧ್ಯತೆಯೂ ಗ್ರಾಹಕರಲ್ಲಿ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಹೊಸ ದರಗಳು ಜಾರಿಯಾದರೆ ಹೋಟೆಲ್‌ಗಳಲ್ಲಿ ತಿಂಡಿ-ಊಟ ಸೇವಿಸುವವರ ಖರ್ಚು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.